ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ಗೆ ಪ್ರಮುಖ ಗೆಲುವೊಂದು ದೊರೆತಿದೆ. ಕಳೆದ ನಾಲ್ಕು ವರ್ಷದಿಂದ ನಡೆಯುತ್ತಿದ್ದ ಕದನ ಇದಾಗಿತ್ತು. ಸಾಲಗಾರರಿಗೆ ಮರುಪಾವತಿ ಮಾಡುವುದಕ್ಕೆ ಹಣದ ಅಗತ್ಯ ಇದೆ ಎಂದು ಮಧ್ಯಸ್ಥಿಕೆ ನ್ಯಾಯಾಧೀಕರಣದಲ್ಲಿ ಹೇಳುತ್ತಾ ಬಂದಿದ್ದ ಕಂಪೆನಿಗೆ ಅಂತಿಮವಾಗಿ ಆ ಮೊತ್ತ ದೊರೆತಿದೆ. ಸುಪ್ರೀಂ ಕೋರ್ಟ್ನ ಇಬ್ಬರು ನ್ಯಾಯಮೂರ್ತಿಗಳ ಸಮಿತಿಯು ಗುರುವಾರ ಅನಿಲ್ ಅಂಬಾನಿಯ ಯೂನಿಟ್ ಪರವಾಗಿ 2017ರ ಮಧ್ಯಸ್ಥಿಕೆ ತೀರ್ಪನ್ನು ಎತ್ತಿಹಿಡಿದಿದೆ. ಈ ಮಧ್ಯಸ್ಥಿಕೆ ನ್ಯಾಯಾಧೀಕರಣದಿಂದ 4660 ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತವು ಬರಲಿದೆ. ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಯ ವಾರ್ಷಿಕ ವರದಿ ಪ್ರಕಾರ, ಇದರಲ್ಲಿ ಬಡ್ಡಿ ಮೊತ್ತವೂ ಸೇರಿಕೊಂಡಿದೆ.
ಅಂದಹಾಗೆ, ಈಗ ಬಂದಿರುವ ತೀರ್ಪು ಅನಿಲ್ ಅಂಬಾನಿ ಅವರ ಪಾಲಿಗೆ ನಿರ್ಣಾಯಕ ಗೆಲುವಾಗಿದೆ. ಅವರ ಟೆಲಿಕಾಂ ಸಂಸ್ಥೆಗಳು ದಿವಾಳಿಯಲ್ಲಿದ್ದು, ದೇಶದ ಅತಿದೊಡ್ಡ ಬ್ಯಾಂಕ್ಗಳಿಂದ ದಾಖಲಾದ ವಯಕ್ತಿಕ ದಿವಾಳಿತನದ ಪ್ರಕರಣವನ್ನು ಅನಿಲ್ ಅಂಬಾನಿ ಎದುರಿಸುತ್ತಿದ್ದಾರೆ. ನ್ಯಾಯಾಲಯದ ಆದೇಶದ ನಂತರ ರಿಲಯನ್ಸ್ ಇನ್ಫ್ರಾ ಷೇರುಗಳು ದೈನಂದಿನ ಮಿತಿಯಾದ ಶೇ 5ರಷ್ಟು ಜಿಗಿದವು. ರಿಲಯನ್ಸ್ ಇನ್ಫ್ರಾದಿಂದ ಈ ಹಣವನ್ನು ಸಾಲಗಾರರಿಗೆ ಪಾವತಿಸಲು ಬಳಸುತ್ತದೆ ಎಂದು ಕಂಪೆನಿಯ ವಕೀಲರು ಪ್ರಕರಣದ ವಿಚಾರಣೆಯ ಸಮಯದಲ್ಲಿ ಹೇಳಿದ್ದರು. ಅದರ ನಂತರ ಉನ್ನತ ನ್ಯಾಯಾಲಯವು ಬ್ಯಾಂಕ್ನ ಖಾತೆಗಳನ್ನು ಅನುತ್ಪಾದಕ ಆಸ್ತಿ ಎಂದು ಗುರುತಿಸುವುದನ್ನು ನಿರ್ಬಂಧಿಸಿದೆ. ಪ್ರಕರಣದ ಅಂತಿಮ ತೀರ್ಪು ಸಾಲಗಾರರಿಗೆ ನ್ಯಾಯಾಲಯದ ನಿರ್ಬಂಧವನ್ನು ತೆಗೆದುಹಾಕುತ್ತದೆ.
ನ್ಯಾಯಾಲಯದ ತೀರ್ಪಿನ ವಿವರವಾದ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ. ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಘಟಕವು 2008ರಲ್ಲಿ ದೇಶದ ಮೊದಲ ಖಾಸಗಿ ನಗರ ರೈಲು ಯೋಜನೆಯನ್ನು 2038ರ ವರೆಗೆ ನಡೆಸಲು ದೆಹಲಿ ಮೆಟ್ರೋ ಜೊತೆ ಒಪ್ಪಂದ ಮಾಡಿಕೊಂಡಿತು. 2012ರಲ್ಲಿ ಶುಲ್ಕ ಮತ್ತು ಕಾರ್ಯಾಚರಣೆಗಳ ವಿವಾದಗಳ ನಂತರ, ಅನಿಲ್ ಅಂಬಾನಿಯ ಸಂಸ್ಥೆಯು ರಾಜಧಾನಿಯ ವಿಮಾನ ನಿಲ್ದಾಣದ ಮೆಟ್ರೋ ಯೋಜನೆಯನ್ನು ನಿರ್ವಹಿಸುವುದನ್ನು ನಿಲ್ಲಿಸಿತು ಮತ್ತು ದೆಹಲಿಯ ಮೆಟ್ರೋ ವಿರುದ್ಧ ಮಧ್ಯಸ್ಥಿಕೆ ಪ್ರಕರಣವನ್ನು ಆರಂಭಿಸಿತು. ಮೆಟ್ರೋ ಒಪ್ಪಂದದ ಉಲ್ಲಂಘನೆ ಆರೋಪ ಮತ್ತು ಟರ್ಮಿನೇಶನ್ ಶುಲ್ಕವನ್ನು ಕೋರಿತು.
ಇದನ್ನೂ ಓದಿ: ಅನಿಲ್ ಅಂಬಾನಿಯ RCom ಸಮೂಹವು ಬ್ಯಾಂಕುಗಳಿಗೆ ಕಟ್ಟಬೇಕಿದೆ 49 ಸಾವಿರ ಕೋಟಿ ರೂ ಸಾಲ! ಆದ್ರೆ..
(Anil Ambani Firm Reliance Infrastructure Wins Rs 4600 Crore Delhi Metro Arbitration Case)
Published On - 1:22 pm, Thu, 9 September 21