
ನವದೆಹಲಿ, ಜುಲೈ 4: ಭಾರತದ ಅತಿದೊಡ್ಡ ಏರ್ಲೈನ್ಸ್ ಸಂಸ್ಥೆಯಾದ ಇಂಡಿಗೋದ ನಿರ್ದೇಶಕರಾಗಿ ಮಾಜಿ ನೀತಿ ಆಯೋಗ್ ಸಿಇಒ ಅಮಿತಾಭ್ ಕಾಂತ್ (Amitabh Kant) ಅವರನ್ನು ನೇಮಕ ಮಾಡಲಾಗಿದೆ. ಭಾರತದ ಜಿ20 ಶೆರ್ಪಾ ಆಗಿಯೂ ಕಾರ್ಯನಿರ್ವಹಿಸಿದ್ದ ಅಮಿತಾಭ್ ಕಾಂತ್ ಅವರನ್ನು ತನ್ನ ಮಂಡಳಿಯ ನಿರ್ದೇಶಕರಾಗಿ ನೇಮಿಸಿರುವ ಸಂಗತಿಯನ್ನು ಇಂಡಿಗೋ ಸಂಸ್ಥೆ ಪ್ರಕಟಿಸಿದೆ. ಆದರೆ, ಷೇರುದಾರರ ಅನುಮೋದನೆ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ (Ministry of Civil Aviation) ಅನುಮೋದನೆ ಸಿಕ್ಕ ಬಳಿಕ ಅಮಿತಾಭ್ ಕಾಂತ್ ಅವರ ನಿರ್ದೇಶಕ ಸ್ಥಾನ ಊರ್ಜಿತವಾಗುತ್ತದೆ.
‘2025ರ ಜುಲೈ 3ರಂದು ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಅಮಿತಾಭ್ ಕಾಂತ್ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಲು ಅನುಮೋದನೆ ಮಾಡಲಾಗಿದೆ. ಕೇಂದ್ರ ನಾಗರಿಕ ವಿಮಾನಯಾನದಿಂದ ಸೆಕ್ಯೂರಿಟಿ ಕ್ಲಿಯರೆನ್ಸ್ ದೊರೆತ ಬಳಿಕ ಅವರ ನಿರ್ದೇಶಕ ಸ್ಥಾನದ ಅಧಿಕಾರ ಚಾಲನೆಗೆ ಬರುತ್ತದೆ. ಕಂಪನಿಯ ಷೇರುದಾರರ ಅನುಮೋದನೆಯೂ ಅಗತ್ಯ ಇದೆ’ ಎಂದು ಇಂಟರ್ ಗ್ಲೋಬ್ ಏವಿಯೇಶನ್ ಸಂಸ್ಥೆ ಎನ್ನ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಫಾಕ್ಸ್ಕಾನ್ ಘಟಕದಿಂದ 300ಕ್ಕೂ ಹೆಚ್ಚು ಚೀನೀ ಉದ್ಯೋಗಿಗಳು ವಾಪಸ್; ಭಾರತಕ್ಕೆ ಹಿನ್ನಡೆ ತರಲು ಚೀನಾದ ಸಂಚು?
ಈಗ ಅಮಿತಾಭ್ ಕಾಂತ್ ಅವರು ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಕವಾಗಿದ್ದಾರೆ. ನೀತಿ ರೂಪಿಸುವ ಕಾರ್ಯಗಳಲ್ಲಿ ಸಾಕಷ್ಟು ಅನುಭವ ಹೊಂದಿರುವ ಅಮಿತಾಭ್ ಅವರು ಇಂಡಿಗೋ ಮೂಲಕ ವಿಮಾನಯಾನ ಕ್ಷೇತ್ರಕ್ಕೆ ಜೋಡಿತಗೊಂಡಿರುವುದು ಗಮನಾರ್ಹ ಸಂಗತಿ. ಭಾರತದಲ್ಲಿ ಈ ಕ್ಷೇತ್ರ ಗಣನೀಯವಾಗಿ ಬೆಳೆಯುತ್ತಿದೆಯಾದರೂ ನಿಶ್ಚಿತವಾಗಿ ಲಾಭದಾಯಕ ಎಂಬಂತೆ ಇಲ್ಲ. ಅಮಿತಾಭ್ ಕಾಂತ್ ಅವರಿಂದ ಒಂದಷ್ಟು ಬದಲಾವಣೆಯ ನಿರೀಕ್ಷೆ ಇದೆ.
ಇದನ್ನೂ ಓದಿ: ಹೊಸ ದ್ವೀಪ ಖರೀದಿಸಿ ಟೆಕ್ಕಿಗಳಿಗೆಂದೇ ಹೊಸ ದೇಶ ಕಟ್ಟಲು ಹೊರಟ ಭಾರತೀಯ ಅಮೆರಿಕನ್ ಉದ್ಯಮಿ ಬಾಲಾಜಿ ಶ್ರೀನಿವಾಸನ್
1956ರಲ್ಲಿ ವಾರಾಣಸಿಯಲ್ಲಿ ಜನಿಸಿದ ಅಮಿತಾಭ್ ಕಾಂತ್ 1980ರಲ್ಲಿ ಐಎಎಸ್ ಅಧಿಕಾರಿಯಾಗಿ ಸಾರ್ವಜನಿಕ ಸೇವೆ ಆರಂಭಿಸಿದರು. 2016ರಿಂದ 2022ರವರೆಗೆ ಅವರು ನೀತಿ ಆಯೋಗ್ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು. ನೀತಿ ಆಯೋಗ್ನ ಎರಡನೇ ಸಿಇಒ ಅವರು. ಈ ಜವಾಬ್ದಾರಿ ಬಳಿಕ ಅವರು 2022ರಿಂದ ಭಾರತದ ಜಿ20 ಶೆರ್ಪಾ ಆಗಿ ಕೆಲಸ ಮಾಡಿದ್ದರು. 2025ರ ಜೂನ್ 16ರವರೆಗೂ ಅವರು ಶೆರ್ಪಾ ಆಗಿದ್ದರು.
ನಾಲ್ಕು ದಶಕಗಳ ಸಾರ್ವಜನಿಕ ಸೇವೆಗೆ ಅವರು ಜೂನ್ನಲ್ಲಿ ವಿದಾಯ ಹೇಳಿದ್ದರು. ನಿವೃತ್ತಿ ನಂತರ ಅವರು ಭಾರತದ ಪ್ರಗತಿಗೆ ತಮ್ಮ ಕೊಡುಗೆ ನೀಡುವ ಇರಾದೆ ವ್ಯಕ್ತಪಡಿಸಿದ್ದರು. ಹೊಸ ಅವಕಾಶಗಳನ್ನು ಪಡೆದು ಹೊಸ ಅಧ್ಯಾಯ ಆರಂಭಿಸಲು ಬಯಸುವುದಾಗಿ ಇತ್ತೀಚೆಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ