ಸಂಪತ್ತು ಮರುಹಂಚಿಕೆ ಚರ್ಚೆಗೆ ಹೊಸ ‘ಅಲ್ಪಸಂಖ್ಯಾತ’ ವರ್ಗ ಸೇರಿಸಿದ ಉದ್ಯಮಿ ಆಶ್ನೀರ್ ಗ್ರೋವರ್

|

Updated on: Apr 25, 2024 | 11:37 AM

Ashneer Grover Says Tax Payers are The Most Meaningless Minorities: ಸಂಪತ್ತು ಮರುಹಂಚಿಕೆ ಮತ್ತು ಪಿತ್ರಾರ್ಜಿತ ಆಸ್ತಿ ತೆರಿಗೆ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಉದ್ಯಮಿ ಆಶ್ನೀರ್ ಗ್ರೋವರ್ ಕುತೂಹಲಕಾರಿ ಪೋಸ್ಟ್​ವೊಂದನ್ನು ಎಕ್ಸ್​ನಲ್ಲಿ ಹಾಕಿದ್ದಾರೆ. ದೇಶದ 97 ಕೋಟಿ ಮತದಾರರ ಪೈಕಿ ಶೇ. 0.5ರಷ್ಟು ಜನರು ಶೇ. 80ರಷ್ಟು ಆದಾಯ ತೆರಿಗೆ ಪಾವತಿಸುವುದು ಎಂದು ಹೇಳಿದ್ದಾರೆ. ಈ ದೇಶದಲ್ಲಿ ಅತಿ ನಿರರ್ಥಕ ಅಲ್ಪಸಂಖ್ಯಾತರೆಂದರೆ ಅದು ತೆರಿಗೆ ಪಾವತಿದಾರರಾಗಿದ್ದಾರೆ ಎಂದು ಆಶ್ನೀರ್ ಗ್ರೋವರ್ ವಿಷಾದಿಸಿದ್ದಾರೆ.

ಸಂಪತ್ತು ಮರುಹಂಚಿಕೆ ಚರ್ಚೆಗೆ ಹೊಸ ‘ಅಲ್ಪಸಂಖ್ಯಾತ’ ವರ್ಗ ಸೇರಿಸಿದ ಉದ್ಯಮಿ ಆಶ್ನೀರ್ ಗ್ರೋವರ್
ಆಶ್ನೀರ್ ಗ್ರೋವರ್
Follow us on

ನವದೆಹಲಿ, ಏಪ್ರಿಲ್ 25: ಸಂಪತ್ತು ಮರುಹಂಚಿಕೆ (wealth redistribution) ವಿಚಾರದ ಬಗ್ಗೆ ನಡೆಯುತ್ತಿರುವ ರಾಜಕೀಯ ಚರ್ಚೆಯಲ್ಲಿ ಭಾರತೀಯ ಉದ್ಯಮಿಗಳು ಬಹುತೇಕ ದೂರ ಉಳಿದಿದ್ದಾರೆ. ಯಾವ ಉದ್ಯಮಿಯೂ ಪರ ಅಥವಾ ವಿರೋಧ ಹೇಳಿಕೆ ನೀಡಿಲ್ಲ. ಈ ವೇಳೆ ನೇರ ಮಾತುಗಳಿಗೆ ಹೆಸರಾದ ಉದ್ಯಮಿ ಆಶ್ನೀರ್ ಗ್ರೋವರ್ (Ashneer Grover) ಕುತೂಹಲ ಮೂಡಿಸುವ ಒಂದು ಪೋಸ್ಟ್ ಹಾಕಿದ್ದಾರೆ. ರಾಜಕೀಯ ನಾಯಕರು ಚುನಾವಣಾ ಪ್ರಚಾರದ ವೇಳೆ ತೆರಿಗೆ ಬಗ್ಗೆ ಏನು ಬೇಕಾದರೂ ಹೇಳಿ ತಪ್ಪಿಸಿಕೊಂಡು ಬಿಡುತ್ತಾರೆ. ಸಾರ್ವತ್ರಿಕ ಚುನಾವಣೆಯ ವಿಚಾರದಲ್ಲಿ ಯಾರಾದರೂ ಅತೀ ನಿರರ್ಥಕ ಅಲ್ಪಸಂಖ್ಯಾತರಿದ್ದರೆ ಅದು ತೆರಿಗೆ ಪಾವತಿದಾರರು ಎಂದು ಭಾರತ್ ಪೇ ಮೂಲ ಸಂಸ್ಥಾಪಕರೂ ಆದ ಆಶ್ನೀರ್ ಗ್ರೋವರ್ ಹೇಳಿದ್ದಾರೆ.

ಭಾರತದಲ್ಲಿ ತೆರಿಗೆ ರಾಜಕೀಯವನ್ನು ಅರ್ಥ ಮಾಡಿಕೊಂಡರೆ ಒಂದು ವಿಚಾರ ಗೊತ್ತಾಗುತ್ತದೆ. ಅದು ಈ ದೇಶದಲ್ಲಿ ನೈಜವಾಗಿ ಆದಾಯ ತೆರಿಗೆ ಪಾವತಿಸುವುದು ಕೇವಲ 0.5 ಪ್ರತಿಶತದಷ್ಟು ಮತದಾರರು ಮಾತ್ರವೇ ಎಂದು ಅಶ್ನೀರ್ ಗ್ರೋವರ್ ವ್ಯಂಗ್ಯ ಮಾಡಿದ್ದಾರೆ.

ಗ್ರೋವರ್ ಪ್ರಕಾರ ಈ ದೇಶದ 140 ಕೋಟಿ ಜನರ ಪೈಕಿ ಐಟಿ ರಿಟರ್ನ್ ಫೈಲ್ ಮಾಡುವುದು 8 ಕೋಟಿ ಜನರು ಮಾತ್ರ. ಎರಡು ಕೋಟಿ ಜನರು ಮಾತ್ರ ಆದಾಯ ತೆರಿಗೆ ಪಾವತಿಸುವುದು. ಇವರಲ್ಲಿ 45 ಲಕ್ಷ ಜನರು ಶೇ. 80ರಷ್ಟು ಆದಾಯ ತೆರಿಗೆ ಕಟ್ಟುತ್ತಾರೆ ಎಂದು ಅವರು ವಿವರ ನೀಡಿದ್ದಾರೆ.

ಇದನ್ನೂ ಓದಿ: ಸಂಪತ್ತು ಮರುಹಂಚಿಕೆ ಮಾಡಲು ರಾಹುಲ್ ಗಾಂಧಿಯೇನು ಮಾವೋವಾದಿಯಾ? ದೇವೇಗೌಡರು ಆಕ್ರೋಶ

ಇನ್ನೂ ಮುಂದುವರಿದು ಅವರು, ಈ ದೇಶದಲ್ಲಿ 97 ಕೋಟಿ ಮತದಾರರು ಇದ್ದಾರೆ. ಸರಿಯಾಗಿ ಲೆಕ್ಕಹಾಕಿದರೆ ಹೆಚ್ಚಿನ ಆದಾಯ ತೆರಿಗೆ ಪಾವತಿಸುವುದು 0.5 ಪ್ರತಿಶತದಷ್ಟು ಮತದಾರರು ಮಾತ್ರವೇ. ರಾಜಕೀಯ ಸಭೆಗಳಲ್ಲಿ ತೆರಿಗೆ ಬಗ್ಗೆ ಏನು ಬೇಕಾದರೂ ಹೇಳಿಬಿಡಬಹುದು. ಚುನಾವಣೆ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರು ಅರ್ಥವಿಲ್ಲದ ಅಲ್ಪಸಂಖ್ಯಾತರಾಗಿ ಹೋಗಿದ್ದಾರೆ ಎಂದು ಮಾಜಿ ಭಾರತ್ ಪೇ ಎಂಡಿ ಅಶ್ನೀರ್ ಗ್ರೋವರ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಏನಿದು ತೆರಿಗೆ ರಾಜಕಾರಣ?

ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪರೋಕ್ಷವಾಗಿ ಸಂಪತ್ತು ಮರುಹಂಚಿಕೆ ವಿಚಾರವನ್ನು ಪ್ರಸ್ತಾಪಿಸಿದೆ. ಇದು ಹೇಗೆ ಮಾಡುವುದು ಎಂದು ಸ್ಪಷ್ಟವಾಗಿ ತಿಳಿಸಿಲ್ಲವಾದರೂ ಮೊನ್ನೆ ಕಾಂಗ್ರೆಸ್ ಪಕ್ಷದ ಸಲಹೆಗಾರ ಹಾಗೂ ಉದ್ಯಮಿ ಕಮ್ ಆರ್ಥಿಕ ತಜ್ಞ ಸ್ಯಾಮ್ ಪಿತ್ರೋಡ ಅವರು ಅಮೆರಿಕದಲ್ಲಿ ಜಾರಿಯಲ್ಲಿರುವ ಎಸ್ಟೇಟ್ ಟ್ಯಾಕ್ಸ್ (ಪಿತ್ರಾರ್ಜಿತ ಆಸ್ತಿ ತೆರಿಗೆ) ಅನ್ನು ಪ್ರಸ್ತಾಪಿಸಿದ್ದರು.

ಇದನ್ನೂ ಓದಿ: ವೈಯಕ್ತಿಕ ಆಸ್ತಿಯಲ್ಲಿ ಸರ್ಕಾರಕ್ಕೆ ಶೇ. 55 ಪಾಲು: ಅಮೆರಿಕದ ಟ್ಯಾಕ್ಸ್ ವ್ಯವಸ್ಥೆ ಪ್ರಸ್ತಾಪಿಸಿದ ಸ್ಯಾಮ್ ಪಿತ್ರೋಡಾ

ಸಂಪತ್ತು ಮರುಹಂಚಿಕೆ ವಿಚಾರ ಮತ್ತು ಪಿತ್ರಾರ್ಜಿತ ಆಸ್ತಿ ತೆರಿಗೆ ವಿಚಾರ ಈಗ ಚುನಾವಣಾ ಪ್ರಚಾರದಲ್ಲಿ ದಾಳಿ ಪ್ರತಿದಾಳಿಗೆ ಕಾರಣವಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ