ಫಾಕ್ಸ್ಕಾನ್ ಘಟಕದಿಂದ 300ಕ್ಕೂ ಹೆಚ್ಚು ಚೀನೀ ಉದ್ಯೋಗಿಗಳು ವಾಪಸ್; ಭಾರತಕ್ಕೆ ಹಿನ್ನಡೆ ತರಲು ಚೀನಾದ ಸಂಚು?
China hand suspected in chinese engineers leaving Indian iphone plants: ಫಾಕ್ಸ್ಕಾನ್ನ ಭಾರತ ಘಟಕಗಳಿಂದ 300ಕ್ಕೂ ಹೆಚ್ಚು ಚೀನಾ ಮೂಲದ ಎಂಜಿನಿಯರುಗಳು ತಮ್ಮ ದೇಶಕ್ಕೆ ಮರಳಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಫಾಕ್ಸ್ಕಾನ್ನ ಐಫೋನ್ ಅಸೆಂಬ್ಲಿಂಗ್ ಘಟಕಗಳ ರಚನೆ ಮತ್ತು ಕಾರ್ಯನಿರ್ವಹಣೆಯಲ್ಲಿ ಈ ಎಂಜಿನಿಯರುಗಳ ಪಾತ್ರ ಮಹತ್ವದಿತ್ತು ಎನ್ನಲಾಗಿದೆ. ಈ ಎಂಜಿನಿಯರುಗಳು ವಾಪಸ್ ಹೋಗಿರುವುದರ ಹಿಂದೆ ಚೀನಾ ಪಾತ್ರ ಇರುವ ಶಂಕೆ ಇದೆ.

ನವದೆಹಲಿ, ಜುಲೈ 3: ಐಫೋನ್ಗಳನ್ನು ಅಸೆಂಬಲ್ ಮಾಡುವ ಫಾಕ್ಸ್ಕಾನ್ ಸಂಸ್ಥೆಯಿಂದ (Foxconn) 300ಕ್ಕೂ ಹೆಚ್ಚು ಚೀನೀ ಮೂಲದ ಎಂಜಿನಿಯರುಗಳು ತಮ್ಮ ದೇಶಕ್ಕೆ ವಾಪಸ್ ಹೋಗುತ್ತಿದ್ದಾರೆ ಎನ್ನುವ ಸುದ್ದಿ ರಾಚಿದೆ. ಕಳೆದ ಒಂದು ತಿಂಗಳಿಂದಲೂ ಈ ಬೆಳವಣಿಗೆ ನಡೆಯುತ್ತಿರುವುದು ಗೊತ್ತಾಗಿದೆ. ಚೀನೀ ಉದ್ಯೋಗಿಗಳು (chinese engineers) ಮರಳಲು ಏನು ಕಾರಣ ಎಂಬುದು ಗೊತ್ತಾಗಿಲ್ಲ. ವರದಿಗಳ ಪ್ರಕಾರ ಈ ಬೆಳವಣಿಗೆಯ ಹಿಂದೆ ಚೀನಾದ ಷಡ್ಯಂತ್ರ ಇದೆ.
ವಿರಳ ಭೂ ಖನಿಜಗಳ ರಫ್ತನ್ನು ನಿಷೇಧಿಸಿದ್ದು, ಪ್ರಮುಖ ಯಂತ್ರೋಪಕರಣಗಳ ಸರಬರಾಜಿಗೆ ತಡೆ ಹಾಕಿದ್ದು, ಚೀನಾದ ಉದ್ದೇಶವನ್ನು ಅನಾವರಣಗೊಳಿಸುತ್ತವೆ. ಈಗ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಚೀನೀ ಎಂಜಿನಿಯರುಗಳು ವಾಪಸ್ ಹೋಗುತ್ತಿರುವುದರ ಹಿಂದೆಯೂ ಚೀನಾ ಸರ್ಕಾರದ ಕೈ ಇರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.
ಈ ಚೀನೀ ಎಂಜಿನಿಯರುಗಳ ಪಾತ್ರ ಏನು?
ಚೀನಾ ಕಳೆದ ಮೂರ್ನಾಲ್ಕು ದಶಕಗಳಿಂದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಅಗಾಧವಾಗಿ ಬೆಳೆದಿದೆ. ಅದು ಅಕ್ಷರಶಃ ವಿಶ್ವದ ಫ್ಯಾಕ್ಟರಿ ಎನಿಸಿದೆ. ಕೆಲ ವರ್ಷಗಳ ಹಿಂದಿನವರೆಗೂ ನೂರಕ್ಕೆ ನೂರು ಐಫೋನ್ಗಳು ಚೀನಾದಲ್ಲೇ ತಯಾರಾಗುತ್ತಿದ್ದವು. ಈಗಲೂ ಕೂಡ ಶೇ. 85ಕ್ಕೂ ಅಧಿಕ ಐಫೋನ್ಗಳು ಚೀನಾದಲ್ಲಿ ತಯಾರಾಗುತ್ತಿವೆ.
ಇದನ್ನೂ ಓದಿ: ಹೊಸ ದ್ವೀಪ ಖರೀದಿಸಿ ಟೆಕ್ಕಿಗಳಿಗೆಂದೇ ಹೊಸ ದೇಶ ಕಟ್ಟಲು ಹೊರಟ ಭಾರತೀಯ ಅಮೆರಿಕನ್ ಉದ್ಯಮಿ ಬಾಲಾಜಿ ಶ್ರೀನಿವಾಸನ್
ಫಾಕ್ಸ್ಕಾನ್ ಕಂಪನಿಯೇ ಚೀನಾದಲ್ಲಿ ಹಲವು ಐಫೋನ್ ಘಟಕಗಳನ್ನು ನಡೆಸುತ್ತದೆ. ಅಲ್ಲಿ ಕೆಲಸ ಮಾಡುತ್ತಿದ್ದ ಕೆಲ ಪರಿಣಿತ ತಂತ್ರಜ್ಞರನ್ನು ಫಾಕ್ಸ್ಕಾನ್ ಭಾರತದಲ್ಲಿರುವ ತನ್ನ ಘಟಕಗಳಿಗೆ ತಂದು ಕೆಲಸ ಮಾಡಿಸುತ್ತಿದೆ.
ಶೆಂಜೆನ್ ನಗರದಿಂದ ಬಂದಿರುವ ನೂರಾರು ಕೌಶಲ್ಯವಂತ ಎಂಜಿನಿಯರುಗಳು ಅಸೆಂಬ್ಲಿ ಘಟಕ ರಚನೆ ಮತ್ತು ಕಾರ್ಯನಿರ್ವಹಣೆಗೆ ಬೇಕಾದ ಅನುಭವ ಮತ್ತು ತಂತ್ರಜ್ಞಾನವನ್ನು ತಮ್ಮೊಂದಿಗೆ ತಂದಿದ್ದುಂಟು. ಐಫೋನ್ ಘಟಕಗಳನ್ನು ತಯಾರಿಸಲು ಪ್ರಿಸಿಶನ್ ಎಂಜಿನಿಯರಿಂಗ್ ಪ್ರಾವೀಣ್ಯತೆ ಬೇಕು. ಅದು ಈ ಅನುಭವಿ ಚೀನೀ ಎಂಜಿನಿಯರುಗಳಿಗೆ ಇದೆ ಎನ್ನಲಾಗಿದೆ. ಫಾಕ್ಸ್ಕಾನ್ ಭಾರತದಲ್ಲಿ ತನ್ನ ಕಾರ್ಯಾಚರಣೆ ತೀವ್ರಗೊಳಿಸುತ್ತಿರುವ ಹೊತ್ತಿನಲ್ಲೇ ಬಹಳ ಮುಖ್ಯವಾದ ಚೀನೀ ಎಂಜಿನಿಯರುಗಳು ನಿರ್ಗಮಿಸುತ್ತಿರುವುದು ಅಚ್ಚರಿ ಹುಟ್ಟಿಸುತ್ತಿದೆ.
ತೈವಾನ್ ಮೂಲದ ಫಾಕ್ಸ್ಕಾನ್ಗೆ ಭಾರತದಲ್ಲಿರುವ ತಮ್ಮ ಘಟಕಗಳಿಗೆ ತಂತ್ರಜ್ಞಾನ ನೆರವು ಕೊಡಲು ತಮ್ಮ ದೇಶದ ಎಂಜಿನಿಯರುಗಳನ್ನು ಮಾತ್ರ ಅವಲಂಬಿಸುವಂತಾಗಿದೆ. ಈ ಮಧ್ಯೆ, ಐಫೋನ್ ಘಟಕ ನಿರ್ವಹಣೆಗೆ ಬೇಕಾದ ಚಾಕಚಕ್ಯತೆ ಮತ್ತು ಕೌಶಲ್ಯವನ್ನು ಭಾರತೀಯ ಎಂಜಿನಿಯರುಗಳು ಸಿದ್ಧಿಸಿಕೊಂಡಿದ್ದಾರಾ ಎಂಬುದು ಗೊತ್ತಿಲ್ಲ.
ಇದನ್ನೂ ಓದಿ: ಮೈಕ್ರೋಸಾಫ್ಟ್ನಿಂದ ಮತ್ತೆ ಲೇ ಆಫ್ ಭೂತ; 9,100 ಉದ್ಯೋಗಿಗಳಿಗೆ ಕೆಲಸ ಹೋಗುವ ಸಾಧ್ಯತೆ
ಚೀನಾ ಮೂಲದ ಉದ್ಯೋಗಿಗಳು ವಾಪಸ್ ಹೋಗುತ್ತಿರುವುದು ಫಾಕ್ಸ್ಕಾನ್ನಲ್ಲಿ ಮಾತ್ರವಲ್ಲ, ಓಪ್ಪೋ, ವಿವೊ ಇತ್ಯಾದಿ ಅಗ್ರಮಾನ್ಯ ಸ್ಮಾರ್ಟ್ಫೋನ್ ಕಂಪನಿಗಳನ್ನೂ ಬಾಧಿಸಿದೆ. ಈ ಚೀನೀ ಕಂಪನಿಗಳು ಭಾರತದಲ್ಲಿ ತಯಾರಕಾ ಘಟಕಗಳನ್ನು ಹೊಂದಿವೆ. ಭಾರತದಲ್ಲಿ ಮಾರಾಟವಾಗುವ ಇವುಗಳ ಫೋನ್ಗಳೆಲ್ಲವೂ ಮೇಡ್ ಇನ್ ಇಂಡಿಯಾದ್ದೇ ಆಗಿವೆ. ಈ ಕಂಪನಿಗಳಿಂದಲೂ ಈಗ ಚೀನೀ ಎಂಜಿನಿಯರುಗಳು ತಮ್ಮ ದೇಶಕ್ಕೆ ಹಿಂದಿರುಗುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




