ರಿಲಾಯನ್ಸ್ ಗ್ರೂಪ್ನಲ್ಲಿ ಒಂದು ವರ್ಷದದಲ್ಲಿ 42,000 ಉದ್ಯೋಗಿಗಳ ಸಂಖ್ಯೆ ಇಳಿಮುಖ
Reliance group employee strength decreases: ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಗ್ರೂಪ್ನ ವಿವಿಧ ಉದ್ದಿಮೆಗಳಲ್ಲಿ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಿದೆ. 2022-23ರಲ್ಲಿ 3.89 ಲಕ್ಷದಷ್ಟಿದ್ದು ಉದ್ಯೋಗಿಗಳ ಸಂಖ್ಯೆ 2023-24ರಲ್ಲಿ 3.47 ಲಕ್ಷಕ್ಕೆ ಇಳಿದಿದೆ. ಉದ್ಯೋಗಿಗಳ ಸಂಖ್ಯೆ 42,000ದಷ್ಟು ಕಡಿಮೆ ಆಗಿದೆ. ರಿಲಾಯನ್ಸ್ ರೀಟೇಲ್ ಸಂಸ್ಥೆಯೊಂದರಲ್ಲೇ 38,000 ಉದ್ಯೋಗಿಗಳ ಸಂಖ್ಯೆ ಕುಸಿದಿದೆ.
ಮುಂಬೈ, ಆಗಸ್ಟ್ 12: ಭಾರತದ ಅತಿದೊಡ್ಡ ಸಂಸ್ಥೆಯಾದ ರಿಲಾಯನ್ಸ್ ಗ್ರೂಪ್ನಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಮುಖವಾಗಿದೆ. ತನ್ನ ವಿವಿಧ ಉದ್ದಿಮೆಗಳ ನಡುವೆ ಸಮನ್ವಯತೆ ತರುವ ನಿಟ್ಟಿನಲ್ಲಿ ರಿಲಾಯನ್ಸ್ ಗ್ರೂಪ್ ಅನಗತ್ಯ ಹುದ್ದೆಗಳನ್ನು ಕೈಬಿಡುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಜೊತೆಗೆ ಹೊಸ ನೇಮಕಾತಿಗಳೂ ಕೂಡ ಕಡಿಮೆ ಆಗುತ್ತಿವೆ. 2022-23ರ ಹಣಕಾಸು ವರ್ಷದ ಕೊನೆಯಲ್ಲಿ ರಿಲಾಯನ್ಸ್ ಗ್ರೂಪ್ನ ವಿವಿಧ ಉದ್ದಿಮೆಗಳಲ್ಲಿ ಇದ್ದ ಒಟ್ಟು ಉದ್ಯೋಗಿಗಳ ಸಂಖ್ಯೆ 3,89,414 ಇತ್ತು. 2023-24ರ ಹಣಕಾಸು ವರ್ಷದ ಕೊನೆಯಲ್ಲಿ ಉದ್ಯೋಗಿಗಳ ಸಂಖ್ಯೆ 3,47,362ಕ್ಕೆ ಇಳಿದಿದೆ. ಅಂದರೆ 42,052 ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಿದೆ.
2022-23ರ ವರ್ಷದಲ್ಲಿ ರಿಲಾಯನ್ಸ್ ಗ್ರೂಪ್ ತನ್ನ ವಿವಿಧ ಉದ್ದಿಮೆಗಳಲ್ಲಿ 2,62,558 ಹೊಸ ನೇಮಕಾತಿಗಳನ್ನು ಮಾಡಿತ್ತು. 30 ವರ್ಷದೊಳಗಿನ ವಯಸ್ಸಿನ ಹೊಸ ಉದ್ಯೋಗಿಗಳ ಪ್ರಮಾಣ ಶೇ. 81.8ರಷ್ಟಿದ್ದರೆ, ಮಹಿಳೆಯರ ಪ್ರಮಾಣ ಶೇ. 24ರಷ್ಟಿತ್ತು. ಆದರೆ, 2023-24ರಲ್ಲಿ ಹೊಸ ಉದ್ಯೋಗಿಗಳ ನೇಮಕಾತಿ ಆದ ಸಂಖ್ಯೆ 1.71 ಲಕ್ಷ ಎಂದು ಹೇಳಲಾಗುತ್ತಿದೆ.
ರಿಲಾಯನ್ಸ್ ಗ್ರೂಪ್ನ ರೀಟೇಲ್ ವಿಭಾಗದ ಉದ್ದಿಮೆಯಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಮುಖವಾಗಿರುವುದು. ಇದೇ ಉದ್ದಿಮೆಯಲ್ಲಿ ಅತಿಹೆಚ್ಚು ಉದ್ಯೋಗಿಗಳು ಇರುವುದು. 2.45 ಲಕ್ಷ ಇದ್ದ ಉದ್ಯೋಗಿಗಳ ಸಂಖ್ಯೆ ಈಗ 2.07 ಲಕ್ಷಕ್ಕೆ ಇಳಿದಿದೆ. ರಿಲಾಯನ್ಸ್ ರೀಟೇಲ್ನಲ್ಲಿ 38,000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ವಯಸ್ಸಾಗಿರುವ ಮನೆ ಮಾಲೀಕರಿಗೆ ಈ ಮೂರು ಕಷ್ಟಗಳು: ಸಿಇಒ ರಾಧಿಕಾ ಗುಪ್ತಾ ತೆರೆದಿಟ್ಟ ವಾಸ್ತವ ಸಂಗತಿ
ಭಾರತದ ಅತಿದೊಡ್ಡ ರೀಟೇಲ್ ಚೇನ್ ಸಂಸ್ಥೆ ಎನಿಸಿದ ರಿಲಾಯನ್ಸ್ ರೀಟೇಲ್ನ ಆದಾಯ ಮತ್ತು ಲಾಭ ಹೆಚ್ಚುತ್ತಿದೆ. ತೆರಿಗೆ ಕಳೆದು ಉಳಿಯುವ ನಿವ್ವಳ ಲಾಭ 2023-24ರಲ್ಲಿ ಮೊದಲ ಬಾರಿಗೆ 10,000 ಕೋಟಿ ರೂ ಗಡಿ ಮುಟ್ಟಿದೆ.
ರಿಲಾಯನ್ಸ್ನ ರೀಟೇಲ್ ಮಳಿಗೆಗಳಿಗೆ ಭೇಟಿ ಕೊಡುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ನೊಂದಾಯಿತ ಗ್ರಾಹಕರ ಬಳಗ ಹೆಚ್ಚುತ್ತಿದೆ. ಆದರೆ, ಕಳೆದ ಎರಡು ತ್ರೈಮಾಸಿಕ ಅವಧಿಯಲ್ಲಿ ಈ ಮಳಿಗೆಗಳಲ್ಲಿ ವಹಿವಾಟು ಸಂಖ್ಯೆಯಲ್ಲಿ ಏರಿಕೆ ಆಗುವುದು ಕಡಿಮೆ ಆಗಿದೆ. ಅಂದರೆ, ಮಳಿಗೆಗೆ ಹೋಗುವವರ ಸಂಖ್ಯೆ ಹೆಚ್ಚಿದರೂ ವ್ಯಾಪಾರ ಮಾಡುವವರ ಸಂಖ್ಯೆ ಕಡಿಮೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ