
ಬೆಂಗಳೂರು, ಜನವರಿ 7: ಬೆಂಗಳೂರಿನಂಥ ನಗರಗಳಲ್ಲಿ ಒಂದು ಬ್ಯುಸಿನೆಸ್ ನಡೆಸುವುದು ಎಷ್ಟು ಕಷ್ಟ ಎಂಬ ಕಹಿಸತ್ಯವನ್ನು ಆಸ್ಟ್ರೇಲಿಯನ್ ಉದ್ಯಮಿಯೊಬ್ಬರು ಎರಡು ವರ್ಷದಲ್ಲಿ ಅರಿತುಕೊಂಡಿದ್ದಾರೆ. ಗಾರ್ಮೆಂಟ್ಸ್ ಉದ್ಯಮದಲ್ಲಿ (Garments factory) ಕೆಲಸಗಾರರಿಗೆ ಆಗುತ್ತಿರುವ ಶೋಷಣೆ ಬಗ್ಗೆ ಓದಿ ಮರುಗುತ್ತಿದ್ದ 38 ವರ್ಷದ ಕ್ರಿಸ್ ಎಚ್ ಎಂಬುವವರು ತಾವೇ ಒಂದು ಗಾರ್ಮೆಂಟ್ಸ್ ಫ್ಯಾಕ್ಟರಿ ಶುರು ಮಾಡಿ, ಮಾದರಿ ಆಗಲೊರಟಿದ್ದರು. ಆದರೆ, ಒಂದೇ ವರ್ಷದಲ್ಲಿ ಕೆಲಸಗಾರರ ಆಟಗಳಿಗೆ ಬೇಸ್ತುಬಿದ್ದು ಹೋಗಿ, ಚಡಪಡಿಸುತ್ತಿದ್ದಾರೆ. ಲಕ್ಷಾಂತರ ರೂ ನಷ್ಟ ಮಾಡಿಕೊಂಡು ಕಂಪನಿಯನ್ನು ಮುಂದುವರಿಸಬೇಕೋ ಬೇಡವೋ ಎಂದು ಆಲೋಚಿಸುವ ಹಂತಕ್ಕೆ ಹೋಗಿದ್ದಾರೆ.
ಆಸ್ಟ್ರೇಲಿಯಾದ ಕ್ರಿಸ್ ಅವರ ಪತ್ನಿಗೆ ಬೆಂಗಳೂರಿನಲ್ಲಿ ಟೆಕ್ ಕೆಲಸ ಸಿಕ್ಕಿತ್ತು. ಎರಡು ವರ್ಷದ ಹಿಂದೆ ಕ್ರಿಸ್ ಸಿಲಿಕಾನ್ ಸಿಟಿಗೆ ಬಂದಿದ್ದಾರೆ. ಗಾರ್ಮೆಂಟ್ಸ್ ಕಾರ್ಮಿಕರಿಗೆ ಆಗುತ್ತಿರುವ ಶೋಷಣೆ, ಕಡಿಮೆ ಸಂಬಳ, ಮಹಿಳೆಯರಿಗೆ ದೌರ್ಜನ್ಯ ಇತ್ಯಾದಿ ಬಗ್ಗೆ ಅವರು ಓದಿ ತಿಳಿಯುತ್ತಾರೆ. ಬೆನಿವೊಲೆಂಶಿಯಾ ಎನ್ನುವ ಒಂದು ಗಾರ್ಮೆಂಟ್ಸ್ ಕಂಪನಿಯನ್ನೇ ಶುರು ಮಾಡುತ್ತಾರೆ.
ಇದನ್ನೂ ಓದಿ: ಪಿಎಂ ಕಿಸಾನ್ ಸ್ಕೀಮ್- ರೈತರು ಇಕೆವೈಸಿ ಮಾಡಲು 3 ವಿಧಾನಗಳು
ಟೈಲರ್ಗಳು ಸೇರಿದಂತೆ ವಿವಿಧ ಕಾರ್ಮಿಕರಿಗೆ ಕೈತುಂಬ ಸಂಬಳ ಕೊಡುತ್ತಾರೆ. ಬೇರೆ ಕಡೆ 8,000 ರೂ ಸಂಬಳ ಪಡೆಯುವ ಟೈಲರ್ಗಳಿಗೆ 30,000 ರೂ ಸಂಬಳ ಕೊಡುತ್ತಾರೆ. ತರಬೇತಿ ಕೊಟ್ಟು ಆ ಟೈಲರ್ ಅನ್ನು ಸರಿಯಾಗಿ ಕೆಲಸಕ್ಕೆ ಬಳಸಿಕೊಳ್ಳಬೇಕೆನ್ನುವಷ್ಟರಲ್ಲಿ ಕೆಲಸ ಬಿಟ್ಟು ಹೋಗುವುದು ಇತ್ಯಾದಿ ಸಮಸ್ಯೆಗಳು ಅವರಿಗೆ ಅಡಿಗಡಿಗೆ ಬಂದೊದಗುತ್ತಿರುತ್ತವೆ.
ಒಬ್ಬ ಲೇಡಿ ಟೈಲರ್ಳ ಕೆಲಸವನ್ನು ಕ್ರಿಸ್ ಬಹುವಾಗಿ ಪ್ರಶಂಸಿಸುತ್ತಾರೆ. ಆದರೆ, ಆಕೆಯ ಗಂಡನಿಗೆ ಇದನ್ನು ಸಹಿಸಿಕೊಳ್ಳಲು ಆಗದೆ ಪತ್ನಿಯನ್ನು ಕೆಲಸದಿಂದ ಬಿಡಿಸುತ್ತಾನೆ. ‘ಆಕೆ ತರಬೇತಿಯಲ್ಲಿ ಹೊಸ ಕೌಶಲ್ಯಗಳನ್ನು ಚೆನ್ನಾಗಿ ಕಲಿಯುತ್ತಿದ್ದಳು. ನಾನು ಪ್ರಶಂಸಿಸಿದ್ದೆ. ಒಮ್ಮೆ ಮಳೆ ಬರುತ್ತಿತ್ತು. ಆಕೆಯ ಶೂ ನೀರಿನಲ್ಲಿ ನೆನೆಯಬಾರದೆಂದು ಪಕ್ಕಕ್ಕೆ ಜರುಗಿಸಿದೆ. ಅದು ಆಕೆಯ ಪತಿಗೆ ಇಷ್ಟವಾಗಲಿಲ್ಲ. ಆಸ್ಟ್ರೇಲಿಯಾದಲ್ಲಾಗಿದ್ದರೆ ಯಾರಿಗೇ ಆದರೂ ನಾವು ಈ ಕೆಲಸ ಮಾಡುತ್ತಿರುತ್ತೇವೆ’ ಎಂದು ಕ್ರಿಸ್ ಅಚ್ಚರಿಗೊಂಡಿದ್ದಾರೆ.
ಕ್ರಿಸ್ ತಮ್ಮ ಕಂಪನಿಯ ಸೋಷಿಯಲ್ ಮೀಡಿಯಾ ಮ್ಯಾನೇಜ್ ಮಾಡಲು ಒಬ್ಬ ವ್ಯಕ್ತಿಯನ್ನು ನೇಮಕ ಮಾಡುತ್ತಾರೆ. ದಿನವೂ ಇನ್ಸ್ಟಾದಲ್ಲಿ ಒಂದು ಪೋಸ್ಟ್ ಹಾಕುವಂತೆ ಹೇಳಿರುತ್ತಾರೆ. ಆ ವ್ಯಕ್ತಿ ಎರಡು ತಿಂಗಳಲ್ಲಿ ಹಾಕಿದ್ದು ಮೂರೇ ಪೋಸ್ಟ್. ಇನ್ನು, ಸಂದರ್ಶನಕ್ಕೆಂದು ಬಂದವರು ತಮ್ಮ ಕೌಶಲ್ಯ ತೋರಿಸಲು ಕೇಳಿದಾಗ ಪ್ರತಿಕ್ರಿಯಿಸುವುದೇ ಇಲ್ಲ. ಮತ್ತೊಬ್ಬ ವ್ಯಕ್ತಿ, ಇಂಟರ್ವ್ಯೂಗೆ ಬರಲು ಆಗುವ ವೆಚ್ಚವನ್ನೂ ಭರಿಸಬೇಕೆಂದು ಕೇಳಿದ್ದಾರೆ. ಹೀಗೆ ಬೆಂಗಳೂರಿನಲ್ಲಿ ಕೆಲಸಗಾರರ ವರ್ತನೆಯಿಂದ ಆಸ್ಟ್ರೇಲಿಯಾದ ಕ್ರಿಸ್ ಹೈರಾಣಾಗಿ ಹೋಗಿದ್ದಾರೆ.
ಇದನ್ನೂ ಓದಿ: ಚಿನ್ನದಂತೆ ಬೆಳ್ಳಿಗೂ ಸದ್ಯದಲ್ಲೇ ಬರಲಿದೆ ಹಾಲ್ಮಾರ್ಕ್ ಗುರುತು
ಕೆಲಸಗಾರರು ಸರಿಯಾಗಿ ನಿಲ್ಲದ ಕಾರಣ ಒಂದು ವರ್ಷದಲ್ಲಿ ಇವರ ಕಂಪನಿಗೆ 30 ಲಕ್ಷ ರೂ ನಷ್ಟವಾಗಿದೆಯಂತೆ. ಕೆಲಸಗಾರರಿಗೆ ಉತ್ತಮ ಸೌಕರ್ಯ ಕೊಡಲು ಮತ್ತು ಸೌಜನ್ಯದಿಂದ ನೋಡಿಕೊಳ್ಳಲು ಹೋಗಿ ಇವರೇ ಕಷ್ಟಕ್ಕೆ ಸಿಕ್ಕಿಕೊಂಡಂತಾಗಿದೆ. ತಮ್ಮ ಹಾಗೂ ಕೆಲಸಗಾರರ ಮಧ್ಯೆ ಸಾಂಸ್ಕೃತಿಕ ವ್ಯತ್ಯಾಸ ಇರಬಹುದೆಂದು ಗ್ರಹಿಸಿ, ಸ್ಥಳೀಯ ವ್ಯಕ್ತಿಯೊಬ್ಬರನ್ನು ಆಪರೇಷನಲ್ ಮ್ಯಾನೇಜರ್ ಆಗಿ ನೇಮಕ ಮಾಡಿದ್ದಾರೆ. ಭಾರತೀಯ ಕಾರ್ಮಿಕರನ್ನು ಹೇಗೆ ನಿಭಾಯಿಸಬೇಕೆಂಬ ಪಾಠವನ್ನು ಅವರಿಂದ ಕ್ರಿಸ್ ಕಲಿಯುತ್ತಿದ್ದಾರೆ.
‘ಕೆಲಸಗಾರರೊಂದಿಗೆ ಅಂತರ ಕಾಯ್ದುಕೊಳ್ಳುವುದು, ಹೆಚ್ಚು ಸ್ನೇಹಪೂರ್ವಕವಾಗಿ ವರ್ತಿಸದೇ ಇರುವುದು, ಬಾಸಿಸಂ ತೋರುವುದು ಇವನ್ನು ಆ ಮ್ಯಾನೇಜರ್ ನನಗೆ ಕಲಿಸುತ್ತಿದ್ದಾರೆ’ ಎಂದು ತಮಾಷೆ ಮಾಡುವ ಕ್ರಿಸ್, ಮುಂದಿನ ದಿನಗಳಲ್ಲೂ ಪರಿಸ್ಥಿತಿ ಸರಿ ಹೋಗದಿದ್ದರೆ ಕಂಪನಿಯನ್ನೇ ಮುಚ್ಚುವ ನಿರ್ಧಾರಕ್ಕೆ ಬಂದಿದ್ದಾರೆ.
(ಮಾಹಿತಿ ಮೂಲ: ಮನಿಕಂಟ್ರೋಲ್)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ