ಫ್ಯೂಚರ್ ಸಮೂಹದ ಜತೆಗೆ ಹೊಸ ಕಾನೂನು ಸಮರದಲ್ಲಿ ತೊಡಗಿದ ಅಮೆಜಾನ್ ಇ-ಕಾಮರ್ಸ್ ಎಂದ ಮೂಲಗಳು

ಭಾರತದ ಸ್ಪರ್ಧಾತ್ಮಕ ಆಯೋಗವು ಫ್ಯೂಚರ್ ರೀಟೇಲ್ ಜತೆಗೆ ವ್ಯವಹಾರ ಅಮಾನತು ಮಾಡಿದ ಆದೇಶವನ್ನು ಪ್ರಶ್ನಿಸಿ ಅಮೆಜಾನ್​ನಿಂದ ಎನ್​ಸಿಎಲ್​ಟಿಯಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫ್ಯೂಚರ್ ಸಮೂಹದ ಜತೆಗೆ ಹೊಸ ಕಾನೂನು ಸಮರದಲ್ಲಿ ತೊಡಗಿದ ಅಮೆಜಾನ್ ಇ-ಕಾಮರ್ಸ್ ಎಂದ ಮೂಲಗಳು
ಫ್ಯೂಚರ್ ರೀಟೇಲ್​ನ ಕಿಶೋರ್ ಬಿಯಾನಿ (ಸಂಗ್ರಹ ಚಿತ್ರ)
Updated By: Srinivas Mata

Updated on: Jan 10, 2022 | 1:09 PM

ಭಾರತೀಯ ರೀಟೇಲರ್ ಫ್ಯೂಚರ್ ಸಮೂಹ ಹಾಗೂ ಅಮೆಜಾನ್.ಕಾಮ್ ಇಂಕ್​ನ ದೀರ್ಘ ಕಾಲದ ಕಾನೂನು ವ್ಯಾಜ್ಯ ಇನ್ನಷ್ಟು ಮುಂದುವರಿಯುವಂತೆ ಕಾಣುತ್ತಿದೆ. 2019ರಲ್ಲಿ ನಡೆದಿದ್ದ ಫ್ಯೂಚರ್ ರೀಟೇಲ್- ಅಮೆಜಾನ್ ಮಧ್ಯದ ವ್ಯವಹಾರವನ್ನು ಭಾರತದ ಸ್ಪರ್ಧಾ ಆಯೋಗವು ಅಮಾನತು ಮಾಡಿದ ಮೇಲೆ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ ಎಂಬುದಾಗಿ ರಾಯಿಟರ್ಸ್ ಸುದ್ದಿಸಂಸ್ಥೆ ಭಾನುವಾರ ವರದಿ ಮಾಡಿದೆ. ಅಮೆಜಾನ್ ಮತ್ತು ಫ್ಯೂಚರ್ ರೀಟೇಲ್ ಮಧ್ಯೆ 2019ರಲ್ಲಿ ಆಗಿದ್ದ ವ್ಯವಹಾರವನ್ನು ಕಳೆದ ತಿಂಗಳು ಭಾರತದ ಸ್ಪರ್ಧಾ ಆಯೋಗ (ಸಿಸಿಐ) ಅಮಾನತು ಮಾಡಿತ್ತು. ಫ್ಯೂಚರ್ ರೀಟೇಲ್​ನಿಂದ ರಿಲಯನ್ಸ್ ಇಂಡಸ್ಟ್ರೀಸ್​​ಗೆ ಆಸ್ತಿ ಮಾರಾಟ ಮಾಡಬಾರದು ಎಂದು ತಡೆ ತರುವುದಕ್ಕೆ ಮುಂದಾಗಿದ್ದ ಅಮೆಜಾನ್​ಗೆ ಈ ಬೆಳವಣಿಗೆಯಿಂದಾಗಿ ಹಿನ್ನಡೆ ಆಗಿತ್ತು. ಮೂಲಗಳು ತಿಳಿಸಿರುವ ಪ್ರಕಾರ, ಸಿಸಿಐ ಆದೇಶ ಅಮಾನತು ಮಾಡುವಂತೆ ಕೋರಿ ರಾಷ್ಟ್ರೀಯ ಕಂಪೆನಿ ನ್ಯಾಯ ಮಂಡಳಿಯಲ್ಲಿ ಅಮೆಜಾನ್​ ಮೇಲ್ಮನವಿ ಸಲ್ಲಿದೆ.​

ಇನ್ನು ಇತರ ಮೂಲಗಳು ನೀಡಿರುವ ಮಾಹಿತಿಯಂತೆ, ಫೆಬ್ರವರಿ 1ನೇ ತಾರೀಕಿನವರೆಗೆ ಫ್ಯೂಚರ್- ಅಮೆಜಾನ್ ಅರ್ಬಿಟ್ರೇಷನ್​ಗೆ ದೆಹಲಿ ಹೈಕೋರ್ಟ್ ತಡೆ ನೀಡಿರುವುದನ್ನು ಪ್ರಶ್ನಿಸಿ, ಅಮೆಜಾನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಅಮೆಜಾನ್- ಫ್ಯೂಚರ್ ಮಧ್ಯದ ವ್ಯವಹಾರವನ್ನು ಸಿಸಿಐ ಅಮಾನತು ಮಾಡಿರುವ ಹಿನ್ನೆಲೆಯಲ್ಲಿ ಹೈಕೋರ್ಟ್​ನಿಂದ ಈ ನಿರ್ಧಾರ ಬಂದಿದೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಸಿಸಿಐ ಹಾಗೂ ಅಮೆಜಾನ್ ಎರಡೂ ತಕ್ಷಣಕ್ಕೆ ದೊರೆತಿಲ್ಲ. ಭಾರತದಲ್ಲಿ ಉಚ್ಛ್ರಾಯಕ್ಕೆ ತಲುಪುತ್ತಿರುವ ಗ್ರಾಹಕ ಮಾರುಕಟ್ಟೆಯಲ್ಲಿ ರೀಟೇಲ್ ಪಾರಮ್ಯಕ್ಕಾಗಿ ಅಮೆಜಾನ್, ಫ್ಯೂಚರ್ ಮತ್ತು ರಿಲಯನ್ಸ್ ನಡೆಸುತ್ತಿರುವ ಪ್ರಯತ್ನದ ಭಾಗವಾಗಿ ಇದು ಕಾನೂನು ವ್ಯಾಜ್ಯವಾಗಿದೆ.

ಸಾಲಕ್ಕೆ ಸಿಲುಕಿರುವ ಫ್ಯೂಚರ್ ಆಸ್ತಿ ಖರೀದಿ ಮಾಡುವ ಮೂಲಕ ಭಾರತದ ಅತಿ ಶ್ರೀಮಂತ ಮುಕೇಶ್ ಅಂಬಾನಿ ನಡೆಸುವ ರಿಲಯನ್ಸ್​ನಿಂದ ಮಾರುಕಟ್ಟೆ ವಿಸ್ತರಣೆ ಮಾಡಲು ಮುಂದಾಗಿದೆ. ಆದರೆ ಇದರಿಂದ ಭಾರತೀಯ ರೀಟೇಲ್ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಇನ್ನಷ್ಟು ಮಿತಿಗೊಳಿಸುತ್ತದೆ ಎಂದು ಭಾರತದ ಸ್ಪರ್ಧಾ ಆಯೋಗದ ಬಳಿ ಅಮೆಜಾನ್ ಹೇಳಿತ್ತು. 2019ರಲ್ಲಿ ಮಾಡಿಕೊಂಡ ಒಪ್ಪಂದ ನಿಯಮಾವಳಿಗಳ ಪ್ರಕಾರ ಫ್ಯೂಚರ್ ತನ್ನ ರೀಟೇಲ್ ಆಸ್ತಿಯನ್ನು ರಿಲಯನ್ಸ್​ಗೆ ಮಾರಾಟ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಬಹಳ ಹಿಂದಿನಿಂದ ಅಮೆಜಾನ್ ವಾದ ಮಂಡಿಸುತ್ತಾ ಬಂದಿದೆ. ಅಮೆಜಾನ್ ವಾದಕ್ಕೆ ಸಿಂಗಾಪೂರದ ಮಧ್ಯಸ್ಥಿಕೆ ಕೇಂದ್ರ ಮತ್ತು ಭಾರತದ ಕೋರ್ಟ್ ಬೆಂಬಲವಿದೆ. ಆದರೆ ಒಪ್ಪಂದಕ್ಕೆ ವಿರುದ್ಧವಾಗಿ ಯಾವುದೇ ತಪ್ಪು ಮಾಡಿಲ್ಲ ಎಂದು ಫ್ಯೂಚರ್ ಹೇಳಿದೆ.

ಆದರೆ, ಅಮೆಜಾನ್​ನಿಂದ ಮಾಹಿತಿಯನ್ನು ಮುಚ್ಚಿಡಲಾಗಿದೆ ಎಂಬ ಕಾರಣ ನೀಡಿ, ಸಿಸಿಐನಿಂದ ವ್ಯವಹಾರ ಅಮಾನತು ಮಾಡಿತ್ತು. ಜತೆಗೆ ಅಮೆಜಾನ್​ಗೆ ವ್ಯಾಜ್ಯ ಮುಂದುವರಿಸಲು ಯಾವುದೇ ಕಾನೂನು ಆಧಾರ ಇಲ್ಲ ಎಂದಿತ್ತು. ಎನ್​ಸಿಎಲ್​ಟಿ ಹಾಗೂ ಸುಪ್ರೀಂ ಕೋರ್ಟ್ ಮುಂದೆ ಬರಲಿರುವ ಅಮೆಜಾನ್ ಅರ್ಜಿ ಮುಂದಿನ ದಿನಗಳಲ್ಲಿ ವಿಚಾರಣೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Amazon dispute: ಅಮೆಜಾನ್ ವ್ಯಾಜ್ಯದಿಂದಾಗಿ ರೂ. 3,494 ಕೋಟಿ ಸಾಲ ಪಾವತಿಸಲು ವಿಫಲವಾದ ಫ್ಯೂಚರ್ ರೀಟೇಲ್