Apple: ಭಾರತೀಯ ಕಂಪನಿಗಳಿಗೆ ಐಫೋನ್ ಚಿಪ್ ಅಸೆಂಬ್ಲಿಂಗ್ ಗುತ್ತಿಗೆ ಕೊಡುತ್ತಾ ಆ್ಯಪಲ್?

Apple in talks with Indian companies for iPhone components assembly: ಆ್ಯಪಲ್ ಕಂಪನಿ ತನ್ನ ಸರಬರಾಜು ಸರಪಳಿಯನ್ನು ಭಾರತಕ್ಕೆ ಹೆಚ್ಚೆಚ್ಚು ವಿಸ್ತರಿಸಲು ಹೊರಟಿದೆ. ಐಫೋನ್ ಅಸೆಂಬ್ಲಿಂಗ್ ಕೆಲಸ ಯಶಸ್ವಿಯಾಗಿ ನಡೆಯುತ್ತಿರುವಂತೆಯೇ ಇದೀಗ ಬಿಡಿಭಾಗಗಳ ಚಿಪ್ ಅಸೆಂಬ್ಲಿಂಗ್ ಕೆಲಸವನ್ನೂ ಭಾರತದಲ್ಲೇ ನಡೆಸಲು ಉದ್ದೇಶಿಸಿದೆ. ಮುರುಗಪ್ಪ ಗ್ರೂಪ್​ನ ಸಿಜಿ ಸೆಮಿ ಸೇರಿದಂತೆ ಕೆಲ ಭಾರತೀಯ ಸೆಮಿಕಂಡಕ್ಟರ್ ಕಂಪನಿಗಳೊಂದಿಗೆ ಆ್ಯಪಲ್ ಮಾತನಾಡುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Apple: ಭಾರತೀಯ ಕಂಪನಿಗಳಿಗೆ ಐಫೋನ್ ಚಿಪ್ ಅಸೆಂಬ್ಲಿಂಗ್ ಗುತ್ತಿಗೆ ಕೊಡುತ್ತಾ ಆ್ಯಪಲ್?
ಚಿಪ್

Updated on: Dec 17, 2025 | 5:48 PM

ನವದೆಹಲಿ, ಡಿಸೆಂಬರ್ 17: ಆ್ಯಪಲ್ ಕಂಪನಿ (Apple) ಭಾರತದೊಂದಿಗೆ ಹೆಚ್ಚೆಚ್ಚು ಬೆಸೆದುಕೊಳ್ಳುತ್ತಿದೆ. ಐಫೋನ್​ಗಳ ಬಿಡಿಭಾಗಗಳಿಗೆ ಬಳಕೆಯಾಗುವ ಚಿಪ್ ಅಸೆಂಬ್ಲಿಂಗ್ ಅನ್ನೂ ಭಾರತದಲ್ಲಿ ನಿರ್ಮಿಸಲು ಆಲೋಚನೆಯಲ್ಲಿದೆ ಆ್ಯಪಲ್. ಈ ಯೋಜನೆ ಸಾಕಾರಗೊಂಡರೆ ಭಾರತದ ಸೆಮಿಕಂಡಕ್ಟರ್ ಮಿಷನ್​ಗೆ ಒಂದು ದೊಡ್ಡ ಶಕ್ತಿ ಮತ್ತು ಯಶಸ್ಸು ಸಿಕ್ಕಂತಾಗಬಹುದು. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಐಫೋನ್ ಕಾಂಪೊನೆಂಟ್​ಗಳ ಅಸೆಂಬ್ಲಿ ಮತ್ತು ಪ್ಯಾಕೇಜಿಂಗ್ ಕಾರ್ಯಕ್ಕಾಗಿ ಆ್ಯಪಲ್ ಕಂಪನಿಯು ಭಾರತದ ಕೆಲ ಸೆಮಿಕಂಡಕ್ಟರ್ ಕಂಪನಿಗಳೊಂದಿಗೆ ಮಾತುಕತೆ ಶುರುವಿಟ್ಟಿದೆಯಂತೆ.

ಐಫೋನ್​ಗಳಲ್ಲಿ ಬಹಳ ಮುಖ್ಯ ಭಾಗವೆನಿಸುವುದು ಅದರ ಚಿಪ್​ಗಳು. ಹೀಗಾಗಿ, ಇವುಗಳ ಅಸೆಂಬ್ಲಿಂಗ್ ಮತ್ತು ಟೆಸ್ಟಿಂಗ್ ಕಾರ್ಯವು ಭಾರತದಲ್ಲಿ ನಡೆದರೆ ಅದು ಒಂದು ಭಾರತದ ಪಾಲಿಗೆ ಒಂದು ಮಹತ್ವದ ಬೆಳವಣಿಗೆಯೇ ಆಗುತ್ತದೆ. ಜಾಗತಿಕ ಎಲೆಕ್ಟ್ರಾನಿಕ್ಸ್ ಸರಬರಾಜು ಸರಪಳಿಯಲ್ಲಿ ಭಾರತವು ಹೆಚ್ಚಿನ ಮೌಲ್ಯ ಗಳಿಸಬಹುದು.

ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?

ಮುರುಗಪ್ಪ ಗ್ರೂಪ್​ನ ಸಿಜಿ ಸೆಮಿ ಜೊತೆ ಆ್ಯಪಲ್ ಮಾತುಕತೆ?

ವರದಿ ಪ್ರಕಾರ ಚಿಪ್ ಅಸೆಂಬ್ಲಿಂಗ್​ಗಾಗಿ ಆ್ಯಪಲ್ ಕಂಪನಿಯು ಕೆಲ ಭಾರತೀಯ ಸೆಮಿಕಂಡಕ್ಟರ್ ಕಂಪನಿಳ ಜೊತೆ ಮಾತನಾಡುತ್ತಿದೆ. ಇವುಗಳಲ್ಲಿ ಮುರುಗಪ್ಪ ಗ್ರೂಪ್​ನ ಸಿಜಿ ಸೆಮಿ (CG Semi of Murugappa Group) ಕಂಪನಿಯೂ ಒಂದು. ಈ ಸಂಸ್ಥೆ ಗುಜರಾತ್​ನ ಸಾನಂದ್​ನಲ್ಲಿ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ (ಒಸಾಟ್) ಘಟಕ ಸ್ಥಾಪಿಸಿದೆ. ಇಲ್ಲಿ ಡಿಸ್​ಪ್ಲೇ ಸಂಬಂಧಿತ ಚಿಪ್​ಗಳ ಅಸೆಂಬ್ಲಿಂಗ್ ಮತ್ತು ಪರೀಕ್ಷೆ ನಡೆಯುವ ಉದ್ದೇಶ ಇದೆ.

ಆದರೆ, ಮಾತುಕತೆಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಆ್ಯಪಲ್ ಕಂಪನಿ ಅಳೆದು ತೂಗಿ ಗುತ್ತಿಗೆಗಳನ್ನು ನೀಡುತ್ತದೆ. ತನಗೆ ಸಮಾಧಾನವಾಗುವಂತಹ ಗುಣಮಟ್ಟದಲ್ಲಿ ಕೆಲಸ ಮಾಡಬಲ್ಲ ಕಂಪನಿಗಳಿಗೆ ಅದು ಕಾಂಟ್ರಾಕ್ಟ್ ನೀಡುತ್ತದೆ. ಒಂದು ವೇಳೆ, ಸಿಜಿ ಸೆಮಿಗೆ ಈ ಆ್ಯಪಲ್ ಕಾಂಟ್ರಾಕ್ಟ್ ಸಿಕ್ಕರೆ ಮಹತ್ವದ ಮೈಲಿಗಲ್ಲೆನಿಸಬಹುದು.

ಇದನ್ನೂ ಓದಿ: ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್​ಗೆ ತಕ್ಕ ಉತ್ತರ; ನವೆಂಬರ್​ನಲ್ಲಿ ಅಮೆರಿಕಕ್ಕೆ ಭಾರತದ ರಫ್ತು ಭರ್ಜರಿ ಏರಿಕೆ

ಸದ್ಯ ಆ್ಯಪಲ್ ಕಂಪನಿ ತನ್ನ ಐಫೋನ್ ಡಿಸ್​ಪ್ಲೇ ಪ್ಯಾನಲ್​ಗಳನ್ನು ಸ್ಯಾಮ್ಸುಂಗ್ ಡಿಸ್​ಪ್ಲೇ, ಎಲ್​ಜಿ ಡಿಸ್​ಪ್ಲೇ ಮತ್ತು ಬಿಒಇ ಕಂಪನಿಗಳಿಂದ ತರಿಸಿಕೊಳ್ಳುತ್ತದೆ. ಈ ಡಿಸ್​ಪ್ಲೇ ಪ್ಯಾನಲ್​ಗಳಿಗೆ ಬೇಕಾದ ಡಿಸ್​ಪ್ಲೇ ಡ್ರೈವರ್ ಐಸಿಗಳನ್ನು ಸ್ಯಾಮ್ಸುಂಗ್, ನೊವಾಟೆಕ್, ಹಿಮಾಕ್ಸ್, ಎಲ್​ಎಕ್ಸ್ ಸೆಮಿಕಾನ್ ಕಂಪನಿಗಳು ಸರಬರಾಜು ಮಾಡುತ್ತವೆ. ಇವೆಲ್ಲ ಘಟಕಗಳು ಸೌತ್ ಕೊರಿಯಾ, ತೈವಾನ್ ಮತ್ತು ಚೀನಾದಲ್ಲೇ ಇರುವುದು.

ಅಲ್ಲಿ ಒತ್ತೊತ್ತಾಗಿರುವ ಸರಬರಾಜು ಸರಪಳಿಯನ್ನು ವಿಸ್ತರಿಸಬೇಕೆಂದಿರುವ ಆ್ಯಪಲ್ ಕಂಪನಿ ಈಗ ಭಾರತದಲ್ಲಿ ಅಂಥ ಕಂಪನಿಗಳನ್ನು ನೆಲೆಗೊಳಿಸಲು ಯೋಜಿಸುತ್ತಿದೆ. ಐಫೋನ್ ಅಸೆಂಬ್ಲಿಂಗ್​ಗಾಗಿ ಫಾಕ್ಸ್​ಕಾನ್, ಟಾಟಾ ಎಲೆಕ್ಟ್ರಾನಿಕ್ಸ್, ಪೆಗಾಟ್ರಾನ್ ಕಂಪನಿಗಳಿಗೆ ಗುತ್ತಿಗೆ ಕೊಟ್ಟಂತೆ, ಚಿಪ್ ಅಸೆಂಬ್ಲಿಂಗ್ ಮತ್ತು ಟೆಸ್ಟಿಂಗ್ ಕೂಡ ಭಾರತದಲ್ಲೇ ಆಗಬೇಕೆಂಬುದು ಆ್ಯಪಲ್​ನ ಪ್ಲಾನ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ