ನವದೆಹಲಿ, ಆಗಸ್ಟ್ 13: ಭಾರತದಲ್ಲಿ ಅತಿ ಹೆಚ್ಚು ಸಾಲ ಹೊಂದಿರುವ ಸಂಸ್ಥೆಗಳಲ್ಲಿ ಅದಾನಿ ಗ್ರೂಪ್ ಇದೆ. ಎಚ್ಡಿಎಫ್ಸಿ, ರಿಲಾಯನ್ಸ್ ಇತ್ಯಾದಿ ಸಂಸ್ಥೆಗಳು ಅಧಿಕ ಸಾಲಗಳನ್ನು ಮಾಡಿವೆ. ಬಿಸಿನೆಸ್ ವಿಸ್ತರಣೆಗೆ ಹೊಸ ಹೊಸ ಹೂಡಿಕೆಗಳು ಅಗತ್ಯ ಇರುವುದರಿಂದ ದೊಡ್ಡ ಉದ್ಯಮಗಳಿಗೆ ಸಾಲ ಅನಿವಾರ್ಯ. ಹತ್ತಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿರುವ ಅದಾನಿ ಗ್ರೂಪ್ ಸಂಸ್ಥೆ ವಿವಿಧ ವಲಯಗಳಲ್ಲಿ ಬಿಸಿನೆಸ್ ಹೊಂದಿದೆ. ಪ್ರತಿಸ್ಪರ್ಧಿ ಸಂಸ್ಥೆಗಳನ್ನು ಖರೀದಿಸುವುದು, ಬಿಸಿನೆಸ್ ವಿಸ್ತರಿಸುವುದು ಹೀಗೆ ನಿರಂತರವಾಗಿ ಹೂಡಿಕೆ ಮಾಡುತ್ತಿದೆ. ಅಂತೆಯೇ, 2023-24ರ ಹಣಕಾಸು ವರ್ಷದಲ್ಲಿ ಅದಾನಿ ಗ್ರೂಪ್ ಹೊಂದಿರುವ ಒಟ್ಟು ಸಾಲ 2.41 ಲಕ್ಷ ಕೋಟಿ ರೂ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅಲ್ಪ ಸಾಲ ಏರಿಕೆ ಆಗಿದೆ. ಆದರೆ ನಿವ್ವಳ ಸಾಲ 1.87 ಲಕ್ಷ ಕೋಟಿ ರೂನಿಂದ 1.82 ಲಕ್ಷ ಕೋಟಿ ರೂಗೆ ಇಳಿದಿದೆ.
2019-20ರ ಹಣಕಾಸು ವರ್ಷದಲ್ಲಿ ಅದಾನಿ ಗ್ರೂಪ್ ಹೊಂದಿದ ಒಟ್ಟು ಸಾಲ 1.18 ಲಕ್ಷ ಕೋಟಿ ರೂ. ಈಗ ಅದು 2.41 ಲಕ್ಷ ಕೋಟಿ ರೂಗೆ ಹೆಚ್ಚಳವಾಗಿದೆ. ನಾಲ್ಕು ವರ್ಷದಲ್ಲಿ ಸಾಲದ ಪ್ರಮಾಣ ಎರಡು ಪಟ್ಟಾಗಿದೆ.
ಇದನ್ನೂ ಓದಿ: ರಿಲಾಯನ್ಸ್ ಗ್ರೂಪ್ನಲ್ಲಿ ಒಂದು ವರ್ಷದದಲ್ಲಿ 42,000 ಉದ್ಯೋಗಿಗಳ ಸಂಖ್ಯೆ ಇಳಿಮುಖ
ಅದಾನಿ ಗ್ರೂಪ್ನ ವಿವಿಧ ಸಂಸ್ಥೆಗಳಿಗೆ ಸಾಲ ಕೊಟ್ಟಿರುವ ಭಾರತೀಯ ಬ್ಯಾಂಕುಗಳಲ್ಲಿ ಎಸ್ಬಿಐ, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಆರ್ಬಿಎಲ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್, ಆರ್ಇಸಿ, ಐಡಿಬಿಐ ಬ್ಯಾಂಕ್ಗಳು ಸೇರಿವೆ. ಈ ಬ್ಯಾಂಕುಗಳ ಅದಾನಿ ಗ್ರೂಪ್ಗೆ 75,000 ಕೋಟಿ ರೂಗೂ ಹೆಚ್ಚು ಮೊತ್ತದ ಸಾಲ ನೀಡಿವೆ.
ಅದರಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬರೋಬ್ಬರಿ 27,000 ಕೋಟಿ ರೂನಷ್ಟು ಸಾಲ ಒದಗಿಸಿದೆ. ಎಕ್ಸಿಸ್ ಬ್ಯಾಂಕ್ ಹತ್ತಿರ ಹತ್ತಿರ 10,000 ಕೋಟಿ ರೂನಷ್ಟು ಸಾಲ ಕೊಟ್ಟಿದೆ.
ಎಲ್ಐಸಿ ಸಂಸ್ಥೆ ಅದಾನಿ ಗ್ರೂಪ್ಗೆ ಕೊಟ್ಟಿರುವ ಸಾಲ 5,790 ಕೋಟಿ ರೂ. ಇದಲ್ಲದೇ ಅದರ ವಿವಿಧ ಸಂಸ್ಥೆಗಳ ಷೇರುಗಳ ಮೇಲೆ ಎಲ್ಐಸಿ ಮಾಡಿರುವ ಹೂಡಿಕೆ 30,000 ಕೋಟಿ ರೂಗೂ ಹೆಚ್ಚು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ