ನವದೆಹಲಿ, ಜೂನ್ 9: ಅರ್ಜುನ ಗಾಂಡೀವ ಬಿಲ್ಲು ಬಗ್ಗೆ ಕೇಳಿರಬಹುದು. ಅದರಿಂದ ಒಮ್ಮೆ ಪ್ರಯೋಗಿಸಿದರೆ ಎದುರಾಳಿ ನಾಶವಾಗದೇ ಇರಲು ಅಸಾಧ್ಯ. ಅಷ್ಟರಮಟ್ಟಿಗೆ ನಿಖರ, ಪ್ರಬಲ, ವೇಗದ ಅಸ್ತ್ರ ಅದು. ಭಾರತದ ಡಿಆರ್ಡಿಒ ಸಂಸ್ಥೆ ಇದೇ ಗಾಂಡೀವ ಹೆಸರಿನ ಒಂದು ಶಕ್ತಿಶಾಲಿ ಕ್ಷಿಪಣಿ ಅಭಿವೃದ್ದಿಪಡಿಸುತ್ತಿದೆ. ಅಸ್ತ್ರ ಸರಣಿಯ ಮೂರನೇ ಕ್ಷಿಪಣಿ ಇದು. ಅಸ್ತ್ರ ಎಂಕೆ-3 ಕ್ಷಿಪಣಿಯ (Gandiva Astra MK-III missile) ಅಭಿವೃದ್ಧಿ ಅಂತಿಮ ಹಂತಕ್ಕೆ ಬಂದಿದೆ.
ಅಸ್ತ್ರ ಎಂಕೆ-3 ಒಂದು BVRAAM (Beyond Visual Range Air to Air Missile) ಕ್ಷಿಪಣಿಯಾಗಿದ್ದು, ಇದು 300ರಿಂದ 350 ಕಿಮೀ ಸ್ಟ್ರೈಕ್ ರೇಂಜ್ ಹೊಂದಿದೆ. ಅಸ್ತ್ರ ಎಂಕೆ-1 ಕ್ಷಿಪಣಿ 80-110 ಕಿಮೀ ಶ್ರೇಣಿ ಇದ್ದರೆ, ಎಂಕೆ-2 ಕ್ಷಿಪಣಿ 140-160 ಕಿಮೀ ಶ್ರೇಣಿ ಇದೆ. ಇದರ ಕನಿಷ್ಠ ಎರಡು ಪಟ್ಟು ಶ್ರೇಣಿಯು ಮೂರನೇ ಸರಣಿಯ ಅಸ್ತ್ರ ಕ್ಷಿಪಣಿಯಲ್ಲಿದೆ.
ಇದನ್ನೂ ಓದಿ: ಭಾರತದ ಡ್ರೋನ್ ನಾಶಕ ಡಿ4 ಸಿಸ್ಟಂ ಖರೀದಿಗೆ ತೈವಾನ್ ಆಸಕ್ತಿ; ಚೀನಾದ ಆ ಕಡೆ ಮಗ್ಗುಲಿನಲ್ಲಿ ಭಾರತದ ಬಲ?
ಮೊದಲೆರಡು ಶ್ರೇಣಿಯ ಅಸ್ತ್ರ ಎಂಕೆ ಕ್ಷಿಪಣಿಗಳು ಮಾಮೂಲಿಯ ರಾಕೆಟ್ ಮೋಟಾರುಗಳಿಂದ ಚಲಾಯಿಸಲ್ಪಡುತ್ತವೆ. ಇದರೊಳಗೆ ಆಕ್ಸಿಡೈಸರ್ಗಳನ್ನು ಮೊದಲೇ ಹೊಂದಿಸಿಡಬೇಕು. ಆದರೆ, ಗಾಂಡೀವ ಕ್ಷಿಪಣಿ ಅಥವಾ ಅಸ್ತ್ರ ಎಂಕೆ-3 ಕ್ಷಿಪಣಿಯು ಎಸ್ಎಫ್ಡಿಆರ್ ಪ್ರೊಪಲ್ಷನ್ ಸಿಸ್ಟಂನಿಂದ ಚಲಾಯಿಸಲ್ಪಡುತ್ತದೆ. ಆಕ್ಸಿಡೈಸರ್ ಅನ್ನು ಅಳವಡಿಸುವ ಅವಶ್ಯಕತೆ ಇರಲ್ಲ. ಇದು ಆಗಸದಲ್ಲಿ ಇರುವಾಗಲೇ ಅಲ್ಲಿರುವ ಆಮ್ಲಜನಕವನ್ನು ಆಕ್ಸಿಡೈಸರ್ಗೆ ಬಳಸಿಕೊಳ್ಳುತ್ತದೆ. ಇದರ ಮೂಲಕ ಬಹಳ ದೀರ್ಘಾವಧಿ ಮತ್ತು ಹೆಚ್ಚು ದೂರ ಇದು ಸೂಪರ್ಸಾನಿಕ್ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಇದರ ನೋ ಎಸ್ಕೇಪ್ ಝೋನ್ ಅಥವಾ ಎನ್ಇಝಡ್ ಹೆಚ್ಚಿನ ಶ್ರೇಣಿಯಲ್ಲಿದ್ದು, ಈ ಶ್ರೇಣಿಗೆ ಬರುವ ಯಾವ ಗುರಿಯನ್ನೂ ಈ ಕ್ಷಿಪಣಿ ಬಿಡುವುದಿಲ್ಲ. ಇದು 20 ಕಿಮೀ ಎತ್ತರದಲ್ಲಿ 340 ಕಿಮೀವರೆಗೂ ದೂರ ಕ್ರಮಿಸಬಲ್ಲುದು. 8 ಕಿಮೀ ಎತ್ತರದಲ್ಲಿ 190 ಕಿಮೀವರೆಗೂ ಓಡುವ ಸಾಮರ್ಥ್ಯ ಹೊಂದಿದೆ.
ಚೀನಾದ ಪಿಎಲ್-15 ಕ್ಷಿಪಣಿ, ಪಾಕಿಸ್ತಾನದಲ್ಲಿರುವ ಎಲ್ಲಾ ಶ್ರೇಣಿಯ ಕ್ಷಿಪಣಿಗಳಿಗಿಂತ ಭಾರತದ ಈ ಹೊಸ ಅಸ್ತ್ರ ಎಂಕೆ-3 ಕ್ಷಿಪಣಿ ಪ್ರಬಲವಾಗಿದೆ. ಎದುರಾಳಿಗಳ ಯುದ್ಧವಿಮಾನಗಳು ತಪ್ಪಿಸಿಕೊಳ್ಳದಂತೆ ಇದು ನಿಖರವಾಗಿ ಉಡಾಯಿಸಲು ಶಕ್ತವಾಗಿದೆ.
ಇದನ್ನೂ ಓದಿ: ಸರ್ಕಾರದ ಈ ಕ್ರಮ ಎಚ್ಎಎಲ್ಗೆ ಕಹಿ ಎನಿಸಿದರೂ, ದೇಶದ ಭವಿಷ್ಯಕ್ಕೆ ಉತ್ತಮ: ಮಾಜಿ ವಾಯುಸೇನೆ ಮುಖ್ಯಸ್ಥರ ಅನಿಸಿಕೆ
ಸದ್ಯ, ಈ ಗಾಂಡೀವ ಕ್ಷಿಪಣಿಯನ್ನು ಸುಖೋಯ್-30 ಎಂಕೆಐ ಯುದ್ಧವಿಮಾನಕ್ಕೆ ಸೇರಿಸಿ ಪ್ರಯೋಗ ಮಾಡಲಾಗುತ್ತಿದೆ. ನಂತರ ಎಚ್ಎಎಲ್ನ ತೇಜಸ್, ಮಿಗ್-29 ಯುದ್ಧವಿಮಾನಗಳಿಂದಲೂ ಈ ಕ್ಷಿಪಣಿ ಪ್ರಯೋಗದ ಪರೀಕ್ಷೆ ನಡೆಯಲಿದೆ. ಸಾಧ್ಯವಾದರೆ ರಫೇಲ್ ಹಾಗೂ ಇನ್ನೂ ಅಭಿವೃದ್ಧಿಗೊಳ್ಳುತ್ತಿರುವ ಎಎಂಸಿಎ ಯುದ್ಧ ವಿಮಾನಗಳಲ್ಲೂ ಈ ಕ್ಷಿಪಣಿ ಪರೀಕ್ಷೆ ನಡೆಸುವ ಉದ್ದೇಶ ಇದೆ.
(ಮಾಹಿತಿ ಮೂಲ: idrw.org)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ