Apple Inc Market Cap: 3 ಟ್ರಿಲಿಯನ್ ಯುಎಸ್ಡಿ ಮಾರುಕಟ್ಟೆ ಬಂಡವಾಳ ಮೌಲ್ಯ ಮುಟ್ಟಿದ ಮೊದಲ ಕಂಪೆನಿ ಆಪಲ್
ಆಪಲ್ ಇಂಕ್ ಮಾರುಕಟ್ಟೆ ಬಂಡವಾಳ ಮೌಲ್ಯವು 3 ಟ್ರಿಲಿಯನ್ ಡಾಲರ್ ಮುಟ್ಟುವ ಮೂಲಕ ಈ ಸಾಧನೆ ಮಾಡಿದ ಮೊದಲ ಕಂಪೆನಿ ಎಂಬ ಅಗ್ಗಳಿಕೆಯನ್ನು ಪಡೆದಿದೆ.
ಆಪಲ್ ಇಂಕ್ (Apple Inc) ಸೋಮವಾರದಂದು 3 ಟ್ರಿಲಿಯನ್ ಅಮೆರಿಕನ್ ಡಾಲರ್ ಷೇರು ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಮೊದಲ ಕಂಪೆನಿ ಎಂದಾಗಿದೆ. ಸ್ವಯಂಚಾಲಿತ ಕಾರುಗಳು ಮತ್ತು ವರ್ಚುವಲ್ ರಿಯಾಲಿಟಿಯಂತಹ ಹೊಸ ಮಾರುಕಟ್ಟೆಗಳನ್ನು ಅನ್ವೇಷಿಸುವುದರಿಂದ ಐಫೋನ್ ತಯಾರಕ ಆಪಲ್ ಹೆಚ್ಚು ಮಾರಾಟವಾಗುವ ಉತ್ಪನ್ನಗಳನ್ನು ಪ್ರಾರಂಭಿಸುತ್ತದೆ ಎಂಬ ಹೂಡಿಕೆದಾರರ ವಿಶ್ವಾಸದಿಂದ ಷೇರಿನ ಬೆಲೆಯನ್ನು ಮೇಲಕ್ಕೆ ಎತ್ತಿದರು. 3 ಟ್ರಿಲಿಯನ್ ಅಂದರೆ, 3 ಲಕ್ಷ ಕೋಟಿ ಅಮೆರಿಕನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, 223,69,350 ಕೋಟಿ ರೂಪಾಯಿ. 223 ಲಕ್ಷ ಕೋಟಿಯ 69 ಸಾವಿರದ ಮುನ್ನೂರಾ ಐವತ್ತು ಕೋಟಿ. ಭಾರತದ ಷೇರು ಮಾರುಕಟ್ಟೆಯಲ್ಲಿ ಮಾರುಕಟ್ಟೆ ಬಂಡವಾಳ ಮೌಲ್ಯದ ದೃಷ್ಟಿಯಿಂದ ನಂಬರ್ 1 ಕಂಪೆನಿ ಅಂದರೆ ರಿಲಯನ್ಸ್ ಇಂಡಸ್ಟ್ರೀಸ್. ಅದರ ಇವತ್ತಿನ ಮಾರುಕಟ್ಟೆ ಮೌಲ್ಯ ಎಷ್ಟಿದೆ ಗೊತ್ತಾ? 16 ಲಕ್ಷದ 26 ಸಾವಿರ ಕೋಟಿ. ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳದ ಹತ್ತಿರ ಹತ್ತಿರ ಹದಿನಾಲ್ಕು ಪಟ್ಟು ಹೆಚ್ಚು ಮೌಲ್ಯವನ್ನು ಆಪಲ್ ಹೊಂದಿದೆ.
2022ರಲ್ಲಿ ವಹಿವಾಟಿನ ಮೊದಲ ದಿನದಂದು ಈ ಕಂಪೆನಿಯ ಷೇರುಗಳು 182.88 ಡಾಲರ್ ಇಂಟ್ರಾಡೇ ದಾಖಲೆಯ ಗರಿಷ್ಠವನ್ನು ಮುಟ್ಟಿತು. ಆ ಮೂಲಕ ಆಪಲ್‌ನ ಮಾರುಕಟ್ಟೆ ಮೌಲ್ಯವನ್ನು 3 ಟ್ರಿಲಿಯನ್ ಯುಎಸ್ಡಿಗಿಂತಲೂ ಹೆಚ್ಚಿಗೆ ಇರಿಸಿತು. ಅದೇ ದಿನದ ಕೊನೆಗೆ ಶೇ 2.5ರಷ್ಟು ಏರಿಕೆ ಕಂಡು, 182.01 ಡಾಲರ್ಗೆ ವ್ಯವಹಾರ ಮುಗಿಸಿ, ಆಪಲ್‌ನ ಮಾರುಕಟ್ಟೆ ಬಂಡವಾಳ ಮೌಲ್ಯವು 2.99 ಟ್ರಿಲಿಯನ್ ಡಾಲರ್ನಲ್ಲಿ ದಿನಾಂತ್ಯ ಕಂಡಿತು. ಐಫೋನ್‌ಗಳು, ಮ್ಯಾಕ್‌ಬುಕ್‌ಗಳು ಮತ್ತು ಆಪಲ್ ಟಿವಿ ಮತ್ತು ಆಪಲ್ ಮ್ಯೂಸಿಕ್‌ನಂತಹ ಸೇವೆಗಳಿಗಾಗಿ ಗ್ರಾಹಕರು ಹಣ ವ್ಯಯಿಸುವುದನ್ನು ಮುಂದುವರಿಸುತ್ತಾರೆ ಎಂಬ ಹೂಡಿಕೆದಾರರ ನಂಬಿಕೆ ಕಾರಣಕ್ಕೆ ವಿಶ್ವದ ಅತ್ಯಮೂಲ್ಯ ಕಂಪೆನಿಯು ಮೈಲುಗಲ್ಲನ್ನು ತಲುಪಿದೆ.
“ಇದು ಅದ್ಭುತವಾದ ಸಾಧನೆಯಾಗಿದೆ ಮತ್ತು ಖಂಡಿತವಾಗಿಯೂ ಸೆಲಬ್ರೇಟ್ ಮಾಡಲು ಯೋಗ್ಯವಾಗಿದೆ,” ಎಂದು ವಿಶ್ಲೇಷಕರು ಹೇಳಿದ್ದಾರೆ. “ಆಪಲ್ ಎಷ್ಟು ದೂರ ಬಂದಿದೆ ಮತ್ತು ಹೆಚ್ಚಿನ ಹೂಡಿಕೆದಾರರ ದೃಷ್ಟಿಯಲ್ಲಿ ಅದು ಎಷ್ಟು ಪ್ರಬಲವಾಗಿದೆ ಎಂಬುದನ್ನು ತೋರಿಸುತ್ತದೆ,” ಅಂತಲೂ ಅಭಿಪ್ರಾಯ ಪಟ್ಟಿದ್ದಾರೆ. ಮೈಕ್ರೋಸಾಫ್ಟ್ ಕಾರ್ಪ್ನೊಂದಿಗೆ ಆಪಲ್ 2 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯದ ಕ್ಲಬ್ ಅನ್ನು ಹಂಚಿಕೊಂಡಿದೆ. ಅದು ಈಗ ಸುಮಾರು 2.5 ಟ್ರಿಲಿಯನ್ ಡಾಲರ್ ಮೌಲ್ಯದ್ದಾಗಿದೆ. ಆಲ್ಫಾಬೆಟ್, ಅಮೆಜಾನ್.ಕಾಮ್ ಇಂಕ್ ಮತ್ತು ಟೆಸ್ಲಾ 1 ಟ್ರಿಲಿಯನ್ ಡಾಲರ್ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ.
“ಬಲವಾದ ಮೂಲಭೂತ ಅಂಶಗಳು ಮತ್ತು ಬ್ಯಾಲೆನ್ಸ್ ಶೀಟ್‌ಗಳನ್ನು ಹೊಂದಿರುವ ಕಂಪೆನಿಗಳಿಗೆ ಮಾರುಕಟ್ಟೆಯು ಪ್ರತಿಫಲ ನೀಡುತ್ತಿದೆ ಮತ್ತು ಈ ರೀತಿಯ ಬೃಹತ್ ಮಾರುಕಟ್ಟೆ ಕ್ಯಾಪ್‌ಗಳನ್ನು ತಲುಪುತ್ತಿರುವ ಕಂಪೆನಿಗಳು ತಮ್ಮ ಬಲವಾದ ವ್ಯವಹಾರಗಳು ಮತ್ತು ಊಹಾಪೋಹಗಳಲ್ಲ ಎಂದು ಸಾಬೀತುಪಡಿಸಿವೆ,” ಎನ್ನುತ್ತಾರೆ ಷೇರುಪೇಟೆ ತಜ್ಞರು. 5G, ವರ್ಚುವಲ್ ರಿಯಾಲಿಟಿ ಮತ್ತು ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನಗಳಲ್ಲಿ ತೊಡಗಿಸಿರುವಂಥದ್ದು, ನಗದು ಸಮೃದ್ಧ ಕಂಪೆನಿಗಳ ಕಡೆಗೆ ಮತ್ತು ಆರ್ಥಿಕ ಬೆಳವಣಿಗೆಗಳಿಗೆ ಬಹಳ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಸ್ವಭಾವ ಅಲ್ಲದ ಕಂಪೆನಿಗಳಾದ್ದರಿಂದ ಈ ಷೇರುಗಳು ಮಾರುಕಟ್ಟೆ ಪ್ರಿಯವಾಗಲು ಸಹಾಯ ಮಾಡಿದೆ.
ಆಪಲ್‌ನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಚೀನಾದಲ್ಲಿ ವಿವೋ ಮತ್ತು ಶಿಯೋಮಿಯಂತಹ ಪ್ರತಿಸ್ಪರ್ಧಿಗಳನ್ನು ಸೋಲಿಸಿ, ಸತತ ಎರಡನೇ ತಿಂಗಳು ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಮುನ್ನಡೆಸುತ್ತಿದೆ ಎಂದು ಕೌಂಟರ್‌ಪಾಯಿಂಟ್ ರೀಸರ್ಚ್‌ನ ಇತ್ತೀಚಿನ ಡೇಟಾ ತೋರಿಸಿದೆ. ವಾಲ್ ಸ್ಟ್ರೀಟ್ (ಅಮೆರಿಕನ್ ಷೇರು ಪೇಟೆ) ಈಗ ಹೆಚ್ಚೆಚ್ಚು ಎಲೆಕ್ಟ್ರಿಕ್ ಕಾರುಗಳ ಮೇಲೆ ಹಣ ಹೂಡಿಕೆ ಮಾಡುತ್ತಿರುವುದರಿಂದ ಟೆಸ್ಲಾ ಈಗ ವಿಶ್ವದ ಅತ್ಯಂತ ಮೌಲ್ಯಯುತವಾದ ವಾಹನ ತಯಾರಕ ಆಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ಆಪಲ್ ತನ್ನದೇ ಆದ ವಾಹನವನ್ನು ಪ್ರಾರಂಭಿಸುವುದನ್ನು ಅನೇಕ ಹೂಡಿಕೆದಾರರು ನಿರೀಕ್ಷಿಸುತ್ತಿದ್ದಾರೆ. ಆ ಸಂಭವನೀಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ: Apple iPhone: ರಹಸ್ಯವಾಗಿ ಖಾಸಗಿ ಸಂಭಾಷಣೆ ಕೇಳಿಸಿಕೊಳ್ಳುವ ವಿಶಿಷ್ಟ ಫೀಚರ್ ಇದೆಯಂತೆ ಆಪಲ್ ಐಫೋನ್ನಲ್ಲಿ
Published On - 12:46 pm, Tue, 4 January 22