AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವರ್ಷ ಭಾರತದ ಆರ್ಥಿಕತೆ ಬೆಳವಣಿಗೆ ದರ ಶೇ. 7ಕ್ಕೆ ಸಮೀಪ: ಸಿಇಎ ಅಂದಾಜು

CEA V Ananta Nageswaran positive on India's growth: ಭಾರತದ ಜಿಡಿಪಿ 2025-26ರಲ್ಲಿ ಶೇ. 7ರ ಆಸುಪಾಸಿನಲ್ಲಿ ಬೆಳೆಯಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರರು ಅಭಿಪ್ರಾಯಪಟ್ಟಿದ್ದಾರೆ. ಟ್ಯಾರಿಫ್ ಸೇರಿದಂತೆ ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಆರ್ಥಿಕತೆ ಉತ್ತಮವಾಗಿ ಸ್ಪಂದಿಸುತ್ತಿದೆ ಎಂದಿದ್ದಾರೆ ವಿ ಅನಂತನಾಗೇಶ್ವರನ್. ಜಾಗತಿಕ ರೇಟಿಂಗ್ ಏಜೆನ್ಸಿಗಳಿಂದ ಭಾರತಕ್ಕೆ ಶೀಘ್ರದಲ್ಲೇ ಎ ರೇಟಿಂಗ್ ಸಿಗಬಹುದು ಎಂದೂ ಅವರು ನಿರೀಕ್ಷಿಸಿದ್ದಾರೆ.

ಈ ವರ್ಷ ಭಾರತದ ಆರ್ಥಿಕತೆ ಬೆಳವಣಿಗೆ ದರ ಶೇ. 7ಕ್ಕೆ ಸಮೀಪ: ಸಿಇಎ ಅಂದಾಜು
ಜಿಡಿಪಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 30, 2025 | 12:58 PM

Share

ನವದೆಹಲಿ, ಅಕ್ಟೋಬರ್ 30: ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ನಿರೀಕ್ಷೆಗಳು ಹೆಚ್ಚುತ್ತಿರುವ ನಡುವಲ್ಲೇ ದೇಶದ ಮುಖ್ಯ ಆರ್ಥಿಕ ಸಲಹೆಗಾರರು ಮತ್ತಷ್ಟು ಸಕಾರಾತ್ಮಕ ಮಾತುಗಳನ್ನಾಡಿದ್ದಾರೆ. ಭಾರತದ ಸಿಇಎ ವಿ ಅನಂತನಾಗೇಶ್ವರನ್ (Chief Economic Advisor V Anantha Nageswaran) ಅವರ ಪ್ರಕಾರ ಈ ವರ್ಷ (2025-26) ಭಾರತದ ಜಿಡಿಪಿ (GDP) ಬೆಳವಣಿಗೆ ದರ ಶೇ. 7ರ ಸಮೀಪದಷ್ಟಾಗಬಹುದು. ಸರ್ಕಾರದ ಸ್ಥಿರ ನೀತಿ ಮತ್ತು ಕ್ರಮಗಳು ಹಾಗೂ ಪ್ರಬಲ ದೇಶೀಯ ಅಂಶಗಳು ಆರ್ಥಿಕ ಬೆಳವಣಿಗೆಗೆ ಪುಷ್ಟಿ ಕೊಡಬಹುದು ಎಂಬುದು ಮುಖ್ಯ ಆರ್ಥಿಕ ಸಲಹೆಗಾರರ ಅನಿಸಿಕೆ.

ಇಂಡಿಯಾ ಮೆರಿಟೈಮ್ ವೀಕ್ (India Martime Week) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವಿ ಅನಂತನಾಗೇಶ್ವರನ್, ಅಂತಾರಾಷ್ಟ್ರೀಯ ಆಘಾತಗಳಿಗೆ ಭಾರತದ ಸ್ಥೂಲ ಆರ್ಥಿಕತೆ ಸ್ಪಂದನೆ ಮಾಡಿದ ರೀತಿ ತೃಪ್ತಿಕರ ಎನಿಸಿದೆ. ಆರ್ಥಿಕತೆಯ ಪ್ರತಿರೋಧ ಶಕ್ತಿಯ ಜೊತೆಗೆ ಸರ್ಕಾರದ ಹಣಕಾಸು ಕ್ರಮಗಳು ಬೆಳವಣಿಗೆಯ ಹಾದಿಯನ್ನು ಸ್ಥಿರಗೊಳಿಸಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಸತತ ಎರಡನೇ ಬಾರಿ ಬಡ್ಡಿದರ ಕಡಿತ; ಭಾರತದ ಮೇಲೇನು ಪರಿಣಾಮಗಳು?

2025-26ರಲ್ಲಿ ಭಾರತದ ಜಿಡಿಪಿ ಶೇ. 7ರಷ್ಟು ಬೆಳೆಯಬಹುದು…

‘ಈ ವರ್ಷದ ಜಾಗತಿಕ ಅನಿಶ್ಚಿತತೆಗಳಿಗೆ ಭಾರತದ ಆರ್ಥಿಕತೆ ಉತ್ತಮವಾಗಿ ಸ್ಪಂದಿಸಿದೆ. ಆದಾಯ ತೆರಿಗೆ ಮತ್ತು ಜಿಎಸ್​ಟಿ ದರ ಇಳಿಕೆಯಂತಹ ಕ್ರಮಗಳು ಬೆಳವಣಿಗೆಯ ಗತಿ ಹೆಚ್ಚಿಸಿವೆ. 2025-26ರಲ್ಲಿ ಜಿಡಿಪಿ ಶೇ. 7ರ ಸಮೀಪದಷ್ಟು ವೃದ್ಧಿಸುವ ಅವಕಾಶ ಇದೆ’ ಎಂದು ಮುಖ್ಯ ಆರ್ಥಿಕ ಸಲಹೆಗಾರರು ತಿಳಿಸಿದ್ದಾರೆ.

ವಿಶ್ವ ಬ್ಯಾಂಕ್, ಐಎಂಎಫ್ ಮೊದಲಾದ ಅಂತಾರಾಷ್​ಟ್ರೀಯ ಹಣಕಾಸು ಸಂಸ್ಥೆಗಳು ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸಿವೆ. ಮೂರು ಜಾಗತಿಕ ರೇಟಿಂಗ್ ಏಜೆನ್ಸಿಗಳೂ ಕೂಡ ಭಾರತಕ್ಕೆ ಪಾಸಿಟಿವ್ ಗ್ರೇಡಿಂಗ್ ಕೊಟ್ಟಿವೆ. ತಜ್ಞರ ಪ್ರಕಾರ ಈ ರೇಟಿಂಗ್ ಏಜೆನ್ಸಿಗಳಿಂದ ಭಾರತ ಬಹಳ ಶೀಘ್ರದಲ್ಲೆ ಎ ದರ್ಜೆಯ ರೇಟಿಂಗ್ ಪಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿ ಹುಬ್ಬೇರಿಸಿದ ಡೊನಾಲ್ಡ್ ಟ್ರಂಪ್; ಚೀನಾ ಜೊತೆ ಅಮೆರಿಕ ಸೂಪರ್ ಡೀಲ್

ಕೆಲ ತಿಂಗಳ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಟ್ಯಾರಿಫ್ ಕ್ರಮಗಳನ್ನು ಪ್ರಕಟಿಸಿದಾಗ ಹೆಚ್ಚಿನ ಜನರು ಭಾರತದ ಆರ್ಥಿಕತೆಗೆ ದೊಡ್ಡ ಮಟ್ಟದ ಘಾಸಿಯಾಗಬಹುದು ಎಂದು ನಿರೀಕ್ಷಿಸಿದ್ದರು. ಜಿಡಿಪಿ 2025-26ರಲ್ಲಿ ಶೇ 6.3 ಅಥವಾ ಅದಕ್ಕಿಂತ ಕಡಿಮೆ ಬೆಳೆಯಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ, ವರ್ಷದ ಎರಡನೇ ಕ್ವಾರ್ಟರ್​ನಲ್ಲಿ ಜಿಡಿಪಿ ತೋರಿದ ಬೆಳವಣಿಗೆಯು ಅನೇಕರ ಅಭಿಪ್ರಾಯವನ್ನು ಬದಲಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ