D-Mart: 3 ಲಕ್ಷ ಕೋಟಿ ರೂ. ದಾಟಿದ ಡಿ-ಮಾರ್ಟ್ ಮಾರುಕಟ್ಟೆ ಮೌಲ್ಯ; ಈ ಸಾಧನೆ ಮಾಡಿದ 17ನೇ ಭಾರತೀಯ ಕಂಪೆನಿ
ಡಿ-ಮಾರ್ಟ್ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ರೂ. 3 ಲಕ್ಷ ಕೋಟಿ ದಾಟಿದೆ. ಈ ವರ್ಷದಲ್ಲಿ ಕಂಪೆನಿಯ ಷೇರಿನ ಬೆಳವಣಿಗೆ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ರೀಟೇಲ್ ಸರಣಿ ಡಿ-ಮಾರ್ಟ್ ಅನ್ನು ಹೊಂದಿರುವ ಮತ್ತು ನಿರ್ವಹಿಸುತ್ತಿರುವ ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್ ಸೋಮವಾರದಂದು ಮಾರುಕಟ್ಟೆ ಬಂಡವಾಳ ಮೌಲ್ಯ 3 ಲಕ್ಷ ಕೋಟಿ ರೂಪಾಯಿ ತಲುಪಿದೆ. ಈ ಸಾಧನೆಯನ್ನು ಮಾಡಿದ ಭಾರತದ 17ನೇ ಲಿಸ್ಟೆಡ್ ಕಂಪೆನಿ ಇದಾಗಿದೆ. ಈ ಕಂಪೆನಿಯ ಷೇರುಗಳು ಈ ವರ್ಷ ಇಲ್ಲಿಯವರೆಗೆ ಶೇ 70ಕ್ಕಿಂತ ಹೆಚ್ಚಾಗಿದೆ. ಈ ಷೇರುಗಳು ಇಂದು (ಅಕ್ಟೋಬರ್ 11, 2021) ಬಿಎಸ್‌ಇಯಲ್ಲಿ ದಾಖಲೆಯ ಗರಿಷ್ಠ ಮಟ್ಟ- ತಲಾ ಒಂದಕ್ಕೆ 4,837 ರೂಪಾಯಿ ಮುಟ್ಟಿದ್ದು, ಅದರ ಮಾರುಕಟ್ಟೆ ಮೌಲ್ಯವನ್ನು ಮಧ್ಯಾಹ್ನ 2.51ರ ಹೊತ್ತಿಗೆ 3.11 ಲಕ್ಷ ಕೋಟಿ ರೂಪಾಯಿಗೆ ಒಯ್ದಿತು. ಈ ಹಿಂದಿನ ವಹಿವಾಟು ಅಂತ್ಯಕ್ಕಿಂತ ಎನ್ಎಸ್ಇಯಲ್ಲಿ ಶೇ 7.07ರಷ್ಟು ಮೇಲೇರಿ 4719 ರೂಪಾಯಿಗೆ ವ್ಯವಹಾರ ಚುಕ್ತಾ ಮಾಡಿದೆ. ಅವೆನ್ಯೂ ಸೂಪರ್‌ಮಾರ್ಟ್ ಈಗ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಲಿಮಿಟೆಡ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್, ಐಟಿಸಿ, ಕೊಟಕ್ ಮಹೀಂದ್ರಾ ಬ್ಯಾಂಕ್, ಭಾರ್ತಿ ಏರ್‌ಟೆಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಒಎನ್‌ಜಿಸಿ, ವಿಪ್ರೊ ಲಿಮಿಟೆಡ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ಏಷಿಯನ್ ಪೇಂಟ್ಸ್ ಇವುಗಳು ಮುಟ್ಟಿರುವ ಮೈಲುಗಲ್ಲನ್ನು ಸಾಧಿಸಿವೆ.
ಕಂಪೆನಿಯು ತನ್ನ ಎರಡನೇ ತ್ರೈಮಾಸಿಕ ಆದಾಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಶೇ 46ರಷ್ಟು ಹೆಚ್ಚಳ ದಾಖಲಿಸಿ, 7,649.64 ಕೋಟಿ ರೂಪಾಯಿ ವರದಿ ಮಾಡಿದೆ. ಗೋಲ್ಡ್ಮ್ಯಾನ್ ಸ್ಯಾಚ್ಸ್ ವರದಿಯ ಪ್ರಕಾರ, ಬೆಳವಣಿಗೆಯು ಅದರ ಅಂದಾಜಿಗಿಂತ ಶೇ 5ರಷ್ಟು ಹೆಚ್ಚಿದೆ. “ಈ ಎರಡನೇ ತ್ರೈಮಾಸಿಕದಲ್ಲಿ ಲಾಕ್‌ಡೌನ್ ನಿರ್ಬಂಧಗಳು ಸರಾಗವಾಗಿದ್ದರಿಂದ ಆದಾಯವು ಬಲವಾದ ಚೇತರಿಕೆ ಕಂಡಿದೆ ಎಂದು ನಾವು ನಂಬುತ್ತೇವೆ,” ಎಂಬುದಾಗಿ ಗೋಲ್ಡ್ಮ್ಯಾನ್ ಸ್ಯಾಚ್ಸ್ ವರದಿ ಹೇಳಿದೆ. ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅದರ ಸ್ಟೋರ್ ಎಣಿಕೆಯು ಈ ಹಿಂದಿನ ತ್ರೈಮಾಸಿಕದಲ್ಲಿ ಇದ್ದ 238ರಿಂದ 246ಕ್ಕೆ ಏರಿಕೆ ಕಂಡಿದೆ. ಬ್ರೋಕರೇಜ್ ಸಂಸ್ಥೆಯು ಮೂರನೇ ತ್ರೈಮಾಸಿಕ ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಕ್ರಮವಾಗಿ 10 ಮತ್ತು 13 ಹೆಚ್ಚಿನ ಮಳಿಗೆಗಳನ್ನು ಸೇರ್ಪಡೆಗೊಳಿಸುವ ನಿರೀಕ್ಷೆಯಿದೆ.
“ಕಳೆದ ಒಂದು ವರ್ಷದಲ್ಲಿ ಈ ಷೇರಿನ ಏರಿಕೆ ಓಟವನ್ನು ಗಮನಿಸಿದರೆ, ಹೂಡಿಕೆದಾರರ ಪ್ರಮುಖ ಪ್ರಶ್ನೆಗಳು ಮೌಲ್ಯಮಾಪನ (106x FY23e PE) ಮೂಲಭೂತಕ್ಕಿಂತ ಮುಂದಿದೆಯೇ ಮತ್ತು ಡಿ-ರೇಟಿಂಗ್ ಅಪಾಯವಿದೆಯೇ? ನಮ್ಮ ದೃಷ್ಟಿಯಲ್ಲಿ, ನಾವು ಇನ್ನೂ ಹೆಚ್ಚಿನ ಬೆಳವಣಿಗೆಯ ಮಧ್ಯದಲ್ಲಿದ್ದೇವೆ; ಹೂಡಿಕೆದಾರರು ಡಿಮಾರ್ಟ್‌ನಲ್ಲಿ ಧನಾತ್ಮಕವಾಗಿ ಮುಂದುವರಿಯಬೇಕು,” ಎಂದು ಎಚ್‌ಎಸ್‌ಬಿಸಿ ಗ್ಲೋಬಲ್ ರೀಸರ್ಚ್ ಹೇಳಿದೆ. ಬ್ರೋಕರೇಜ್ ಸಂಸ್ಥೆಯು ಶೇ 30ರಷ್ಟು ಬೆಲೆ ಹೆಚ್ಚಳದ ನಿರೀಕ್ಷೆ ಮಾಡಿದ್ದು, ಒಂದು ಷೇರಿಗೆ 5,500 ರೂಪಾಯಿ ತಲುಪುವ ಆಶಾವಾದ ವ್ಯಕ್ತಪಡಿಸಿದ್ದಾರೆ.
ಭಾರತದ ಕಿರಾಣಿ ಮಾರುಕಟ್ಟೆಯ ಗಾತ್ರವನ್ನು ಗಮನಿಸಿದರೆ, Dmartನಂತಹ ಮೌಲ್ಯದ ಚಿಲ್ಲರೆ ವ್ಯಾಪಾರಿಗಳು ಪ್ರಸ್ತುತಕ್ಕಿಂತ 10 ಪಟ್ಟು ಹೆಚ್ಚು ಮಳಿಗೆಗಳನ್ನು ಹೊಂದಬಹುದು ಎಂದು HSBC ಗ್ಲೋಬಲ್ ರೀಸರ್ಚ್ ಹೇಳಿದೆ. ಈ ಮಹತ್ವದ ಬೆಳವಣಿಗೆಯ ಅವಕಾಶವು ಬಹು ದಶಕಗಳವರೆಗೆ ಇರುತ್ತದೆ. ಡಿಮಾರ್ಟ್‌ನ ಬೆಲೆಗಳ ತಂತ್ರವು ಅದರ ಸ್ಪರ್ಧಾತ್ಮಕ ಮಾರ್ಜಿನ್ನಂತೆ ಮತ್ತು ಲಾಭದ ಪ್ರಮಾಣದ ಚಾಲನೆ ಹಾಗೂ ಕಡಿಮೆ ವೆಚ್ಚಗಳಿಂದಾಗಿ ಈ ಮೌಲ್ಯವನ್ನು ದೀರ್ಘಾವಧಿ ತನಕ ಹೋಲ್ಡ್ ಮಾಡುವುದಕ್ಕೆ ಅಸಾಧಾರಣ ವ್ಯಾಪಾರ ಮಾದರಿಯನ್ನು ಒದಗಿಸುತ್ತದೆ. ಕೊರೊನಾ ಬಿಕ್ಕಟ್ಟಿನ ಅಡೆತಡೆಗಳು ಮತ್ತು ತ್ವರಿತ ಚೇತರಿಕೆಯು ಅಡಚಣೆಗಳನ್ನು ಎದುರಿಸುತ್ತಿದ್ದರೂ ಡಿಮಾರ್ಟ್‌ನ ಈ ದೃಷ್ಟಿಕೋನವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಎಚ್‌ಎಸ್‌ಬಿಸಿ ಗ್ಲೋಬಲ್ ಹೇಳಿದೆ.
ಇದನ್ನೂ ಓದಿ: Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?
Published On - 5:03 pm, Mon, 11 October 21