Apple Event Live 2026: ಇಂದು ರಾತ್ರಿ 10.30ಕ್ಕೆ ಆ್ಯಪಲ್‌ ಕಾರ್ಯಕ್ರಮ; ಐಫೋನ್ 18 ಪ್ರೊ ಜತೆಗೆ ಫೋಲ್ಡಬಲ್‌ ಐಫೋನ್ ನಿರೀಕ್ಷೆ

ಆ್ಯಪಲ್‌ನ ಬಹುನಿರೀಕ್ಷಿತ ‘Surprise and Shine’ ಕಾರ್ಯಕ್ರಮ ಇಂದು ಸೆಪ್ಟೆಂಬರ್ 9ರಂದು ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಐಫೋನ್ 18 ಪ್ರೊ, ಐಫೋನ್ 18 ಪ್ರೊ ಮ್ಯಾಕ್ಸ್ ಹಾಗೂ ಆ್ಯಪಲ್‌ನ ಮೊದಲ ಫೋಲ್ಡಬಲ್ ಐಫೋನ್ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಆಪಲ್ ವಾಚ್, ಏರ್ಪಾಡ್ಸ್ ಸೇರಿದಂತೆ ಇತರ ಉತ್ಪನ್ನಗಳ ಘೋಷಣೆಯ ಸಾಧ್ಯತೆಯೂ ಇದೆ.

Apple Event Live 2026: ಇಂದು ರಾತ್ರಿ 10.30ಕ್ಕೆ ಆ್ಯಪಲ್‌ ಕಾರ್ಯಕ್ರಮ; ಐಫೋನ್ 18 ಪ್ರೊ ಜತೆಗೆ ಫೋಲ್ಡಬಲ್‌ ಐಫೋನ್ ನಿರೀಕ್ಷೆ
Apple Event Live 2026
Edited By:

Updated on: Sep 09, 2026 | 3:12 PM

ಮುಖ್ಯಾಂಶಗಳು

  • ಇಂದು ರಾತ್ರಿ 10.30ಕ್ಕೆ ಆ್ಯಪಲ್‌ನ ಬಹುನಿರೀಕ್ಷಿತ ಈವೆಂಟ್!
  • ಐಫೋನ್ 18 ಪ್ರೊ ಜತೆಗೆ ಫೋಲ್ಡಬಲ್ ಐಫೋನ್ ಬರಲಿದೆಯೇ?
  • ಆ್ಯಪಲ್ ವಾಚ್, ಏರ್‌ಪಾಡ್ಸ್ ಸೇರಿದಂತೆ ಹಲವು ಹೊಸ ಉತ್ಪನ್ನಗಳ ನಿರೀಕ್ಷೆ!

ಆ್ಯಪಲ್‌ (Apple) ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿರುವ ಆ್ಯಪಲ್‌ನ ವಿಶೇಷ ಕಾರ್ಯಕ್ರಮ ಇಂದು (ಸೆಪ್ಟೆಂಬರ್‌ 9) ನಡೆಯಲಿದೆ. ‘Surprise and Shine’ ಹೆಸರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹೊಸ ಐಫೋನ್‌ ಸೇರಿದಂತೆ ಹಲವು ಉತ್ಪನ್ನಗಳನ್ನು ಪರಿಚಯಿಸುವ ಸಾಧ್ಯತೆ ಇದೆ. ಭಾರತೀಯ ಕಾಲಮಾನ ರಾತ್ರಿ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಆ್ಯಪಲ್‌ನ ಹೊಸ ಸಿಇಒ ಜಾನ್‌ ಟರ್ನಸ್‌ ಅಧಿಕಾರ ವಹಿಸಿಕೊಂಡ ಬಳಿಕ ನಡೆಯುತ್ತಿರುವ ಮೊದಲ ಪ್ರಮುಖ ಸಾರ್ವಜನಿಕ ಕಾರ್ಯಕ್ರಮ ಇದಾಗಿದೆ.

ಎಲ್ಲಿ, ಯಾವಾಗ ಕಾರ್ಯಕ್ರಮ ವೀಕ್ಷಿಸಬಹುದು?

ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋದಲ್ಲಿರುವ ಆ್ಯಪಲ್‌ ಪಾರ್ಕ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ರಾತ್ರಿ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಗ್ರಾಹಕರು ಆ್ಯಪಲ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌, ಆ್ಯಪಲ್‌ ಈವೆಂಟ್‌ ಪುಟ ಹಾಗೂ ಆಪಲ್ ಟಿವಿ ಆ್ಯಪ್‌ ಮೂಲಕ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಬಹುದು.

ಐಫೋನ್ 18 ಪ್ರೊ ಸರಣಿ ನಿರೀಕ್ಷೆ

ಈ ಬಾರಿಯ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಫೋನ್‌ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ ಸಾಮಾನ್ಯ ಐಫೋನ್ 18 ಮಾದರಿಯನ್ನು ಈ ಕಾರ್ಯಕ್ರಮದಲ್ಲಿ ಪರಿಚಯಿಸುವ ಸಾಧ್ಯತೆ ಕಡಿಮೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಐಫೋನ್ 18 ಪ್ರೊ ಸರಣಿಯಲ್ಲಿ ಹಲವು ಪ್ರಮುಖ ಬದಲಾವಣೆಗಳು ಇರಬಹುದು ಎನ್ನಲಾಗಿದೆ. ಯಾಂತ್ರಿಕವಾಗಿ ಬದಲಾಗುವ ಅಪರ್ಚರ್‌ ಹೊಂದಿರುವ ಕ್ಯಾಮೆರಾ, TSMCಯ 2 ನ್ಯಾನೋಮೀಟರ್‌ ತಂತ್ರಜ್ಞಾನ ಆಧಾರಿತ A20 ಪ್ರೊ ಚಿಪ್‌, ಉತ್ತಮ ಬ್ಯಾಟರಿ ಸಾಮರ್ಥ್ಯ ಮತ್ತು ಹೊಸ ಸ್ಕೈ ಬ್ಲೂ ಟೈಟಾನಿಯಂ ಬಣ್ಣದ ಆಯ್ಕೆ ಸಿಗಬಹುದು ಎಂಬ ನಿರೀಕ್ಷೆಯಿದೆ. ಇವು ಸದ್ಯಕ್ಕೆ ಸೋರಿಕೆಯಾಗಿರುವ ಮಾಹಿತಿಯಾಗಿದ್ದು, ಆ್ಯಪಲ್‌ ಅಧಿಕೃತವಾಗಿ ದೃಢಪಡಿಸಿಲ್ಲ.

ಫೋಲ್ಡಬಲ್‌ ಐಫೋನ್‌ ಬರುತ್ತಾ?

ಈ ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆ ಆ್ಯಪಲ್‌ನ ಮೊದಲ ಫೋಲ್ಡಬಲ್‌ ಐಫೋನ್‌ ಆಗಿರಬಹುದು. ಇದನ್ನು ಐಫೋನ್ ಆಲ್ಟ್ರಾ ಎಂದು ಕರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸೋರಿಕೆಯ ಮಾಹಿತಿಯ ಪ್ರಕಾರ, ಫೋಲ್ಡಬಲ್‌ ಐಫೋನ್‌ ಪುಸ್ತಕದಂತೆ ಮಡಚುವ ವಿನ್ಯಾಸ ಹೊಂದಿರಬಹುದು. ಸುಮಾರು 7.8 ಇಂಚಿನ ಡಿಸ್‌ಪ್ಲೇ ಇರಬಹುದು. ಫೋನ್‌ನ ಬದಿಯಲ್ಲಿ Touch ID ನೀಡುವ ಸಾಧ್ಯತೆಯೂ ಇದೆ. A20 Pro ಚಿಪ್‌ ಮತ್ತು 12GB ಮೆಮೊರಿ ಇರುವ ನಿರೀಕ್ಷೆಯಿದೆ.

iPhone Fold: ಆಪಲ್​ನ ಮೊಟ್ಟ ಮೊದಲ ಫೋಲ್ಡೆಬಲ್ ಫೋನ್ ಐಫೋನ್ ಫೋಲ್ಡ್​​ನ ವಿಡಿಯೋ ವೈರಲ್

ಕ್ಯಾಮೆರಾ ವಿಚಾರದಲ್ಲೂ ಹಲವು ಮಾಹಿತಿಗಳು ಹರಿದಾಡುತ್ತಿವೆ. ಫೋನ್‌ನ ಹಿಂಭಾಗದಲ್ಲಿ ಎರಡು 48 ಮೆಗಾಪಿಕ್ಸೆಲ್‌ ಕ್ಯಾಮೆರಾಗಳು ಇರಬಹುದು. ಟೆಲಿಫೋಟೋ ಕ್ಯಾಮೆರಾ ಇಲ್ಲದಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. Face ID ಬದಲಿಗೆ Touch ID ಬಳಸಬಹುದು ಎಂಬುದು ಸದ್ಯದ ಸೋರಿಕೆ ಮಾಹಿತಿಯಾಗಿದೆ.

ಹೊಸ ಆಪಲ್ ವಾಚ್​‌ಗಳಿಗೂ

ಐಫೋನ್‌ ಜತೆಗೆ ಹೊಸ ಆಪಲ್ ವಾಚ್ ಮಾದರಿಗಳನ್ನೂ ಆ್ಯಪಲ್‌ ಪರಿಚಯಿಸುವ ಸಾಧ್ಯತೆಯಿದೆ. ಆಪಲ್ ವಾಚ್ ಸರಣಿ 12ರಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಬಹುದು ಎನ್ನಲಾಗುತ್ತಿದೆ. ಆರೋಗ್ಯ ಸಂಬಂಧಿತ ಸೆನ್ಸರ್‌ಗಳಲ್ಲಿ ಸುಧಾರಣೆ ಸಿಗುವ ನಿರೀಕ್ಷೆಯಿದೆ. ಇದೇ ವೇಳೆ ಆಪಲ್ ವಾಚ್ Ultra 4ರಲ್ಲಿ ವಿನ್ಯಾಸ ಬದಲಾವಣೆ ಮಾಡುವ ಸಾಧ್ಯತೆ ಇದೆ. ಕಾರ್ಯಕ್ರಮದಲ್ಲಿ ಹೊಸ ಏರ್​ಪಾಡ್ಸ್ 5 ಮಾದರಿಯನ್ನೂ ಪರಿಚಯಿಸುವ ಸಾಧ್ಯತೆಯಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us