ಬಂಧನ್ ಬ್ಯಾಂಕ್ ಸಿಇಒ ರಾಜೀನಾಮೆ; ಷೇರುಬೆಲೆ ಕುಸಿತ; ರೇಟಿಂಗ್ ಕಡಿಮೆ ಮಾಡಿದ ಬ್ರೋಕರೇಜ್ ಸಂಸ್ಥೆಗಳು

|

Updated on: Apr 08, 2024 | 11:17 AM

Bandhan Bank MD and CEO Resignation Effect: ಬಂಧನ್ ಬ್ಯಾಂಕ್ ಎಂಡಿ ಮತ್ತು ಸಿಇಒ ಸಿಎಸ್ ಘೋಷ್ ರಾಜೀನಾಮೆ ನೀಡಿರುವುದು ಆ ಬ್ಯಾಂಕ್​ಗೆ ಹಿನ್ನಡೆ ತರಬಹುದು ಎಂದು ಬ್ರೋಕರೇಜ್ ಕಂಪನಿಗಳು ಅಭಿಪ್ರಾಯಪಟ್ಟಿವೆ. ಈ ಹಿಂದೆ ಬಂಧನ್ ಬ್ಯಾಂಕ್ ಷೇರಿಗೆ 270 ರೂ ಟಾರ್ಗೆಟ್ ಪ್ರೈಸ್ ಕೊಟ್ಟಿದ್ದ ಜೆಫರೀಸ್, ಇದೀಗ ಅದನ್ನು 170 ರೂಗೆ ಇಳಿಸಿದೆ. ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ 197 ರೂ ಇದ್ದ ಬಂಧನ್ ಬ್ಯಾಂಕ್ ಷೇರು ಬೆಲೆ ಸೋಮವಾರ ಬೆಳಗ್ಗೆ 179 ರೂಗೆ ಕುಸಿದಿತ್ತು. ಕೋಟಕ್ ಕೂಡ ಬಂಧನ್ ಬ್ಯಾಂಕ್ ಅನ್ನು ಡೌನ್​ಗ್ರೇಡ್ ಮಾಡಿದೆ.

ಬಂಧನ್ ಬ್ಯಾಂಕ್ ಸಿಇಒ ರಾಜೀನಾಮೆ; ಷೇರುಬೆಲೆ ಕುಸಿತ; ರೇಟಿಂಗ್ ಕಡಿಮೆ ಮಾಡಿದ ಬ್ರೋಕರೇಜ್ ಸಂಸ್ಥೆಗಳು
ಬಂಧನ್ ಬ್ಯಾಂಕ್
Follow us on

ನವದೆಹಲಿ, ಏಪ್ರಿಲ್ 8: ಬಂಧನ್ ಬ್ಯಾಂಕ್​ನ ಎಂಡಿ ಮತ್ತು ಸಿಇಒ ಚಂದ್ರಶೇಖರ್ ಘೋಷ್ (Chandra Shekhar Ghosh) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕಾರಾವಧಿ ಪೂರ್ಣಗೊಳ್ಳಲು ಇನ್ನೂ ಕೆಲ ತಿಂಗಳು ಇರುವಂತೆಯೇ ಅವರು ನಿರ್ಗಮಿಸಿದ್ದು ಉದ್ಯಮ ವಲಯದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಅಂತೆಯೇ, ಮಾರುಕಟ್ಟೆ ಸ್ಪಂದನೆ ಕೂಡ ಋಣಾತ್ಮಕವಾಗಿದೆ. ಸಿ.ಎಸ್. ಘೋಷ್ ರಾಜೀನಾಮೆ ಕೊಟ್ಟಿದ್ದು ಯಾವ ಕಾರಣಕ್ಕೆ ಎಂಬುದು ಸ್ಪಷ್ಟವಾಗಿಲ್ಲ. ಬ್ಯಾಂಕಿಂಗ್ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಆಗಿರುವ ದಿಢೀರ್ ನಾಯಕತ್ವ ಬದಲಾವಣೆಗಳ ಪಟ್ಟಿಗೆ ಬಂಧನ್ ಬ್ಯಾಂಕ್ ಹೊಸ ಸೇರ್ಪಡೆಯಾಗಿದೆ. ಯೆಸ್ ಬ್ಯಾಂಕ್, ಆರ್​ಬಿಎಲ್ ಬ್ಯಾಂಕ್, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್ ಮೊದಲಾದ ಬ್ಯಾಂಕುಗಳಲ್ಲಿ ಉನ್ನತ ಹುದ್ದೆಗಳಲ್ಲಿ ಬದಲಾವಣೆಗಳಾಗಿವೆ. ಇದೀಗ ಬಂಧನ್ ಬ್ಯಾಂಕ್ (Bandhan Bank) ಸಿಇಒ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಸೋಮವಾರ ಷೇರು ಮಾರುಕಟ್ಟೆಯಲ್ಲಿ ಈ ಬ್ಯಾಂಕ್​ನ ಷೇರುಬೆಲೆ ಶೇ. 9ರಷ್ಟು ಕುಸಿತ ಕಂಡಿತ್ತು. 197 ರೂ ಇದ್ದ ಅದರ ಷೇರುಬೆಲೆ 179 ರೂವರೆಗೂ ಇಳಿಕೆ ಆಗಿತ್ತು.

2015ರ ಜುಲೈ 10ರಿಂದಲೂ ಬಂಧನ್ ಬ್ಯಾಂಕ್​ಗೆ ಎಂಡಿ ಮತ್ತು ಸಿಇಒ ಆಗಿರುವ ಸಿಎಸ್ ಘೋಷ್ ಅವರ ಅಧಿಕಾರಾವಧಿ 2024ರ ಜುಲೈ 9ರವರೆಗೂ ಇದೆ. ಮೂರು ವರ್ಷ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸಲು ಬ್ಯಾಂಕ್​ನ ನಿರ್ದೇಶಕರ ಮಂಡಳಿ ಅನುಮೋದನೆ ಕೂಡ ನೀಡಿತ್ತು. ಆದರೆ, ಸಿಇಒ ಆಗಿ ಮುಂದುವರಿಯಲು ಘೋಷ್ ನಿರಾಸಕ್ತರಾಗಿದ್ದಾರೆ. ಜುಲೈ 9 ಆಗುವುದರೊಂದಿಗೆ ತಾನು ಬ್ಯಾಂಕ್​ನ ಎಂಡಿ ಮತ್ತು ಸಿಇಒ ಸ್ಥಾನದಿಂದ ನಿವೃತ್ತರಾಗುವುದಾಗಿ ಹೇಳಿ ಅವರು ರಾಜೀನಾಮೆ ಪತ್ರವನ್ನು ಬ್ಯಾಂಕ್​ನ ನಿರ್ದೇಶಕರ ಮಂಡಳಿಗೆ ನೀಡಿದ್ದಾರೆ. ಅಂದರೆ, ಘೋಷ್ ಅವರು ಜುಲೈ 9ರವರೆಗೂ ಬಂಧನ್ ಬ್ಯಾಂಕ್​ನಲ್ಲೇ ಇರಲಿದ್ದಾರೆ.

ಇದನ್ನೂ ಓದಿ: ಕಲ್ಯಾಣಿ ಫ್ಯಾಮಿಲಿಯಲ್ಲಿ ಕಲಹಕ್ಕೆ ಏನು ಕಾರಣ? ಸಿನಿಮಾ ಥ್ರಿಲ್ಲರ್​ನಂತಿದೆ ಅಣ್ಣ ತಂಗಿ ವ್ಯಾಜ್ಯ

ಬಂಧನ್ ಬ್ಯಾಂಕ್​ ಷೇರಿಗೆ ಡೌನ್​ಗ್ರೇಡ್ ಕೊಟ್ಟ ಬ್ರೋಕರೇಜ್ ಕಂಪನಿಗಳು

ಸಿಇಒ ರಾಜೀನಾಮೆ ಕೊಟ್ಟ ಬಳಿಕ ಬಂಧನ್ ಬ್ಯಾಂಕ್ ಷೇರುಗಳು ಕುಸಿಯತೊಡಗಿವೆ. ಬ್ರೋಕರೇಜ್ ಕಂಪನಿಗಳು ರೇಟಿಂಗ್ ಇಳಿಸುತ್ತಿವೆ. 180 ರೂ ಆಸುಪಾಸಿನಲ್ಲಿ ಇದ್ದ ಅದರ ಷೇರು ಬೆಲೆ ಕೆಲ ತಿಂಗಳಲ್ಲಿ 290 ರೂಗೆ ಏರಬಹುದು ಎಂದು ಜೆಫರೀಸ್ ಸಂಸ್ಥೆ ಈ ಹಿಂದೆ ಹೇಳಿ, ಹೂಡಿಕೆದಾರರಿಗೆ ಖರೀದಿ ಶಿಫಾರಸು ಮಾಡಿತ್ತು. ಬಳಿಕ ತನ್ನ ನಿಲುವನ್ನು ಬದಲಿಸಿರುವ ಜೆಫರೀಸ್, ಬಂಧನ್ ಬ್ಯಾಂಕ್ ಷೇರಿನ ಟಾರ್ಗೆಟ್ ಪ್ರೈಸ್ 290 ರೂನಿಂದ 170 ರೂಗೆ ಇಳಿಸಿದೆ. ಸೋಮವಾರ ಬೆಳಗ್ಗೆ 11 ಗಂಟೆಯಲ್ಲಿ ಬ್ಯಾಂಕ್​ನ ಷೇರುಬೆಲೆ 185 ರೂ ಆಸುಪಾಸಿನಲ್ಲಿ ಇತ್ತು.

ಬಂಧನ್ ಬ್ಯಾಂಕ್​ಗೆ ಈ ಅನಿಶ್ಚಿತ ಸ್ಥಿತಿಯಿಂದ ಹಿನ್ನಡೆ ಎಂದ ಕೋಟಕ್ ಈಕ್ವಿಟೀಸ್

ಸಿಇಒ ಆಗಿ ಮರುನೇಮಕವಾಗುವ ಕೆಲ ತಿಂಗಳ ಮೊದಲೇ ಬಂಧನ್ ಬ್ಯಾಂಕ್ ಸಿಇಒ ಚಂದ್ರಶೇಖರ್ ಘೋಷ್ ರಾಜೀನಾಮೆ ನೀಡಿದ್ದಾರೆ. ಈ ದಿಢೀರ್ ನಿರ್ಗಮನ ಸಾಕಷ್ಟು ಆತಂಕಕ್ಕೆ ಎಡೆ ಮಾಡಿಕೊಡಬಹುದು. ಈ ಬೆಳವಣಿಗೆಯು ಬ್ಯಾಂಕ್​ಗೆ ಹಿನ್ನಡೆ ತರಬಹುದು ಎಂದು ಕೋಟಕ್ ಇನ್ಸ್​ಟಿಟ್ಯೂಶನಲ್ ಈಕ್ವಿಟೀಸ್ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ನಿಮ್ಮ ಹೂಡಿಕೆ ಹೇಗಿರಬೇಕು, ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ ಮಾಡಬೇಕು? ಇಲ್ಲಿದೆ ತಜ್ಞರ ಸಲಹೆ

‘ಬಂಧನ್ ಬ್ಯಾಂಕ್ ಬಗ್ಗೆ ನಮಗೆ ಸಕಾರಾತ್ಮಕ ದೃಷ್ಟಿಕೋನ ಇದೆ. ಈಗ ನಡೆದಿರುವ ವಿದ್ಯಮಾನವು ಬ್ಯಾಂಕ್​ನ ರೇಟಿಂಗ್ ಅನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚು’ ಎಂದು ಕೋಟಕ್ ಸಂಸ್ಥೆ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ