GDP growth: ಇಂಡಿಯಾ ರೇಟಿಂಗ್ಸ್ ಪ್ರಕಾರ ಮುಂದಿನ ವರ್ಷ ಭಾರತದ ಜಿಡಿಪಿ ಬೆಳವಣಿಗೆ ಶೇ. 6.9
India Ratings and Research Agency estimates India's economic growth for 2026-27 to be 6.9pc: ಈ ವರ್ಷ (2025-26) ಭಾರತದ ಜಿಡಿಪಿ ಶೇ. 7.4ರಷ್ಟು ಬೆಳೆಯಬಹುದು ಎಂದು ಇಂಡಿಯಾ ರೇಟಿಂಗ್ ಅಂಡ್ ರಿಸರ್ಚ್ ಏಜೆನ್ಸಿ ಹೇಳಿದೆ. ಮುಂದಿನ ವರ್ಷದ ಪರಿಸ್ಥಿತಿಯನ್ನೂ ಅವಲೋಕಿಸಿರುವ ಈ ಏಜೆನ್ಸಿ 2026-27ರಲ್ಲಿ ಜಿಡಿಪಿ ಶೇ. 6.9ರಷ್ಟು ಹೆಚ್ಚಬಹುದು ಎಂದಿದೆ. ಮುಂದಿನ ವರ್ಷದಲ್ಲಿ ಭಾರತದ ಬೆಳವಣಿಗೆಗೆ ಸಾಧಕವಾಗುವ ಮತ್ತು ಬಾಧಕವಾಗುವ ಅಂಶಗಳನ್ನು ಈ ಏಜೆನ್ಸಿ ಪ್ರಸ್ತಾಪಿಸಿದೆ.

ನವದೆಹಲಿ, ಜನವರಿ 7: ಈ ಹಣಕಾಸು ವರ್ಷದಲ್ಲಿ ಜಾಗತಿಕ ಅನಿಶ್ಚಿತ ವಾತಾವರಣ ನಡುವೆಯೂ ಮೊದಲ ಆರು ತಿಂಗಳಲ್ಲಿ ಭಾರತ ಶೇ. 8ರಷ್ಟು ಆರ್ಥಿಕ ಅಭಿವೃದ್ಧಿ ದಾಖಲಿಸಿದೆ. ಈ ವರ್ಷ ನಿರೀಕ್ಷೆಮೀರಿದ ಪ್ರಮಾಣದಲ್ಲಿ ಜಿಡಿಪಿ ಹಿಗ್ಗುವ ಸಾಧ್ಯತೆ ಹೆಚ್ಚಿದೆ. ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಏಜೆನ್ಸಿ (India Ratings) ಪ್ರಕಾರ ಈ ವರ್ಷ ಭಾರತ ಶೇ. 7.4ರಷ್ಟು ಬೆಳವಣಿಗೆ ಹೊಂದಬಹುದು. ಆದರೆ, ಮುಂದಿನ ವರ್ಷ ಹೇಗೆ? ಈ ಏಜೆನ್ಸಿ ಪ್ರಕಾರ ಮುಂದಿನ ವರ್ಷದಲ್ಲಿ (2026-27) ಭಾರತದ ಜಿಡಿಪಿ (GDP) ಶೇ. 6.9 ದರವನ್ನು ದಾಖಲಿಸಬಹುದು ಎಂದು ಅಂದಾಜಿಸಲಾಗಿದೆ.
ಸರ್ಕಾರ ಜಾರಿಗೆ ತಂದ ವಿವಿಧ ಸುಧಾರಣೆಗಳಿಂದ ಬೆಳವಣಿಗೆಗೆ ಪುಷ್ಟಿ
ಇಂಡಿಯಾ ರೇಟಿಂಗ್ ಏಜೆನ್ಸಿ ಅಭಿಪ್ರಾಯದ ಪ್ರಕಾರ ಕಳೆದ ಬಜೆಟ್ನಲ್ಲಿ (2025-26) ತೆಗೆದುಕೊಳ್ಳಲಾದ ಕ್ರಮಗಳು, ಜಿಎಸ್ಟಿ ದರ ಇಳಿಕೆ, ವಿವಿಧ ದೇಶಗಳ ನಡುವೆ ಮಾಡಿಕೊಳ್ಳಲಾದ ಮುಕ್ತ ವ್ಯಾಪಾರ ಒಪ್ಪಂದ, ಇವೆಲ್ಲವೂ ಅಭಿವೃದ್ಧಿಗೆ ಪುಷ್ಟಿ ಕೊಡಬಲ್ಲುವು. ಅಮೆರಿಕದ ಟ್ಯಾರಿಫ್ ಸೇರಿದಂತೆ ಬಾಹ್ಯ ಒತ್ತಡಗಳನ್ನು ಮೆಟ್ಟಿ ನಿಂತು ಬೆಳವಣಿಗೆ ಹೊಂದಲು ಈ ಸುಧಾರಣಾ ಕ್ರಮಗಳು ನೆರವಾಗಬಹುದು ಎಂದು ಈ ಏಜೆನ್ಸಿ ನಿರೀಕ್ಷಿಸಿದೆ.
ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?
ಭಾರತದ ಬೆಳವಣಿಗೆಯ ಹಾದಿಯಲ್ಲಿರುವ ತೊಡಕುಗಳ್ಯಾವುವು?
ಇಂಡಿಯಾ ರೇಟಿಂಗ್ ಅಂಡ್ ರಿಸರ್ಚ್ ಸಂಸ್ಥೆಯು ಭಾರತದ ಬೆಳವಣಿಗೆಯ ಸಾಧಕಗಳ ಜೊತೆಗೆ ಬಾಧಕವಾಗಿರುವ ಅಂಶಗಳನ್ನೂ ತೋರಿಸಿ ಎಚ್ಚರಿಸಿದೆ. 2026ರ ಮಧ್ಯದಲ್ಲಿ ಎಲ್ ನಿನೋ ಪರಿಣಾಮ ಭಾರತದ ಮೇಲಾಗಬಹುದು. ಅಂದರೆ ಮುಂಗಾರು ಋತು ಮೊಟಕುಗೊಳ್ಳಬಹುದು. ಏಜೆನ್ಸಿ ಪ್ರಸ್ತಾಪಿಸಿರುವ ಪ್ರಮುಖ ತೊಡಕುಗಳಲ್ಲಿ ಇದೂ ಒಂದು.
ಇದರ ಜೊತೆಗೆ, ದುರ್ಬಲ ಕರೆನ್ಸಿ, ಬಂಡವಾಳ ಹೊರಹೋಗುವಿಕೆ, ಜಾಗತಿಕ ವ್ಯಾಪಾರ ವಹಿವಾಟು ಕುಂಠಿತಗೊಳ್ಳುವುದು, ತೆರಿಗೆ ಸಂಗ್ರಹ ಕಡಿಮೆಗೊಳ್ಳುವುದು ಇತ್ಯಾದಿ ಸವಾಲುಗಳು ಭಾರತದ ಮುಂದಿವೆ.
ಇದನ್ನೂ ಓದಿ: ಭಾರತದ ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ 2011-12 ಅಲ್ಲ, 2022-23; ಇದರಿಂದೇನು ಪ್ರಯೋಜನ?
ಹಾಗೆಯೇ, 2025-26 ಅನ್ನು ಜಿಡಿಪಿ ಲೆಕ್ಕಾಚಾರಕ್ಕೆ ಆಧಾರ ವರ್ಷವಾಗಿ ಇಡಲಾಗುತ್ತದೆ. ಈ ವರ್ಷ ಪ್ರಬಲ ಬೆಳವಣಿಗೆ ದರ ದಾಖಲಾಗುತ್ತದೆ. ಇದರಿಂದಾಗಿ ಮುಂದಿನ ವರ್ಷ (2026-27) ಪ್ರಬಲ ಬೇಸ್ ಎಫೆಕ್ಟ್ನಿಂದ ಜಿಡಿಪಿ ದರಕ್ಕೆ ಹಿನ್ನಡೆಯಾಗಲೂ ಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




