AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ಸಂಪತ್ತು ಕುಸಿತ; ಮೇಲೇರಿದ ಎಕ್ಸಿಸ್ ಬ್ಯಾಂಕ್

Kotak Mahindra Bank share: ಆರ್​ಬಿಐನಿಂದ ನಿರ್ಬಂಧಕ್ಕೊಳಗಾಗಿರುವ ಕೋಟಕ್ ಮಹೀಂದ್ರ ಬ್ಯಾಂಕ್​ನ ಷೇರುಬೆಲೆ ಗುರುವಾರ ಕುಸಿತ ಕಂಡಿದೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಬ್ಯಾಂಕುಗಳ ಪೈಕಿ ಕೋಟಕ್ ಬಿಟ್ಟರೆ ಉಳಿದೆಲ್ಲವುಗಳ ಷೇರುಬೆಲೆ ಹೆಚ್ಚಾಗಿದೆ. ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಬೆಲೆ ಶೇ. 10ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ಪರಿಣಾಮವಾಗಿ ಅದರ ಮಾರುಕಟ್ಟೆ ಸಂಪತ್ತೂ ಕೂಡ ಕರಗಿದೆ. ಅತಿಹೆಚ್ಚು ಮಾರುಕಟ್ಟೆ ಸಂಪತ್ತಿರುವ ಬ್ಯಾಂಕುಗಳ ಪಟ್ಟಿಯಲ್ಲಿ ಕೋಟಕ್ ಅನ್ನು ಎಕ್ಸಿಸ್ ಬ್ಯಾಂಕ್ ಹಿಂದಿಕ್ಕಿ ನಾಲ್ಕನೇ ಸ್ಥಾನ ಪಡೆದಿದೆ.

ಒಂದೇ ದಿನದಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ಸಂಪತ್ತು ಕುಸಿತ; ಮೇಲೇರಿದ ಎಕ್ಸಿಸ್ ಬ್ಯಾಂಕ್
ಕೋಟಕ್ ಮಹೀಂದ್ರ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 25, 2024 | 2:01 PM

Share

ನವದೆಹಲಿ, ಏಪ್ರಿಲ್ 25: ಹೊಸ ಕ್ರೆಡಿಟ್ ಕಾರ್ಡ್ ನೀಡಬಾರದು ಎಂಬಿತ್ಯಾದಿ ನಿರ್ಬಂಧಗಳನ್ನು ಆರ್​ಬಿಐ ವಿಧಿಸಿದ ಬಳಿಕ ನಿರೀಕ್ಷೆಯಂತೆ ಕೋಟಕ್ ಮಹೀಂದ್ರ ಬ್ಯಾಂಕ್​ನ ಷೇರುಬೆಲೆ (Kotak Mahindra Bank share price) ಕುಸಿತ ಕಾಣುತ್ತಿದೆ. ಗುರುವಾರದ ಮಧ್ಯಾಹ್ನ 1 ಗಂಟೆಯಲ್ಲಿ ಕೋಟಕ್ ಬ್ಯಾಂಕ್ ಷೇರು ಶೇ. 11ರಷ್ಟು ಕುಸಿದೆ. ಸುಮಾರು 200 ರೂಗಳಷ್ಟು ಕುಸಿತ ಕಂಡಿದೆ. ಬುಧವಾರ ಸಂಜೆ 1,842 ರೂ ಇದ್ದ ಅದರ ಷೇರುಬೆಲೆ ಈಗ 1,642 ಕೋಟಿ ರೂ ತಲುಪಿದೆ. ಬೆಳಗ್ಗೆಯಿಂದಲೇ ಆರಂಭವಾದ ಪತನ ಒಂದು ಹಂತದಲ್ಲಿ ಕೆಳಗಿನ ಮಿತಿಯಾದ ಶೇ. 15ರಷ್ಟು ಪ್ರಮಾಣದಲ್ಲಿ ಷೇರುಬೆಲೆ ಕುಸಿದಿತ್ತು. ಬ್ಯಾಂಕ್​ನ ಷೇರುಸಂಪತ್ತು ಒಂದೇ ದಿನದಲ್ಲಿ ಸುಮಾರು 50,000 ಕೋಟಿ ರೂ ನಶಿಸಿದಂತಾಗಿದೆ.

ಕೋಟಕ್ ಬ್ಯಾಂಕ್ ಅನ್ನು ಹಿಂದಿಕ್ಕಿದ ಎಕ್ಸಿಸ್

ಕುತೂಹಲ ಎಂದರೆ ನಿಫ್ಟಿ ಬ್ಯಾಂಕ್ ಇಂಡೆಕ್ಸ್​ನಲ್ಲಿ ಕೋಟಕ್ ಮಹೀಂದ್ ಬ್ಯಾಂಕ್ ಬಿಟ್ಟು ಉಳಿದ ಎಲ್ಲಾ ಬ್ಯಾಂಕ್ ಸ್ಟಾಕ್​ಗಳು ಹಸಿರು ಬಣ್ಣದಲ್ಲಿ ಟ್ರೇಡ್ ಆಗುತ್ತಿವೆ. ಅಂದರೆ ಷೇರುಬೆಲೆ ಹೆಚ್ಚಳ ಕಂಡಿವೆ. ಕೋಟಕ್ ಮಹೀಂದ್ರದ ಈಗಿನ ಒಟ್ಟು ಮಾರುಕಟ್ಟೆ ಸಂಪತ್ತು 3.27 ಲಕ್ಷ ಕೋಟಿ ರೂ ಇದೆ. ಅದೇ ವೇಳೆ ಎಕ್ಸಿಸ್ ಬ್ಯಾಂಕ್ ಷೇರು ಶೇ. 5ರಷ್ಟು ಹೆಚ್ಚಾಗಿದ್ದು ಅದರ ಮಾರುಕಟ್ಟೆ ಸಂಪತ್ತು 3.43 ಲಕ್ಷ ಕೋಟಿ ರೂ ತಲುಪಿದೆ.

ಈ ಮೊದಲು ಅತಿಹೆಚ್ಚು ಮಾರುಕಟ್ಟೆ ಸಂಪತ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಕೋಟಕ್ ಮಹೀಂದ್ರ ಬ್ಯಾಂಕ್ ಒಂದು ಸ್ಥಾನ ಕುಸಿದಿದೆ. ಎಕ್ಸಿಸ್ ಬ್ಯಾಂಕ್ ನಾಲ್ಕನೇ ಸ್ಥಾನಕ್ಕೆ ಏರಿದೆ.

ಇದನ್ನೂ ಓದಿ: ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ; ಹೊಸ ಕ್ರೆಡಿಟ್ ಕಾರ್ಡ್ ನೀಡುವಂತಿಲ್ಲ, ಆನ್ಲೈನ್ ಮೂಲಕ ಹೊಸ ಗ್ರಾಹಕರು ಬರುವಂತಿಲ್ಲ

ಎಚ್​ಡಿಎಫ್​ಸಿ ಬ್ಯಾಂಕ್ ನಂಬರ್ ಒನ್

ಅತಿ ಹೆಚ್ಚು ಮಾರುಕಟ್ಟೆ ಸಂಪತ್ತು ಹೊಂದಿರುವ ಭಾರತೀಯ ಬ್ಯಾಂಕುಗಳಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ. ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ವಿಲೀನದ ಬಳಿಕ ಅದರ ಷೇರುಸಂಪತ್ತು ದುಪ್ಪಟ್ಟಾಗಿತ್ತು. ಮಾರುಕಟ್ಟೆ ಸಂಪತ್ತಿನಲ್ಲಿ ಟಾಪ್-5 ಕಂಪನಿಗಳು ಇಂತಿವೆ:

  1. ಎಚ್​ಡಿಎಫ್​ಸಿ ಬ್ಯಾಂಕ್: 11.50 ಲಕ್ಷ ಕೋಟಿ ರೂ
  2. ಐಸಿಐಸಿಐ ಬ್ಯಾಂಕ್: 7.78 ಲಕ್ಷ ಕೋಟಿ ರೂ
  3. ಎಸ್​ಬಿಐ ಬ್ಯಾಂಕ್: 6.99 ಲಕ್ಷ ಕೋಟಿ ರೂ
  4. ಎಕ್ಸಿಸ್ ಬ್ಯಾಂಕ್: 3.43 ಲಕ್ಷ ಕೋಟಿ ರೂ
  5. ಕೋಟಕ್ ಮಹೀಂದ್ರ ಬ್ಯಾಂಕ್: 3.27 ಲಕ್ಷ ಕೋಟಿ ರೂ

ಒಂದೇ ದಿನ 10,000 ಕೋಟಿ ರೂ ಕಳೆದುಕೊಂಡ ಉದಯ್ ಕೋಟಕ್

ಕೋಟಕ್ ಮಹೀಂದ್ರ ಬ್ಯಾಂಕ್​ನ ಮಾಜಿ ಮುಖ್ಯಸ್ಥ ಹಾಗೂ ಅದರ ಪ್ರೊಮೋಟರ್ ಅಥವಾ ಸಂಸ್ಥಾಪಕ ಕುಟುಂಬಕ್ಕೆ ಸೇರಿದ ಉದಯ್ ಕೋಟಕ್ ಅವರು ಷೇರು ಕುಸಿತದ ಪರಿಣಾಮವಾಗಿ ಒಂದೇ ದಿನದಲ್ಲಿ 10,000 ಕೋಟಿ ರೂನಷ್ಟು ನಷ್ಟ ಕಂಡಿದ್ದಾರೆ.

ಇದನ್ನೂ ಓದಿ: ಕೆಎಂಎಫ್​ಗೆ ಈಗ 50 ವರ್ಷದ ಇತಿಹಾಸ; ನಂದಿನಿ ಬ್ರ್ಯಾಂಡ್ ಶುರುವಾದ ಕಥೆ; ಅಮೂಲ್ ಅನ್ನು ಮೀರಿಸಬಲ್ಲುದಾ?

ಉದಯ್ ಕೋಟಕ್ ಅವರು ತಮ್ಮ ಬ್ಯಾಂಕ್​ನಲ್ಲಿ 51,10,27,100 (51.11 ಕೋಟಿ) ಷೇರುಗಳನ್ನು ಹೊಂದಿದ್ದಾರೆ. ಇದು ಶೇ. 25.17ರಷ್ಟು ಷೇರುಪಾಲು. ಈ ಪ್ರಕಾರ ಈ ಸಮಯಕ್ಕೆ ಉದಯ್ ಕೋಟಕ್ ಅವರಿಗೆ ಆಗಿರುವ ಷೇರುಸಂಪತ್ತಿನ ನಷ್ಟ 10,088 ಕೋಟಿ ರೂ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ