India’s Richest MLA: ಡಿಕೆ ಶಿವಕುಮಾರ್ ಭಾರತದ ಅತಿ ಶ್ರೀಮಂತ ಶಾಸಕ; ಅತಿಹೆಚ್ಚು ಬಿಲಿಯನೇರ್ ಶಾಸಕರು ಕರ್ನಾಟಕದವರೇ

| Updated By: Digi Tech Desk

Updated on: Jul 20, 2023 | 1:11 PM

DK Shivakumar: ದೇಶದಲ್ಲಿರುವ ಶಾಸಕರಲ್ಲಿ 88 ಮಂದಿ ಬಿಲಿಯನೇರ್​ಗಳಿದ್ದಾರೆ. ಈ ಪೈಕಿ ಕರ್ನಾಟಕದವರೇ 32 ಮಂದಿ ಇದ್ದಾರೆ. ಭಾರತದ ಅಗ್ರ 20 ಶ್ರೀಮಂತ ಶಾಸಕರಲ್ಲಿ ಕರ್ನಾಟಕದವರು 12 ಮಂದಿ ಇದ್ದಾರೆ. ಮೊದಲ ಮೂರು ಸ್ಥಾನದಲ್ಲೂ ಕರ್ನಾಟಕದವರಿದ್ದಾರೆ.

Indias Richest MLA: ಡಿಕೆ ಶಿವಕುಮಾರ್ ಭಾರತದ ಅತಿ ಶ್ರೀಮಂತ ಶಾಸಕ; ಅತಿಹೆಚ್ಚು ಬಿಲಿಯನೇರ್ ಶಾಸಕರು ಕರ್ನಾಟಕದವರೇ
ಡಿಕೆ ಶಿವಕುಮಾರ್
Follow us on

ಬೆಂಗಳೂರು, ಜುಲೈ 20: ಎಡಿಆರ್ ಮತ್ತು ಎನ್​ಇಡಬ್ಲ್ಯೂ ಬಿಡುಗಡೆ ಮಾಡಿದ ಜನಪ್ರತಿನಿಧಿಗಳ ಮಾಹಿತಿ ವರದಿಯೊಂದರಲ್ಲಿ (ADR Report) ದೇಶದ ಶಾಸಕರ ಆಸ್ತಿಪಾಸ್ತಿ, ಸಾಲ ಇತ್ಯಾದಿ ವಿವರ ಬಹಿರಂಗವಾಗಿದೆ. ಈ ವರದಿ ಪ್ರಕಾರ ಸಚಿವ ಡಿಕೆ ಶಿವಕುಮಾರ್ (DK Shivakumar) ಅವರು ಭಾರತದ ಅತಿ ಶ್ರೀಮಂತ ಶಾಸಕ ಎನಿಸಿದ್ದಾರೆ. ಕುತೂಹಲವೆಂದರೆ ಶ್ರೀಮಂತ ಶಾಸಕರು ಕರ್ನಾಟಕದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 100 ಕೋಟಿ ರೂಗೂ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಬಿಲಿಯನೇರ್ ಶಾಸಕರ ಪಟ್ಟಿಯಲ್ಲಿ ಕರ್ನಾಟಕದವರು 32 ಮಂದಿ ಇದ್ದಾರೆ. ದೇಶದ ಯಾವ ರಾಜ್ಯದಲ್ಲೂ ಇಷ್ಟೊಂದು ಬಿಲಿಯನೇರ್ ಶಾಸಕರು ಇಲ್ಲ. ದೇಶದ ಮೊದಲ ಮೂರು ಶ್ರೀಮಂತ ಶಾಸಕರೆಲ್ಲರೂ ಕರ್ನಾಟಕದವರೇ. ಹಾಗೆಯೇ, ಅಗ್ರ 20 ಸಿರಿವಂತ ಶಾಸಕರ ಪಟ್ಟಿಯಲ್ಲಿ ಕರ್ನಾಟಕದವರೇ 12 ಮಂದಿ ಇದ್ದಾರೆ. ಇದೊಂದು ಅಪೂರ್ವ ಮತ್ತು ಮುಜುಗರದ ದಾಖಲೆ ಎನಿಸಿದೆ. ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಆಯೋಗಕ್ಕೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್​ನಲ್ಲಿ ಘೋಷಿಸಲಾಗಿರುವ ಅಂಶಗಳನ್ನು ಆಧರಿಸಿ ಎಡಿಆರ್ ಮತ್ತು ಎನ್​ಇಡಬ್ಲ್ಯೂ ಈ ಪಟ್ಟಿ ಪ್ರಕಟಿಸಿದೆ.

ಸಾವಿರ ಕೋಟಿ ರೂಗೂ ಹೆಚ್ಚು ಆಸ್ತಿ ಇರುವ ಮೂವರು ಕನ್ನಡಿಗ ಶಾಸಕರು

ದೇಶದ ಅತಿಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಕರ್ನಾಟಕದವರದ್ದೇ. ಡಿಕೆ ಶಿವಕುಮಾರ್, ಕೆಎಚ್ ಪುಟ್ಟಸ್ವಾಮಿ ಗೌಡ ಮತ್ತು ಪ್ರಿಯಾಕೃಷ್ಣ ಅವರು ಮೊದಲ ಮೂರು ಸ್ಥಾನದಲ್ಲಿದ್ದಾರೆ. ಈ ಬಾರಿ ಅಚ್ಚರಿ ಮೂಡಿಸಿದ್ದು ಪುಟ್ಟಸ್ವಾಮಿಗೌಡರದ್ದು. ಗೌರಿಬಿದನೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ಪುಟ್ಟಸ್ವಾಮಿಗೌಡ ಅವರು ತಮ್ಮ ಬಳಿ 1,267 ಕೋಟಿ ರೂ ಮೌಲ್ಯದ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ 1,413 ಕೋಟಿ ರೂ ಘೋಷಿತ ಆದಾಯದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಗೋವಿಂದರಾಜನಗರ ಶಾಸಕ ಪ್ರಿಯಾಕೃಷ್ಣ ಅವರ ಘೋಷಿತ ಆಸ್ತಿ 1,156 ಕೋಟಿ ರೂ ಇದೆ.

ಇದನ್ನೂ ಓದಿ: Valuable Companies: ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದ ಅತಿಹೆಚ್ಚು ಮೌಲ್ಯದ ಖಾಸಗಿ ಕಂಪನಿ; ಬುರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾ 500 ಪಟ್ಟಿ ಬಿಡುಗಡೆ

ದೇಶದ ಟಾಪ್20 ಶ್ರೀಮಂತ ಶಾಸಕರಲ್ಲಿ ಕರ್ನಾಟಕದವರು ಮತ್ತವರ ಘೋಷಿತ ಆಸ್ತಿಮೌಲ್ಯ

  • ಡಿಕೆ ಶಿವಕುಮಾರ್, ಕಾಂಗ್ರೆಸ್: 1,413ಕೋಟಿ ರೂ
  • ಕೆಎಚ್ ಪುಟ್ಟಸ್ವಾಮಿಗೌಡ, ಪಕ್ಷೇತರ: 1,267 ಕೋಟಿ ರೂ
  • ಪ್ರಿಯಾಕೃಷ್ಣ, ಕಾಂಗ್ರೆಸ್: 1,156 ಕೋಟಿ ರೂ
  • ಬಿಎಸ್ ಸುರೇಶ, ಕಾಂಗ್ರೆಸ್: 648 ಕೋಟಿ ರೂ
  • ಎನ್.. ಹ್ಯಾರಿಸ್, ಕಾಂಗ್ರೆಸ್: 439 ಕೋಟಿ ರೂ
  • ಎಚ್.ಕೆ. ಸುರೇಶ್, ಬಿಜೆಪಿ: 435 ಕೋಟಿ ರೂ
  • ಆರ್.ವಿ. ದೇಶಪಾಂಡೆ, ಕಾಂಗ್ರೆಸ್: 363 ಕೋಟಿ ರೂ
  • ಎಂಆರ್ ಮಂಜುನಾಥ್, ಜೆಡಿಎಸ್: 316 ಕೋಟಿ ರೂ
  • ಎಸ್.ಎನ್. ಸುಬ್ಬಾರೆಡ್ಡಿ, ಕಾಂಗ್ರೆಸ್: 313 ಕೋಟಿ ರೂ
  • ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್: 312 ಕೋಟಿ ರೂ
  • ಎಂ ಕೃಷ್ಣಪ್ಪ, ಕಾಂಗ್ರೆಸ್: 296 ಕೋಟಿ ರೂ
  • ಮುನಿರತ್ನ, ಬಿಜೆಪಿ: 293 ಕೋಟಿ ರೂ

ಇದನ್ನೂ ಓದಿ: ರಾಹುಲ್ ಗಾಂಧಿಗೆ ಇಡಿ ಸಮನ್ಸ್ ಖಂಡಿಸಿ ಪ್ರತಿಭಟನೆ: ಡಿಕೆ ಶಿವಕುಮಾರ್ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್

ಅತಿಹೆಚ್ಚು ಬಿಲಿಯನೇರ್ ಶಾಸಕರಿರುವ ರಾಜ್ಯಗಳು

ಎಡಿಆರ್ ಒಟ್ಟು 4001 ಶಾಸಕರ ಘೋಷಿತ ಆಸ್ತಿವಿವರಗಳನ್ನು ಅವಲೋಕಿಸಿದ್ದು ನೂರ ಕೋಟಿ ರೂಗೂ ಹೆಚ್ಚು ಮೊತ್ತದ ಆಸ್ತಿಗಳನ್ನು 88 ಶಾಸಕರು ಹೊಂದಿರುವ ಸಂಗತಿಯನ್ನ ಬೆಳಕಿಗೆ ತಂದಿದೆ. ಇದರಲ್ಲಿ ಹೆಚ್ಚಿನವರು ಕರ್ನಾಟಕದವರೇ. ವಿವಿಧ ರಾಜ್ಯಗಳಲ್ಲಿ ಎಷ್ಟೆಷ್ಟು ಬಿಲಿಯನೇರ್​ಗಳಿದ್ದಾರೆ, ಇಲ್ಲಿದೆ ಪಟ್ಟಿ:

  1. ಕರ್ನಾಟಕ: 32
  2. ಮಹಾರಾಷ್ಟ್ರ: 12
  3. ಆಂಧ್ರಪ್ರದೇಶ: 10
  4. ಮಧ್ಯಪ್ರದೇಶ: 6
  5. ಗುಜರಾತ್: 5
  6. ತಮಿಳುನಾಡು: 4
  7. ಅರುಣಾಚಲಪ್ರದೇಶ: 4
  8. ರಾಜಸ್ಥಾನ: 3
  9. ಪಂಜಾಬ್: 2
  10. ಹಿಮಾಚಲಪ್ರದೇಶ: 2
  11. ಉತ್ತರಪ್ರದೇಶ: 1
  12. ಮೇಘಾಲಯ: 1
  13. ನಾಗಾಲ್ಯಾಂಡ್: 1
  14. ದೆಹಲಿ: 1
  15. ಹರ್ಯಾಣ: 1
  16. ಛತ್ತೀಸ್​ಗಡ: 1
  17. ತೆಲಂಗಾಣ: 1
  18. ಅಸ್ಸಾಂ: 1

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Thu, 20 July 23