ಅಲರ್ಟ್..! ಇಪಿಎಫ್ಗೆ ಜನ್ಮ ದಿನಾಂಕ ದಾಖಲೆಯಾಗಿ ಆಧಾರ್ ಕಾರ್ಡ್ ಸ್ವೀಕಾರಾರ್ಹ ಅಲ್ಲ; ಯಾವ ದಾಖಲೆಗಳು ಬೇಕು?
Aadhaar Not Valid Document For Date of Birth: ಇಪಿಎಫ್ಒನ ಜನ್ಮ ದಿನಾಂಕ ಸಾಕ್ಷ್ಯ ದಾಖಲೆಗಳ ಪಟ್ಟಿಯಿಂದ ಆಧಾರ್ ಕಾರ್ಡ್ ಅನ್ನು ತೆಗೆಯಲಾಗಿದೆ. ಆಧಾರ್ ಕಾರ್ಡ್ ಕೇವಲ ಗುರುತಿನ ದಾಖಲೆಯಾಗಿದೆಯೇ ಹೊರತು ಡೇಟ್ ಆಫ್ ಬರ್ತ್ ದಾಖಲೆಯಲ್ಲ ಎಂದು ಯುಐಡಿಎಐ ಹೇಳಿತ್ತು. ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಬರ್ತ್ ಸರ್ಟಿಫಿಕೇಟ್ ಇತ್ಯಾದಿ ದಾಖಲೆಗಳು ಇಪಿಎಫ್ಒನಲ್ಲಿ ಬರ್ತ್ ಪ್ರೂಫ್ ಆಗಿವೆ.
ಆಧಾರ್ ಕಾರ್ಡ್ ಹಲವು ಕಾರ್ಯಗಳಿಗೆ ಏಕ ದಾಖಲೆಯಾಗಿದೆ. ಸಿಮ್ ಕಾರ್ಡ್ ಪಡೆಯುವುದರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯಲು, ಗ್ಯಾಸ್ ಏಜೆನ್ಸಿಯ ಕೆವೈಸಿಗೆ ಪ್ರಮುಖ ದಾಖಲೆಯಾಗಿ ಆಧಾರ್ ಕಾರ್ಡ್ ಬಳಕೆಯಲ್ಲಿದೆ. ಇದು ಮೂಲತಃ ಗುರುತಿನ ದಾಖಲೆಯಾಗಿದೆ. ಅಂದರೆ ವ್ಯಕ್ತಿಯ ಅಸ್ತಿತ್ವವನ್ನು ದೃಢಪಡಿಸಲು ಇರುವ ದಾಖಲೆಯಾಗಿದೆ. ಆದರೆ, ಜನ್ಮದಿನಾಂಕದ ಸಾಕ್ಷ್ಯಕ್ಕೆ ದಾಖಲೆಯಾಗಿಯೂ (Date of Birth proof) ಇದು ಬಳಕೆಯಲ್ಲಿದೆ. ಆಧಾರ್ ಯೋಜನೆಯನ್ನು ರೂಪಿಸಿದ ಯುಐಡಿಎಐ ಸಂಸ್ಥೆ ಇತ್ತೀಚೆಗಷ್ಟೇ ಜನ್ಮದಿನಾಂಕಕ್ಕೆ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ಸ್ವೀಕರಿಸಬಾರದು ಎಂದು ತಿಳಿಸಿದೆ. ಇದರ ಬೆನ್ನಲ್ಲೇ ಇಪಿಎಫ್ಒ ಸಂಸ್ಥೆ (EPFO) ತನ್ನ ಸದಸ್ಯರ ಡೇಟ್ ಆಫ್ ಬರ್ತ್ಗೆ ಪ್ರೂಫ್ ದಾಖಲೆಗಳ ಪಟ್ಟಿಯಿಂದ ಆಧಾರ್ ಕಾರ್ಡ್ ಅನ್ನು ತೆಗೆದುಹಾಕಬೇಕು ಎಂದು ಅಧಿಸೂಚನೆ ಹೊರಡಿಸಿದೆ.
2016ರ ಆಧಾರ್ ಕಾಯ್ದೆ ಪ್ರಕಾರ ಆಧಾರ್ ಕಾರ್ಡ್ ಅನ್ನು ಜನ್ಮ ದಿನಾಂಕದ ದಾಖಲೆಯಾಗಿ ಪರಿಣಿತವಾಗಿಲ್ಲ. ಅದು ವ್ಯಕ್ತಿಯ ಗುರುತಿನ ದಾಖಲೆಯಾಗಿದೆ. ಯುಐಡಿಎಐನ ನಿರ್ದೇಶನದ ಬಳಿಕ ಇಪಿಎಫ್ಒ ತನ್ನ ಜನ್ಮದಿನಾಂಕ ಸಾಕ್ಷ್ಯ ದಾಖಲೆಗಳ ಪಟ್ಟಿಯಿಂದ ಆಧಾರ್ ಅನ್ನು ತೆಗೆದುಹಾಕಿದೆ.
ಇದನ್ನೂ ಓದಿ: Pension for Farmers: ಸಣ್ಣ ರೈತರಿಗೆ ಸರ್ಕಾರದಿಂದ ಪಿಂಚಣಿ ನೆರವು; ಪಿಎಂ ಕಿಸಾನ್ ಮಾನಧನ್ ಯೋಜನೆ ಬಗ್ಗೆ ತಿಳಿಯಿರಿ
ಇಪಿಎಫ್ಒಗೆ ಅಗತ್ಯ ಇರುವ ಡೇಟ್ ಆಫ್ ಬರ್ತ್ ಪ್ರೂಫ್ ದಾಖಲೆಗಳು ಯಾವುವು?
- ಜನನ ಪ್ರಮಾಣಪತ್ರ (ಬರ್ತ್ ಸರ್ಟಿಫಿಕೇಟ್)
- ಶಾಲೆ ಅಥವಾ ಕಾಲೇಜಿನ ಪರೀಕ್ಷೆಯ ಅಂಕ ಪಟ್ಟಿ
- ಶಾಲೆಯ ಟ್ರಾನ್ಸ್ಫರ್ ಸರ್ಟಿಫಿಕೇಟ್, ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್, ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್.
- ಸರ್ವಿಸ್ ರೆಕಾರ್ಡ್ ಆಧಾರದ ಪ್ರಮಾಣಪತ್ರ
- ಪ್ಯಾನ್ ಕಾರ್ಡ್
- ಸರ್ಕಾರಿ ಪೆನ್ಷನ್ ಪೇಮೆಂಟ್ ಆರ್ಡರ್
- ಸರ್ಕಾರದಿಂದ ನೀಡಲಾಗುವ ಡಾಮಿಸೈಲ್ ಸರ್ಟಿಫಿಕೇಟ್ (ನಿವಾಸ ದೃಢೀಕರಣ ಪ್ರಮಾಣಪತ್ರ)
- ಸಿವಿಲ್ ಸರ್ಜನ್ರಿಂದ ನೀಡಲಾಗುವ ಮೆಡಿಕಲ್ ಸರ್ಟಿಫಿಕೇಟ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:50 am, Thu, 18 January 24