Karnataka Rajyotsava 2025: ಕನ್ನಡ ರಾಜ್ಯೋತ್ಸವ, ಕರ್ನಾಟಕದಲ್ಲಿ ಶನಿವಾರ ಬ್ಯಾಂಕ್ ರಜೆಯೇ?
Karnataka Rajyotsava 2025 and Bank Holiday: ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬ್ಯಾಂಕ್ಗಳಿಗೆ ರಜೆ ಇರಲಿದೆ. ಆರ್‌ಬಿಐ ರಜೆ ವೇಳಾಪಟ್ಟಿ ಪ್ರಕಾರ ರಾಜ್ಯದಲ್ಲಿ ಯಾವೆಲ್ಲ ಬ್ಯಾಂಕ್ಗಳು ರಜೆ ಇರಲಿವೆ ಎಂಬ ವಿವರ ಇಲ್ಲಿದೆ.

ಬೆಂಗಳೂರು, ಅಕ್ಟೋಬರ್ 31: ನವೆಂಬರ್ 1 ರಂದು ಶನಿವಾರ ಕನ್ನಡ ರಾಜ್ಯೋತ್ಸವದ (Kannada Rajyotsava) ಕಾರಣ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬ್ಯಾಂಕುಗಳು ರಜೆ ಇರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿದ ಬ್ಯಾಂಕ್ ರಜಾದಿನಗಳ ಅಧಿಕೃತ ಪಟ್ಟಿಯ ಪ್ರಕಾರ, ನವೆಂಬರ್ 1 ಅನ್ನು ಕರ್ನಾಟಕದ ಎಲ್ಲಾ ಬ್ಯಾಂಕುಗಳಿಗೆ ಸಾರ್ವತ್ರಿಕ ರಜಾದಿನವೆಂದು ಪರಿಗಣಿಸಲಾಗಿದೆ. 1956 ರಂದು ಕರ್ನಾಟಕ ರಾಜ್ಯ ರಚನೆಯಾದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ.
ದಕ್ಷಿಣ ಭಾರತದ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ, ರಾಜ್ಯಗಳ ಪುನರ್ವಿಂಗಡಣಾ ಕಾಯ್ದೆಯಡಿ ಕರ್ನಾಟಕ ಏಕೀಕರಣಗೊಂಡ ದಿನ ಇದಾಗಿದೆ.
ರಾಜ್ಯೋತ್ಸವ ದಿನ ಬೆಂಗಳೂರಿನಲ್ಲಿ ಧ್ವಜಾರೋಹಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅದೇ ರೀತಿ ರಾಜ್ಯಾದ್ಯಂತ ಕಾರ್ಯಕ್ರಮಗಳು ನಡೆಯುತ್ತವೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಧ್ವಜಾರೋಹಣ ಮಾಡುತ್ತಾರೆ. ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಅದ್ಧೂರಿ ಕಾರ್ಯಕ್ರಮವೂ ನಡೆಯುತ್ತವೆ.
ಕರ್ನಾಟಕದಲ್ಲಿ ನವೆಂಬರ್ 1 ಸಾರ್ವತ್ರಿಕ ರಜಾದಿನವೆಂದು ಘೊಷಿಸಲಾಗಿರುವುದರಿಂದ, ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಅನೇಕ ಖಾಸಗಿ ಸಂಸ್ಥೆಗಳು ಸಹ ರಜೆ ಹೊಂದಿರುತ್ತವೆ. ಆದಾಗ್ಯೂ, ಆಸ್ಪತ್ರೆಗಳು, ತುರ್ತು ಸಾರಿಗೆ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯಗಳಂತಹ ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಯಾವೆಲ್ಲ ಬ್ಯಾಂಕ್ಗಳಿಂದ ರಜೆ ಘೋಷಣೆ?
ಆರ್‌ಬಿಐ ಕರ್ನಾಟಕಕ್ಕೆ ನಿಗದಿಪಡಿಸಿದ ರಜಾ ವೇಳಾಪಟ್ಟಿಯಂತೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನಂತಹ ಪ್ರಮುಖ ಬ್ಯಾಂಕುಗಳು ನವೆಂಬರ್ 1 ರಂದು ರಜೆ ಘೋಷಿಸಿವೆ. ಗ್ರಾಹಕರು ನಗದು ಅಥವಾ ಚೆಕ್ ವಹಿವಾಟುಗಳನ್ನು ಮುಂಚಿತವಾಗಿ ಪೂರ್ಣಗೊಳಿಸಲು ಮತ್ತು ತುರ್ತು ಅವಶ್ಯಕತೆಗಳಿಗಾಗಿ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳು, ಎಟಿಎಂಗಳು ಅಥವಾ ಯುಪಿಐ ಸೇವೆಗಳನ್ನು ಬಳಸಲು ಸೂಚಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:57 am, Fri, 31 October 25




