ನವದೆಹಲಿ: ವಾರದಲ್ಲಿ ಎರಡು ದಿನ ವೀಕಾಫ್ ಸಿಗಬೇಕೆಂಬ ಬ್ಯಾಂಕ್ ಉದ್ಯೋಗಿಗಳ (Bank Employees) ಬಹುದಿನದ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಬ್ಯಾಂಕ್ ಒಕ್ಕೂಟದ (Bank Unions) ಒತ್ತಾಯಕ್ಕೆ ಮಣಿದು ಭಾರತೀಯ ಬ್ಯಾಂಕುಗಳ ಸಂಘ (Indian Banks Association) ಐದು ದಿನಗಳ ವರ್ಕ್ ವೀಕ್ಗೆ (5 Day Work Week) ಅನುಮೋದನೆ ಕೊಡಬಹುದು ಎಂದು ವರದಿಗಳು ಹೇಳುತ್ತಿವೆ. ಇದು ನಿಜವಾದಲ್ಲಿ ಬ್ಯಾಂಕ್ ನೌಕರರು ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಬಹುದು. ವಾರದಲ್ಲಿ ಎರಡು ರಜಾ ದಿನಗಳ ಸೌಲಭ್ಯ ಪ್ರಾಪ್ತವಾಗುತ್ತದೆ.
ಸದ್ಯ ಬ್ಯಾಂಕ್ ಉದ್ಯೋಗಿಗಳು ವಾರದಲ್ಲಿ ಭಾನುವಾರದ ರಜೆ ಹಾಗೂ ತಿಂಗಳಲ್ಲಿ ಎರಡು ಶನಿವಾರದ ರಜೆ ಸೌಲಭ್ಯ ಹೊಂದಿದ್ದಾರೆ. ಅಂದರೆ ತಿಂಗಳಲ್ಲಿ ಪ್ರತೀ ಭಾನುವಾರ ಹಾಗೂ 2ನೇ ಹಾಗೂ 4ನೇ ಶನಿವಾರ ರಜೆ ಪಡೆಯುತ್ತಿದ್ದಾರೆ. ಈಗ ಹೊಸ ಸೌಲಭ್ಯ ಜಾರಿಯಾದಲ್ಲಿ ಭಾನುವಾರದ ಜೊತೆಗೆ ಶನಿವಾರವೂ ರಜಾ ದಿನವಾಗಿ ಘೋಷಣೆ ಆಗಬಹುದು.
ಹೆಚ್ಚು ಹೊತ್ತು ಕೆಲಸ:
ವಾರದಲ್ಲಿ ಐದು ದಿನ ಕೆಲಸ ಮಾಡುವ ನಿಯಮ ಜಾರಿಗೆ ಬಂದಲ್ಲಿ ಬ್ಯಾಂಕ್ ಉದ್ಯೋಗಿಗಳು ಕೆಲಸದ ದಿನಗಳಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಬೇಕಾಗಬಹುದು. ವರದಿಗಳ ಪ್ರಕಾರ, ಕೆಲಸದ ದಿನದಲ್ಲಿ 40 ಅಥವಾ 50 ನಿಮಿಷಗಳಷ್ಟು ಹೆಚ್ಚಿಗೆ ಕಾಲ ನೌಕರರು ಕೆಲಸ ಮಾಡಬೇಕೆನ್ನುವ ನಿಯಮ ರೂಪಿಸಲಾಗುತ್ತಿದೆ.
ಇದನ್ನೂ ಓದಿ: ICICI Rates: ಐಸಿಐಸಿಐನ MCLR ದರ ಏರಿಕೆ; ಏನಿದರ ಪರಿಣಾಮ? ಬೇರೆ ಬ್ಯಾಂಕುಗಳಲ್ಲೆಷ್ಟಿದೆ ರೇಟು?
ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಈ ಪ್ರಸ್ತಾವ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ಮತ್ತು ಆರ್ಬಿಐನಿಂದ ಈ ಪ್ರಸ್ತಾವಕ್ಕೆ ಅನುಮೋದನೆ ದೊರೆಯಬೇಕು. ಬಳಿಕ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದ ಬಳಿಕ ಬ್ಯಾಂಕ್ ನೌಕರರಿಗೆ ವಾರದಲ್ಲಿ ಭಾನುವಾರ ಮತ್ತು ಶನಿವಾರ ಎರಡು ದಿನಗಳು ರಜಾದಿನವಾಗಿ ಸಿಗುತ್ತವೆ.
ಬ್ಯಾಂಕ್ ಉದ್ಯೋಗಿಗಳಿಗೆ ಸಾಮಾನ್ಯವಾಗಿ ಬಹಳಷ್ಟು ಇತರೆ ರಜೆಗಳೂ ಲಭ್ಯವಾಗುತ್ತವೆ. ಸಾರ್ವತ್ರಿಕ ರಜೆಗಳ ಜೊತೆಗೆ ಪ್ರಾದೇಶಿಕ ರಜೆಗಳೂ ಅವರಿಗೆ ಸಿಗುತ್ತವೆ. ಈ ಮಾರ್ಚ್ ತಿಂಗಳಲ್ಲಿ ವಾರದ ರಜೆಯೂ ಸೇರಿ ಬ್ಯಾಂಕ್ ನೌಕರರಿಗೆ 12 ರಜಾ ದಿನಗಳಿವೆ.