IPL 2025: ರೋಹಿತ್ ಶರ್ಮಾರನ್ನು ಬೆಂಚ್ ಕಾಯಿಸಿದ ಮುಂಬೈ ಇಂಡಿಯನ್ಸ್
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನ ಸೀಸನ್-18ರ ಮೂರನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡಿರಲಿಲ್ಲ. ಕಳೆದ ಸೀಸನ್ನ ಕೊನೆಯ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ತಪ್ಪು ಮಾಡಿದಕ್ಕಾಗಿ ಪಾಂಡ್ಯಗೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ. ಹೀಗಾಗಿ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಾಯಕನಾಗಿ ಕಾಣಿಸಿಕೊಂಡಿದ್ದರು. ಇತ್ತ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರನ್ನು ಈ ಪಂದ್ಯದ ಫೀಲ್ಡಿಂಗ್ ವೇಳೆ ಬೆಂಚ್ ಕಾಯಿಸಿರುವುದೇ ಈಗ ಚರ್ಚೆಗೆ ಕಾರಣವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2025) 3ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು 4 ವಿಕೆಟ್ಗಳ ಜಯ ಸಾಧಿಸಿದೆ. ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma) ಕೇವಲ 4 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.
ಹೀಗೆ ಝೀರೋ ರನ್ಗೆ ಔಟಾದ ರೋಹಿತ್ ಶರ್ಮಾ ಅವರನ್ನು ಆ ಬಳಿಕ ಫೀಲ್ಡಿಂಗ್ಗೆ ಇಳಿಸಿರಲಿಲ್ಲ ಎಂಬುದು ವಿಶೇಷ. ಅಂದರೆ ಅವರ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ವಿಘ್ನೇಶ್ ಪುತ್ತೂರು ಅವರನ್ನು ಕಣಕ್ಕಿಳಿಸಲಾಗಿದೆ.
ಇದರಿಂದ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದ ರೋಹಿತ್ ಶರ್ಮಾ ಅವರ ಫೀಲ್ಡಿಂಗ್ ವೀಕ್ಷಿಸಲು ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡಕ್ಕೆ 5 ಟ್ರೋಫಿ ಗೆದ್ದುಕೊಟ್ಟಿರುವ ನಾಯಕನನ್ನು ಮೈದಾನದಿಂದ ಹೊರಗಿಟ್ಟಿರುವುದೇ ಇದೀಗ ಚರ್ಚೆಗೆ ಕಾರಣವಾಗಿದೆ.
ಏಕೆಂದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ ಅವರ ನಾಯಕತ್ವ ತಂತ್ರಗಾರಿಕೆ ಎಲ್ಲರಿಗೂ ಗೊತ್ತಿರುವಂತದ್ದು. ಹೀಗಾಗಿ ಹಿಟ್ಮ್ಯಾನ್ ಮೈದಾನದಲ್ಲಿ ಇದ್ದಿದ್ದರೆ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಒಂದಷ್ಟು ಸಲಹೆಗಳು ಸಿಗುತ್ತಿದ್ದವು. ಇದಾಗ್ಯೂ ಅವರನ್ನು ಫೀಲ್ಡಿಂಗ್ ವೇಳೆ ಹೊರಗಿಟ್ಟಿರುವುದು ಯಾಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಕಳೆದ ಸೀಸನ್ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಿಟ್ಮ್ಯಾನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು. ಅಲ್ಲದೆ ಅವರ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಖುದ್ದು ಹಿಟ್ಮ್ಯಾನ್ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದಾಗ್ಯೂ ಅವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ತೊರೆದಿರಲಿಲ್ಲ.
ಇದೀಗ ಮೊದಲ ಪಂದ್ಯದಲ್ಲೇ ಅವರ ಅನುಭವವನ್ನು ಸಹ ಪರಿಗಣಿಸದೇ ಬೆಂಚ್ ಕಾಯಿಸಿರುವುದೇ ಅಚ್ಚರಿ. ಇಲ್ಲಿ ಇಂಪ್ಯಾಕ್ಟ್ ಪ್ಲೇಯರ್ನನ್ನು ಕಣಕ್ಕಿಳಿಸಲು ತಿಲಕ್ ವರ್ಮಾ, ನಮನ್ ಧೀರ್ನಂತಹ ಆಟಗಾರರು ತಂಡದಲ್ಲಿದ್ದರೂ ರೋಹಿತ್ ಶರ್ಮಾ ಡಗೌಟ್ನಲ್ಲಿ ಕೂರಬೇಕಾಗಿ ಬಂದಿದ್ದು ವಿಪರ್ಯಾಸವೇ ಸರಿ.
ಸೋತು ಸುಣ್ಣವಾದ ಮುಂಬೈ ಇಂಡಿಯನ್ಸ್:
ಮುಂಬೈ ಇಂಡಿಯನ್ಸ್ ತಂಡವು 2013 ರಿಂದ ಐಪಿಎಲ್ನ ತನ್ನ ಮೊದಲ ಪಂದ್ಯದಲ್ಲಿ ಗೆದ್ದಿಲ್ಲ. ಅದು ಈ ಬಾರಿ ಕೂಡ ಮುಂದುವರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 155 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.1 ಓವರ್ಗಳಲ್ಲಿ 158 ರನ್ ಬಾರಿಸಿ 4 ವಿಕೆಟ್ಗಳ ಗೆಲುವು ದಾಖಲಿಸಿತು.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ರುತುರಾಜ್ ಗಾಯಕ್ವಾಡ್ (ನಾಯಕ) , ರಚಿನ್ ರವೀಂದ್ರ , ದೀಪಕ್ ಹೂಡಾ , ಶಿವಂ ದುಬೆ , ರವೀಂದ್ರ ಜಡೇಜಾ , ಸ್ಯಾಮ್ ಕರನ್ , ಎಂಎಸ್ ಧೋನಿ (ವಿಕೆಟ್ ಕೀಪರ್) , ರವಿಚಂದ್ರನ್ ಅಶ್ವಿನ್ , ನೂರ್ ಅಹ್ಮದ್ , ನಾಥನ್ ಎಲ್ಲಿಸ್ , ಖಲೀಲ್ ಅಹ್ಮದ್.
ಇದನ್ನೂ ಓದಿ: VIDEO: ಅವನು ನನ್ನ ಫ್ಯಾನ್, ಏನೂ ಮಾಡ್ಬೇಡಿ… ಅಭಿಮಾನಿಯ ಬೆಂಬಲಕ್ಕೆ ನಿಂತ ವಿರಾಟ್ ಕೊಹ್ಲಿ
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್) , ವಿಲ್ ಜಾಕ್ಸ್ , ಸೂರ್ಯಕುಮಾರ್ ಯಾದವ್ (ನಾಯಕ) , ತಿಲಕ್ ವರ್ಮಾ , ನಮನ್ ಧೀರ್ , ರಾಬಿನ್ ಮಿಂಝ್ , ಮಿಚೆಲ್ ಸ್ಯಾಂಟ್ನರ್ , ದೀಪಕ್ ಚಹರ್ , ಟ್ರೆಂಟ್ ಬೌಲ್ಟ್ , ಸತ್ಯನಾರಾಯಣ ರಾಜು, ವಿಘ್ನೇಶ್ ಪುತ್ತೂರು (ಇಂಪ್ಯಾಕ್ಟ್ ಪ್ಲೇಯರ್).