Sarma vs Kharge: ಅಸ್ಸಾಮ್​ಗೆ ಒಂದೇ ಒಂದು ಇಂಡಸ್ಟ್ರಿ ಬಂದಿದ್ದಕ್ಕೆ ಹೀಗಾಡ್ತಿದಾರೆ; ಖರ್ಗೆಗೆ ಶರ್ಮಾ ತರಾಟೆ

Assam CM Himant Biswa Sarma vs Karnataka IT minister Priyank Kharge: ಸೆಮಿಕಂಡಕ್ಟರ್ ಉದ್ಯಮ ಅಸ್ಸಾಮ್​ಗೆ ಹೋಗುತ್ತಿರುವ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಮತ್ತು ಹಿಮಂತ ಬಿಸ್ವ ಶರ್ಮಾ ನಡುವೆ ವಾಗ್ಯುದ್ಧ ನಡೆಯುತ್ತಿದೆ. ಅಸ್ಸಾಮ್ ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ತಿರುಚುತ್ತಿದ್ದಾರೆ. ಅವರೊಬ್ಬರ ಥರ್ಡ್ ಕ್ಲಾಸ್ ಕ್ರುಕ್ ಎಂದು ಖರ್ಗೆ ಟೀಕಿಸಿದ್ದಾರೆ. ಅಸ್ಸಾಮ್​ಗೆ 75 ವರ್ಷದಲ್ಲಿ ಒಂದು ಉದ್ಯಮವೂ ಬಂದಿಲ್ಲ. ಈಗ ಒಂದು ಇಂಡಸ್ಟ್ರಿ ಬರುತ್ತಿರುವುದಕ್ಕೆ ಹೀಗಾಡ್ತಿದಾರೆ ಎಂದು ಶರ್ಮಾ ಹೇಳಿದ್ದಾರೆ.

Sarma vs Kharge: ಅಸ್ಸಾಮ್​ಗೆ ಒಂದೇ ಒಂದು ಇಂಡಸ್ಟ್ರಿ ಬಂದಿದ್ದಕ್ಕೆ ಹೀಗಾಡ್ತಿದಾರೆ; ಖರ್ಗೆಗೆ ಶರ್ಮಾ ತರಾಟೆ
ಹಿಮಂತ ಬಿಸ್ವ ಶರ್ಮ

Updated on: Oct 30, 2025 | 4:20 PM

ನವದೆಹಲಿ, ಅಕ್ಟೋಬರ್ 30: ಸೆಮಿಕಂಡಕ್ಟರ್ ಉದ್ಯಮ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಮತ್ತು ಅಸ್ಸಾಮ್ ಸಿಎಂ ಹಿಮಂತ ಬಿಸ್ವ ಶರ್ಮ ಮಧ್ಯೆ ವಾಗ್ಸಮರ ಮುಂದುವರಿಯುತ್ತಿದೆ. ಏಟಿಗೆ ಪ್ರತಿಯೇಟು ನಡೆಯುತ್ತಲೇ ಇದೆ. ಹೊಸ ವಾಗ್ದಾಳಿಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಹಿಮಂತ ಬಿಸ್ವ ಶರ್ಮ (Himanta Biswa Sarma) ಅವರನ್ನು ಥರ್ಡ್ ಕ್ಲಾಸ್ ಕ್ರೂಕ್ ಎಂದು ಜರೆದಿದ್ದಾರೆ. ಶರ್ಮಾ ಹತಾಶೆಯಲ್ಲಿದ್ದಾರೆ ಎಂದು ಖರ್ಗೆ ಟೀಕಿಸಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿರುವ ಅಸ್ಸಾಮ್ ಮುಖ್ಯಮಂತ್ರಿಗಳು, ಅಸ್ಸಾಮ್ ಅನ್ನು ಮುಂದುವರಿದ ರಾಜ್ಯವಾಗಿ ನೋಡಲು ಹತಾಶನಾಗಿದ್ದೇನೆ ಎಂದು ತಿವಿದಿದ್ದಾರೆ.

‘ಹೌದು, ನಾನು ಡೆಸ್ಪರೇಟ್ ಆಗಿದ್ದೇನೆ. ಅಸ್ಸಾಮ್ ಅನ್ನು ಮುಂದುವರಿದ ರಾಜ್ಯವಾಗಿ ನೋಡಲು ಬಯಸುತ್ತೇನೆ. ದಕ್ಷಿಣ ರಾಜ್ಯಗಳು ಅಭಿವೃದ್ಧಿ ಹೊಂದಿವೆ. ಪಶ್ಚಿಮ ಭಾಗದ ರಾಜ್ಯಗಳು ಅಭಿವೃದ್ಧಿ ಹೊಂದಿವೆ. ಈಶಾನ್ಯ ರಾಜ್ಯದ ಮುಖ್ಯಮಂತ್ರಿ ತನ್ನ ರಾಜ್ಯವನ್ನು ಮುಂದುವರಿದ ರಾಜ್ಯವಾಗಿ ನೋಡಬೇಕೆಂದು ಕನಸು ಕಾಣಬಾರದ? ಅದನ್ನು ಹತಾಶೆ ಎನ್ನುತ್ತೀರಾ?’ ಎಂದು ಕೇಳಿದ್ದಾರೆ.

ಇದನ್ನೂ ಓದಿ: ಮತಕ್ಕಾಗಿ ಮೋದಿ ಡ್ಯಾನ್ಸ್ ಬೇಕಿದ್ರೂ ಮಾಡುತ್ತಾರೆ; ಬಿಹಾರದಲ್ಲಿ ರಾಹುಲ್ ಗಾಂಧಿ ಲೇವಡಿ

ಯಾವ ಪ್ರಿವಿಲೇಜ್ ಹೊಂದಿದ್ದೇವೆ?

ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಹಿಮಂತ ಬಿಸ್ವ ಶರ್ಮ, ‘ಅವರ (ಖರ್ಗೆ) ಹೇಳಿಕೆ ನೋಡಿದರೆ ಅವರು ಫಸ್ಟ್ ಕ್ಲಾಸ್ ಈಡಿಯಟ್. ಅವರಿಗೆ ಭಾರತ ದೇಶ ಅರ್ಥ ಆಗುವುದಿಲ್ಲ. ಈಶಾನ್ಯ ರಾಜ್ಯಗಳ ಮೌಲ್ಯ ಅವರಿಗೆ ಅರ್ಥ ಆಗುವುದಿಲ್ಲ. ನಮಗೆ ಯಾವ ಪ್ರಿವಿಲೇಜ್ ಇದೆ ಹೇಳಿ? ಕಳೆದ 75 ವರ್ಷದಲ್ಲಿ ಒಂದೇ ಒಂದು ಖಾಸಗಿ ಉದ್ಯಮ ಇಲ್ಲಿ ನೆಲಸಿಲ್ಲ. ಒಂದು ಇಂಡಸ್ಟ್ರಿಯನ್ನು ಪಡೆದಿದ್ದಕ್ಕೆ ನಾವು ಪ್ರಿವಿಲೇಜ್ಡ್ ಆಗಿಬಿಟ್ಟೆವಾ? ನೀವು ಮಾತ್ರ ನೂರು ನೂರು ಪಡೆಯುತ್ತೀರಿ. ನಾವು ಅಸ್ಸಾಮ್​ಗೆ ಏನು ಮಾಡಿದ್ದೇವೆ ಎಂಬುದನ್ನು ಅಸ್ಸಾಮ್​ನ ಜನರು ಅರ್ಥ ಮಾಡಿಕೊಳ್ಳಬೇಕು’ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿಮಂತ ಬಿಸ್ವ ಶರ್ಮಾ ಅವರ ರಿಯಾಕ್ಷನ್

ಖರ್ಗೆ ಮತ್ತು ಹಿಮಂತ್ ಬಿಸ್ವ ನಡುವೆ ಏನಿದು ವಿವಾದ?

ಸೆಮಿಕಂಡಕ್ಟರ್ ಘಟಕವನ್ನು ಅಸ್ಸಾಮ್​ನಲ್ಲಿ ಸ್ಥಾಪಿಸಲಾಗುವ ಸುದ್ದಿಯ ಕುರಿತು ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ಕರ್ನಾಟಕಕ್ಕೆ ಬರಲಿದ್ದ ಸೆಮಿಕಂಡಕ್ಟರ್ ಪ್ರಾಜೆಕ್ಟ್ ಅನ್ನು ಕೇಂದ್ರ ಸರ್ಕಾರ ಬಲವಂತವಾಗಿ ಗುಜರಾತ್ ಮತ್ತು ಅಸ್ಸಾಮ್​ಗೆ ತಳ್ಳುತ್ತಿದೆ ಎಂದು ಟೀಕಿಸಿದ್ದರು. ಹಾಗೆಯೇ, ಸೆಮಿಕಂಡಕ್ಟರ್ ಉದ್ಯಮಕ್ಕೆ ಬೇಕಾದ ಪ್ರತಿಭೆಗಳ ಸಮೂಹ ಅಸ್ಸಾಮ್​ನಲ್ಲಿ ಇಲ್ಲ. ಆದರೂ ಅಲ್ಲಿ ಉದ್ಯಮ ಸ್ಥಾಪಿಸುತ್ತಿರುವುದು ಯಾಕೆಂದು ಪ್ರಶ್ನಿಸಿದ್ದರು.

ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆಯನ್ನು ಅಸ್ಸಾಮ್ ಸಿಎಂ ಹಿಮಂತ ಬಿಸ್ವ ಶರ್ಮಾ ತೀವ್ರವಾಗಿ ಆಕ್ಷೇಪಿಸಿದ್ದರು. ಅಸ್ಸಾಮ್ ಜನರಿಗೆ ಖರ್ಗೆ ಅವಮಾನ ಮಾಡಿದ್ದಾರೆ. ಖರ್ಗೆ ಫಸ್ಟ್ ಕ್ಲಾಸ್ ಈಡಿಯಟ್ ಎಂದು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಈ ವರ್ಷ ಭಾರತದ ಆರ್ಥಿಕತೆ ಬೆಳವಣಿಗೆ ದರ ಶೇ. 7ಕ್ಕೆ ಸಮೀಪ: ಸಿಇಎ ಅಂದಾಜು

ಶರ್ಮಾ ಥರ್ಡ್ ಕ್ಲಾಸ್ ಕ್ರೂಕ್ ಎಂದ ಪ್ರಿಯಾಂಕ್ ಖರ್ಗೆ

‘ಶರ್ಮಾ ಅವರು ಮಾತನಾಡುವುದನ್ನು ನೋಡಿದರೆ, ಅದು ಅವರ ಕ್ಲಾಸ್ ಪ್ರಿವಿಲೇಜ್ ಅನ್ನು ತೋರಿಸುತ್ತದೆ. ಸಿಎಂ ಕುರ್ಚಿಯ ಪ್ರಿವಿಲೇಜ್​ನಲ್ಲಿ ಅವರು ಮಾತನಾಡುತ್ತಿದ್ದಾರೆ. ನನ್ನ ಹೇಳಿಕೆಯನ್ನು ತಿರುಚಿ ರಾಜಕೀಯ ಬಣ್ಣ ಹಾಕುತ್ತಿದ್ದಾರೆ. ಸಾಕಷ್ಟು ಅಸ್ಸಾಮಿಗರು ಟ್ರೈನಿಂಗ್​ಗೆ ಬೆಂಗಳೂರಿಗೆ ಹೋಗುತ್ತಾರೆ ಎಂದು ಹಿಂದೆ ಟ್ವೀಟ್ ಮಾಡಿದ್ದರು. ಅಸ್ಸಾಮ್ ಜನರು ಬೆಂಗಳೂರಿಗೆ ಬರಲಿ, ಯಾರು ಬೇಡ ಎನ್ನುವುದಿಲ್ಲ. ನನ್ನ ಪ್ರಶ್ನೆ ಇರುವುದು, ಇಲ್ಲಿ ಇಕೋಸಿಸ್ಟಂಗಳು ನೆಲಸಿರುವಾಗ ಉದ್ಯಮಗಳನ್ನು ಗುಜರಾತೋ ಅಥವಾ ಇತರ ಬಿಜೆಪಿ ಆಡಳಿತದ ರಾಜ್ಯಗಳಿಗೋ ಹೋಗುವಂತೆ ಪ್ರಧಾನಿಗಳು ಯಾಕೆ ಬಲವಂತಪಡಿಸುತ್ತಿರುವುದು? ಶರ್ಮಾ ಬಳಸುವ ಭಾಷೆ ನೋಡಿದರೆ ಅವರು ಹತಾಶೆಯಲ್ಲಿದ್ದಂತೆ ತೋರುತ್ತದೆ. ನೀವು ಒಬ್ಬ ಥರ್ಡ್ ಕ್ಲಾಸ್ ಕ್ರೂಕ್​ನಿಂದ (ವಂಚಕ) ಇನ್ನೇನು ತಾನೆ ನಿರೀಕ್ಷಿಸುತ್ತೀರಿ’ ಎಂದು ಪ್ರಿಯಾಂಕ್ ಖರ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ