SBI credit card: ಕೆಲವು ವಹಿವಾಟುಗಳ ಪ್ರೊಸೆಸಿಂಗ್ ಶುಲ್ಕ ಹೆಚ್ಚಿಸಿದ ಎಸ್ಬಿಐ; ವಿವರ ಇಲ್ಲಿದೆ
SBI credit card Processing Fees; ಕ್ರೆಡಿಟ್ ಕಾರ್ಡ್ ಪ್ರೊಸೆಸಿಂಗ್ ಶುಲ್ಕ ಪರಿಷ್ಕರಣೆ ಸಂಬಂಧ ಎಸ್ಬಿಐ ವೆಬ್ಸೈಟ್ನಲ್ಲಿಯೂ ಮಾಹಿತಿ ನೀಡಲಾಗಿದ್ದು, ಗ್ರಾಹಕರಿಗೆ ಎಸ್ಎಂಎಸ್ ಸಂದೇಶ ಕಳುಹಿಸಲಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕ್ರೆಡಿಟ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಕೆಲವು ವಹಿವಾಟುಗಳಿಗೆ ಹೆಚ್ಚಿನ ಪ್ರೊಸೆಸಿಂಗ್ ಶುಲ್ಕ (processing fees) ತೆರಬೇಕಾಗಲಿದೆ. ವ್ಯಾಪಾರದ ಇಎಂಐ, ಬಾಡಿಗೆ ಪಾವತಿ ಸೇರಿದಂತೆ ಕೆಲವು ವಹಿವಾಟುಗಳ ಪ್ರೊಸೆಸಿಂಗ್ ಶುಲ್ಕ ಹೆಚ್ಚಳ ಮಾಡಿ ಬ್ಯಾಂಕ್ ಪ್ರಕಟಣೆ ಹೊರಡಿಸಿದ್ದು, ಪರಿಷ್ಕೃತ ಶುಲ್ಕ ನವೆಂಬರ್ 15ರಿಂದಲೇ ಅನ್ವಯವಾಗಲಿದೆ ಎಂದು ತಿಳಿಸಿದೆ. ವ್ಯಾಪಾರದ ಇಎಂಐ ವಹಿವಾಟುಗಳ ಪ್ರೊಸೆಸಿಂಗ್ ಶುಲ್ಕವನ್ನು 99 ರೂ.ನಿಂದ 199 ರೂ. ಗೆ ಹೆಚ್ಚಿಸಿದ್ದು, ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ. ಬಾಡಿಗೆ ಪಾವತಿ ವಹಿವಾಟಿಗೆ 99 ರೂ. ಪ್ರೊಸೆಸಿಂಗ್ ಶುಲ್ಕ ನಿಗದಿಪಡಿಸಲಾಗಿದ್ದು, ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಪ್ರೊಸೆಸಿಂಗ್ ಶುಲ್ಕ ಪರಿಷ್ಕರಣೆ ಸಂಬಂಧ ಎಸ್ಬಿಐ ವೆಬ್ಸೈಟ್ನಲ್ಲಿಯೂ ಮಾಹಿತಿ ನೀಡಲಾಗಿದ್ದು, ಗ್ರಾಹಕರಿಗೆ ಎಸ್ಎಂಎಸ್ ಸಂದೇಶ ಕಳುಹಿಸಲಾಗಿದೆ. ಇಷ್ಟೇ ಅಲ್ಲದೆ ರಿವಾರ್ಡ್ ಪಾಯಿಂಟ್ಗಳಿಗೆ ಸಂಬಂಧಿಸಿ ನೀಡಲಾಗುವ ಕೊಡುಗೆಗಳ ಬಗ್ಗೆಯೂ ಮಾಹಿತಿ ನೀಡಿದೆ.
ರಿವಾರ್ಡ್ ಪಾಯಿಂಟ್ಗೆ ಸಂಬಂಧಿಸಿ ಏನೇನು ಆಫರ್ಗಳಿವೆ?
ಸಿಂಪ್ಲಿ ಕ್ಲಿಕ್ ಅಡ್ವಾಂಟೇಜ್ ಎಸ್ಬಿಐ ಕಾರ್ಡ್ ಹೊಂದಿರುವವರು ಅಮೆಜಾನ್ ಡಾಟ್ ಇನ್ನಲ್ಲಿ ಮಾಡುವ ವೆಚ್ಚಗಳಿಗೆ 10X ರಿವಾರ್ಡ್ ಪಾಯಿಂಟ್ಗಳನ್ನು ನೀಡುವುದಾಗಿಯೂ ಎಸ್ಬಿಐ ಹೇಳಿದೆ. ಸದ್ಯ ನೀಡಲಾಗುತ್ತಿರುವ 5X ರಿವಾರ್ಡ್ ಪಾಯಿಂಟ್ ಅನ್ನು 2023ರ ಜನವರಿ 1ರಿಂದ ಪರಿಷ್ಕರಣೆ ಮಾಡಲಾಗುವುದು ಎಂದು ಎಸ್ಬಿಐ ಹೇಳಿದೆ. ಅಪೋಲೊ 24X7 ಆನ್ಲೈನ್ನಲ್ಲಿ, ಮುಬ್ಮೈಶೋ, ಈಜಿಡಿನ್ನರ್, ಲೆನ್ಸ್ಕಾರ್ಟ್, ನೆಟ್ಮೆಡ್ಸ್, ಕ್ಲಿಯರ್ಟ್ರಿಪ್ಗಳಲ್ಲಿ ಮಾಡುವ ಖರ್ಚುಗಳಿಗೆ 10X ರಿವಾರ್ಡ್ ಪಾಯಿಂಟ್ಗಳು ಮುಂದುವರಿಯಲಿವೆ. ನಿಯಮಗಳು ಮತ್ತು ಷರತ್ತುಗಳು ಅನಗ್ವಯವಾಗಲಿವೆ ಎಂದು ಎಸ್ಬಿಐ ತಿಳಿಸಿದೆ.
ಇತ್ತೀಚಗೆಷ್ಟೇ ಎಸ್ಬಿಐ ಬಡ್ಡಿ ದರದಲ್ಲಿಯೂ ಹೆಚ್ಚಳ ಮಾಡಿತ್ತು. ಸಾಲದ ಮೇಲಿನ ಬಡ್ಡಿ ದರ ಹಾಗೂ ಠೇವಣಿಗಳ ಬಡ್ಡಿ ದರವನ್ನೂ ಹೆಚ್ಚಿಸಲಾಗಿತ್ತು. ಇದೀಗ ಕ್ರೆಡಿಟ್ ಕಾರ್ಡ್ ವಹಿವಾಟುಗಳ ಪ್ರೊಸೆಸಿಂಗ್ ಶುಲ್ಕವನ್ನೂ ಹೆಚ್ಚಿಸಿದೆ. ಈ ನಿರ್ಧಾರ ಅನೇಕ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಕೆಲವು ದಿನಗಳ ಹಿಂದಷ್ಟೇ ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಪಾವತಿಸುವುದಕ್ಕೆ ಐಸಿಐಸಿಐ ಬ್ಯಾಂಕ್ ಶುಲ್ಕ ವಿಧಿಸುವುದಾಗಿ ತಿಳಿಸಿತ್ತು. ಬಾಡಿಗೆ ಪಾವತಿಗೆ ಶೇಕಡಾ 1ರಷ್ಟು ಶುಲ್ಕ ವಿಧಿಸುವುದಾಗಿ ಅದು ಗ್ರಾಹಕರಿಗೆ ತಿಳಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ