
ಪುಣೆ, ಜನವರಿ 28: ಮಹಾರಾಷ್ಟ್ರದ ಬಾರಾಮತಿ ಏರ್ಪೋರ್ಟ್ ಬಳಿ ವಿಮಾನಾಪಘಾತದಲ್ಲಿ ದುರ್ಮರಣ ಅಪ್ಪಿದ ಉಪಮುಖ್ಯಮಂತ್ರಿ ಹಾಗೂ ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ (Ajit Pawar) ಅವರು ಮಹಾರಾಷ್ಟ್ರ ರಾಜಕಾರಣದ ಅತ್ಯಂತ ಪ್ರಭಾವಿ ರಾಜಕಾರಣಿಗಳ ಪೈಕಿ ಒಬ್ಬರೆಂದು ಗುರುತಾದವರು. ಮೂರು ದಶಕಗಳ ಕಾಲ ನಿರಂತರವಾಗಿ ಶಾಸಕರಾಗಿರುವ ಮತ್ತು ಮಹಾರಾಷ್ಟ್ರದಲ್ಲಿ ಅತಿಹೆಚ್ಚು ವರ್ಷ ಉಪಮುಖ್ಯಮಂತ್ರಿಯಾದ ದಾಖಲೆ ಹೊಂದಿರುವ ಅಜಿತ್ ಪವಾರ್ ಬಹಳ ಅನುಭವಿ ರಾಜಕಾರಣಿ ಎನಿಸಿದ್ದರು. ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು ಎಂದೂ ಹೇಳಲಾಗುತ್ತದೆ.
2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ (Maharashtra Assembly Elections 2024) ವೇಳೆ ಅವರು ಎಲೆಕ್ಷನ್ ಕಮಿಷನ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ 124 ಕೋಟಿ ರೂ ಮೌಲ್ಯದ ಆಸ್ತಿಪಾಸ್ತಿ ಘೋಷಿಸಿಕೊಂಡಿದ್ದಾರೆ. ಇದು ಅವರ ಹಾಗೂ ಅವರ ಪತ್ನಿ ಸುನೇತ್ರಾ ಪವಾರ್ ಅವರಿಬ್ಬರದ್ದೂ ಸೇರಿ ಇರುವ ಆಸ್ತಿ.
ಇದನ್ನೂ ಓದಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ, ಡಿಸಿಎಂ ಅಜಿತ್ ಪವಾರ್ ಸಾವು
ಅಜಿತ್ ಪವಾರ್ ಅವರ ಚರಾಸ್ತಿಗಳು: 1 ಟೊಯೊಟಾ ಕ್ಯಾಮ್ರಿ ಕಾರು, 1 ಹೊಂಡಾ ಸಿಆರ್ವಿ ಕಾರು, 1 ಟ್ರಾಕ್ಟರ್, ಬೆಳ್ಳಿ ವಸ್ತುಗಳು, ಎಫ್ಡಿ, ಷೇರು, ಬಾಂಡು ಇತ್ಯಾದಿ ಇವೆ.
14.12 ಲಕ್ಷ ರೂ ಕ್ಯಾಷ್, ವಿವಿಧ ಬ್ಯಾಂಕ್ ಅಕೌಂಟ್ಗಳಲ್ಲಿ 6.81 ಕೋಟಿ ರೂ ಹಣ. ಬಾಂಡ್, ಡಿಬಂಚರ್, ಷೇರು ಇತ್ಯಾದಿಗಳಲ್ಲಿ 55 ಲಕ್ಷ ರೂಗೂ ಅಧಿಕದಷ್ಟು ಹೂಡಿಕೆ. ಒಂದು ಕೋಟಿ ರೂಗೂ ಅಧಿಕ ಮೌಲ್ಯದ ಎಲ್ಐಸಿ ಪಾಲಿಸಿ ಮಾಡಿಸಿದ್ದರು.
ಅಜಿತ್ ಪವಾರ್ ಪತ್ನಿ ಹಾಗೂ ರಾಜ್ಯ ಸಭಾ ಸದಸ್ಯೆಯಾದ ಸುನೇತ್ರಾ ಪವಾರ್ ಅವರು 44 ಲಕ್ಷ ರೂಗೂ ಅಧಿಕ ಮೌಲ್ಯದ ಎಲ್ಐಸಿ ಪಾಲಿಸಿಗಳನ್ನು ಹೊಂದಿದ್ದಾರೆ. ಸುನೇತ್ರಾ ಹೆಸರಿನಲ್ಲಿ ಸ್ಥಿರಾಸ್ತಿಗಳಿವೆ. ಈ ಇಬ್ಬರ ಹೆಸರಲ್ಲಿ ಇರುವ ಘೋಷಿತ ಆಸ್ತಿಪಾಸ್ತಿಗಳ ಒಟ್ಟು ಮೌಲ್ಯ 124 ಕೋಟಿ ರೂಗೂ ಅಧಿಕ ಎನ್ನಲಾಗಿದೆ.
ಅಜಿತ್ ಪವಾರ್ ಅವರು ಮಹಾರಾಷ್ಟ್ರದ ರಾಜಕೀಯ ಭೀಷ್ಮ ಎಂದು ಕರೆಯಲಾಗುವ ಶರದ್ ಪವಾರ್ ಅವರ ಅಣ್ಣ ಮಗ. 1982ರಲ್ಲಿ ಸಕ್ಕರೆ ಸಹಕಾರ ರಂಗಕ್ಕೆ ಪದಾರ್ಪಣೆ ಮಾಡುತ್ತಾರೆ. 1991ರಲ್ಲಿ ಬಾರಾಮತಿ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಶಾಸಕರಾಗುತ್ತಾರೆ. ಆ ಬಳಿಕ ಸತತವಾಗಿ ಅದೇ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದ್ದರು. ವಿಧಿಯಾಟವೆಂದರೆ, ತಮ್ಮ ಸ್ವಕ್ಷೇತ್ರದಲ್ಲೇ ಅವರು ಸ್ವರ್ಗಸ್ಥರಾಗಿದ್ದಾರೆ.
ಇದನ್ನೂ ಓದಿ: ಲಿಯರ್ ಜೆಟ್ 45 ತುಂಬಾ ಸುರಕ್ಷಿತ ವಿಮಾನ, ಪತನದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತಜ್ಞರು
ಮುಂಬೈನಿಂದ ಬಾರಾಮತಿಗೆ ಚಾರ್ಟರ್ಡ್ ಫ್ಲೈಟ್ನಲ್ಲಿ ಆಗಮಿಸಿದ್ದರು. ತಾಂತ್ರಿಕ ದೋಷದಿಂದ ಬಾರಾಮತಿ ಏರ್ಪೋರ್ಟ್ನಲ್ಲಿ ವಿಮಾನ ಅಪಘಾತಗೊಂಡಿದೆ. ಅಜಿತ್ ಪವಾರ್, ಪೈಲಟ್ ಸೇರಿ ಅದರಲ್ಲಿದ್ದ ಎಲ್ಲಾ ಐವರೂ ನಿಧನರಾಗಿದ್ದಾರೆ. ಅಜಿತ್ ಪವಾರ್ ತಮ್ಮ ಪತ್ನಿ ಸುನೇತ್ರಾ ಹಾಗೂ ಇಬ್ಬರು ಮಕ್ಕಳಾದ ಪಾರ್ಥ್ ಮತ್ತು ಜಯ್ ಪವಾರ್ ಅವರನ್ನು ಅಗಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ