ಮೈಕ್ರೋಸಾಫ್ಟ್ನಿಂದ ಮತ್ತೆ ಲೇ ಆಫ್ ಭೂತ; 9,100 ಉದ್ಯೋಗಿಗಳಿಗೆ ಕೆಲಸ ಹೋಗುವ ಸಾಧ್ಯತೆ
Microsoft lay off 9,100 employees: ಎಐ ತಂತ್ರಜ್ಞಾನಕ್ಕೆ ವಿಪರೀತ ಬಂಡವಾಳ ಹಾಕಿದ ಕಾರಣ ವೆಚ್ಚ ಕಡಿತಕ್ಕೆ ಲೇ ಆಫ್ ಕ್ರಮವನ್ನು ಮೈಕ್ರೋಸಾಫ್ಟ್ ಅನುಸರಿಸುತ್ತಿದೆ. ಶೇ 4ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡುವುದಾಗಿ ಮೈಕ್ರೋಸಾಫ್ಟ್ ಹೇಳಿದೆ. ಎಂದರೆ, ಕಂಪನಿಯ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳ ಪೈಕಿ 9,100 ಮಂದಿ ಕೆಲಸ ಕಳೆದುಕೊಳ್ಳುವ ನಿರೀಕ್ಷೆ ಇದೆ.

ನವದೆಹಲಿ, ಜುಲೈ 3: ಮೈಕ್ರೋಸಾಫ್ಟ್ ಮತ್ತೊಮ್ಮೆ ಬಾರಿ ದೊಡ್ಡ ಮಟ್ಟದ ಲೇ ಆಫ್ ಕ್ರಮ ಜಾರಿ ಮಾಡುತ್ತಿದೆ. ಶೇ. 4ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು (Microsoft job cut) ಕಂಪನಿ ನಿರ್ಧರಿಸಿದೆ. 9,100 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್ಫ್ರಾಸ್ಟ್ರಕ್ಚರ್ನಲ್ಲಿ ಭಾರೀ ಮೊತ್ತದ ಹೂಡಿಕೆ ಮಾಡಿರುವುದರಿಂದ ಕಂಪನಿಯು ಇತರ ವೆಚ್ಚಗಳನ್ನು ಇಳಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಲೇ ಆಫ್ ಕ್ರಮ ಒಂದು ಎನ್ನಲಾಗಿದೆ.
ಮೈಕ್ರೋಸಾಫ್ಟ್ ಕೋವಿಡ್ ನಂತರದ ದಿನಗಳಲ್ಲಿ 10,000ಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. 2024ರ ಜೂನ್ನಲ್ಲಿ ಅಮೆರಿಕದ ಈ ತಂತ್ರಜ್ಞಾನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳ ಸಂಖ್ಯೆ 2,28,000 ಇತ್ತು. ಮೇ ತಿಂಗಳಲ್ಲಿ 6,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದಾಗಿ ಮೈಕ್ರೋಸಾಫ್ಟ್ ಸಂಸ್ಥೆ ಪ್ರಕಟಿಸಿತ್ತು. ಈಗ ಬಂದಿರುವ ವರದಿ ಪ್ರಕಾರ, ಒಟ್ಟು 9,100 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.
ಇದನ್ನೂ ಓದಿ: ಹೊಸ ದ್ವೀಪ ಖರೀದಿಸಿ ಟೆಕ್ಕಿಗಳಿಗೆಂದೇ ಹೊಸ ದೇಶ ಕಟ್ಟಲು ಹೊರಟ ಭಾರತೀಯ ಅಮೆರಿಕನ್ ಉದ್ಯಮಿ ಬಾಲಾಜಿ ಶ್ರೀನಿವಾಸನ್
ಮ್ಯಾನೇಜರ್ ಮಟ್ಟದ ಉದ್ಯೋಗಿಗಳು, ಮಾರಾಟ ವಿಭಾಗದ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು ಎಂದು ವರದಿಗಳು ಹೇಳುತ್ತಿವೆ. ಸ್ಪೇನ್ನ ಬಾರ್ಸಿಲೋನಾದಲ್ಲಿರುವ ಮೈಕ್ರೋಸಾಫ್ಟ್ನ ಕಿಂಗ್ ಡಿವಿಶನ್ನಲ್ಲಿ ಕಳೆದ ತಿಂಗಳು ಲೇ ಆಫ್ ಆಗಿದೆ. ಕ್ಯಾಂಡಿ ಕ್ರಶ್ ವಿಡಿಯೋ ಗೇಮ್ ತಯಾರಿಸುವುದು ಇಲ್ಲಿಯೇ. ಇಲ್ಲಿ ಶೇ. 10 ಮಂದಿಯನ್ನು ಮನೆಗೆ ಕಳುಹಿಸಲಾಗಿದೆ.
ಇತರ ಟೆಕ್ ಕಂಪನಿಗಳಿಂದಲೂ ಲೇ ಆಫ್ ಹಾದಿ…
ಸಿಲಿಕಾನ್ ವ್ಯಾಲಿಯಲ್ಲಿ ಮತ್ತೆ ಲೇ ಆಫ್ ಭರಾಟೆ ಚಾಲನೆಗೊಂಡಿದೆ. ಕೋವಿಡ್ ವೇಳೆ ಬ್ಯುಸಿನೆಸ್ ಕಡಿಮೆಗೊಂಡಿದ್ದರಿಂದ ಬಹಳಷ್ಟು ಕಂಪನಿಗಳು ಉದ್ಯೋಗಿಗಳ ಸಂಖ್ಯೆಗೆ ಕತ್ತರಿ ಹಾಕಿದ್ದುವು. ಈಗ ಬ್ಯುಸಿನೆಸ್ ಮತ್ತೆ ಯಥಾಸ್ಥಿತಿಗೆ ಬಂದಿದೆಯಾದರೂ ಎಐ ಸ್ಪರ್ಧೆ ಶುರುವಾಗಿದೆ. ಓಪನ್ಎಐನಿಂದ ಶುರುವಾದ ಎಐ ಯುದ್ಧ ಈಗ ಎಲ್ಲಾ ಟೆಕ್ ಕಂಪನಿಗಳನ್ನೂ ವಾರ್ ಮೋಡ್ಗೆ ನೂಕಿದೆ. ಆ್ಯಪಲ್, ಮೈಕ್ರೋಸಾಫ್ಟ್, ಗೂಗಲ್, ಅಮೇಜಾನ್ ಇತ್ಯಾದಿ ದೈತ್ಯ ಕಂಪನಿಗಳೆಲ್ಲವೂ ಎಐ ಟೆಕ್ನಾಲಜಿ ಅಭಿವೃದ್ಧಿಗೆ ಸಿಕ್ಕಷ್ಟು ಬಂಡವಾಳ ಸುರಿಯುತ್ತಿವೆ. ಹೀಗಾಗಿ, ಲೇ ಆಫ್ ಮೂಲಕ ಒಂದಷ್ಟು ವೆಚ್ಚ ಕಡಿತಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಭಾರತ-ಅಮೆರಿಕ ಟ್ರೇಡ್ ಡೀಲ್ಗೆ ‘ಡೈರಿ’ ತಡೆ; ಅಮೆರಿಕದ ಹಾಲು ಭಾರತಕ್ಕೆ ಬಂದರೆ ಹೇಗೆ?
ಮೆಟಾ, ಗೂಗಲ್ ಮತ್ತು ಅಮೇಜಾನ್ ಸಂಸ್ಥೆಗಳು ಇತ್ತೀಚೆಗೆ ತಮ್ಮ ಸಾವಿರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದವು. ಮುಂದಿನ ದಿನಗಳಲ್ಲೂ ಈ ಟ್ರೆಂಡ್ ಮುಂದುವರಿಯುವ ಸಾಧ್ಯತೆ ಇದ್ದೇ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




