ಏರ್ ಇಂಡಿಯಾದಿಂದ ಬಾಕಿ ಉಳಿದಿರುವ 16,000 ಕೋಟಿ ರೂಪಾಯಿಯಷ್ಟು ಇಂಧನ ಬಿಲ್ಗಳು ಮತ್ತು ಪೂರೈಕೆದಾರರಿಗೆ ಪಾವತಿ ಮಾಡಬೇಕಿರುವ ಇತರ ಬಾಕಿಯನ್ನು ಸರ್ಕಾರವು ವರ್ಗಾವಣೆ ಮಾಡಲಿದೆ. ನಷ್ಟ ಅನುಭವಿಸುತ್ತಿರುವ ಏರ್ ಇಂಡಿಯಾವನ್ನು ಸ್ಪೆಷಲ್ ಪರ್ಪಸ್ ವೆಹಿಕಲ್ನಲ್ಲಿ ಟಾಟಾ ಸಮೂಹಕ್ಕೆ ಹಸ್ತಾಂತರ ಮಾಡುವ ಮುನ್ನ ಸರ್ಕಾರದಿಂದ ಈ ವರ್ಗಾವಣೆಯನ್ನು ಮಾಡಲಾಗುವುದು ಎಂದು ಪಿಟಿಐ ಸುದ್ದಿ ಸಂಸ್ಥೆಗೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಶುಕ್ರವಾರದಂದು ಸರ್ಕಾರವು ಘೋಷಣೆ ಮಾಡಿದ ಪ್ರಕಾರ, ಟಾಟಾ ಸಮೂಹವು ಏರ್ ಇಂಡಿಯಾಗಾಗಿ 18,000 ಕೋಟಿ ರೂಪಾಯಿಗೆ ಬಿಡ್ ಮಾಡಿತ್ತು. ಆಗಸ್ಟ್ 31ಕ್ಕೆ ಏರ್ ಇಂಡಿಯಾಗೆ ಒಟ್ಟಾರೆ ಸಾಲ 61,562 ಕೋಟಿ ರೂಪಾಯಿ ಇತ್ತು. ಟಾಟಾ ಸಮೂಹವು ಏರ್ ಇಂಡಿಯಾದ 15,300 ಕೋಟಿ ರೂಪಾಯಿ ಸಾಲವನ್ನು ತೆಗೆದುಕೊಳ್ಳಲಿದೆ. ಬಾಕಿ 46,262 ಕೋಟಿ ರೂಪಾಯಿಯನ್ನು ಸರ್ಕಾರದ ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್ (AIAHL) ತೆಗೆದುಕೊಳ್ಳಲಿದೆ. ಏರ್ಲೈನ್ಸ್ನ ಅರ್ಧದ ತನಕ ಸಾಲವನ್ನು ಹೋಲ್ಡ್ ಮಾಡಲು ವಿಶೇಷ ಕಂಪೆನಿ ಸ್ಥಾಪನೆ ಮಾಡಲಾಗುವುದು. ಇದರಲ್ಲಿ ನಾಲ್ಕು ಘಟಕ ಮತ್ತು ನಾನ್-ಕೋರ್ ಆಸ್ತಿಯು ಇದೆ. ಟಾಟಾ ಸಮೂಹದಿಂದ ಸರ್ಕಾರಕ್ಕೆ 2700 ಕೋಟಿ ರೂಪಾಯಿ ನಗದಾಗಿ ಪಾವತಿಸಬೇಕಾಗುತ್ತದೆ.
2019ರಲ್ಲಿ ಏರ್ ಇಂಡಿಯಾ ಮಾರಾಟಕ್ಕಾಗಿ ಸರ್ಕಾರದಿಂದ ಸ್ಪೆಷಲ್ ಪರ್ಪಸ್ ವೆಹಿಕಲ್- AIAHL ಸ್ಥಾಪಿಸಲಾಯಿತು. ಸಾಲವನ್ನು ತೆಗೆದುಕೊಳ್ಳುವುದಕ್ಕೆ ಮತ್ತು ಏರ್ ಇಂಡಿಯಾ ಸಮೂಹದ ನಾನ್ ಕೋರ್ ಆಸ್ತಿಗಾಗಿ ಇದರ ಸ್ಥಾಪನೆಯಾಯಿತು. AIAHLದಿಂದ ಟಾಟಾ ಸಮೂಹ ಪಾವತಿಸದ ಸಾಲದ ಶೇ 75ರಷ್ಟು ಪಡೆದುಕೊಳ್ಳಲಿದೆ. ಸಾಲದ ಹೊರತಾಗಿ ಏರ್ ಇಂಡಿಯಾಗೆ ಸೇರಿದ ಭೂಮಿ, ಕಟ್ಟಡ 14,718 ರೂಪಾಯಿ ಮೌಲ್ಯದ ನಾನ್-ಕೋರ್ ಆಸ್ತಿಗಳನ್ನು AIAHLಗೆ ವರ್ಗಾವಣೆ ಮಾಡಲಾಗಯತ್ತದೆ. ಹೆಚ್ಚುವರಿಯಾದ ಸಾಲ AIAHLಗೆ ವರ್ಗಾವಣೆ ಆಗುತ್ತದೆ. ಅದರಲ್ಲಿ ತೈಲ ಕಂಪೆನಿಗಳಿಗೆ ಬಾಕಿ ಉಳಿಸಿಕೊಂಡ ಇಂಧನ ಬಿಲ್ಗಳು, ವಿಮಾನ ನಿಲ್ದಾಣ ಆಪರೇಟರ್ಗಳು ಮತ್ತು ಪೂರೈಕೆದಾರರಿಗೆ ಬಾಕಿ ಇರುವುದನ್ನು ಪಾವತಿಸಬೇಕಾಗುತ್ತದೆ, ಎಂದು ಕೇಂದ್ರ ಸರ್ಕಾರ ಖಾಸಗೀಕರಣ ಕಾರ್ಯಕ್ರಮದ ಪ್ರಮುಖ ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಹೇಳಿದ್ದಾರೆ.
ಪಾಂಡೆ ಅವರು ಮಾತನಾಡಿ, ಈ ಬಾಕಿಯು ಡಿಸೆಂಬರ್ ಕೊನೆಗೆ ಜಾಸ್ತಿಯಾಗುವ ಯಾವ ನಿರೀಕ್ಷೆಯೂ ಇಲ್ಲ. ಏರ್ಲೈನ್ಸ್ ಕಾರ್ಯ ನಿರ್ವಹಣೆಗೆ ಅಗತ್ಯ ಇರುವಂತೆ ದಿನಕ್ಕೆ 20 ಕೋಟಿ ರೂಪಾಯಿಯನ್ನು ಸರ್ಕಾರ ಪಾವತಿ ಮಾಡಲಿದೆ ಎಂದಿದ್ದಾರೆ. ಏರ್ಇಂಡಿಯಾವನ್ನು ಟಾಟಾಗೆ ಹಸ್ತಾಂತರವನ್ನು ಮಾಡುವ ಮುನ್ನ ಬ್ಯಾಲೆನ್ಸ್ ಶೀಟ್ ಮೇಲೆ ಸೆಪ್ಟೆಂಬರ್ನಿಂದ ಡಿಸೆಂಬರ್ ತನಕ ಮತ್ತೆ ಕೆಲಸ ಮಾಡಬೇಕಿದೆ. ಈ ಸಂದರ್ಭದಲ್ಲಿ ಉದ್ಭವಿಸುವ ಸಾಲವನ್ನು AIAHLಗೆ ವರ್ಗಾವಣೆ ಮಾಡಲಾಗುವುದು. ಇಂಧನ ಖರೀದಿ ಮತ್ತು ಇತರ ದೈನಂದಿನ ಕಾರ್ಯ ಚಟುವಟಿಕೆಗಳಿಗಾಗಿ ಆಗಸ್ಟ್ 31ಕ್ಕೆ ಕೊನೆಯಾದ ಅವಧೀಗೆ 15,834 ಕೋಟಿ ರೂಪಾಯಿ ಆಪರೇಷನಲ್ ಕ್ರೆಡಿಟರ್ಸ್ಗೆ ಪಾವತಿಸಬೇಕಾಗುತ್ತದೆ. ಅದು ಕೂಡ AIAHLಗೆ ವರ್ಗಾವಣೆ ಆಗುತ್ತದೆ ಎಂದಿದ್ದಾರೆ ಪಾಂಡೆ.
ಏರ್ಇಂಡಿಯಾ ಹಾರಾಟಕ್ಕಾಗಿ ಸರ್ಕಾರವು ನಿತ್ಯ ರೂ. 20 ಕೋಟಿ ಖರ್ಚು ಮಾಡುತ್ತಿದೆ. ಹೆಚ್ಚುವರಿಯಾಗಿ ಬ್ಯಾಲೆನ್ಸ್ಶೀಟ್ನಲ್ಲಿ ಇರುವ ಸಾಲವು ಏರ್ಇಂಡಿಯಾದ ಈಕ್ವಿಟಿ ಮೌಲ್ಯವನ್ನು (-) 32,000 ಕೋಟಿ ರೂಪಾಯಿ ಮಾಡಿದೆ. ಈ ಕಾರಣಕ್ಕೆ ಸರ್ಕಾರವು ಒಂದೋ ಏರ್ಇಂಡಿಯಾವನ್ನು ಖಾಸಗೀಕರಣ ಮಾಡಬೇಕಾಗಿತ್ತು ಅಥವಾ ಮುಚ್ಚಬೇಕಿತ್ತು. 2009-10ರಿಂದ ಇಲ್ಲಿಯ ತನಕ ಸರ್ಕಾರವು ಏರ್ಲೈನ್ಗೆ 1.10 ಲಕ್ಷ ಕೋಟಿ ರೂಪಾಯಿಯಷ್ಟು ಪೂರೈಸಿದೆ. ಇದರಲ್ಲಿ 54,584 ಕೋಟಿ ರೂ. ನಗದು ಬೆಂಬಲ ಮತ್ತು 55,692 ಕೋಟಿ ರೂ. ಸಾಲದ ಖಾತ್ರಿ ಒಳಗೊಂಡಿದೆ.
ಇದನ್ನೂ ಓದಿ: Air India Bid Winner: ವೆಲ್ಕಮ್ ಬ್ಯಾಕ್ ಏರ್ ಇಂಡಿಯಾ: ಬಿಡ್ ವಿಜೇತ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಭಾವುಕ ಪತ್ರ
Published On - 8:21 pm, Mon, 11 October 21