Adani Group: ಹಿಂಡನ್​ಬರ್ಗ್ ವರದಿ ವಿರುದ್ಧ ಅದಾನಿ ಸಮೂಹ ಕಿಡಿ; ಕಾನೂನು ಕ್ರಮದ ಎಚ್ಚರಿಕೆ

|

Updated on: Jan 26, 2023 | 2:48 PM

ಹಿಂಡನ್​ಬರ್ಗ್ ವಿರುದ್ಧ ಕಿಡಿ ಕಾರಿರುವ ಉದ್ಯಮಿ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ, ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

Adani Group: ಹಿಂಡನ್​ಬರ್ಗ್ ವರದಿ ವಿರುದ್ಧ ಅದಾನಿ ಸಮೂಹ ಕಿಡಿ; ಕಾನೂನು ಕ್ರಮದ ಎಚ್ಚರಿಕೆ
ಗೌತಮ್ ಅದಾನಿ (ಸಂಗ್ರಹ ಚಿತ್ರ)
Image Credit source: PTI
Follow us on

ನವದೆಹಲಿ: ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆಯ ಮೇಲೆ ಪರಿಣಾಮ ಬೀರಿರುವ ಬಗ್ಗೆ ಅಮೆರಿಕದ ಸಂಶೋಧನಾ ಸಂಸ್ಥೆ ಹಿಂಡನ್​ಬರ್ಗ್ ರಿಸರ್ಚ್​ (Hindenburg Research) ಮಾಡಿರುವ ಆರೋಪ ದುಷ್ಟತನದಿಂದ ಮತ್ತು ಚೇಷ್ಟೆಯಿಂದ ಕೂಡಿದ್ದು ಎಂದು ಅದಾನಿ ಸಮೂಹ (Adani Group) ಆರೋಪಿಸಿದೆ. ಹಿಂಡನ್​ಬರ್ಗ್ ವಿರುದ್ಧ ಕಿಡಿ ಕಾರಿರುವ ಉದ್ಯಮಿ ಗೌತಮ್ ಅದಾನಿ (Gautam Adani) ಒಡೆತನದ ಸಂಸ್ಥೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಎಫ್​ಪಿಒ (Follow-On Public Offer) ಮೂಲಕ 20,000 ಕೋಟಿ ರೂ. ಬಂಡವಾಳ ಸಂಗ್ರಹಿಸಲು ಉದ್ದೇಶಿಸಿರುವ ಸಂದರ್ಭದಲ್ಲೇ ಅಮೆರಿಕದ ಸಂಸ್ಥೆ ಮಾಡಿರುವ ಆರೋಪ ದುರುದ್ದೇಶದಿಂದ ಕೂಡಿದೆ ಎಂದು ಅದಾನಿ ಸಮೂಹ ಹೇಳಿದೆ. ಅಮೆರಿಕದ ಮತ್ತು ಭಾರತದ ಕಾನೂನುಗಳಿಗೆ ಅನುಗುಣವಾಗಿ ಹಿಂಡನ್​ಬರ್ಗ್ ವಿರುದ್ಧ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅದಾನಿ ಸಮೂಹದ ಪ್ರಕಟಣೆ ತಿಳಿಸಿದೆ.

ಹಿಂಡನ್​ಬರ್ಗ್ ವರದಿಯು ಚೇಷ್ಟೆಯಿಂದ, ದುಷ್ಟತನದಿಂದ ಕೂಡಿದ ಮತ್ತು ಯಾವುದೇ ಸಂಶೋಧನೆ ನಡೆಸದೇ ಬಿಡುಗಡೆ ಮಾಡಿರುವಂಥದ್ದು ಎಂದು ಅದಾನಿ ಸಮೂಹ ದೂರಿದೆ. ವರದಿಯಿಂದಾಗಿ ಭಾರತದ ಷೇರುಮಾರುಕಟ್ಟೆಯಲ್ಲಿ ಉಂಟಾಗಿರುವ ತಲ್ಲಣ ಅತ್ಯಂತ ಕಳವಳಕಾರಿಯಾಗಿದೆ. ಭಾರತದ ನಾಗರಿಕರಿಗೆ ವಿನಾಕಾರಣ ವೇದನೆ ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: Adani Group: ಹಿಂಡನ್​ಬರ್ಗ್ ಅಕ್ರಮದ ಆರೋಪಕ್ಕೆ ಅದಾನಿ ಸಮೂಹ ತತ್ತರ; ಒಂದೇ ದಿನ 46,000 ಕೋಟಿ ನಷ್ಟ

‘ಅದಾನಿ ಸಮೂಹದ ಷೇರು ಮೌಲ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುವುದಕ್ಕೆಂದೇ ಆಧಾರರಹಿತ ವಿಷಯಗಳನ್ನೊಳಗೊಂಡು ಹಿಂಡನ್​ಬರ್ಗ್ ವರದಿ ಸಿದ್ಧಪಡಿಸಿದೆ. ಅದಾನಿ ಷೇರುಗಳು ಮೌಲ್ಯ ಕುಸಿತದ ಲಾಭ ಪಡೆಯುವುದಕ್ಕಾಗಿ ಈ ಕೃತ್ಯ ಎಸಗಲಾಗಿದೆ’ ಎಂದು ಅದಾನಿ ಸಮೂಹದ ಮುಖ್ಯಸ್ಥ ಜಿತಿನ್ ಜಲುಂಧ್ವಾಲ ಆರೋಪಿಸಿದ್ದಾರೆ.

ಹಿಂಡನ್​ಬರ್ಗ್​ ವರದಿಯಲ್ಲೇನಿತ್ತು?

ಅದಾನಿ ಸಮೂಹವು ಷೇರುಗಳ ಅಕ್ರಮದಲ್ಲಿ ತೊಡಗಿಕೊಂಡಿರುವುದಲ್ಲದೆ ದಶಕಗಳಿಂದ ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಹಿಂಡನ್​ಬರ್ಗ್ ರಿಸರ್ಚ್ ವರದಿ ಆರೋಪಿಸಿತ್ತು. ಗೌತಮ್ ಅದಾನಿ 120 ಶತಕೋಟಿ ಡಾಲರ್ ಸಂಪತ್ತನ್ನು ಹೊಂದಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 100 ಶತಕೋಟಿ ಡಾಲರ್​​ನಷ್ಟು ಸಂಪತ್ತು ಹೆಚ್ಚಿಸಿಕೊಂಡಿದ್ದರು. ಅವರ ಒಡೆತನದ ವಿವಿಧ ಕಂಪನಿಗಳ ಷೇರುಗಳ ದರ ಸರಾಸರಿ ಶೇ 819ರಷ್ಟು ಹೆಚ್ಚಾಗಿತ್ತು. ಅದಾನಿ ಸಮೂಹದ ಮಾಜಿ ಹಿರಿಯ ಅಧಿಕಾರಿಗಳು ಸೇರಿದಂತೆ ಅನೇಕರನ್ನು ಸಂದರ್ಶನ ನಡೆಸಿದ್ದ ಕಂಪನಿ ಸಾವಿರಾರು ದಾಖಲೆಗಳನ್ನು ಪರಿಶೀಲಿಸಿ, ವಿವಿಧ ರಾಷ್ಟ್ರಗಳ ವೆಬ್​​ಸೈಟ್​ಗಳನ್ನೂ ಪರಿಶೀಲಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ಹಿಂಡನ್​ಬರ್ಗ್ ರಿಸರ್ಚ್ ಹೇಳಿತ್ತು.

ಹಿಂಡನ್​ಬರ್ಗ್ ವರದಿಯ ಪರಿಣಾಮ ಏನು?

ಹಿಂಡನ್​ಬರ್ಗ್ ವರದಿ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಮೂಹದ ಅಂಗ ಸಂಸ್ಥೆಗಳ ಷೇರು ಮೌಲ್ಯದಲ್ಲಿ ಭಾರೀ ಕುಸಿತವಾಗಿತ್ತು. ಅದಾನಿ ಟೋಟಲ್ ಗ್ಯಾಸ್, ಅದಾನಿ ಎಂಟರ್​​ಪ್ರೈಸಸ್, ಅದಾನಿ ಟ್ರಾನ್ಸ್​ಮಿಷನ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್ ಆ್ಯಂಡ್ ಸ್ಪೆಷಲ್ ಎಕನಾಮಿಕ್ ಝೋನ್, ಅದಾನಿ ಪವರ್, ಅದಾನಿ ವಿಲ್ಮರ್ ಷೇರುಗಳು ಶೇ 1ರಿಂದ 4ರಷ್ಟು ಕೆಳಮಟ್ಟದಲ್ಲಿ ವಹಿವಾಟು ನಡೆಸಿದ್ದವು. ಪರಿಣಾಮವಾಗಿ ಅದಾನಿ ಸಮೂಹ ಬುಧವಾರ ಒಂದೇ ದಿನದ ವಹಿವಾಟಿನಲ್ಲಿ 46,086 ಕೋಟಿ ರೂ. ಕಳೆದುಕೊಂಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ