Hallmark Silver: ಚಿನ್ನದಂತೆ ಬೆಳ್ಳಿಗೂ ಸದ್ಯದಲ್ಲೇ ಬರಲಿದೆ ಹಾಲ್ಮಾರ್ಕ್ ಗುರುತು
Silver Hallmarking Likely To Become Mandatory Like Gold: ದಿನೇ ದಿನೇ ಬೇಡಿಕೆ ಹೆಚ್ಚುತ್ತಿರುವ ಬೆಳ್ಳಿಗೆ ಮುಂದಿನ ದಿನಗಳಲ್ಲಿ ಹಾಲ್ಮಾರ್ಕ್ ಗುರುತನ್ನು ಕಡ್ಡಾಯಗೊಳಿಸಬಹುದು. ಮನಿಕಂಟ್ರೋಲ್ ವರದಿ ಪ್ರಕಾರ ಹಾಲ್ಮಾರ್ಕ್ ಗುರುತಿರುವ ಬೆಳ್ಳಿ ವಸ್ತುವನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸದ್ಯದಲ್ಲೇ ಕಡ್ಡಾಯಪಡಿಸಬಹುದು. ಚಿನ್ನಕ್ಕೆ ಈಗ ಹಾಲ್ಮಾರ್ಕ್ ಗುರುತು ಕಡ್ಡಾಯ. ಬೆಳ್ಳಿಗೂ ಹಾಲ್ಮಾರ್ಕ್ ಹಾಕಲಾಗುತ್ತಿದೆಯಾದರೂ, ಅದಿನ್ನೂ ಕಡ್ಡಾಯವಾಗಿಲ್ಲ.

ನವದೆಹಲಿ, ಜನವರಿ 7: ಚಿನ್ನದ ಪರಿಶುದ್ಧತೆಯ ಮಟ್ಟ ತೋರಿಸುವ ಹಾಲ್ಮಾರ್ಕ್ ಗುರುತು ವ್ಯವಸ್ಥೆಯನ್ನು ಬೆಳ್ಳಿಗೂ (Silver) ತರಲು ಸರ್ಕಾರ ಚಿಂತನೆ ನಡೆಸಿದೆ. ಗ್ರಾಹಕರಿಗೆ ನೈಜ ಬೆಳ್ಳಿ ವಸ್ತುಗಳು ದೊರಕಲು ಈ ಹಾಲ್ಮಾರ್ಕಿಂಗ್ ವ್ಯವಸ್ಥೆ ನೆರವಾಗಲಿದೆ. ಶೀಘ್ರದಲ್ಲೇ ಬೆಳ್ಳಿಗೂ ಹಾಲ್ಮಾರ್ಕಿಂಗ್ ಮುದ್ರೆ ಹಾಕುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ನ (ಬಿಐಎಸ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಮನಿ ಕಂಟ್ರೋಲ್ ವೆಬ್ಸೈಟ್ನಲ್ಲಿ ವರದಿಯಾಗಿದೆ.
ಬೆಳ್ಳಿ ಆಭರಣಗಳು ಮತ್ತು ಗಟ್ಟಿಗಳಿಗೆ ಹಾಲ್ಮಾರ್ಕ್ ಗುರುತು ಮಾಡುವ ಕಾರ್ಯ ಈಗಾಗಲೇ ಮಾಡಲಾಗುತ್ತಿದೆ. ಈವರೆಗೂ 20 ಲಕ್ಷಕ್ಕೂ ಅಧಿಕ ಬೆಳ್ಳಿ ವಸ್ತುಗಳಿಗೆ ಹಾಲ್ಮಾರ್ಕ್ ಹಾಕಲಾಗಿದೆ. ಆದರೆ ಹಾಲ್ಮಾರ್ಕ್ ಅನ್ನು ಕಡ್ಡಾಯವಾಗಿ ಹಾಕಬೇಕೆಂಬ ನಿಯಮ ಇನ್ನೂ ಜಾರಿಯಾಗಿಲ್ಲ. ಚಿನ್ನಕ್ಕೆ ಹಾಲ್ಮಾರ್ಕ್ ಕಡ್ಡಾಯ ಮಾಡುವ ಮುಂಚೆಯೂ ಆ ಗುರುತು ಹಾಕಲಾಗುತ್ತಿತ್ತು. ಅದರಂತೆ ಬೆಳ್ಳಿಗೂ ಸದ್ಯದಲ್ಲೇ ಹಾಲ್ಮಾರ್ಕ್ ಹಾಕುವುದನ್ನು ಕಡ್ಡಾಯಪಡಿಸಬಹುದು.
ಇದನ್ನೂ ಓದಿ: ಈ ಎಸ್ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?
ಹಾಲ್ಮಾರ್ಕ್ ಹೇಗೆ ಹಾಕಿಸುವುದು?
ಸರ್ಕಾರವೇನಾದರೂ ಬೆಳ್ಳಿಗೆ ಹಾಲ್ಮಾರ್ಕ್ ಕಡ್ಡಾಯಪಡಿಸಿದಂದಿನಿಂದ ಮಾರಾಟವಾಗುವ ಎಲ್ಲಾ ಬೆಳ್ಳಿ ವಸ್ತುಗಳಿಗೆ ಹಾಲ್ಮಾರ್ಕ್ ಇರುತ್ತದೆ. ಈಗಾಗಲೇ ಖರೀದಿಸಿರುವ ಬೆಳ್ಳಿ ಆಭರಣಕ್ಕೆ ಹಾಲ್ಮಾರ್ಕ್ ಇಲ್ಲವೆಂದರೆ ಅದನ್ನು ಹಾಕಿಸಲು ಅವಕಾಶ ಇದೆ.
ನಿಮ್ಮ ಪ್ರದೇಶದ ಸಮೀಪದಲ್ಲಿ ಇರುವ ಬಿಐಎಸ್ ಮಾನ್ಯತೆ ಇರುವ ಅಸ್ಸಾಯಿಂಗ್ ಅಂಡ್ ಹಾಲ್ಮಾರ್ಕಿಂಗ್ ಸೆಂಟರ್ಗೆ (ಎಎಚ್ಸಿ) ಹೋಗಿ ಚಿನ್ನದ ರೀತಿಯಲ್ಲಿ ಬೆಳ್ಳಿ ವಸ್ತುಗಳ ಶುದ್ಧತೆ ಪರೀಕ್ಷೆಗೆ ನೀಡಬಹುದು. ಒಂದು ವಸ್ತುವಿಗೆ 45 ರೂ ಶುಲ್ಕ ಇರುತ್ತದೆ. ಅದರ ಶುದ್ಧತೆ ಎಷ್ಟು ಎಂಬುದು ಈ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ. ಪರೀಕ್ಷೆ ಬಳಿಕ 6 ಅಂಕಿಗಳ ಎಚ್ಯುಐಡಿ ನಂಬರ್, ಬಿಐಎಸ್ ಲೋಗೋ ಇತ್ಯಾದಿ ಇರುವ ಹಾಲ್ಮಾರ್ಕ್ ಗುರುತನ್ನು ಬೆಳ್ಳಿ ಅಥವಾ ಚಿನ್ನದ ವಸ್ತುವಿನ ಮೇಲೆ ಮುದ್ರಿಸಲಾಗುತ್ತದೆ.
ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?
ಕಳೆದ ಒಂದೆರಡು ವರ್ಷದಿಂದ ಬೆಳ್ಳಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಿದೆ. ಬೆಳ್ಳಿಯನ್ನು ಅನೇಕ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಆಭರಣಕ್ಕಾಗಿಯೂ ಅದರ ಬಳಕೆ ಆಗುತ್ತದೆ. ಹೀಗಾಗಿ, ಚಿನ್ನಕ್ಕಿಂತ ಬೆಳ್ಳಿ ಬೆಲೆ ಹೆಚ್ಚು ವೇಗದಲ್ಲಿ ಏರುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




