IPL 2025: ಜವಾಬ್ದಾರಿಯಿಂದ ಆಡಬೇಕು: ರೋಹಿತ್ ಶರ್ಮಾರನ್ನು ಗುರಿಯಾಗಿಸಿದ ಹಾರ್ದಿಕ್ ಪಾಂಡ್ಯ
IPL 2025 GT vs MI: ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಇನ್ನೂ ಸಹ ಗೆಲುವಿನ ಖಾತೆ ತೆರೆದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ವಿಕೆಟ್ಗಳಿಂದ ಸೋಲನುಭವಿಸಿದ್ದ ಮುಂಬೈ ಇಂಡಿಯನ್ಸ್ ತಂಡವು ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಕೂಡ ಪರಾಜಯಗೊಂಡಿದೆ. ಈ ಮೂಲಕ ಮೊದಲೆರಡು ಪಂದ್ಯಗಳಲ್ಲಿ ಮುಂಬೈ ಪಡೆ ಮುಗ್ಗರಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಮುಂಬೈ ಇಂಡಿಯನ್ಸ್ (MI) ಆಡಿದ 2 ಪಂದ್ಯಗಳಲ್ಲೂ ಸೋತಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಗ್ಗರಿಸಿದ್ದ ಮುಂಬೈ ಇಂಡಿಯನ್ಸ್ ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲನುಭವಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 196 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 160 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮುಂಬೈ ಪಡೆ 36 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಈ ಪರಾಜಯಕ್ಕೆ ಬ್ಯಾಟರ್ಗಳು ಕಾರಣ ಎಂದು ನೇರವಾಗಿ ಹೇಳಿದರು. ನಾವು ಮೊದಲು ಬೌಲಿಂಗ್ನಲ್ಲಿ ಹೆಚ್ಚುವರಿ 15-20 ರನ್‌ಗಳನ್ನು ನೀಡಿದ್ದೆವು. ಆ ಬಳಿಕ ಬ್ಯಾಟಿಂಗ್ನಲ್ಲಿ ಹೆಚ್ಚುವರಿ 20 ರನ್ಗಳಿಸಲು ವಿಫಲರಾಗಿದ್ದೇವೆ ಎಂದರು.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ನಾವು ಮೈದಾನದಲ್ಲಿ ವೃತ್ತಿಪರರಾಗಿ ಕಾಣಿಸಿಕೊಂಡಿಲ್ಲ ಎಂಬುದು ನನ್ನ ಭಾವನೆ. ಹಲವು ಸಾಮಾನ್ಯ ತಪ್ಪುಗಳನ್ನು ಮಾಡಿದ್ದೇವೆ. ಇದರಿಂದ ನಾವು 20-25 ರನ್‌ಗಳನ್ನು ಹೆಚ್ಚುವರಿಯಾಗಿ ನೀಡಬೇಕಾಯಿತು. ಟಿ20 ಕ್ರಿಕೆಟ್ನಲ್ಲಿ ಈ ಇಷ್ಟು ರನ್ಗಳು ತುಂಬಾ ದೊಡ್ಡದು ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಇದೇ ವೇಳೆ ಗುಜರಾತ್ ಟೈಟಾನ್ಸ್ ಆರಂಭಿಕರನ್ನು ಹೊಗಳಿದ ಹಾರ್ದಿಕ್ ಪಾಂಡ್ಯ, ಅವರ ಓಪನರ್ಗಳು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಪವರ್ಪ್ಲೇನಲ್ಲೂ ಉತ್ತಮ ರನ್ ಕಲೆಹಾಕಿದರು. ಆದರೆ ನಮ್ಮ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.
ಇದೀಗ ನಾವೆಲ್ಲರೂ ಜವಾಬ್ದಾರಿ ತೆಗೆದುಕೊಳ್ಳಬೇಕು. ಅದರಲ್ಲೂ ಬ್ಯಾಟರ್ಗಳು ಹೆಚ್ಚಿನ ಜವಾಬ್ದಾರಿಯೊಂದಿಗೆ ಆಡಬೇಕಿದೆ. ಆರಂಭಿಕರು ಹೆಚ್ಚು ಜಾಗೃತೆಯಿಂದ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಬೇಕಿದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ಅಂದಹಾಗೆ ಮುಂಬೈ ಇಂಡಿಯನ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಕೇವಲ 8 ರನ್ಗಳಿಸಿ ಮೊದಲ ಓವರ್ನಲ್ಲೇ ಕ್ಲೀನ್ ಬೌಲ್ಡ್ ಆಗಿದ್ದರು. ಆದರೆ ಅತ್ತ ಗುಜರಾತ್ ಟೈಟಾನ್ಸ್ ತಂಡದ ಆರಂಭಿಕರು ಮೊದಲ ವಿಕೆಟ್ಗೆ 78 ರನ್ ಪೇರಿಸಿದ್ದರು. ಇದನ್ನೇ ಪರೋಕ್ಷವಾಗಿ ಪ್ರಸ್ತಾಪಿಸುವ ಮೂಲಕ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಬ್ಯಾಟರ್ಗಳು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: ಪಾಕ್ ವಿರುದ್ಧ ವಿಶ್ವ ದಾಖಲೆ ಬರೆದ ಪಾಕಿಸ್ತಾನದ ಮಾಜಿ ಕ್ರಿಕೆಟಿಗನ ಪುತ್ರ..!
ಒಟ್ಟಿನಲ್ಲಿ ಐಪಿಎಲ್ 2025 ರಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡವು ಇದೀಗ ಬ್ಯಾಕ್ ಟು ಬ್ಯಾಕ್ ಸೋಲುಗಳಿಂದ ಕಂಗೆಟ್ಟಿದೆ. ಇದಾಗ್ಯೂ ಮಾರ್ಚ್ 31 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಮೂಲಕ ಪಾಂಡ್ಯ ಪಡೆ ಗೆಲುವಿನ ಖಾತೆ ತೆರೆಯಲಿದೆಯಾ ಕಾದು ನೋಡಬೇಕಿದೆ.
Published On - 8:30 am, Sun, 30 March 25