ಅದಾನಿ ಗ್ರೂಪ್ ಷೇರುಸಂಪತ್ತು ಒಂದೇ ದಿನದಲ್ಲಿ 1 ಲಕ್ಷ ಕೋಟಿ ರೂನಷ್ಟು ಹೆಚ್ಚಳ; ಹಿಂಡನ್ಬರ್ಗ್ ಘಟನೆ ಬಳಿಕ ಇಂಥದ್ದು ಇದೇ ಮೊದಲು
Adani Group Stocks Record Gain: ಅದಾನಿ ಗ್ರೂಪ್ನ ವಿವಿಧ ಕಂಪನಿಗಳ ಷೇರುಗಳು ನವೆಂಬರ್ 28ರಂದು ಹೆಚ್ಚಿನ ಬೇಡಿಕೆ ಪಡೆದುಕೊಂಡಿವೆ. ಒಂದೇ ದಿನದಲ್ಲಿ ಅದರ ಮಾರ್ಕೆಟ್ ಕ್ಯಾಪಿಟಲ್ ಅಥವಾ ಷೇರುಸಂಪತ್ತು 1 ಲಕ್ಷ ಕೋಟಿ ರೂನಷ್ಟು ಹೆಚ್ಚಾಗಿದೆ. ಅದಾನಿ ಟೋಟಲ್ ಗ್ಯಾಸ್ನ ಷೇರುಬೆಲೆ ಅತಿಹೆಚ್ಚಳ ಕಂಡಿದೆ. ಅದಾನಿ ಎಂಟರ್ಪ್ರೈಸಸ್ನಿಂದ ಹಿಡಿದು ಎನ್ಡಿಟಿವಿವರೆಗೆ ಎಲ್ಲಾ ಅದಾನಿ ಕಂಪನಿಗಳೂ ಹಸಿರುಬಣ್ಣದಲ್ಲಿ ಅಂತ್ಯಗೊಂಡಿದ್ದವು.
ನವದೆಹಲಿ, ನವೆಂಬರ್ 28: ಅದಾನಿ ಹಿಂಡನ್ಬರ್ಗ್ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ನಲ್ಲಿ ಇತ್ತೀಚೆಗೆ ನಡೆದ ವಿಚಾರಣೆ ಬಳಿಕ ಅದಾನಿ ಗ್ರೂಪ್ (Adani Group) ನಿರಾಳಗೊಂಡಿದೆ. ಅದರ ವಿವಿಧ ಕಂಪನಿಗಳ ಷೇರುಗಳಿಗೆ ಮತ್ತೆ ಬೇಡಿಕೆ ಹೆಚ್ಚತೊಡಗಿದೆ. ಒಂದೇ ದಿನ ಅದರ ಎಲ್ಲಾ ಷೇರುಸಂಪತ್ತು (Market Capitalisation) 1 ಲಕ್ಷ ಕೋಟಿ ರೂನಷ್ಟು ಏರಿದೆ. ಇಂದು ನವೆಂಬರ್ 28, ಮಂಗಳವಾರದಂದು ಅದಾನಿ ಗ್ರೂಪ್ನ ಬಹುತೇಕ ಎಲ್ಲಾ ಕಂಪನಿ ಷೇರು ಏರುಗತಿ ಪಡೆದಿದ್ದವು. ನ. 28ರಂದು ಷೇರುಪೇಟೆ ವ್ಯವಹಾರ ಅಂತ್ಯಗೊಂಡಾಗ ಅದಾನಿ ಗ್ರೂಪ್ ಷೇರುಗಳ ಒಟ್ಟು ಮೊತ್ತ 11.31 ಲಕ್ಷ ಕೋಟಿ ರೂ ಆಗಿತ್ತು. ಹಿಂದಿನ ದಿನ, ಅಂದರೆ ನವೆಂಬರ್ 27ರಂದು ಷೇರುಸಂಪತ್ತು 10.27 ಲಕ್ಷಕೋಟಿ ರೂ ಇತ್ತು. ಒಂದೇ ದಿನದಲ್ಲಿ 1.04 ಲಕ್ಷ ಕೋಟಿ ರೂ ಹೆಚ್ಚಳವಾಗಿದೆ.
ಅದಾನಿ ಗ್ರೂಪ್ ಕಂಪನಿಗಳ ಷೇರುಬೆಲೆ ನ. 28ರಂದು ಏರಿಕೆ ಆಗಿದ್ದು ಎಷ್ಟು?
- ಅದಾನಿ ಟೋಟಲ್ ಗ್ಯಾಸ್: ಶೇ. 20ರಷ್ಟು ಹೆಚ್ಚಳ
- ಅದಾನಿ ಪವರ್: ಶೇ. 12.32ರಷ್ಟು ಹೆಚ್ಚಳ
- ಅದಾನಿ ಗ್ರೀನ್ ಎನರ್ಜಿ: 12.27ರಷ್ಟು ಹೆಚ್ಚಳ
- ಅದಾನಿ ವಿಲ್ಮರ್: ಶೇ. 9.96ರಷ್ಟು ಹೆಚ್ಚಳ
- ಅದಾನಿ ಎಂಟರ್ಪ್ರೈಸಸ್: ಶೇ. 8.66ರಷ್ಟು ಹೆಚ್ಚಳ
- ಅದಾನಿ ಪೋರ್ಟ್ಸ್: ಶೇ. 5.20ಯಷ್ಟು ಹೆಚ್ಚಳ
ಅದಾನಿ ಮಾಲಕತ್ವದ ಇತರ ಕಂಪನಿಗಳ ಷೇರುಗಳು ಏರಿದ್ದು:
- ಎನ್ಡಿಟಿವಿ: ಶೇ. 11.73ರಷ್ಟು ಹೆಚ್ಚಳ
- ಅಂಬುಜಾ ಸಿಮೆಂಟ್ಸ್: ಶೇ. 4.22ರಷ್ಟು ಹೆಚ್ಚಳ
- ಎಸಿಸಿ ಸಿಮೆಂಟ್ಸ್: ಶೇ. 2.62ರಷ್ಟು ಹೆಚ್ಚಳ
ಇದನ್ನೂ ಓದಿ: ಅದಾನಿ-ಹಿಂಡನ್ಬರ್ಗ್ ರಿಪೋರ್ಟ್, ಚೀನಾ ಬೆಂಬಲಿಗರ ಕರ್ಮಕಾಂಡ: ರಾಜ್ಯಸಭಾ ಸಂಸದ ಮಹೇಶ್ ಜೇಠ್ಮಲಾನಿ ಅರೋಪ
ಹಿಂಡನ್ಬರ್ಗ್ ರಿಸರ್ಚ್ ವರದಿಯಿಂದ ತತ್ತರಿಸಿದ್ದ ಅದಾನಿ ಗ್ರೂಪ್
ಇದೇ ಜನವರಿ ತಿಂಗಳಲ್ಲಿ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಸ್ಪೋಟಕ ವರದಿ ಬಿಡುಗಡೆ ಮಾಡಿತ್ತು. ಅದಾನಿ ಗ್ರೂಪ್ನಿಂದ ಷೇರುಬೆಲೆ ಕೃತಕವಾಗಿ ಉಬ್ಬುವ ರೀತಿಯಲ್ಲಿ ಅಕ್ರಮಗಳಾಗಿವೆ ಎಂಬುದು ಸೇರಿದಂತೆ ಹಲವು ಗುರುತರ ಆರೋಪಗಳನ್ನು ಹಿಂಡನ್ಬರ್ಗ್ ವರದಿಯಲ್ಲಿ ಮಾಡಲಾಗಿತ್ತು. ಅದಾದ ಬಳಿಕ ಅದಾನಿ ಗ್ರೂಪ್ನ ಎಲ್ಲಾ ಕಂಪನಿಗಳ ಷೇರುಬೆಲೆ ಬಹುತೇಕ ನೆಲಕಚ್ಚಿತ್ತು. ಹೂಡಿಕೆದಾರರ ಲಕ್ಷಾಂತರ ಕೋಟಿ ರೂ ಹಣ ನಷ್ಟವಾಗಿತ್ತು. ಗೌತಮ್ ಅದಾನಿ ಷೇರುಸಂಪತ್ತೂ ಸಾಕಷ್ಟು ಕರಗಿತ್ತು.
ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿರುವ ಅಂಶಗಳನ್ನು ಸುಪ್ರೀಂಕೋರ್ಟ್ ಅಣತಿಯಂತೆ ಸೆಬಿ ತನಿಖೆ ನಡೆಸುತ್ತಿದೆ. ಗಡುವು ಮುಗಿದಿದ್ದರೂ ಸೆಬಿ ತನಿಖೆ ಮುಗಿದಿಲ್ಲ. 24 ಅಂಶಗಳನ್ನು ಸೆಬಿ ತನಿಖೆ ಮಾಡುತ್ತಿದೆ. ಇದರಲ್ಲಿ 22 ಪ್ರಕರಣಗಳ ತನಿಖೆ ಮುಗಿದಿದೆ. ಇನ್ನೆರಡು ಬಾಕಿ ಇದೆ. ಶೀಘ್ರದಲ್ಲೇ ತನಿಖೆ ಮುಗಿಸಿ ವರದಿ ಕೊಡುವುದಾಗಿ ಹೇಳಿದೆ.
ಇನ್ನು, ಕಳೆದ ವಾರ ನಡೆದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಪೀಠದ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದ ಅಭಿಪ್ರಾಯಗಳು ಅದಾನಿ ಗ್ರೂಪ್ಗೆ ನಿರಾಳತೆ ತಂದಿವೆ. ಹಿಂಡನ್ಬರ್ಗ್ ರಿಸರ್ಚ್ನಂತಹ ಸಂಸ್ಥೆ ತಿಳಿಸಿದ ಅಂಶಗಳೇ ಪರಮಸತ್ಯವಲ್ಲ ಎಂಬರ್ಥದಲ್ಲಿ ಹೇಳಿದ್ದು ಅದಾನಿ ಗ್ರೂಪ್ ಪರವಾಗಿ ಕೋರ್ಟ್ ತೀರ್ಪು ಕೊಡಬಹುದು ಎಂಬಂತಹ ಸುದ್ದಿ ದಟ್ಟವಾಗಿ ಹರಿದಾಡುತ್ತಿದೆ. ಪರಿಣಾಮವಾಗಿ, ಅದಾನಿ ಗ್ರೂಪ್ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಮುಂದಾಗುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:56 pm, Tue, 28 November 23