ನವದೆಹಲಿ: ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಸಂಸ್ಥೆ (Air India) ಮುಂಬರುವ ದಿನಗಳಲ್ಲಿ 1,000 ಪೈಲಟ್ಗಳನ್ನು ನೇಮಕ ಮಾಡಿಕೊಳ್ಳಲಿದೆ. ಇದರಲ್ಲಿ ಪೈಲಟ್ಗಳು, ಕ್ಯಾಪ್ಟನ್ಗಳು ಮತ್ತು ಟ್ರೇನರ್ಗಳ ನೇಮಕಾತಿಯೂ ಒಳಗೊಂಡಿದೆ. ಸರ್ಕಾರಿ ಸ್ವಾಮ್ಯದ ಒಡೆತನದಿಂದ ಟಾಟಾ ಗ್ರೂಪ್ಗೆ (Tata Group) ಒಂದು ವರ್ಷದ ಹಿಂದೆ ಮಾರಾಟವಾಗಿದ್ದ ಏರ್ ಇಂಡಿಯಾ ಸಂಸ್ಥೆ ಇತ್ತೀಚೆಗೆ ಬೋಯಿಂಗ್ ಮತ್ತು ಏರ್ಬಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದು ಒಟ್ಟು 470 ಹೊಸ ವಿಮಾನಗಳನ್ನು ಖರೀದಿಸುತ್ತಿದೆ. ಈ ನಿಟ್ಟಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪೈಲಟ್ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ಯೋಜಿಸಿದೆ. ಸದ್ಯ ಏರ್ ಇಂಡಿಯಾ ಸಂಸ್ಥೆಯಲ್ಲಿ 1,800 ಕ್ಕೂ ಹೆಚ್ಚು ಪೈಲಟ್ಗಳು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ ಹೊಸ 1,000 ಮಂದಿ ಪೈಲಟ್ಗಳ ನೇಮಕಾತಿ ಆಗಲಿದೆ.
ಹೊಸ ನೇಮಕಾತಿ ನಡೆಯಲಿರುವ ಸಂಗತಿಯನ್ನು ಏರ್ ಇಂಡಿಯಾದ ಜಾಹೀರಾತೊಂದು ದೃಢಪಡಿಸಿದೆ. ಈ ಜಾಹೀರಾತು ಪ್ರಕಾರ ಎ320, ಬಿ777, ಬಿ787, ಬಿ737 ವಿಮಾನಗಳಲ್ಲಿ ಕ್ಯಾಪ್ಟನ್ಸ್, ಫಸ್ಟ್ ಆಫೀಸರ್ಸ್, ಟ್ರೇನರ್ಸ್ಗಳಿಗೆ ಕೆಲಸ ಮಾಡುವ ಅವಕಾಶಗಳನ್ನು ಕೊಡುತ್ತಿದ್ದೇವೆ ಎಂದು ಹೇಳಲಾಗಿದೆ.
ಏರ್ ಇಂಡಿಯಾ ಸಂಸ್ಥೆ ಮತ್ತು ಅದರ ಪೈಲಟ್ಗಳ ಮಧ್ಯೆ ಸಂಬಳ ವಿಚಾರದಲ್ಲಿ ಉಂಟಾದ ತಗಾದೆ ಶಮನಗೊಂಡಂತೆ ತೋರುತ್ತಿದೆ. ಕಳೆದ ವಾರ ಏರ್ ಇಂಡಿಯಾ ಮುಂದಿಟ್ಟಿದ್ದ ಹೊಸ ಪರಿಷ್ಕೃತ ಸಂಬಳ ವ್ಯವಸ್ಥೆಯನ್ನು ಬಹುತೇಕ ಪೈಲಟ್ಗಳು ಒಪ್ಪಿಕೊಂಡಿದ್ದಾರೆ ಎಂದು ಏರ್ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಕ್ಯಾಂಪ್ಬೆಲ್ ವಿಲ್ಸನ್ ಏಪ್ರಿಲ್ 28, ಶುಕ್ರವಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: SBI: ಎಸ್ಬಿಐನಿಂದ 6,000 ಕೋಟಿ ರೂ ಮೊತ್ತದ ಬಾಂಡ್ಗಳ ವಿತರಣೆ; ಯಾವಾಗ, ಎಲ್ಲಿ? ವಿವರ ನೋಡಿ
ಪೈಲಟ್ಗಳು ಪರಿಷ್ಕೃತ ಸಂಬಳದ ಆಫರ್ ಅನ್ನು ಒಪ್ಪಿಕೊಂಡರೂ ಎರಡು ಪೈಲಟ್ ಒಕ್ಕೂಟಗಳು ಸಮ್ಮತಿಸಿಲ್ಲ ಎನ್ನಲಾಗಿದೆ. ಇವುಗಳಿಂದ ಔಪಚಾರಿಕವಾಗಿ ಪ್ರತಿಭಟನೆ ಮುಂದುವರಿಯಬಹುದು. ಈ ಒಕ್ಕೂಟಗಳ ಪ್ರತಿಭಟನೆಗೆ ಕೆಲ ಪೈಲಟ್ಗಳು ಮಾತ್ರ ಕೈಜೋಡಿಸುವ ಸಾಧ್ಯತೆ ಇದೆ ಎಂಬಂತಹ ವರದಿಗಳಿವೆ.
ಭಾರೀ ನಷ್ಟದಲ್ಲಿದ್ದ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಸರ್ಕಾರ ಕಳೆದ ವರ್ಷದ ಜನವರಿಯಲ್ಲಿ ಟಾಟಾ ಗ್ರೂಪ್ಗೆ ಮಾರಿತ್ತು. ಅದನ್ನು ಲಾಭದ ಹಳಿಗೆ ತರುವ ಒತ್ತಡದಲ್ಲಿ ಟಾಟಾ ಸಂಸ್ಥೆ ಇದೆ. ತಾಂತ್ರಿಕವಾಗಿ ಮತ್ತು ವ್ಯಾವಹಾರಿಕವಾಗಿ ಏರ್ ಇಂಡಿಯಾಗೆ ಹೊಸ ಸ್ಪರ್ಶ ತರಲು ಟಾಟಾ ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: Axis Bank: ಆ್ಯಕ್ಸಿಸ್ಗೆ ಮುಳುವಾದ ಸಿಟಿ ಡೀಲ್; ದಾಖಲೆ ಲಾಭ ಕಾಣಬೇಕಿದ್ದ ಬ್ಯಾಂಕ್ಗೆ ಬರೋಬ್ಬರಿ 5,728.4 ಕೋಟಿ ರೂ ನಷ್ಟ
ಐದು ವರ್ಷ ಅವಧಿಯ ಪರಿವರ್ತನಾ ಯೋಜನೆಯನ್ನು ಏರ್ ಇಂಡಿಯಾ ಹಾಕಿಕೊಂಡಿದೆ. ಅದರಂತೆ ಭಾರತ ಹಾಗೂ ವಿದೇಶಗಳಲ್ಲಿ ವಿಮಾನ ಸಂಚಾರ ಮಾರ್ಗಗಳ ಹೆಚ್ಚಳ, ವಿಮಾನ ಸಂಖ್ಯೆ ಹೆಚ್ಚಳ ಮಾಡುವುದೂ ಸೇರಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಏರ್ ಇಂಡಿಯಾಗೆ 500ಕ್ಕೂ ಹೆಚ್ಚು ಹೊಸ ವಿಮಾನಗಳು ಬರಲಿವೆ.
ಇನ್ನು, ಏರ್ ಇಂಡಿಯಾ ಹಣಕಾಸು ಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಬ್ಬಂದಿ ವರ್ಗದ ವೇತನ ಕಡಿತಕ್ಕೂ ಮುಂದಾಗಲಾಗಿದೆ. ಪೈಲಟ್ ಹಾಗು ಕ್ಯಾಬಿನ್ ಸಿಬ್ಬಂದಿಯ ವೇತನವನ್ನು ಪರಿಷ್ಕರಿಸಿ ಏಪ್ರಿಲ್ 17ರಂದು ಏರ್ ಇಂಡಿಯಾ ಆಡಳಿತ ಆಫರ್ ಕೊಟ್ಟಿತ್ತು. ಪೈಲಟ್ಗಳ ಒಕ್ಕೂಟಗಳಾದ ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಶನ್ ಮತ್ತು ಇಂಡಿಯನ್ ಪೈಲಟ್ಸ್ ಗಿಲ್ಡ್ ಸಂಘಟನೆಗಳು ಈ ಹೊಸ ಸಂಬಳ ವ್ಯವಸ್ಥೆಯನ್ನು ತಿರಸ್ಕರಿಸಿವೆ. ಪೈಲಟ್ಗಳೂ ಕೂಡ ಇದನ್ನು ಒಪ್ಪದೇ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದರೆ, ಈಗ ಪೈಲಟ್ಗಳು ಹೊಸ ಸಂಬಳ ಸೂತ್ರಕ್ಕೆ ಒಪ್ಪಿ ತಮ್ಮ ಪ್ರತಿಭಟನೆ ನಿಲ್ಲಿಸಿರುವ ವಿಚಾರ ತಿಳಿದುಬಂದಿದೆ.