ನವದೆಹಲಿ: ಹೆಚ್ಚುತ್ತಿರುವ ಸಂಪತ್ತಿನ ನಿರ್ವಹಣೆಗಾಗಿ ವಿದೇಶದಲ್ಲಿ ಕುಟುಂಬದ ಕಚೇರಿ ಆರಂಭಿಸಲು ಏಷ್ಯಾದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ (Gautam Adani) ಚಿಂತನೆ ನಡೆಸಿದ್ದಾರೆ ಎಂಬ ವರದಿಗಳನ್ನು ಅದಾನಿ ಗ್ರೂಪ್ (Adani Group) ಅಲ್ಲಗಳೆದಿದೆ. ಅದಾನಿ ಅವರು ವಿದೇಶದಲ್ಲಿ ಕುಟುಂಬದ ಕಚೇರಿ ತೆರೆಯುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. 58 ಶತಕೋಟಿ ಡಾಲರ್ ವೈಯಕ್ತಿಕ ಸಂಪತ್ತು ಹೊಂದಿರುವ ಅದಾನಿ ಅವರು ನ್ಯೂಯಾರ್ಕ್ (New York) ಅಥವಾ ದುಬೈಯಲ್ಲಿ (Dubai) ಕಚೇರಿ ಆರಂಭಿಸಲು ಯೋಚಿಸುತ್ತಿದ್ದಾರೆ ಎಂದು ಶುಕ್ರವಾರ ‘ಬ್ಲೂಮ್ಬರ್ಗ್’ ವರದಿ ಮಾಡಿತ್ತು.
‘ಅದಾನಿ ಅವರಾಗಲೀ ಅವರ ಕುಟುಂಬದವರಾಗಲೀ ಸಾಗರೋತ್ತರ ದೇಶಗಳಲ್ಲಿ ಕಚೇರಿ ತೆರೆಯುವ ಯೋಜನೆ ಹೊಂದಿಲ್ಲ. ಆ ಕುರಿತು ಸಮಾಲೋಚನೆ ನಡೆಸಿಯೂ ಇಲ್ಲ’ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಅದಾನಿ ಅವರ ವೈಯಕ್ತಿಕ ಸಂಪತ್ತು ಈ ವರ್ಷವಷ್ಟೇ 58 ಶತಕೋಟಿ ಡಾಲರ್ಗೆ ಹೆಚ್ಚಳವಾಗಿದೆ. ‘ಬ್ಲೂಮ್ಬರ್ಗ್’ನ ಶತಕೋಟ್ಯಧಿಪತಿಗಳ ಸೂಚ್ಯಂಕದಲ್ಲಿ ಅದಾನಿ ಸ್ಥಾನ ಪಡೆದಿದ್ದು, ವಿಶ್ವದ ಅತ್ಯಂತ ಶ್ರೀಮಂತರಲ್ಲಿಯೂ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ವಿದೇಶದಲ್ಲಿ ಕಚೇರಿ ತೆರೆಯಲು ಮುಂದಾಗುತ್ತಿರುವುದು ಗೌತಮ್ ಅದಾನಿ ಮತ್ತು ಅವರ ಕುಟುಂಬದವರಲ್ಲಿ ಜಾಗತಿಕ ಮಹತ್ವಾಕಾಂಕ್ಷೆಗಳು ಹೆಚ್ಚುತ್ತಿರುವುದನ್ನು ಬಿಂಬಿಸುತ್ತದೆ ಎಂದು ವರದಿ ಹೇಳಿತ್ತು.
ಇದನ್ನೂ ಓದಿ: Gautam Adani: ಹೆಚ್ಚುತ್ತಿರುವ ಸಂಪತ್ತು ನಿರ್ವಹಣೆಗೆ ವಿದೇಶದಲ್ಲಿ ಕಚೇರಿ ತೆರೆಯಲಿದ್ದಾರೆ ಗೌತಮ್ ಅದಾನಿ
ವಿದೇಶದಲ್ಲಿ ಕಚೇರಿ ತೆರೆಯುವುದಕ್ಕಾಗಿ ಅದಾನಿ ಕುಟುಂಬ ಸಲಹೆಗಾರರ ಜತೆ ಮತ್ತು ತೆರಿಗೆ ಸಮಾಲೋಚಕರ ಜತೆ ಮಾತುಕತೆ ನಡೆಸುತ್ತಿದೆ. ಕಚೇರಿಯ ಸ್ಥಳ ಇನ್ನೂ ಅಂತಿಮಗೊಂಡಿಲ್ಲ. ಇದು ಸಮಾಲೋಚಕರ ಸಲಹೆಯಂತೆ ಬದಲಾಗುವ ಸಾಧ್ಯತೆಗಳಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್ಬರ್ಗ್ ವರದಿ ತಿಳಿಸಿತ್ತು. ಆದರೆ ಈ ವಿಚಾರವಾಗಿ ಅದಾನಿ ಗ್ರೂಪ್ನ ವಕ್ತಾರರು ಪ್ರತಿಕ್ರಿಯೆ ನೀಡಿಲ್ಲ ಎಂದೂ ವರದಿಯಲ್ಲಿ ತಿಳಿಸಿತ್ತು. ಇದೀಗ ಅದಾನಿ ಗ್ರೂಪ್ ಗೊಂದಲಗಳಿಗೆ ತೆರೆ ಎಳೆದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ