ಹೈದರಾಬಾದ್, ಜನವರಿ 18: ಭಾರತದ ವೈಮಾನಿಕ ಕ್ಷೇತ್ರದಲ್ಲಿ ಪುಟ್ಟ ಹೆಜ್ಜೆಗಳನ್ನು ಇಡುತ್ತಿರುವ ಆಕಾಸ ಏರ್ ಸಂಸ್ಥೆ (Akasa Air) ಇದೀಗ 150 ಬೋಯಿಂಗ್ ವಿಮಾನಗಳ ಖರೀದಿಗೆ ಆರ್ಡರ್ ನೀಡಿದೆ. ಭಾರತದಲ್ಲಿ ವಿಮಾನಯಾನ ಮಾರುಕಟ್ಟೆ (aviation market) ಗಣನೀಯವಾಗಿ ಬೆಳೆಯುತ್ತಿದ್ದು, ಅದು ನೀಡುವ ಅಪಾರ ಅವಕಾಶಗಳನ್ನು ಬಳಸಿಕೊಳ್ಳಲು ಆಕಾಸ ಏರ್ ಸಂಸ್ಥೆಗೆ ಇದು ಸುಸಂದರ್ಭವಾಗಿದೆ. ಈ ನಿಟ್ಟಿನಲ್ಲಿ ಹೊಸ ಬೋಯಿಂಗ್ ವಿಮಾನಗಳನ್ನು (Boeing 737 MAX aircrafts) ಪಡೆಯುತ್ತಿರುವುದು ಸಂಸ್ಥೆಗೆ ಇನ್ನಷ್ಟು ಬಲ ಸಿಕ್ಕಂತಾಗುತ್ತದೆ. ದಿವಂಗತ ರಾಕೇಸ್ ಜುಂಝನವಾಲ ಅವರು ಸಹ-ಸಂಸ್ಥಾಪಕರಾಗಿರುವ ಆಕಾಸ ಏರ್ ಸಂಸ್ಥೆ ಹೈದರಾಬಾದ್ನಲ್ಲಿ ನಡೆಯುತ್ತಿರುವ ವಿಂಗ್ಸ್ ಇಂಡಿಯಾ ಏರ್ಶೋ (Wings India Airshow at Hyderabad) ವೇಳೆ ವಿಮಾನಗಳನ್ನು ಬುಕ್ ಮಾಡಿದೆ.
ಆಕಾಶ ಏರ್ ಸಂಸ್ಥೆ ಸಣ್ಣ ಗಾತ್ರದ 150 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು ಪಡೆಯುತ್ತಿದೆ. ಬೋಯಿಂಗ್ ಸಂಸ್ಥೆ 2032ರ ವೇಳೆಗೆ ಹಂತ ಹಂತವಾಗಿ ಈ ವಿಮಾನಗಳನ್ನು ಆಕಾಸ ಏರ್ಗೆ ಸರಬರಾಜು ಮಾಡಲಿದೆ.
ಕೇವಲ ಎರಡು ವರ್ಷದ ಹಿಂದೆ ಆರಂಭವಾದ ಆಕಾಸ ಏರ್ ಸಂಸ್ಥೆ ಸದ್ಯ ಕೇವಲ 22 ವಿಮಾನಗಳೊಂದಿಗೆ ಸೇವೆ ನೀಡುತ್ತಿದೆ. ಆದರೆ, ಈಗ ಹೊಸ 150 ಬೋಯಿಂಗ್ ವಿಮಾನ ಸೇರಿ ಇನ್ನೂ 204 ವಿಮಾನಗಳು ಡೆಲಿವರಿ ಆಗಬೇಕಿವೆ.
ಆಕಾಸ ಏರ್ ಸಂಸ್ಥೆ ಇದೇ ಜೂನ್ ತಿಂಗಳಲ್ಲಿ ನಾಲ್ಕು ಬೋಯಿಂಗ್ 737 ಮ್ಯಾಕ್ಸ್8 ವಿಮಾನಕ್ಕೆ ಆರ್ಡರ್ ಕೊಟ್ಟಿತ್ತು. ಮೂರು ವರ್ಷದ ಹಿಂದೆ (2021ರಲ್ಲಿ) 72 ಬೋಯಿಂಗ್ 737 ಮ್ಯಾಕ್ಸ್ ಏರ್ಕ್ರಾಫ್ಟ್ಗಳಿಗೆ ಆರ್ಡರ್ ಕೊಟ್ಟಿತ್ತು. ಅವುಗಳಲ್ಲಿ 22 ವಿಮಾನಗಳ ಡೆಲಿವರಿ ಆಗಿದೆ. ಇನ್ನೂ 204 ವಿಮಾನಗಳು ಬರಬೇಕಿವೆ. 2032ರೊಳಗೆ ಆಕಾಸ ಏರ್ ಸಂಸ್ಥೆ ಬಳಿ ವಿಮಾನಗಳ ಸಂಖ್ಯೆ 226 ಇರಲಿದೆ. ವಿಶ್ವದ ಅತಿದೊಡ್ಡ 30 ವಿಮಾನ ಸಂಸ್ಥೆಗಳಲ್ಲಿ ಅದೂ ಒಂದಾಗಿ ಇರಬಹುದು.
ಇದನ್ನೂ ಓದಿ: Pension for Farmers: ಸಣ್ಣ ರೈತರಿಗೆ ಸರ್ಕಾರದಿಂದ ಪಿಂಚಣಿ ನೆರವು; ಪಿಎಂ ಕಿಸಾನ್ ಮಾನಧನ್ ಯೋಜನೆ ಬಗ್ಗೆ ತಿಳಿಯಿರಿ
ಸದ್ಯಕ್ಕೆ 22 ವಿಮಾನಗಳ ಹಾರಾಟ ನಡೆಸುತ್ತಿರುವ ಆಕಾಸ ಏರ್ನ ಚಟುವಟಿಕೆ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅದರ ಪಾಲು ಶೇ. 4.4ರಷ್ಟು ಇದೆ. ಬೆಂಗಳೂರು, ಅಯೋಧ್ಯೆ, ವಾರಾಣಸಿ ಸೇರಿದಂತೆ 18 ನಗರಗಳಿಗೆ ಅದರ ಸೇವೆ ಇದೆ. ಶೀಘ್ರದ್ಲಲೇ ವೈಮಾನಿಕ ಸೇವೆಯನ್ನು ಅಂತಾರಾಷ್ಟ್ರೀಯವಾಗಿ ವಿಸ್ತರಿಸಲು ಯೋಜಿಸುತ್ತಿದೆ. ಸಿಂಗಾಪುರ್, ದಮ್ಮಮ್, ಕತಾರ್, ಓಮನ್ ಮೊದಲಾದ ಗಲ್ಫ್ ಮತ್ತು ಮಿಡಲ್ ಈಸ್ಟ್ ದೇಶಗಳಿಗೆ ವಿಮಾನ ಸೇವೆ ಆರಂಭಿಸಲು ಆಕಾಸ ಏರ್ ಇಚ್ಛಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ