ರಾಯಪುರ್: ಛತ್ತೀಸ್ಗಡ ಸರ್ಕಾರ ತನ್ನ ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು (Anganwadi Workers), ಮಿನಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರ ಸಂಬಳಗಳನ್ನು ಏರಿಕೆ ಮಾಡಿದೆ. ಹಣಕಾಸು ಖಾತೆಯನ್ನೂ ಹೊಂದಿರುವ ಸಿಎಂ ಭೂಪೇಶ್ ಬಾಘೆಲ್ (Chhattisgarh CM Bhupesh Baghel) ಮಾರ್ಚ್ 7, ಮಂಗಳವಾರದಂದು ಅಂಗನವಾಡಿ ಕಾರ್ಯಕರ್ತಯರಿಗೆ ಹೋಳಿ ಹಬ್ಬದ ಉಡುಗೊರೆಯಂತೆ ಈ ಸಂಬಳ ಹೆಚ್ಚಳದ ಘೋಷಣೆ ಮಾಡಿದ್ದಾರೆ. ಇವರ ಸಂಬಳಗಳು 3,500 ರೂವರೆಗೂ ಹೆಚ್ಚಳವಾಗಲಿವೆ.
ಛತ್ತೀಸ್ಗಡ ಸರ್ಕಾರ ಪ್ರಕಟಿಸಿರುವ ಮಾಹಿತಿ ಪ್ರಕಾರ, ಅಂಗನವಾಡಿ ಕಾರ್ಯಕರ್ತೆಯರ ಸಂಬಳ 3,500 ರೂ ಹೆಚ್ಚಾಗಲಿದೆ. 6,500 ರೂ ಇರುವ ಇವರ ಸಂಬಳ 10,000 ರುಪಾಯಿಗೆ ಏರಿಕೆ ಆಗಲಿದೆ. ಅಂಗನವಾಡಿ ಸಹಾಯಕಿಯರ ಸಂಬಳ 3,250 ರೂನಿಂದ 5,000 ರುಪಾಯಿಗೆ ಏರಿಕೆ ಆಗಲಿದೆ. ಇನ್ನು, ಮಿನಿ ಅಂಗನವಾಡಿ ಕಾರ್ಯಕರ್ತೆಯರ ಸಂಬಳ 4,500 ರೂನಿಂದ 7,500 ರುಪಾಯಿಗೆ ಹೆಚ್ಚಾಗಲಿದೆ.
ಛತ್ತೀಸ್ಗಡ ಸರ್ಕಾರ ಅಂಗನವಾಡಿ ಉದ್ಯೋಗಿಗಳಿಗೆ ಮಾತ್ರವಲ್ಲ ಹೋಮ್ ಗಾರ್ಡ್, ಗ್ರಾಮ ಕೊತ್ವಾರ ಮತ್ತಿತರ ಹುದ್ದೆಗಳಿಗೂ ಸಂಬಳ ಹೆಚ್ಚಳ ಮಾಡಿದ್ದಾರೆ.
ನಿರುದ್ಯೋಗಿ ಯುವಕರಿಗೂ ಭತ್ಯೆ
ಕಾಂಗ್ರೆಸ್ ನೇತೃತ್ವದ ಛತ್ತೀಸ್ಗಡ ಸರ್ಕಾರ ನಿನ್ನೆ ಸೋಮವಾರ 1.21 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿತ್ತು. ಅದರಲ್ಲಿ ಪ್ರಮುಖವಾಗಿ ಗಮನ ಸೆಳೆದದ್ದು ರಾಜ್ಯದ ನಿರುದ್ಯೋಗಿ ಯುವಸಮುದಾಯದವರಿಗೆ 2,500 ರೂ ಮಾಸಿಕ ಭತ್ಯೆಯನ್ನು ಘೋಷಿಸಿದ್ದಾರೆ. ಪಿಯುಸಿ ಪಾಸ್ ಆಗಿರುವ ಮತ್ತು 18ರಿಂದ 35 ವರ್ಷ ವಯೋಮಾನದಲ್ಲಿರುವ ಯುವಕ ಮತ್ತು ಯುವತಿಯರಿಗೆ ತಿಂಗಳಿಗೆ 2,500 ರೂ ಸಹಾಯಧನವನ್ನು ಸರ್ಕಾರ ಒದಗಿಸಲು ಉದ್ದೇಶಿಸಿದೆ. ಆದರೆ, ಈ ನಿರುದ್ಯೋಗಿಗಳ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ಮೀರಿರಬಾರದು ಎಂಬ ಷರತ್ತು ಇದೆ. ಸರ್ಕಾರ ಈ ಯೋಜನೆಗಾಗಿ ಮುಂದಿನ ಹಣಕಾಸು ವರ್ಷದಲ್ಲಿ 250 ಕೋಟಿ ರೂ ಮೀಸಲಿರಿಸಿದೆ.
ಕರ್ನಾಟಕದಲ್ಲಿ ಅಂಗನವಾಡಿ ಕಾರ್ಮಿಕರ ಸಂಬಳ ಎಷ್ಟು?
ಕರ್ನಾಟಕದಲ್ಲಿ 2019ರಲ್ಲೇ ಅಂಗನವಾಡಿ ಸಿಬ್ಬಂದಿಯ ವೇತನ ಪರಿಷ್ಕರಣೆ ಮಾಡಲಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರ ಸಂಬಳವನ್ನು 8 ಸಾವಿರ ರೂನಿಂದ 10,000 ರುಪಾಯಿಗೆ ಹೆಚ್ಚಿಸಲಾಗಿತ್ತು, ಮಿನಿ ಅಂಗನವಾಡಿ ಕಾರ್ಯಕರ್ತೆಯರ ಸಂಬಳ 4,750 ರೂನಿಂದ 6,000 ರೂಗೆ, ಅಂಗನವಾಡಿ ಸಹಾಯಕಿಯರ ವೇತನ 4,000 ರೂನಿಂದ 5,000 ರೂಗೆ ಏರಿಕೆ ಮಾಡಲಾಗಿತ್ತು.
ಇದನ್ನೂ ಓದಿ: CIBIL Tips: ಅತಿಯಾಗಿ ಕ್ರೆಡಿಟ್ ಕಾರ್ಡ್ ಉಪಯೋಗಿಸದಿರಿ: ಸಿಬಿಲ್ ಸ್ಕೋರ್ ಹೆಚ್ಚಿಸುವ 3 ಐಡಿಯಾಗಳು
ಇದೀಗ ಅಂಗವನಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಗ್ರಾಚುವಿಟಿ ನೀಡಲೂ ಸರ್ಕಾರ ಸಮ್ಮತಿಸಿದೆ. ಇವರಿಗೆ 7ನೇ ವೇತನ ಆಯೋಗ ಜಾರಿಯಾದರೆ ಸಂಬಳ ಇನ್ನೂ ಬಹಳಷ್ಟು ಹೆಚ್ಚಾಗಲಿದೆ. ಅಂತೆಯೇ 7ನೇ ವೇತನ ಆಯೋಗ ಜಾರಿಗೂ ಒತ್ತಾಯ ಕೇಳಿಬರುತ್ತಿದೆ.