ನಿರ್ಮಲಾ ಸೀತಾರಾಮನ್
ನವದೆಹಲಿ, ಡಿಸೆಂಬರ್ 3: ಬ್ಯಾಂಕಿಂಗ್ ಕಾನೂನುಗಳಿಗೆ ತಿದ್ದುಪಡಿ ತರುವ ಮಸೂದೆ ರೂಪಿಸಲಾಗಿದ್ದು, ಈ ಹೊಸ ತಿದ್ದುಪಡಿ ಕಾನೂನುಗಳಿಂದ ಭಾರತದ ಬ್ಯಾಂಕಿಂಗ್ ಸೆಕ್ಟರ್ ಮತ್ತಷ್ಟು ಬಲಗೊಳ್ಳಲಿದೆ. ಹೂಡಿಕೆದಾರರ ಹಿತಾಸಕ್ತಿಯೂ ರಕ್ಷಿತವಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿರುವ ಅವರು, ಇದರಲ್ಲಿ ಒಟ್ಟು 19 ತಿದ್ದುಪಡಿ ತರಲಾಗಿರುವುದನ್ನು ತಿಳಿಸಿದ್ದಾರೆ.
1934ರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1949ರ ಬ್ಯಾಂಕಿಂಗ್ ರೆಗ್ಯುಲೇಶನ್ ಕಾಯ್ದೆ, 1955ರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1970ರ ಬ್ಯಾಂಕಿಂಗ್ ಕಂಪನೀಸ್ ಕಾಯ್ದೆ, 1980ರ ಬ್ಯಾಂಕಿಂಗ್ ಕಂಪನೀಸ್ ಕಾಯ್ದೆಗಳಲ್ಲಿ ಈ 19 ತಿದ್ದುಪಡಿಗಳನ್ನು ತರಲಾಗಿದೆ. ಕೆಲ ಪ್ರಮುಖ ತಿದ್ದುಪಡಿಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಇದನ್ನೂ ಓದಿ: 2024ರ ಏಪ್ರಿಲ್ನಿಂದ ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಬಂತು 29.79 ಬಿಲಿಯನ್ ಡಾಲರ್ ಎಫ್ಡಿಐ; ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?
ಬ್ಯಾಂಕಿಂಗ್ ಕಾನೂನುಗಳಲ್ಲಿನ ಕೆಲ ಪ್ರಸ್ತಾಪಿತ ತಿದ್ದುಪಡಿಗಳು…
- ಒಂದು ಬ್ಯಾಂಕ್ ಖಾತೆಗೆ ನಾಲ್ಕು ನಾಮಿನಿಗಳನ್ನು ಹೆಸರಿಸುವ ಅವಕಾಶ
- ಕ್ಲೇಮ್ ಆಗದೇ ಇರುವ ಡಿವಿಡೆಂಡ್, ಶೇರುಗಳು, ಮತ್ತು ಬಾಂಡ್ಗಳ ರಿಡಂಪ್ಷನ್ ಇತ್ಯಾದಿಯನ್ನು ಐಇಪಿಎಫ್ ಎನ್ನುವ ವಿಶೇಷ ಫಂಡ್ಗೆ ವರ್ಗಾವಣೆ ಆಗುತ್ತವೆ. ಅರ್ಹ ವಾರಸುದಾರರಿಗೆ ಇದನ್ನು ತಲುಪಿಸುವುದು ಸುಲಭವಾಗುತ್ತದೆ.
- ಬ್ಯಾಂಕುಗಳಲ್ಲಿನ ಆಡಳಿತ ಗುಣಮಟ್ಟವನ್ನು ಸುಧಾರಿಸಲಾಗುವುದು. ಸಹಕಾರಿ ಬ್ಯಾಂಕುಗಳಲ್ಲಿನ ನಿರ್ದೇಶಕರ ಅವಧಿಯನ್ನು ಹೆಚ್ಚಿಸಲಾಗುವುದು.
- ಬ್ಯಾಂಕ್ ನಿರ್ದೇಶಕರಿಗೆ ಸಂಬಂಧಿಸಿದ ‘ಸಬ್ಸ್ಟ್ಯಾನ್ಷಿಯಲ್ ಇಂಟರೆಸ್ಟ್’ ಅಥವಾ ಪ್ರಮುಖ ಹಿತಾಸಕ್ತಿ ಪದಕ್ಕೆ ಮರು ವ್ಯಾಖ್ಯಾನ ಮಾಡಲಾಗಿದೆ. ಈ ಮುಂಚೆ ಒಂದು ಬ್ಯಾಂಕ್ನಲ್ಲಿ ನಿರ್ದೇಶಕರ ಆಸ್ತಿ 5 ಲಕ್ಷ ರೂಗಿಂತ ಹೆಚ್ಚಿದ್ದರೆ ಸಬ್ಸ್ಟ್ಯಾನ್ಷಿಯಲ್ ಇಂಟರೆಸ್ಟ್ ಎಂದು ಪರಿಗಣಿಸಲಾಗುತ್ತಿತ್ತು. ಈಗ ತಿದ್ದುಪಡಿಯಲ್ಲಿ ಆ ಮಿತಿಯನ್ನು 2 ಕೋಟಿ ರೂಗೆ ಏರಿಸಲಾಗಿದೆ.
- ಬ್ಯಾಂಕಿಂಗ್ ರೆಗ್ಯುಲೇಶನ್ಸ್ ಕಾಯ್ದೆಯಲ್ಲಿ ಮಾಡಲಾಗಿರುವ ತಿದ್ದುಪಡಿಗಳು ಸಹಕಾರಿ ಬ್ಯಾಂಕುಗಳಿಗೆ ಅನ್ವಯ ಆಗುತ್ತದೆ. ಕೋ ಆಪರೇಟಿವ್ ಸೊಸೈಟಿಗಳಿಗೆ ಇದು ಅನ್ವಯ ಆಗಲ್ಲ.
- ಸಹಕಾರಿ ಬ್ಯಾಂಕುಗಳಲ್ಲಿನ ನಿರ್ದೇಶಕರ ಅವಧಿಯನ್ನು ಈಗಿರುವ 8 ವರ್ಷದಿಂದ 10 ವರ್ಷಕ್ಕೆ ಏರಿಸಲಾಗುವುದು.
- ಕೇಂದ್ರೀಯ ಸಹಕಾರಿ ಬ್ಯಾಂಕ್ವೊಂದರ ನಿರ್ದೇಶಕರು ರಾಜ್ಯದ ಸಹಕಾರಿ ಬ್ಯಾಂಕ್ನ ಮಂಡಳಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗಲಿದೆ.
- ಸರ್ಕಾರಿ ನಿಯೋಜಿತ ಆಡಿಟರ್ಗಳಿಗೆ ಎಷ್ಟು ಸಂಭಾವನೆ ನೀಡಬೇಕು ಎಂಬುದನ್ನು ನಿರ್ಧರಿಸಲು ಬ್ಯಾಂಕುಗಳು ಹೆಚ್ಚು ಸ್ವತಂತ್ರವಾಗಿರುತ್ತವೆ.
- ನಿಯಮಗಳ ಪಾಲನೆ ಸಂಬಂಧ ಆರ್ಬಿಐಗೆ ಪ್ರತೀ ಎರಡನೇ ಮತ್ತು ನಾಲ್ಕನೇ ಶುಕ್ರವಾರ ವರದಿ ಸಲ್ಲಿಸಬೇಕಿತ್ತು. ಅದನ್ನು ತಿಂಗಳ 15ನೇ ತಾರೀಖು ಮತ್ತು ಕೊನೆಯ ತಾರೀಖಿಗೆ ಬದಲಾಯಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ