ಆಲ್ಫಾಬೆಟ್ ಇಂಕ್ಗೆ ಸೇರಿದ ಗೂಗಲ್ ಈ ವರ್ಷ ಜಾಗತಿಕವಾಗಿ ತನ್ನ ಉದ್ಯೋಗಿಗಳಿಗೆ ಹೆಚ್ಚುವರಿ ಬೋನಸ್ ನೀಡುವುದಾಗಿ ಬುಧವಾರ ಘೋಷಣೆ ಮಾಡಿದೆ. ಏಕೆಂದರೆ ಟೆಕ್ ದೈತ್ಯ ಕಂಪೆನಿ ಗೂಗಲ್ ತನ್ನ ರಿಟರ್ನ್-ಟು-ಆಫೀಸ್ ಯೋಜನೆಯನ್ನು ಹಿಂದಕ್ಕೆ ತಳ್ಳಿದೆ. ಕಂಪೆನಿಯ ದೊಡ್ಡ ಸಂಖ್ಯೆಯಲ್ಲಿನ ಸಿಬ್ಬಂದಿ ಮತ್ತು ಇಂಟರ್ನ್ಗಳು ಸೇರಿದಂತೆ ಎಲ್ಲ ಉದ್ಯೋಗಿಗಳಿಗೆ ಈ ತಿಂಗಳು ತಮ್ಮ ದೇಶದಲ್ಲಿ 1,600 ಅಮೆರಿಕನ್ ಡಾಲರ್ ಅಥವಾ ಸಮಾನ ಮೌಲ್ಯದ ಒಂದು-ಬಾರಿಯ ನಗದು ಬೋನಸ್ ಅನ್ನು ಗೂಗಲ್ ನೀಡುತ್ತದೆ ಎಂದು ಕಂಪೆನಿಯ ವಕ್ತಾರರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಉದ್ಯೋಗಿಗಳನ್ನು ಬೆಂಬಲಿಸುವ ಸಲುವಾಗಿ ಗೂಗಲ್ನಿಂದ ಮನೆಯಿಂದ ಕೆಲಸದ ಭತ್ಯೆ ಮತ್ತು ಯೋಗಕ್ಷೇಮದ ಬೋನಸ್ ನೀಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಬೆನಿಫಿಟ್ ಘೋಷಣೆ ಮಾಡಿದೆ. ಕಂಪೆನಿಯು ಈ ಉದ್ದೇಶಕ್ಕಾಗಿ ಒಟ್ಟು ಎಷ್ಟು ಮೊತ್ತ ಮೀಸಲಿಟ್ಟಿದೆ ಎಂಬುದರ ಕುರಿತು ವಿವರಗಳನ್ನು ನೀಡದೆ ವಕ್ತಾರರು ಮಾಹಿತಿ ತಿಳಿಸಿದ್ದಾರೆ. 2021ರ ಮಾರ್ಚ್ನಲ್ಲಿ ಗೂಗಲ್ನ ಆಂತರಿಕ ಸಮೀಕ್ಷೆಯು ಕಳೆದ ವರ್ಷದಲ್ಲಿ ತನ್ನ ಉದ್ಯೋಗಿ ಯೋಗಕ್ಷೇಮದಲ್ಲಿ ಕುಸಿತವನ್ನು ತೋರಿಸಿದೆ. ಅದರ ನಂತರ ಕಂಪೆನಿಯು 500 ಯುಎಸ್ಡಿ ಯೋಗಕ್ಷೇಮದ ನಗದು ಬೋನಸ್ ಸೇರಿ ಹಲವು ಬೆನಿಫಿಟ್ಗಳನ್ನು ಘೋಷಿಸಿತು.
ಕಳೆದ ವಾರ ಒಮಿಕ್ರಾನ್ ವೇರಿಯಂಟ್ ಆತಂಕಗಳು ಮತ್ತು ಕಂಪೆನಿ-ಆದೇಶದ ಲಸಿಕೆಗಳಿಗೆ ತನ್ನ ಉದ್ಯೋಗಿಗಳಿಂದ ಪ್ರತಿರೋಧದ ಮಧ್ಯೆ ಗೂಗಲ್ ತನ್ನ ಕಚೇರಿಗೆ ಹಿಂತಿರುಗುವ ಯೋಜನೆಯನ್ನು ಅನಿರ್ದಿಷ್ಟವಾಗಿ ಮುಂದಕ್ಕೆ ಹಾಕಿತು. ಜನವರಿ 10ರಿಂದ ಸಿಬ್ಬಂದಿ ಕಚೇರಿಗೆ ಮರಳುವ ನಿರೀಕ್ಷೆಯಿದೆ.
ಇದನ್ನೂ ಓದಿ: Google Pay: ಧ್ವನಿ ಕಮಾಂಡ್ನಿಂದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವ ಫೀಚರ್ ತರಲಿದೆ ಗೂಗಲ್ ಪೇ