Amazon dispute: ಅಮೆಜಾನ್ ವ್ಯಾಜ್ಯದಿಂದಾಗಿ ರೂ. 3,494 ಕೋಟಿ ಸಾಲ ಪಾವತಿಸಲು ವಿಫಲವಾದ ಫ್ಯೂಚರ್ ರೀಟೇಲ್
ಅಮೆಜಾನ್ ಜತೆಗಿನ ವ್ಯಾಜ್ಯದಿಂದಾಗಿ ಫ್ಯೂಚರ್ ರೀಟೇಲ್ ಲಿಮಿಟೆಡ್ ಸಾಲಗಾರರಿಗೆ 3494 ಕೋಟಿ ರೂಪಾಯಿ ಪಾವತಿ ಮಾಡುವುದಕ್ಕೆ ವಿಫಲವಾಗಿದೆ.
ಇ-ಕಾಮರ್ಸ್ ಕಂಪೆನಿಯಾದ ಅಮೆಜಾನ್‌ನೊಂದಿಗೆ ನಡೆಯುತ್ತಿರುವ ಕಾನೂನು ವಿವಾದದಿಂದಾಗಿ ತನ್ನ ಆಸ್ತಿ ಮಾರಾಟದ ಒಪ್ಪಂದಕ್ಕೆ ಅಡ್ಡಿಯಾದ ಕಾರಣ ಬ್ಯಾಂಕ್‌ಗಳು ಮತ್ತು ಇತರ ಸಾಲದಾತರಿಗೆ ಪಾವತಿಸಬೇಕಾದ ರೂ. 3,494.56 ಕೋಟಿ ಮೊತ್ತವನ್ನು ಕೊನೆಯ ದಿನಾಂಕದ ನಂತರವೂ ಕಿಶೋರ್ ಬಿಯಾನಿ ನೇತೃತ್ವದ ಫ್ಯೂಚರ್ ರೀಟೇಲ್ ತಪ್ಪಿಸಿದೆ. ಅಮೆಜಾನ್.ಕಾಮ್ ಎನ್ವಿ ಇನ್ವೆಸ್ಟ್ಮೆಂಟ್ ಹೋಲ್ಡಿಂಗ್ಸ್ ಎಲ್ಎಲ್ಸಿ (Amazon.com NV Investment Holdings LLC) ಜತೆಗೆ ನಡೆಯುತ್ತಿರುವ ವ್ಯಾಜ್ಯಗಳ ಕಾರಣದಿಂದಾಗಿ ನಿಗದಿತ ವ್ಯವಹಾರದ ಯೋಜಿತ ಹಣ ಗಳಿಕೆಯನ್ನು ನಿಗದಿತ ದಿನಾಂಕದಂದು ಪೂರ್ಣಗೊಳಿಸಲು ಕಂಪೆನಿಗೆ ಸಾಧ್ಯವಾಗಲಿಲ್ಲ ಎಂದು ಫ್ಯೂಚರ್ ರೀಟೇಲ್ ಹೇಳಿದೆ. “ಬ್ಯಾಂಕ್‌ಗಳು ಅಥವಾ ಸಾಲದಾತರೊಂದಿಗೆ ಚರ್ಚಿಸಿದಂತೆ, ಪ್ರಸ್ತುತ ಪರಿಸ್ಥಿತಿಯನ್ನು ಪರಿಹರಿಸಲು ಬ್ಯಾಂಕ್‌ಗಳ ನಿರ್ದೇಶನಗಳ ಪ್ರಕಾರ ಮುಂದಿನ 30 ದಿನಗಳಲ್ಲಿ ನಿರ್ದಿಷ್ಟ ವ್ಯವಹಾರದ ಹಣ ಗಳಿಕೆಯನ್ನು ಪೂರ್ಣಗೊಳಿಸಲು ಕಂಪೆನಿಯು ಸಹಕರಿಸುತ್ತದೆ,” ಎಂದು ಕಂಪೆನಿಯು ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಿದೆ.
ಆರ್‌ಬಿಐ 6ನೇ ಆಗಸ್ಟ್, 2020ರಂದು ಹೊರಡಿಸಿದ ಸುತ್ತೋಲೆಯ ಪ್ರಕಾರ ಮತ್ತು ಪಾವತಿಯನ್ನು ಮಾಡಲು ಮೇಲಿನ ಒಪ್ಪಂದದ ನಿಬಂಧನೆಯ ವಿಷಯದಲ್ಲಿ ಕಂಪೆನಿಯು 30 ದಿನಗಳ (ಮೇಲಿನ ದಿನಾಂಕದಿಂದ) ಪರಿಶೀಲನಾ ಅವಧಿಯನ್ನು ಹೊಂದಿತ್ತು. “ಕಂಪೆನಿಯು ಈ ಸಂಬಂಧ ಮತ್ತಷ್ಟು ಬೆಳವಣಿಗೆಗಳು ಮತ್ತು ಅಪ್ಡೇಟ್ಗಳನ್ನು ಅನ್ವಯಿಸಿದಾಗ ತಿಳಿಸುತ್ತದೆ,” ಎಂದು ಅದು ಹೇಳಿತ್ತು. ಫ್ಯೂಚರ್ ರಿಟೇಲ್ ಕಳೆದ ವರ್ಷ ಕೊವಿಡ್-19 ಬಾಧಿತ ಕಂಪೆನಿಗಳಿಗೆ ಬ್ಯಾಂಕ್‌ಗಳು ಮತ್ತು ಸಾಲದಾತರ ಒಕ್ಕೂಟದೊಂದಿಗೆ ಒಂದು ಬಾರಿ ಪುನರ್ರಚನೆ (OTR) ಯೋಜನೆಯನ್ನು ಪರಿಚಯಿಸಿತ್ತು. ಡಿಸೆಂಬರ್ 31, 2021ರಂದು ಅಥವಾ ಅದಕ್ಕೂ ಮೊದಲು “ಒಟ್ಟು ರೂ. 3,494.56 ಕೋಟಿಗಳನ್ನು” ಬಿಡುಗಡೆ ಮಾಡಬೇಕಿತ್ತು.
2021ರ ಏಪ್ರಿಲ್ನಲ್ಲಿ ಫ್ಯೂಚರ್ ರಿಟೇಲ್‌ನ ಸಾಲದಾತರು ಕೊವಿಡ್-19 ಸಂಬಂಧಿತ ಒತ್ತಡ ತೀರುವಳಿಗೆ ಕಂಪೆನಿಯ ಅಸ್ತಿತ್ವದಲ್ಲಿರುವ ಹಣಕಾಸಿನ ಸಾಲವನ್ನು ಆರ್‌ಬಿಐ ಘೋಷಿಸಿದ ತೀರುವಳಿ ಫ್ರೇಮ್‌ವರ್ಕ್‌ನೊಳಗೆ ಪುನರ್ ರಚಿಸಲು ಅನುಮೋದನೆ ನೀಡಿದ್ದರು. ಎಫ್‌ಆರ್‌ಎಲ್‌ನ ವರ್ಕಿಂಗ್ ಕ್ಯಾಪಿಟಲ್ ಬೇಡಿಕೆ, ಸಾಲಗಳು, ಟರ್ಮ್ ಲೋನ್‌ಗಳು, ಕ್ಯಾಶ್ ಕ್ರೆಡಿಟ್, ಅಲ್ಪಾವಧಿ ಸಾಲಗಳು, ಎನ್‌ಸಿಡಿಗಳು, ಖರೀದಿ ಬಿಲ್ ರಿಯಾಯಿತಿ ಮಿತಿಗಳು, ಇತರ ವರ್ಕಿಂಗ್ ಕ್ಯಾಪಿಟಲ್ ಲೋನ್‌ಗಳು ಮತ್ತು ಪಾವತಿಸದ ಬಡ್ಡಿಯನ್ನು ಮರುರಚನೆಯನ್ನು ಒಳಗೊಂಡಿದೆ. 28 ಬ್ಯಾಂಕ್‌ಗಳು ಗುಂಪಿನ ರೀಟೇಲ್ ವ್ಯಾಪಾರ ಸಂಸ್ಥೆಗೆ ಸಾಲ ನೀಡಿದವು ಮತ್ತು ಈ ಕ್ರಮದ ಭಾಗವಾಗಿದ್ದವು.
2020ರ ಆಗಸ್ಟ್ನಲ್ಲಿ ಫ್ಯೂಚರ್ ಗ್ರೂಪ್ ಘೋಷಣೆ ಮಾಡಿದಂತೆ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ಗೆ ರೀಟೇಲ್ ಮತ್ತು ಸಗಟು ವ್ಯಾಪಾರ ಹಾಗೂ ಲಾಜಿಸ್ಟಿಕ್ಸ್ ಮತ್ತು ವೇರ್‌ಹೌಸಿಂಗ್ ವ್ಯವಹಾರದ ಮಾರಾಟಕ್ಕಾಗಿ ರೂ. 24,713 ಕೋಟಿ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ ಅಮೆಜಾನ್ ಕಂಪೆನಿಯು ಫ್ಯೂಚರ್ ರೀಟೇಲ್‌ನಲ್ಲಿ ಷೇರುದಾರರಾಗಿರುವ ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ (ಎಫ್‌ಸಿಪಿಎಲ್) ನಲ್ಲಿನ ತನ್ನ ಶೇಕಡಾ 49ರಷ್ಟು ಷೇರುಗಳನ್ನು ಹೊಂದಿರುವುದಾಗಿಯೂ ಫ್ಯೂಚರ್- ರಿಲಯನ್ಸ್ ಒಪ್ಪಂದವನ್ನು ವಿರೋಧಿಸುತ್ತಿದೆ. ಈ ವಿಷಯವು ಪ್ರಸ್ತುತ ಸುಪ್ರೀಂ ಕೋರ್ಟ್ ಮತ್ತು ಸಿಂಗಾಪುರ್ ಇಂಟರ್ನ್ಯಾಷನಲ್ ಆರ್ಬಿಟ್ರೇಷನ್ ಸೆಂಟರ್ (SIAC) ಮುಂದೆ ವಿವಾದದಲ್ಲಿದೆ.
ಇದನ್ನೂ ಓದಿ: ಫ್ಯೂಚರ್ ರೀಟೇಲ್- ಅಮೆಜಾನ್ ವ್ಯವಹಾರ ಅನುಮೋದನೆ ಅಮಾನತುಗೊಳಿಸಿ 200 ಕೋಟಿ ರೂ. ದಂಡ ವಿಧಿಸಿದ ಸಿಸಿಐ