Fact Check: ಎಟಿಎಂ ಉಚಿತ ಮಿತಿಯ ನಂತರದಲ್ಲಿ ಒಂದು ವಹಿವಾಟಿಗೆ 173 ರೂಪಾಯಿ ಶುಲ್ಕ ಎಂಬುದರಲ್ಲಿ ಸತ್ಯ ಇದೆಯಾ?

| Updated By: Srinivas Mata

Updated on: Jul 13, 2022 | 6:54 PM

ಎಟಿಎಂ ವಹಿವಾಟಿಗೆ ಹಾಕಿರುವ ಮಿತಿಯ ನಂತರ ವಿಧಿಸುವ ಶುಲ್ಕದ ಬಗ್ಗೆ ಹರಿದಾಡುತ್ತಿರುವ ಸುದ್ದಿಯ ಫ್ಯಾಕ್ಟ್ ಚೆಕ್ ನಿಮ್ಮೆದುರು ಇದೆ.

Fact Check: ಎಟಿಎಂ ಉಚಿತ ಮಿತಿಯ ನಂತರದಲ್ಲಿ ಒಂದು ವಹಿವಾಟಿಗೆ 173 ರೂಪಾಯಿ ಶುಲ್ಕ ಎಂಬುದರಲ್ಲಿ ಸತ್ಯ ಇದೆಯಾ?
ಸಾಂದರ್ಭಿಕ ಚಿತ್ರ
Follow us on

ಎಟಿಎಂನಿಂದ ಹಣ ವಿಥ್​ಡ್ರಾಗೆ ಹಾಗೂ ಹಣಕಾಸೇತರ ವ್ಯವಹಾರಗಳನ್ನು ಮಾಡುವವರಿಗೆ ಒಂದು ತಿಂಗಳಲ್ಲಿ ಇಂತಿಷ್ಟು ಸಂಖ್ಯೆಯ ವಹಿವಾಟಿಗೆ ಮಾತ್ರ ಉಚಿತ ಎಂಬ ಮಾರ್ಗದರ್ಶಿ ಸೂತ್ರಗಳನ್ನು ಆರ್​ಬಿಐ (RBI) ನೀಡಿದೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ದಾರರು ಒಂದು ತಿಂಗಳಲ್ಲಿ ಇಷ್ಟೇ ವಹಿವಾಟನ್ನು ಪುಕ್ಕಟೆ ಮಾಡಬಹುದು ಎಂಬ ಮಿತಿ ಇದೆ. ಆ ನಂತರ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಬಗೆಗಿನ ಮಾರ್ಗದರ್ಶಿ ಸೂತ್ರವನ್ನು ಕಳೆದ ಜನವರಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಆದರೂ ಎಟಿಎಂ ವಹಿವಾಟುಗಳಿಗೆ ಸಂಬಂಧಿಸಿದಂತೆ ಇರುವ ನಿಯಮಾವಳಿಗಳ ಬಗ್ಗೆ ಗೊಂದಲ ಇದ್ದೇ ಇದೆ. ಅದೆಲ್ಲ ಸುಳ್ಳು ಸುದ್ದಿ ಅಂತ ಸರ್ಕಾರ ಕೂಡ ಆಗಿಂದಾಗ್ಗೆ ಸ್ಪಷ್ಟೀಕರಣ ನೀಡುತ್ತಾ ಬರುತ್ತಿದೆ.

ಈಗಿನ ಗಾಳಿ ಸುದ್ದಿ ಏನು?

ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶವೊಂದು ಹರಿದಾಡುತ್ತಿದೆ. ಅದರ ಪ್ರಕಾರ, ಇನ್ನು ಮುಂದೆ ನಾಲ್ಕಕ್ಕಿಂತ ಹೆಚ್ಚಿನ ವಿಥ್​ಡ್ರಾಗೆ 173 ರೂಪಾಯಿ ಶುಲ್ಕ ಭರಿಸಬೇಕಾಗುತ್ತದೆ. ಆ ಸಂದೇಶ ಏನು ಹೇಳುತ್ತದೆ ಅಂದರೆ, ನಾಲ್ಕಕ್ಕಿಂತ ಹೆಚ್ಚು ಬಾರಿ ವಹಿವಾಟು ನಡೆಸಿದಾಗ ಒಂದು ಸಲಕ್ಕೆ 150 ರೂಪಾಯಿ ಹಾಗೂ ಅದರ ಜತೆ 23 ರೂಪಾಯಿ ಸೇವಾ ಶುಲ್ಕವನ್ನು ಕಟ್ಟಬೇಕು ಎಂದು ತಿಳಿಸುತ್ತದೆ. ಹೀಗೆ ಪ್ರತಿ ವಹಿವಾಟಿಗೂ ಪಾವತಿಸಬೇಕು ಎಂದು ಹೇಳಲಾಗುತ್ತಿದೆ.

ವಾಸ್ತವ ಏನು?

ಈ ಮಾಹಿತಿಯಲ್ಲಿ ಸತ್ಯ ಇದೆಯಾ ಎಂಬ ಬಗ್ಗೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಫ್ಯಾಕ್ಟ್​ ಚೆಕ್ ಮಾಡಿದ್ದು, ಈ ಮಾಹಿತಿ ಸುಳ್ಳು ಎಂಬುದನ್ನು ಹೇಳಿದೆ. ನಿಮ್ಮ ಬ್ಯಾಂಕ್ ಎಟಿಎಂನಿಂದ ಒಂದು ತಿಂಗಳಲ್ಲಿ ಐದು ಉಚಿತ ವಹಿವಾಟನ್ನು ಮಾಡಬಹುದು. ಆ ನಂತರದಲ್ಲಿ ಒಂದು ವಹಿವಾಟಿಗೆ ರೂ. 21 ಅಥವಾ ತೆರಿಗೆಯನ್ನು ಪ್ರತ್ಯೇಕವಾಗಿ ಪಾವತಿಸಬೇಕು ಎಂದು ಟ್ವೀಟ್ ಮಾಡಲಾಗಿದೆ.

ನಿಜವಾದ ಎಟಿಎಂ ವಿಥ್​ಡ್ರಾ ನಿಯಮ ಏನು?

ಆರ್​ಬಿಐ ಪ್ರಕಾರವಾಗಿ, 2019ರ ಜೂನ್​ನಲ್ಲಿ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮುಖ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು. ಎಟಿಎಂ ಶುಲ್ಕ ಹಾಗೂ ದರಗಳ ಬಗ್ಗೆಯೇ ಆ ಸಮಿತಿ ಅಧ್ಯಯನ ಮಾಡುವುದಕ್ಕೆ ನೇಮಿಸಲಾಯಿತು. ಎಟಿಎಂ ವಹಿವಾಟುಗಳ ಇಂಟರ್​ಚೇಂಜ್ ರಚನೆ ಮೇಲೆ ಗಮನ ಇರಿಸಿದ ಸಮಿತಿ ಅದು. 2021ರ ಜೂನ್​ನಲ್ಲಿ ಆರ್​ಬಿಐ ಈ ವಹಿವಾಟುಗಳ ಶುಲ್ಕಗಳನ್ನು ಪರಿಶೀಲಿಸಿತು. ಇದರ ಪರಿಷ್ಕರಣೆ ಆಗಿ ಬಹಳ ಸಮಯ ಆಗಿದೆ ಎಂಬುದು ಗಮನಿಸಿತು. ಬ್ಯಾಂಕ್​ಗಳ ಎಟಿಎಂ ನಿರ್ವಹಣೆ ಹಾಗೂ ಕಾರ್ಯಾಚರಣೆ ಶುಲ್ಕದಲ್ಲಿ ಏರಿಕೆ ಆಗಿದೆ. ಇದರ ಜತೆಗೆ ಸಂಸ್ಥೆಗಳು ಹಾಗೂ ಗ್ರಾಹಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಸಮತೋಲನ ಕಾಯ್ದುಕೊಳ್ಳಲು ಕೆಲ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿತು.

ಗ್ರಾಹಕರಿಗೆ ಐದು ವಹಿವಾಟುಗಳು (ಹಣಕಾಸು ಮತ್ತು ಹಣಕಾಸೇತರ ಒಳಗೊಂಡಂತೆ) ಪ್ರತಿ ತಿಂಗಳು ತಮ್ಮ ಖಾತೆ ಇರುವ ಬ್ಯಾಂಕ್ ಎಟಿಎಂಗಳಲ್ಲಿ ಉಚಿತವಾಗಿರುತ್ತದೆ. ಇದರ ಜತೆಗೆ ಉಚಿತ ವಹಿವಾಟುಗಳು (ಹಣಕಾಸು ಮತ್ತು ಹಣಕಾಸೇತರ ಒಳಗೊಂಡಂತೆ) ಇತರ ಬ್ಯಾಂಕ್​ಗಳ ಎಟಿಎಂಗಳಲ್ಲಿ ಉಚಿತವಾಗಿರುತ್ತದೆ. ಮೆಟ್ರೋ ನಗರಗಳಲ್ಲಿ 3 ಮತ್ತು ಮೆಟ್ರೋಯೇತರ ನಗರಗಳಲ್ಲಿ 5 ವಹಿವಾಟುಗಳನ್ನು ಉಚಿತವಾಗಿ ಮಾಡಬಹುದು. ಉಚಿತ ವಹಿವಾಟಿನ ನಂತರ ಒಂದು ವಹಿವಾಟಿಗೆ 20 ರೂಪಾಯಿ ಶುಲ್ಕವಾಗುತ್ತದೆ. ಹೆಚ್ಚಿನ ಇಂಟರ್​ಚೇಂಜ್ ಶುಲ್ಕದಿಂದ ಬ್ಯಾಂಕ್​ಗಳಿಗೆ ಪರಿಹಾರ ಒದಗಿಸುವ ಸಲುವಾಗಿ ಗ್ರಾಹಕರಿಗೆ ಮಿತಿಯ ನಂತರದ ಒಂದು ವಹಿವಾಟಿಗೆ 21 ರೂಪಾಯಿ ಶುಲ್ಕ ಇದೆ. ಈ ಶುಲ್ಕ ಜನವರಿ 1, 2022ರಿಂದ ಜಾರಿಗೆ ಬಂದಿದೆ.

Published On - 6:54 pm, Wed, 13 July 22