ಉಗಾಂಡ ದೇಶದಲ್ಲಿ ಐಪಿಒ ದಾಖಲೆ ಬರೆಯಹೊರಟಿರುವ ಏರ್ಟೆಲ್; ಅತಿದೊಡ್ಡ ಷೇರುಮಾರಾಟಕ್ಕೆ ಮುಂದು
Airtel Uganda IPO: ಏರ್ಟೆಲ್ ಉಗಾಂಡ ಸಂಸ್ಥೆ ಶೇ. 29ರಷ್ಟಿರುವ ತನ್ನ 800 ಕೋಟಿ ಷೇರುಗಳನ್ನು ಐಪಿಒ ಮೂಲಕ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದೆ. ಒಂದು ಷೇರುಬೆಲೆ 100 ಶಿಲಿಂಗ್ (ಸುಮಾರು 2.22 ರೂ) ಎಂದು ನಿಗದಿ ಮಾಡಲಾಗಿದೆ. ಐಪಿಒ ಮೂಲಕ ಏರ್ಟೆಲ್ ಉಗಾಂಡ 1,780 ರೂ ಬಂಡವಾಳ ಸಂಗ್ರಹಿಸಲು ಹೊರಟಿದೆ. ಅಕ್ಟೋಬರ್ 13ರವರೆಗೂ ಐಪಿಒ ಆಫರ್ ಇರಲಿದೆ.
ನವದೆಹಲಿ, ಆಗಸ್ಟ್ 29: ಭಾರ್ತಿ ಏರ್ಟೆಲ್ (Bharti Airtel) ಸಂಸ್ಥೆಯ ಏರ್ಟೆಲ್ ಉಗಾಂಡಾ (Airtel Uganda) ಕಂಪನಿ ಐಪಿಒ ಮೂಲಕ ಭಾರೀ ಮೊತ್ತದ ಷೇರುಗಳ ವಿಕ್ರಯ ಮಾಡಲಿದೆ. ಆರಂಭಿಕ ಸಾರ್ವಜನಿಕ ಕೊಡುಗೆ (IPO- Initial Public Offering) ಮೂಲಕ 800 ಬಿಲಿಯನ್ ಉಗಾಂಡಿಯನ್ ಶಿಲಿಂಗ್ (ಸುಮಾರು 1,780 ಕೋಟಿ ರೂ) ಹಣವನ್ನು ಬಂಡವಾಳವಾಗಿ ಪಡೆಯುವ ಉದ್ದೇಶ ಹೊಂದಿರುವುದಾಗಿ ಏರ್ಟೆಲ್ ಉಗಾಂಡ ಇಂದು (ಆಗಸ್ಟ್ 29) ಪ್ರಕಟಿಸಿದೆ. ಕಂಪನಿಯ ಶೇ. 20ರಷ್ಟು ಭಾಗದ ಷೇರುಗಳನ್ನು ಮಾರಾಟಕ್ಕಿಡಲಾಗಿದೆ. ಶೇ. 20 ಎಂದರೆ ಸುಮಾರು 800 ಕೋಟಿ ಸಾಮಾನ್ಯ ಷೇರುಗಳನ್ನು ಖರೀದಿಸುವ ಅವಕಾಶ ಹೂಡಿಕೆದಾರರಿಗೆ ಸಿಕ್ಕಿದೆ.
ಈ ಐಪಿಒ ಇಂದಿನಿಂದಲೇ ಆರಂಭವಾಗಲಿದ್ದು, ಒಂದೂವರೆ ತಿಂಗಳವರೆಗೆ ಚಾಲನೆಯಲ್ಲಿರುತ್ತದೆ. ಅಕ್ಟೋಬರ್ 13ಕ್ಕೆ ಕೊನೆಯಾಗುತ್ತದೆ. ಈ ವಿಚಾರವನ್ನು ಏರ್ಟೆಲ್ ಉಗಾಂಡದ ಮ್ಯಾನೇಜಿಂಗ್ ಡೈರೆಕ್ಟರ್ ಮನೋಜ್ ಮುರಳಿ ತಿಳಿಸಿದ್ದಾರೆ.
ಏರ್ಟೆಲ್ ಉಗಾಂಡದ ಷೇರು ಬೆಲೆ ಆಫರ್ ಎಷ್ಟು?
ಏರ್ಟೆಲ್ ಉಗಾಂಡ ಐಪಿಒನಲ್ಲಿ ಒಟ್ಟು 800 ಕೋಟಿಯಷ್ಟು ಷೇರುಗಳ ಸೇಲ್ ಆಫರ್ ಇದೆ. ಒಂದು ಷೇರಿನ ಬೆಲೆ 100 ಶಿಲಿಂಗ್ ಎಂದು ನಿಗದಿ ಮಾಡಲಾಗಿದೆ. ಇಲ್ಲಿ ಒಂದು ರುಪಾಯಿಗೆ 44.96 ಶಿಲಿಂಗ್ ಬೆಲೆ ಇದೆ. 100 ಶಿಲಿಂಗ್ಗೆ 2.22 ರೂ ಆಗುತ್ತದೆ. ಏರ್ಟೆಲ್ ಉಗಾಂಡದ ಐಪಿಒದಲ್ಲಿ ಒಂದು ಷೇರುಬೆಲೆ 2.22 ರೂ ಇದೆ.
ಇದನ್ನೂ ಓದಿ: LPG Prices: ಎಲ್ಪಿಜಿ ಸಿಲಿಂಡರ್ ದರ 200 ರೂ ಇಳಿಕೆ; ಕೇಂದ್ರ ಸಂಪುಟದಿಂದ ಅನುಮೋದನೆ
ಗ್ರಾಹಕರಿಗೆ ಷೇರು ಖರೀದಿಸಲು ಆದ್ಯತೆ
ಐಪಿಒದಲ್ಲಿ ಉಗಾಂಡ ದೇಶದ ಹೂಡಿಕೆದಾರರಿಗೆ ಆದ್ಯತೆ ಕೊಡಲಾಗುತ್ತದೆ. ಅದರಲ್ಲೂ ಕಂಪನಿಯ ಗ್ರಾಹಕರಿಗೂ ಆದ್ಯತೆ ಇರುತ್ತದೆ. ಅಂದರೆ ಏರ್ಟೆಲ್ ಸೇವೆ ಪಡೆಯುವ ಗ್ರಾಹಕರಿಗೆ ಷೇರುಗಳನ್ನು ಹೊಂದುವ ಅವಕಾಶವನ್ನು ಏರ್ಟೆಲ್ ಉಗಾಂಡ ಒದಗಿಸಿದೆ. ಗ್ರಾಹಕ ಕೇಂದ್ರಿತ ನೀತಿಗೆ ಬದ್ಧವಾಗಿ ಐಪಿಒ ಆಫರ್ ಮಾಡಲಾಗಿದೆ ಎಂಬುದನ್ನು ಏರ್ಟೆಲ್ ಉಗಾಂಡದ ಎಂಡಿ ಮನೋಜ್ ಮುರಳಿ ಸ್ಪಷ್ಟಪಡಿಸಿದ್ದಾರೆ.
ಉಗಾಂಡ ಇತಿಹಾಸದಲ್ಲೇ ಅತಿಹೆಚ್ಚು ಷೇರು ಸೇಲ್
ನಿರೀಕ್ಷಿಸಿದ ರೀತಿಯಲ್ಲಿ ಐಪಿಒದಲ್ಲಿ ಎಲ್ಲಾ ಷೇರುಗಳು ಮಾರಾಟವಾದರೆ ಆ ಉಗಾಂಡ ದೇಶದ ಇತಿಹಾಸದಲ್ಲೇ ಅತಿದೊಡ್ಡ ಷೇರು ಮಾರಾಟ ಎನಿಸಲಿದೆ. ಇದರೊಂದಿಗೆ ಏರ್ಟೆಲ್ ಉಗಾಂಡ ಸಂಸ್ಥೆಯ ಮೌಲ್ಯ 4 ಟ್ರಿಲಿಯನ್ ಶಿಲಿಂಗ್ಸ್ ಆಗುತ್ತದೆ. ಅಂದರೆ ಒಂದು ಸಾವಿರ ಕೋಟಿ ರೂ ಮೌಲ್ಯದ ಕಂಪನಿ ಆಗಲಿದೆ.
ಇದನ್ನೂ ಓದಿ: ಮೂರು ದೊಡ್ಡ ಸ್ಟಾರ್ಟಪ್ಗಳ ಮಾಲೀಕ ಸುಪಮ್ ಮಹೇಶ್ವರಿ ಮೇಲೆ ತೆರಿಗೆಗಳ್ಳತನ ಆರೋಪ; ಐಟಿಯಿಂದ ನೋಟೀಸ್
ಉಗಾಂಡದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಏರ್ಟೆಲ್
ಉಗಾಂಡ ದೇಶದ ಅತಿದೊಡ್ಡ ಟೆಲಿಕಾಂಗಳಲ್ಲಿ ಏರ್ಟೆಲ್ ಎರಡನೆಯದು. ಎಂಟಿಎನ್ ಉಗಾಂಡ ಕಂಪನಿ 1.67 ಕೋಟಿ ಗ್ರಾಹಕರ ಬಳಗದೊಂದಿಗೆ ಮೊದಲ ಸ್ಥಾನದಲ್ಲಿದೆ. ಏರ್ಟೆಲ್ ಉಗಾಂಡ, ಯುಟೆಲ್ ಮತ್ತು ಲೈಕಾಮೊಬೈಲ್ ನಂತರ ಸ್ಥಾನ ಪಡೆಯುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ