CIBIL Tips: ಅತಿಯಾಗಿ ಕ್ರೆಡಿಟ್ ಕಾರ್ಡ್ ಉಪಯೋಗಿಸದಿರಿ: ಸಿಬಿಲ್ ಸ್ಕೋರ್ ಹೆಚ್ಚಿಸುವ 3 ಐಡಿಯಾಗಳು
How To Increase Credit Score for Bank Loans: ವಿವಿಧ ಕಾರಣಕ್ಕೆ ಕೆಲವೊಮ್ಮೆ ನಮ್ಮ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಕಡಿಮೆ ಆಗಬಹುದು. ಹೀಗಾದಲ್ಲಿ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳುವುದು ಹೇಗೆ? ಇಲ್ಲಿದೆ ಕೆಲ ಟಿಪ್ಸ್...
ಬೆಂಗಳೂರು: ಈಗ ಬಹಳ ಮಂದಿಗೆ ಕ್ರೆಡಿಟ್ ರೇಟಿಂಗ್ (Credit Rating) ಬಗ್ಗೆ ಮತ್ತು ಅದರ ಮಹತ್ವ ಏನು ಎಂಬುದರ ಬಗ್ಗೆ ಅರಿವಾಗಿರಬಹುದು. ಕ್ರೆಡಿಟ್ ಕಾರ್ಡ್, ಬ್ಯಾಂಕ್ ಲೋನ್ ಇತ್ಯಾದಿ ನಮ್ಮ ಸಾಲದ ಇತಿಹಾಸ ಹಾಗೂ ಸಾಲು ತೀರಿಸುವ ನಮ್ಮ ನಡಾವಳಿಯ ಇತಿಹಾಸ ಕ್ರೆಡಿಟ್ ರೇಟಿಂಗ್ ರೂಪದಲ್ಲಿ ಪ್ರಾಪ್ತವಾಗುತ್ತದೆ. ಸಿಬಿಲ್ (CIBIL), ಹೈಮಾರ್ಕ್, ಎಕ್ಸ್ಪೀರಿಯನ್ ಮತ್ತು ಈಕ್ವಿಫಾಕ್ಸ್ ಕಂಪನಿಗಳು ಕ್ರೆಡಿಟ್ ರೇಟಿಂಗ್ ಕೊಡಲು ಆರ್ಬಿಐನಿಂದ ಮಾನ್ಯತೆ ಪಡೆದ ಸಂಸ್ಥೆಗಳಾಗಿವೆ. ಇವುಗಳ ಪೈಕಿ ಸಿಬಿಲ್ ಅತ್ಯಂತ ಹಳೆಯದು ಮತ್ತು ಅತಿಹೆಚ್ಚು ಬೇಡಿಕೆಯಲ್ಲಿರುವ ಕ್ರೆಡಿಟ್ ರೇಟಿಂಗ್ ಕಂಪನಿ. ಹೀಗಾಗಿ, ಕ್ರೆಡಿಟ್ ರೇಟಿಂಗ್ಗೆ ಸಿಬಿಲ್ ಸ್ಕೋರ್ ಎಂದೇ ಅನ್ವರ್ಥ ನಾಮ ಬಂದುಬಿಟ್ಟಿದೆ.
ಸಿಬಿಲ್ ಸಂಸ್ಥೆ ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಅನ್ನು ನಂಬರ್ ಮೂಲಕ ನೀಡುತ್ತದೆ. ಇದು 300 ಅಂಕಗಳಿಂದ ಆರಂಭವಾಗಿ ಗರಿಷ್ಠ 900 ಅಂಕಗಳವರೆಗೆ ರೇಟಿಂಗ್ ಕೊಡಲಾಗುತ್ತದೆ. 300 ಅಂಕ ಎಂದರೆ ವ್ಯಕ್ತಿಯ ಕ್ರೆಡಿಟ್ ರೇಟಿಂಗ್ ಕನಿಷ್ಠತಮ ಅಥವಾ ಅತ್ಯಂತ ಕಳಪೆ ಎಂದಾಗುತ್ತದೆ. 900 ಅಂಕ ಎಂದರೆ ಅತ್ಯುತ್ತಮ ರೇಟಿಂಗ್. ಬ್ಯಾಂಕ್ ಸಾಲ, ಕ್ರೆಡಿಟ್ ಕಾರ್ಡ್ ಹಣದ ಮಿತಿ ಇತ್ಯಾದಿ ಎಲ್ಲಕ್ಕೂ ಈ ಕ್ರೆಡಿಟ್ ರೇಟಿಂಗ್ ಮುಖ್ಯ ಪಾತ್ರ ವಹಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದರೆ (750ಕ್ಕಿಂತ ಹೆಚ್ಚು ಅಂಕ) ಬ್ಯಾಂಕ್ ಸಾಲ ಬಹಳ ಸುಲಭವಾಗಿ ಸಿಗುತ್ತದೆ. ಸಾಲಕ್ಕೆ ಬಡ್ಡಿ ದರವೂ ಕಡಿಮೆ ಇರುತ್ತದೆ. ಹೀಗಾಗಿ, ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವುದು ನಿಮಗೆ ವಿವಿಧ ರೀತಿಯಲ್ಲಿ ಲಾಭ ತಂದುಕೊಡುತ್ತದೆ.
ಇದನ್ನೂ ಓದಿ: Women’s Preferences: ಹಣಕಾಸು ಸೇವೆಗಳಲ್ಲಿ ಯಾವುದಕ್ಕೆ ಮಹಿಳೆಯರ ಆದ್ಯತೆ?: ಆರ್ಬಿಐ ವರದಿ ನೋಡಿ
ವಿವಿಧ ಕಾರಣಕ್ಕೆ ಕೆಲವೊಮ್ಮೆ ನಮ್ಮ ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಕಡಿಮೆ ಆಗಬಹುದು. ಸಾಲದ ಕಂತು ಕಟ್ಟಲು ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಲು ವಿಫಲವಾಗಿಯೋ ನಮ್ಮ ಸ್ಕೋರಿಂಗ್ ಕುಸಿದುಹೋಗಿರಬಹುದು. ಹೀಗಾದಲ್ಲಿ ಕ್ರೆಡಿಟ್ ಸ್ಕೋರ್ ಉತ್ತಮಪಡಿಸಿಕೊಳ್ಳುವುದು ಹೇಗೆ? ಇಲ್ಲಿದೆ ಕೆಲ ಟಿಪ್ಸ್:
ಮತ್ತೆ ಮತ್ತೆ ಸಾಲಕ್ಕೆ ಅರ್ಜಿ ಸಲ್ಲಿಸದಿರಿ
ಕ್ರೆಡಿಟ್ ಸ್ಕೋರ್ ಕಡಿಮೆ ಇದೆ ಎಂಬ ಕಾರಣಕ್ಕೆ ನೀವು ಸಾಲಕ್ಕಾಗಿ ಸಲ್ಲಿಸಿದ ಅರ್ಜಿ ತಿರಸ್ಕೃತಗೊಳ್ಳಬಹುದು. ಆಗ ನೀವು ಬೇರೆ ಬೇರೆ ಬ್ಯಾಂಕುಗಳಿಗೆ ಹೋಗಿ ಅಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಹೋಗಬೇಡಿ. ಯಾಕೆಂದರೆ ನೀವು ಹಿಂದೆ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಕ್ರೆಡಿಟ್ ಸ್ಕೋರ್ ಕಡಿಮೆ ಆಗಿದೆ ಎಂಬ ಕಾರಣಕ್ಕೆ ತಿರಸ್ಕೃತಗೊಂಡಿರುವುದು ದಾಖಲಾಗಿರುತ್ತದೆ. ಬೇರೆ ಬ್ಯಾಂಕ್ನಲ್ಲಿ ಅರ್ಜಿ ಸಲ್ಲಿಸಿದಾಗ ಅವರು ಕ್ರೆಡಿಟ್ ಏಜೆನ್ಸಿಗಳ ಮೂಲಕ ಪರಿಶೀಲನೆ ನಡೆಸುತ್ತಾರೆ. ನಿಮ್ಮ ಹಿಂದಿನ ಸಾಲದ ಅರ್ಜಿ ತಿರಸ್ಕೃತಗೊಂಡಿರುವುದು ಮತ್ತು ಕ್ರೆಡಿಟ್ ಸ್ಕೋರ್ ಕಳಪೆ ಇರುವುದು ಈ ಅಂಶಗಳ ಕಾರಣದಿಂದ ನಿಮ್ಮ ಸಾಲದ ಅರ್ಜಿ ಮತ್ತೆ ತಿರಸ್ಕೃತಗೊಳ್ಳುವುದು ನಿಶ್ಚಿತ.
ಲೇಟ್ ಪೇಮೆಂಟ್ ತಪ್ಪಿಸಿ
ನೀವು ಪಡೆದಿರುವ ಸಾಲದ ಕಂತುಗಳನ್ನು ನಿಗದಿತ ದಿನದೊಳಗೆ ತಪ್ಪದೇ ಪಾವತಿಸಬೇಕು. ಕ್ರೆಡಿಟ್ ಕಾರ್ಡ್ ಬಿಲ್ಗಳನ್ನೂ ಸರಿಯಾದ ಸಮಯಕ್ಕೆ ತಪ್ಪದೇ ಪಾವತಿಸಿ. ನೀವು ತಡ ಮಾಡಿದಷ್ಟೂ ಕ್ರೆಡಿಟ್ ಸ್ಕೋರ್ ಕಡಿಮೆ ಆಗಿಬಿಡುತ್ತದೆ. ಸರಿಯಾದ ಸಮಯಕ್ಕೆ ಒಂದು ಇಎಂಐ ಮಾತ್ರವೇ ಕಟ್ಟಲು ವಿಫಲವಾದ ಮಾತ್ರಕ್ಕೆ ಬಹಳ ದಿನಗಳ ಕಾಲ ಕ್ರೆಡಿಟ್ ಸ್ಕೋರಿಂಗ್ ಕಳಪೆ ಸ್ಥಿತಿಯಲ್ಲಿರುವ ಹಲವರ ನಿದರ್ಶನಗಳಿವೆ.
ಕ್ರೆಡಿಟ್ ಕಾರ್ಡ್ ಮಿತವಾಗಿ ಬಳಸಿ
ನೀವು ಕ್ರೆಡಿಟ್ ಕಾರ್ಡನ್ನು ಅತಿಯಾಗಿ ಬಳಸುವವರಾಗಿದ್ದರೆ ಹುಷಾರು. ತಜ್ಞರ ಪ್ರಕಾರ ನಿಮ್ಮ ಕ್ರೆಡಿಟ್ ಕಾರ್ಡ್ನಲ್ಲಿ ನಿಗದಿ ಮಾಡಿರುವ ಹಣದ ಮಿತಿಯಲ್ಲಿ ಸೇ. 30ಕ್ಕಿಂತ ಕಡಿಮೆ ಹಣವನ್ನು ಮಾತ್ರ ಕ್ರೆಡಿಟ್ ಕಾರ್ಡ್ ಮೂಲಕ ಬಳಸಿ. ನಿಮ್ಮಲ್ಲಿ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಇದ್ದರೆ ಎಲ್ಲವನ್ನೂ ಉಪಯೋಗಿಸಿ, ಆದರೆ, ಮಿತಿಯಲ್ಲಿ ಉಪಯೋಗಿಸಿ. ಇದರಿಂದ ನಿಮ್ಮ ಕ್ರೆಡಿಟ್ ರೇಟಿಂಗ್ ಉತ್ತಮಗೊಳ್ಳುತ್ತದೆ.
ಇದನ್ನೂ ಓದಿ: FD Rates: ಬಜಾಜ್ ಫೈನಾನ್ಸ್ನಲ್ಲಿ ಠೇವಣಿಗಳಿಗೆ ಶೇ. 8.20ರವರೆಗೆ ಬಡ್ಡಿ; ಇಲ್ಲಿದೆ ವಿವರ
ನಿಮ್ಮ ಕ್ರೆಡಿಟ್ ಮಿತಿಯನ್ನು ಮೀರುವಷ್ಟು ನೀವು ಕಾರ್ಡ್ ಬಳಕೆ ಮಾಡಿದರೆ ಸಿಬಿಲ್ ಸ್ಕೋರು ಕಡಿಮೆ ಆಗಿಬಿಡುತ್ತದೆ. ನಿಮ್ಮಲ್ಲಿ ಒಂದೇ ಕ್ರೆಡಿಟ್ ಕಾರ್ಡ್ ಇದ್ದು, ಅದರ ಕ್ರೆಡಿಟ್ ಲಿಮಿಟ್ ತೀರಾ ಕಡಿಮೆ ಇದ್ದರೆ ನೀವು ಬ್ಯಾಂಕನ್ನು ಸಂಪರ್ಕಿಸಿ ಕ್ರೆಡಿಟ್ ಮಿತಿ ಹೆಚ್ಚಿಸುವಂತೆ ಕೇಳಿಕೊಳ್ಳಬಹುದು.