ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ; ಹೊಸ ಕ್ರೆಡಿಟ್ ಕಾರ್ಡ್ ನೀಡುವಂತಿಲ್ಲ, ಆನ್ಲೈನ್ ಮೂಲಕ ಹೊಸ ಗ್ರಾಹಕರು ಬರುವಂತಿಲ್ಲ

RBI Bars Kotak Mahindra Bank from Issuing New Credit Cards: ಭಾರತೀಯ ರಿಸರ್ವ್ ಬ್ಯಾಂಕ್ ಇಂದು ಬುಧವಾರ ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಅಸಮರ್ಪಕ ಐಟಿ ಭದ್ರತೆ ಹಿನ್ನೆಲೆಯಲ್ಲಿ ಆರ್​ಬಿಐ ಈ ಕ್ರಮ ಕೈಗೊಂಡಿದೆ. ಈ ಬ್ಯಾಂಕ್ ತನ್ನ ಆನ್ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಪ್ಲಾಟ್​ಫಾರ್ಮ್​​ನಲ್ಲಿ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವಂತಿಲ್ಲ. ಹೊಸ ಕ್ರೆಡಿಟ್ ಕಾರ್ಡ್ ವಿತರಿಸುವಂತಿಲ್ಲ ಎಂದು ಆರ್​ಬಿಐ ಹೇಳಿದೆ. ಈ ನಿರ್ಬಂಧ ಎಷ್ಟು ದಿನಗಳವರೆಗೆ ಎಂಬುದು ಗೊತ್ತಾಗಿಲ್ಲ. ಬ್ಯಾಂಕ್ ಗ್ರಾಹಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ.

ಕೋಟಕ್ ಮಹೀಂದ್ರ ಬ್ಯಾಂಕ್ ಮೇಲೆ ಆರ್​ಬಿಐ ನಿರ್ಬಂಧ; ಹೊಸ ಕ್ರೆಡಿಟ್ ಕಾರ್ಡ್ ನೀಡುವಂತಿಲ್ಲ, ಆನ್ಲೈನ್ ಮೂಲಕ ಹೊಸ ಗ್ರಾಹಕರು ಬರುವಂತಿಲ್ಲ
ಕೋಟಕ್ ಮಹೀಂದ್ರ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 24, 2024 | 5:23 PM

ನವದೆಹಲಿ, ಏಪ್ರಿಲ್ 24: ಕೋಟಕ್ ಮಹೀಂದ್ರ ಬ್ಯಾಂಕ್​ನ ಆನ್ಲೈನ್ ಸೆಕ್ಯೂರಿಟಿ ವ್ಯವಸ್ಥೆ ಅಸಮರ್ಪಕವಾಗಿರುವ ಹಿನ್ನೆಲೆಯಲ್ಲಿ ಅದರ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ಬಂಧ ಹಾಕಿದೆ. ಅದರ ಆನ್ಲೈನ್ ಪ್ಲಾಟ್​ಫಾರ್ಮ್ ಮತ್ತು ಮೊಬೈಲ್ ಬ್ಯಾಂಕಿಂಗ್ ಪ್ಲಾಟ್​ಫಾರ್ಮ್​ನಿಂದ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವಂತಿಲ್ಲ. ಹೊಸ ಕ್ರೆಡಿಟ್ ಕಾರ್ಡ್​ಗಳನ್ನು ನೀಡುವಂತಿಲ್ಲ ಎಂದು ಕೋಟಕ್ ಮಹೀಂದ್ರ ಬ್ಯಾಂಕ್​ಗೆ (Kotak Mahindra Bank) ಆರ್​ಬಿಐ ಆದೇಶಿಸಿದೆ. ಈಗಿರುವ ಬ್ಯಾಂಕ್ ಗ್ರಾಹಕರಿಗೆ ಯಥಾ ಪ್ರಕಾರ ಸೇವೆ ಲಭ್ಯ ಇರುತ್ತದೆ. ಈ ಬ್ಯಾಂಕ್​ನ ಕ್ರೆಡಿಟ್ ಕಾರ್ಡ್ ಹೊಂದಿರುವವರೂ ಕೂಡ ಕಾರ್ಡ್ ಬಳಕೆ ಮುಂದುವರಿಸಲು ಯಾವ ಅಡ್ಡಿಯೂ ಇಲ್ಲ. ಏನಿದ್ದರೂ ಹೊಸ ಕ್ರೆಡಿಟ್ ಕಾರ್ಡ್ ನೀಡುವುದು ಸದ್ಯಕ್ಕೆ ಬಂದ್ ಆಗುತ್ತದೆ.

ಕಳೆದ ಎರಡು ವರ್ಷದಲ್ಲಿ, ಅಂದರೆ 2022 ಮತ್ತು 2023ರಲ್ಲಿ ಬ್ಯಾಂಕ್​ನ ಐಟಿ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ ಸಮಸ್ಯೆಗಳನ್ನು ಸರಿಪಡಿಸಲಾಗಿಲ್ಲದಿರುವುದು ಆರ್​ಬಿಐ ಗಮನಕ್ಕೆ ಬಂದಿದೆ. ಹೀಗಾಗಿ, ಭಾರತದ ಸೆಂಟ್ರಲ್ ಬ್ಯಾಂಕ್ ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ.

‘ಸತತ ಎರಡು ವರ್ಷ ಕಾಲ ನಿಯಮಾನುಸಾರ ಕೋಟಕ್ ಮಹೀಂದ್ರ ಬ್ಯಾಂಕ್​ನ ಐಟಿ ಅಪಾಯ ಮತ್ತು ಮಾಹಿತಿ ಭದ್ರತಾ ಆಡಳಿತದಲ್ಲಿ (IT Risk and Information Security Governance) ದೋಷ ಕಂಡು ಬಂದಿದೆ’ ಎಂದು ಆರ್​ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ವೈಯಕ್ತಿಕ ಆಸ್ತಿಯಲ್ಲಿ ಸರ್ಕಾರಕ್ಕೆ ಶೇ. 55 ಪಾಲು: ಅಮೆರಿಕದ ಟ್ಯಾಕ್ಸ್ ವ್ಯವಸ್ಥೆ ಪ್ರಸ್ತಾಪಿಸಿದ ಸ್ಯಾಮ್ ಪಿತ್ರೋಡಾ

ಐಟಿ ಇನ್ವೆಂಟರಿ ಮ್ಯಾನೇಜ್ಮೆಂಟ್, ಯೂಸರ್ ಅಕ್ಸೆಸ್ ಮ್ಯಾನೇಜ್ಮೆಂಟ್, ಪ್ಯಾಂಚ್ ಅಂಡ್ ಚೇಂಜ್ ಮ್ಯಾನೇಜ್ಮೆಂಟ್, ಡಾಟಾ ಸೆಕ್ಯೂರಿಟಿ ತಂತ್ರ, ಡಾಟಾ ಸೋರಿಕೆ ನಿಯಂತ್ರಣ ತಂತ್ರ, ವೆಂಡರ್ ರಿಸ್ಕ್ ಮ್ಯಾನೇಜ್ಮೆಂಟ್ ಮೊದಲಾದ ವಿಚಾರಗಳ್ಲಲಿ ಆರ್​ಬಿಐ ನಿಯಮಗಳಿಗೆ ಬ್ಯಾಂಕ್ ಬದ್ಧವಾಗಿಲ್ಲದಿರುವುದು ತಿಳಿದುಬಂದಿದೆ.

‘ಪಕ್ವವಾದ ಐಟಿ ಸೌಕರ್ಯ ಮತ್ತು ಐಟಿ ಅಪಾಯ ನಿರ್ವಹಣೆ ವ್ಯವಸ್ಥೆ ಇಲ್ಲದಿರುವುದರಿಂದ ಬ್ಯಾಂಕ್​ನ ಕೋರ್ ಬ್ಯಾಂಕಿಂಗ್ ಸಿಸ್ಟಮ್ ಹಾಗು ಅದರ ಆನ್ಲೈನ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್​ಫಾರ್ಮ್​ಗಳು ಕಳೆದ ಎರಡು ವರ್ಷದಲ್ಲಿ ಆಗಾಗ್ಗೆ ಕುಗ್ಗಿವೆ. ಇತ್ತೀಚೆಗೆ ಏಪ್ರಿಲ್ 15ರಂದು ಸೇವೆಯಲ್ಲಿ ವ್ಯತ್ಯಯವಾಗಿತ್ತು. ಇದರಿಂದ ಗ್ರಾಹಕರಿಗೆ ಗಂಭೀರ ರೀತಿಯಲ್ಲಿ ಅನನುಕೂಲವಾಗುತ್ತಿದೆ,’ ಎಂದು ಆರ್​ಬಿಐ ಹೇಳಿದೆ.

ಇದನ್ನೂ ಓದಿ: ಮದ್ಯದೊರೆಯ ಮಗಳು; ಫ್ಯಾಷನ್ ಜಗತ್ತಿನಲ್ಲಿ ಲೈಲಾ ಓ ಲೈಲಾ..! ಯಶಸ್ಸು ಕಂಡ ಲೈಲಾ ಮಲ್ಯ

ಕೋಟಕ್ ಮಹೀಂದ್ರ ಬ್ಯಾಂಕ್​ನ ಗ್ರಾಹಕರ ಹಿತದೃಷ್ಟಿಯಿಂದ ಆರ್​ಬಿಐ ಈ ನಿರ್ಬಂಧಗಳನ್ನು ಹೇರಿದೆ. ಬ್ಯಾಂಕ್​ನ ಅಸಮರ್ಪಕ ಐಟಿ ಭದ್ರತೆ ಇಲ್ಲದೇ ಇರುವುದು ಗೊತ್ತಾಗಿ ಆರ್​ಬಿಐ ಕಳೆದ 2 ವರ್ಷದಿಂದಲೂ ಬ್ಯಾಂಕ್ ಜೊತೆ ನಿಕಟ ಸಂಪರ್ಕದಲ್ಲಿತ್ತು. ಆದರೆ, ವ್ಯವಸ್ಥೆಯಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಗ್ರಾಹಕರಿಗೆ ಯಾವ ತೃಪ್ತಿಯೂ ಆಗಿಲ್ಲ. ಇತ್ತೀಚಿನ ದಿನಗಳಲ್ಲಿ ಬ್ಯಾಂಕ್​ನ ಡಿಜಿಟಲ್ ವಹಿವಾಟು ಪ್ರಮಾಣ ಬಹಳ ವೇಗವಾಗಿ ಹೆಚ್ಚಾಗಿತ್ತು. ಇದು ಬ್ಯಾಂಕ್​ನ ಐಟಿ ಸಿಸ್ಟಂಗಳ ಮೇಲೆ ಇನ್ನಷ್ಟು ಹೊರೆ ತಂದಿದೆ ಎಂದೂ ಆರ್​ಬಿಐ ಅಭಿಪ್ರಾಯಪಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ