ನವದೆಹಲಿ: ಉದ್ಯೋಗ ಹೊರಗುತ್ತಿಗೆಯನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (AIBEA) ನಾಳೆ, ಅಂದರೆ ನವೆಂಬರ್ 19ರಂದು ದೇಶದಾದ್ಯಂತ ಮುಷ್ಕರಕ್ಕೆ (Bank strike) ಕರೆ ನೀಡಿದೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ (PSBs) ಕಾರ್ಯಾಚರಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಅಧಿಕಾರಿಗಳ ಮಟ್ಟದ ಸಿಬ್ಬಂದಿ ಮುಷ್ಕರದಲ್ಲಿ ಭಾಗಿಯಾಗುವುದಿಲ್ಲವಾದರೂ ನಗದು ಠೇವಣಿ ಇರಿಸುವಿಕೆ, ವಿತ್ಡ್ರಾ, ಚೆಕ್ ಕ್ಲಿಯರೆನ್ಸ್, ಎಟಿಎಂ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಬ್ಯಾಂಕ್ ಆಫ್ ಬರೋಡ, ಪಂಜಾಬ್ & ಸಿಂಧ್ ಬ್ಯಾಂಕ್ ಪ್ರಕಟಣೆಯನ್ನು ಹೊರಡಿಸುವ ಮೂಲಕ ಈಗಾಗೇ ಗ್ರಾಹಕರಿಗೆ ಸಂದೇಶ ಕಳುಹಿಸಿವೆ. ಬ್ಯಾಂಕ್ನ ಹಲವು ಸಿಬ್ಬಂದಿ ಮುಷ್ಕರದಲ್ಲಿ ಬಾಗಿಯಾಗುವ ಸಾಧ್ಯತೆ ಇರುವುದರಿಂದ ಸಾಮಾನ್ಯ ಕಾರ್ಯನಿರ್ವಹಣೆಗೆ ತೊಡಕಾಗಬಹುದು. ಹೀಗಾಗಿ ಬ್ಯಾಂಕಿಂಗ್ ವಹಿವಾಟುಗಳನ್ನು ವಾರಾಂತ್ಯಕ್ಕೆ ಬಾಕಿ ಇಡದೆ ಇಂದೇ ಮುಗಿಸುವಂತೆ ಈ ಬ್ಯಾಂಕ್ಗಳು ಗ್ರಾಹಕರಲ್ಲಿ ಮನವಿ ಮಾಡಿವೆ.
ಯಾಕಾಗಿ ಮುಷ್ಕರ?
ಅನೇಕ ಬ್ಯಾಂಕಿಂಗ್ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡಲಾಗುತ್ತಿದೆ. ಈ ಮೂಲಕ ಗ್ರಾಹಕರ ಖಾಸಗಿತನವನ್ನು ಹಾಗೂ ಹಣವನ್ನು ಅಪಾಯಕ್ಕೆ ಸಿಲುಕಿಸಲಾಗುತ್ತಿದೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿದ್ದಾರೆ. ಬ್ಯಾಂಕ್ ಆಫ್ ಮಹಾರಾಷ್ಟ್ರದಂಥ ಬ್ಯಾಂಕ್ಗಳು ವ್ಯಾಪಾರಿ ಒಕ್ಕೂಟದ ಹಕ್ಕುಗಳನ್ನು ನಿರಾಕರಿಸುತ್ತಿವೆ. ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಹಾಗೂ ಐಡಿಬಿಐ ಬ್ಯಾಂಕ್ಗಳು ಅನೇಕ ಬ್ಯಾಂಕಿಂಗ್ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡುತ್ತಿವೆ ಎಂದು ಅವರು ಹೇಳಿದ್ದಾರೆ. ಕೆಲವು ಬ್ಯಾಂಕ್ಗಳು ‘ಕೈಗಾರಿಕಾ ವಿವಾದ (ತಿದ್ದುಪಡಿ) ಕಾಯ್ದೆ’ಯನ್ನು ಉಲ್ಲಂಘಿಸುತ್ತಿವೆ. ಅಧಿಕಾರಿಗಳು ಮಧ್ಯಪ್ರವೇಶಿಸಿದರೂ ಆಡಳಿತ ಮಂಡಳಿ ಅವರ ಸಲಹೆಯನ್ನು ನಿರ್ಲಕ್ಷಿಸಿ, ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಬಲವಂತವಾಗಿ ನೌಕರರನ್ನು ವರ್ಗಾವಣೆ ಮಾಡಿದೆ ಎಂದೂ ಅವರು ಆರೋಪಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಉದ್ಯೋಗಿಗಳ ಮೇಲೆ ದಾಳಿಗಳು ಹೆಚ್ಚುತ್ತಿವೆ. ಇವುಗಳ ಹಿಂದೆ ಬಲವಾದ ಕಾರಣವಿದೆ. ಇದನ್ನು ನಾವು ಪ್ರತಿಭಟಿಸಬೇಕಿದೆ. ಒಟ್ಟಾರೆಯಾಗಿ ಈ ಉದ್ದೇಶಿತ ದಾಳಿಗಳನ್ನು ತಡೆಯಲು ಬ್ಯಾಂಕ್ ಉದ್ಯೋಗಿಗಳ ಸಂಘದ ಮಟ್ಟದಲ್ಲಿ ನಾವು ಪ್ರಯತ್ನಿಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ.
ಕಾರ್ಯನಿರ್ವಹಿಸಲಿವೆ ಖಾಸಗಿ ಬ್ಯಾಂಕ್ಗಳು
ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ಕರೆ ನೀಡಿರುವ ಮುಷ್ಕರದ ಬಿಸಿ ಖಾಸಗಿ ಬ್ಯಾಂಕ್ಗಳಿಗೆ ತಟ್ಟದು. ಖಾಸಗಿ ಬ್ಯಾಂಕ್ಗಳು ಎಂದಿನಂತಯೇ ಕಾರ್ಯಾಚರಿಸಲಿವೆ ಎಂದು ಮೂಲಗಳು ಹೇಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ