ಅದಾನಿ-ಹಿಂಡನ್ಬರ್ಗ್ ಪ್ರಕರಣದ ಸೆಬಿ ತನಿಖೆ: ಸುಪ್ರೀಂನಲ್ಲಿ ವರದಿ ವಿಚಾರಣೆ ಮುಂದೂಡಿಕೆ
SEBI Report on Adani-Hindenburg Case: ಈ ವರ್ಷದ ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ ಹಿಂಡನ್ಬರ್ಗ್ ರಿಸರ್ಚ್ ಕಂಪನಿ ತನಿಖಾ ವರದಿ ಬಿಡುಗಡೆ ಮಾಡಿ ಅಲ್ಲೋಲಕಲ್ಲೋಲಗೊಳಿಸಿತ್ತು. ಇದರ ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿರುವ ಸೆಬಿ, ಈ ತನಿಖೆಯ ಸ್ಥಿತಿಗತಿ ವರದಿಯನ್ನು ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿದೆ. ಇಂದು ಆಗಬೇಕಿದ್ದ ವಿಚಾರಣೆಯನ್ನು ಸುಪ್ರೀಂ ಮುಂದೂಡಿದೆ.

ನವದೆಹಲಿ, ಆಗಸ್ಟ್ 29: ಅದಾನಿ ಹಿಂಡನ್ಬರ್ಗ್ ಪ್ರಕರಣದಲ್ಲಿ (Adani-Hindenburg Research Report) ತನಿಖೆ ನಡೆಸುತ್ತಿರುವ ಸೆಬಿಯಿಂದ ಸಲ್ಲಿಸಲಾಗಿರುವ ಸ್ಟೇಟಸ್ ರಿಪೋರ್ಟ್ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಇಂದು ನಡೆಯಬೇಕಿದ್ದ ವಿಚಾರಣೆಯನ್ನು ಮುಂದೂಡಲಾಗಿದೆ. ಆಗಸ್ಟ್ 25ರಂದು ಸೆಬಿ (SEBI) ಈ ಪ್ರಕರಣದ ತನ್ನ ತನಿಖೆಯ ಸ್ಥಿತಿಗತಿ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಆದರೆ, ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಹಿಂಪಡೆದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಆದ್ಯತೆ ನೀಡಿರುವ ಸುಪ್ರೀಂಕೋರ್ಟ್, ಅದೇ ಕಾರಣಕ್ಕೆ ಸೆಬಿ ವರದಿಯ ವಿಚಾರಣೆಯನ್ನು ಮುಂದಕ್ಕೆ ಹಾಕಿರುವುದು ತಿಳಿದುಬಂದಿದೆ. ಆದರೆ, ಯಾವ ದಿನಾಂಕಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂಬುದು ಗೊತ್ತಾಗಿಲ್ಲ.
ಅದಾನಿ ಗ್ರೂಪ್ನಿಂದ ವಿವಿಧ ರೀತಿಯಲ್ಲಿ ಷೇರು ನಿಯಮಗಳ ಉಲ್ಲಂಘನೆ ಆಗಿವೆ ಎಂದು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ತನ್ನ ತನಿಖಾ ವರದಿಯಲ್ಲಿ ಗಂಭೀರವಾಗಿ ಆರೋಪಿಸಿತ್ತು. ಅದಾದ ಬಳಿಕ ಅದಾನಿ ಗ್ರೂಪ್ನ ವಿವಿಧ ಕಂಪನಿಗಳ ಷೇರುಬೆಲೆ ಸಿಕ್ಕಾಪಟ್ಟೆ ಕುಸಿತಗೊಂಡಿತ್ತು. ವಿಶ್ವದ ಮೂರನೇ ಅತಿಶ್ರೀಮಂತರೆನಿಸಿದ್ದ ಗೌತಮ್ ಅದಾನಿ ಆಸ್ತಿಮೌಲ್ಯ ತೀರಾ ಕೆಳಗಿಳಿದಿತ್ತು. ಅದಾನಿ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ವಿಪಕ್ಷಗಳು ಹೋರಾಟಕ್ಕೆ ನಿಂತ ಬಳಿಕ ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಸೆಬಿಗೆ ಆದೇಶಿಸಿತು.
ಅದರಂತೆ ಸೆಬಿ ತನಿಖೆ ನಡೆಸಿದ್ದು, ಮಾಧ್ಯಮ ವರದಿಗಳ ಪ್ರಕಾರ ತನಿಖೆ ಅಂತಿಮ ಹಂತದಲ್ಲಿದೆ. ಮಿಂಟ್ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಅದಾನಿ ಗ್ರೂಪ್ನಿಂದ ಎರಡು ರೀತಿಯ ನಿಯಮ ಉಲ್ಲಂಘನೆ ಆಗಿರುವುದು ಸೆಬಿ ತನಿಖೆಯಲ್ಲಿ ಗೊತ್ತಾಗಿದೆಯಂತೆ.
ರಿಲೇಟೆಡ್ ಪಾರ್ಟಿ ಟ್ರಾನ್ಸಾಕ್ಷನ್ ಅಥವಾ ಸಂಬಂಧಿತ ಕಂಪನಿಯೊಂದಿಗಿನ ವಹಿವಾಟುಗಳ ಲೆಕ್ಕ ನೀಡಿಲ್ಲ ಎಂಬುದು ಒಂದು ನಿಯಮ ಉಲ್ಲಂಘನೆಯಾಗಿದೆ. ಈ ರೀತಿ 13 ನಿದರ್ಶನಗಳಿವೆ.
ಹಾಗೆಯೇ, ವಿದೇಶೀ ಪೋರ್ಟ್ಫೋಲಿಯೋ ಇನ್ವೆಸ್ಟರ್ಗಳು ಭಾರತೀಯ ಕಂಪನಿಯಲ್ಲಿ ಶೇ 10ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಹೂಡಿಕೆ ಮಾಡುವಂತಿಲ್ಲ. ಈ ನಿಯಮವನ್ನೂ ಮುರಿಯಲಾಗಿರುವುದು ಸೆಬಿ ತನಿಖೆಯಲ್ಲಿ ಗೊತ್ತಾಗಿದೆ ಎನ್ನಲಾಗಿದೆ.
ಹಿಂಡನ್ಬರ್ಗ್ ವರದಿಯಿಂದ ಲಾಭ ಮಾಡಿಕೊಂಡಿದ್ದು ಯಾರು?
ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಪ್ರಕಟವಾದ ವರದಿ ಪ್ರಕಾರ, ಹಿಂಡನ್ಬರ್ಗ್ ರಿಸರ್ಚ್ ವರದಿ ಬಳಿಕ ಅದಾನಿ ಕಂಪನಿಗಳ ಷೇರುಗಳ ಶಾರ್ಟ್ ಸೆಲ್ಲಿಂಗ್ನಿಂದ 12 ಸಂಸ್ಥೆಗಳು ಲಾಭ ಮಾಡಿಕೊಂಡಿವೆ. ಇದರಲ್ಲಿ ಎರಡು ಭಾರತೀಯ ಕಂಪನಿಗಳಿವೆ. ನವದೆಹಲಿ ಮತ್ತು ಮುಂಬೈನಲ್ಲಿ ಈ ಕಂಪನಿಗಳು ನೊಂದಣಿಯಾಗಿವೆ. ದೆಹಲಿಯಲ್ಲಿ ನೊಂದಣಿಯಾಗಿರುವ ಕಂಪನಿಯ ಪ್ರೊಮೋಟರ್ಗಳ ಮೇಲೆ ಷೇರುಮಾರುಕಟ್ಟೆ ಅಕ್ರಮದ ಆರೋಪ ಇರುವುದನ್ನು ಸೆಬಿ ಕಂಡುಕೊಂಡಿದೆ.
ಇದನ್ನೂ ಓದಿ: ಮೂರು ದೊಡ್ಡ ಸ್ಟಾರ್ಟಪ್ಗಳ ಮಾಲೀಕ ಸುಪಮ್ ಮಹೇಶ್ವರಿ ಮೇಲೆ ತೆರಿಗೆಗಳ್ಳತನ ಆರೋಪ; ಐಟಿಯಿಂದ ನೋಟೀಸ್
ಇದರೊಂದಿಗೆ, ಅದಾನಿ-ಹಿಂಡನ್ಬರ್ಗ್ ಪ್ರಕರಣದಲ್ಲಿ ಎಲ್ಲಾ ಆಯಾಮಗಳಿಂದಲೂ ಸೆಬಿ ತನಿಖೆ ನಡೆಸಿರುವುದು ರುಜುವಾತಾಗಿದೆ. ಅದಾನಿ ಗ್ರೂಪ್ನ ಕಂಪನಿಗಳಿಂದ ಆಗಿರುವ ಉಲ್ಲಂಘನೆಗಳು ಹಾಗೂ ಹಿಂಡನ್ಬರ್ಗ್ ವರದಿಯಿಂದ ಕೆಲ ಕಂಪನಿಗಳು ಹೇಗೆ ಲಾಭ ಮಾಡಿವೆ ಎಂಬ ಸಂಗತಿಗಳನ್ನು ಸೆಬಿ ತನ್ನ ತನಿಖೆಯಲ್ಲಿ ಪತ್ತೆಹಚ್ಚಿದಂತಿದೆ.
ಸುಪ್ರೀಂಕೋರ್ಟ್ ಈ ವರದಿಯ ಅಂಶಗಳ ಬಗ್ಗೆ ಏನು ತೀರ್ಮಾನ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಅದಾನಿ ಗ್ರೂಪ್ ಕಂಪನಿಗಳಿಂದ ಆಗಿರುವ ಉಲ್ಲಂಘನೆಗೆ ಗರಿಷ್ಠ ಕೆಲ ಕೋಟಿ ರೂಗಳಷ್ಟು ದಂಡ ಮಾತ್ರ ವಿಧಿಸುವ ಅವಕಾಶ ಇದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




