ನವದೆಹಲಿ, ಆಗಸ್ಟ್ 18: ಬ್ಯಾಂಕುಗಳಲ್ಲಿ ಪಡೆದ ಸಾಲಕ್ಕೆ ಕಂತುಗಳನ್ನು ಸರಿಯಾದ ಸಮಯಕ್ಕೆ ಕಟ್ಟದೇ ಹೋದಾಗ ಪೀನಲ್ ಇಂಟರೆಸ್ಟ್ (Penal Interest) ಹೇರುತ್ತವೆ. ಇದು ಸಾಮಾನ್ಯವಾಗಿ ಹೆಚ್ಚಿನ ಮೊತ್ತವಾಗಿರುತ್ತದೆ. ವರ್ಷಕ್ಕೆ ಶೇ 15ರಿಂದ ಶೇ. 36ರವರೆಗೂ ಬಡ್ಡಿ ವಿಧಿಸಲಾಗುತ್ತದೆ. ಬ್ಯಾಂಕುಗಳಿಗೆ ಇದೇ ಒಂದು ಆದಾಯ ಮೂಲವೂ ಆಗಿಹೋಗಿದೆ. ಈಗ ಇಷ್ಟು ದುಬಾರಿ ದಂಡ ವಿಧಿಸದಿರುವಂತೆ ಆರ್ಬಿಐ ನಿಯಮ ರೂಪಿಸಿದೆ. ಆರ್ಬಿಐ ನಿಯಮಾವಳಿ ಪ್ರಕಾರ ಬ್ಯಾಂಕುಗಳ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFC) ಪೀನಲ್ ಇಂಟರೆಸ್ಟ್ ವಿಧಿಸುವ ಬದಲು ನ್ಯಾಯಯುತ ಎನಿಸುವ ದಂಡ ಶುಲ್ಕ ಮಾತ್ರ ಗ್ರಾಹಕರಿಂದ ಪಡೆಯಬೇಕು ಎಂದು ಹೇಳಲಾಗಿದೆ. 2024ರ ಜನವರಿ 1ರಿಂದ ಈ ನಿಯಮ ಜಾರಿಗೆ ಬರುತ್ತದೆ.
‘ನ್ಯಾಯಯುತ ಸಾಲ ನೀಡಿಕೆ ಮತ್ತು ದಂಡ’ ಅಡಿಯಲ್ಲಿ ಆರ್ಬಿಐ ಅಧಿಸೂಚನೆ ಹೊರಡಿಸಿದ್ದು, ‘ಶಿಸ್ತು ಮೂಡಿಸುವ ಉದ್ದೇಶದಿಂದ ಪೀನಲ್ ಇಂಟರೆಸ್ಟ್ ಅಥವಾ ದಂಡ ಶುಲ್ಕಗಳನ್ನು ವಿಧಿಸಲಾಗುತ್ತದೆ. ಇದನ್ನು ಆದಾಯಕ್ಕೆ ಬಳಸಬಾರದು. ಸಾಲ ನೀಡುವಾಗ ನಿಗದಿಯಾಗಿದ್ದ ಬಡ್ಡಿದರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ಪಡೆಯಬಾರದು. ಆದರೆ, ಕೆಲವು ಬ್ಯಾಂಕಿಂಗ್ ಸಂಸ್ಥೆಗಳು ಹೆಚ್ಚಿನ ಮೊತ್ತದ ಪೀನಲ್ ಇಂಟರೆಸ್ಟ್ ವಿಧಿಸಿ ಗ್ರಾಹಕರಿಗೆ ತೊಂದರೆ ನೀಡಿರುವುದು ಕಂಡುಬಂದಿದೆ’ ಎಂದು ತಿಳಿಸಿದೆ.
ಇದನ್ನೂ ಓದಿ: SBI ಅಮೃತ್ ಕಳಶ್ ಎಫ್ಡಿ ಸ್ಕೀಮ್; ಡೆಡ್ಲೈನ್ ಮತ್ತೆ ವಿಸ್ತರಣೆ, ಡಿ. 31ರವರೆಗೂ ಅವಕಾಶ
ಆದರೆ, ಇದು ಕ್ರೆಡಿಟ್ ಕಾರ್ಡ್ಗಳ ಸಾಲಕ್ಕೆ ಅನ್ವಯಿಸುವುದಿಲ್ಲ. ಅಂದರೆ ಕ್ರೆಡಿಟ್ ಕಾರ್ಡ್ನಲ್ಲಿ ಬಿಲ್ ಕಟ್ಟದೇ ಉಳಿದಿರುವ ಬಾಕಿ ಮೊತ್ತಕ್ಕೆ ಶೇ. 36ರಷ್ಟು ವಾರ್ಷಿಕ ಬಡ್ಡಿ ವಿಧಿಸುವುದು ಮುಂದುವರಿಯುತ್ತದೆ. ಆರ್ಬಿಐ ಅಧಿಸೂಚನೆಯಲ್ಲಿ ಒಳಗೊಂಡಿರುವುದು ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳು ನೀಡುವ ಸಾಲದ ವಿಚಾರವಾಗಿ. ಹಾಗೆಯೇ, ಕ್ರೆಡಿಟ್ ಕಾರ್ಡ್ ಮಾತ್ರವಲ್ಲದೇ ಟ್ರೇಡ್ ಕ್ರೆಡಿಟ್ಗಳಿಗೂ ಇದು ಅನ್ವಯ ಆಗುವುದಿಲ್ಲ.
ವಿಳಂಬ ಪಾವತಿಗೆ ವಿಧಿಸುವ ಅಧಿಕ ದರದ ದಂಡ ಶುಲ್ಕವು ಬ್ಯಾಂಕುಗಳ ಬಡ್ಡಿ ಆದಾಯಕ್ಕೆ ಸೇರಿಕೊಳ್ಳುತ್ತದೆ. ಬ್ಯಾಂಕುಗಳ ಆದಾಯ ಹೆಚ್ಚಳಕ್ಕೂ ಕಾರಣವಾಗುತ್ತದೆ. ಸಾಮಾನ್ಯವಾಗಿ ನಿಗದಿಗ ಬಡ್ಡಿದರಕ್ಕಿಂತ ಶೇ. 2ರಷ್ಟು ಹೆಚ್ಚುವರಿ ಬಡ್ಡಿಯನ್ನು ಕೆಲ ಬ್ಯಾಂಕುಗಳು ದಂಡವಾಗಿ ವಸೂಲಿ ಮಾಡುತ್ತವೆ.
ಇದನ್ನೂ ಓದಿ: ಗಂಡನ ಸ್ವಂತ ಸಂಪಾದನೆಯ ಆಸ್ತಿ ಮೇಲೆ ಹೆಂಡತಿಗೆ ಎಷ್ಟು ಹಕ್ಕು? ಈ ಕಾನೂನುಗಳು ಗೊತ್ತಿರಲಿ
ಈಗ ಆರ್ಬಿಐ ಮಾಡಿರುವ ಹೊಸ ನಿಯಮಗಳಿಂದ ಬ್ಯಾಂಕುಗಳ ಆದಾಯವನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದು. ಆದರೆ, ಗ್ರಾಹಕರ ಮೇಲಿನ ಒತ್ತಡ ಕಡಿಮೆ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ