
ಅಹ್ಮದಾಬಾದ್, ಜುಲೈ 8: ಉಷ್ಣ ವಿದ್ಯುತ್ ಉತ್ಪಾದನೆಯಲ್ಲಿ ನಂಬರ್ ಒನ್ ಖಾಸಗಿ ಕಂಪನಿ ಎನಿಸಿದ ಅದಾನಿ ಪವರ್ (Adani Power Limited) ಇದೀಗ ವಿಐಪಿಎಲ್ ಕಂಪನಿಯ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಿದೆ. ದಿವಾಳಿ ಸ್ಥಿತಿಗೆ ಹೋಗಿದ್ದ ವಿದರ್ಭ ಇಂಡಸ್ಟ್ರೀಸ್ ಪವರ್ ಲಿಮಿಟೆಡ್ ಕಂಪನಿಯನ್ನು (VIPL- Vidarbha Industries Power Ltd) ಕಾರ್ಪೊರೇಟ್ ಇನ್ಸಾಲ್ವೆನ್ಸಿ ರೆಸಲ್ಯೂಶನ್ ಪ್ರೋಸಸ್ (ಸಿಐಆರ್ಪಿ) ಮೂಲಕ ಅದಾನಿ ಪವರ್ 4,000 ಕೋಟಿ ರೂಗೆ ಖರೀದಿ ಮಾಡಿದೆ.
ಮಹಾರಾಷ್ಟ್ರದ ನಾಗಪುರ್ ಜಿಲ್ಲೆಯ ಬುಟಿಬೋರಿ (Butibori) ಎಂಬಲ್ಲಿ ವಿಐಎಪಿಎಲ್ 300 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಕಲ್ಲಿದ್ದಲು ಚಾಲಿತ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಿದೆ. ಈ ಎರಡು ಘಟಕಗಳಿಂದ 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಈ ಕಂಪನಿಯನ್ನು ಖರೀದಿಸಲು ಅದಾನಿ ಪವರ್ ಸಂಸ್ಥೆ ಮಾಡಿದ ಆಫರ್ ಅನ್ನು ಮುಂಬೈ ವಿಭಾಗದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ) 2025ರ ಜೂನ್ 18ರಂದು ಅನುಮೋದನೆ ನೀಡಿತ್ತು. ಅದಾನಿ ಪವರ್ ತನ್ನ ರೆಸಲ್ಯೂಶನ್ ಪ್ಲಾನ್ ಅನ್ನು ಜುಲೈ 7ಕ್ಕೆ ಯಶಸ್ವಿಯಾಗಿ ಜಾರಿಗೊಳಿಸಿದೆ.
ಇದನ್ನೂ ಓದಿ: Space Centre: ಇಸ್ರೋದ ಎರಡನೇ ಅತಿದೊಡ್ಡ ಬಾಹ್ಯಾಕಾಶ ಕೇಂದ್ರ ಗುಜರಾತ್ನಲ್ಲಿ ನಿರ್ಮಾಣ
ವಿಐಪಿಎಲ್ನ ಈ ಎರಡು ಘಟಕಗಳಿಂದ 600 ಮೆಗಾವ್ಯಾಟ್ ಸೇರಿ ಅದಾನಿ ಪವರ್ನ ಒಟ್ಟು ವಿದ್ಯುತ್ ಉತ್ಪಾದನಾ 18,150 ಮೆ.ವ್ಯಾ.ಗೆ ಏರಲಿದೆ. ಮುಂದಿನ ಐದು ವರ್ಷದೊಳಗೆ ಈ ಕಂಪನಿಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 30,670 ಮೆ.ವ್ಯಾ.ಗೆ ಏರುವ ಸಾಧ್ಯತೆ ಇದೆ.
ಮಧ್ಯಪ್ರದೇಶದ ಸಿಂಗ್ರೋಲಿ ಮಹಾನ್, ಛತ್ತೀಸ್ಗಡದ ರಾಯಪುರ್, ರಾಯಗಡ್ ಮತ್ತು ಕೋರ್ಬಾ, ರಾಜಸ್ಥಾನದ ಕವಾಯ್ ಎಂಬ ಐದು ಸ್ಥಳಗಳಲ್ಲಿ 1,600 ಮೆಗಾ ವ್ಯಾಟ್ ಬ್ರೌನ್ಫೀಲ್ಡ್ ವಿದ್ಯುತ್ ಸ್ಥಾವರಗಳನ್ನು ಅದಾನಿ ಪವರ್ ಲಿಮಿಟೆಡ್ ನಿರ್ಮಿಸುತ್ತಿದೆ. ಉತ್ತರಪ್ರದೇಶದ ಮಿರ್ಜಾಪುರದಲ್ಲಿ 1,600 ಮೆಗಾ ವ್ಯಾಟ್ ಗ್ರೀನ್ಫೀಲ್ಡ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಿಸುತ್ತಿದೆ. 1,600 ಮೆಗಾ ವ್ಯಾಟ್ ಸಾಮರ್ಥ್ಯ ಇರುವ ಒಟ್ಟು ಆರು ಘಟಕಗಳನ್ನು ಎಪಿಎಲ್ ನಿರ್ಮಿಸುತ್ತಿದೆ.
ಇದನ್ನೂ ಓದಿ: ಭಾರತ-ಅಮೆರಿಕ ಟ್ರೇಡ್ ಡೀಲ್ಗೆ ‘ಡೈರಿ’ ತಡೆ; ಅಮೆರಿಕದ ಹಾಲು ಭಾರತಕ್ಕೆ ಬಂದರೆ ಹೇಗೆ?
ಕೋರ್ಬಾದಲ್ಲಿ 1,600 ಮೆಗಾವ್ಯಾಟ್ ಗ್ರೀನ್ಫೀಲ್ಡ್ ಪವರ್ ಪ್ಲಾಂಟ್ ಜೊತೆಗೆ, 1,320 ಮೆಗಾವ್ಯಾಟ್ ವಿದ್ಯುತ್ ಸ್ಥಾವರವೊಂದರ ಪುನಃಸ್ಥಾಪನೆ ಮಾಡಲಾಗುತ್ತಿದೆ. ಕೋರ್ಬಾದ ಈ ಘಟಕವನ್ನು ಇತ್ತೀಚೆಗಷ್ಟೇ ಅದಾನಿ ಪವರ್ ಖರೀದಿ ಮಾಡಿತ್ತು. ಈ ಎಲ್ಲಾ ಯೋಜನೆಗಳು ಪೂರ್ಣಗೊಂಡರೆ ಅದಾನಿ ಪವರ್ ಸಂಸ್ಥೆಯು 2030ರೊಳಗೆ ಉಷ್ಣ ವಿದ್ಯುತ್ ಸ್ಥಾವರಗಳ ಮೂಲಕ 30,670 ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ