ಬೆಂಗಳೂರು: ಬೆಂಗಳೂರಿನಿಂದ ಚೆನ್ನೈ ನಡುವಿನ ರಸ್ತೆ ಮತ್ತು ರೈಲು ಮಾರ್ಗದಲ್ಲಿ ಸಾಕಷ್ಟು ಮಂದಿ ನಿತ್ಯ ಸಂಚರಿಸುತ್ತಾರೆ. ರಸ್ತೆ ಮಾರ್ಗ ಸಾಕಷ್ಟು ಉತ್ತಮಗೊಂಡಿದೆ. ರೈಲು ಸಂಚಾರವೂ ವೇಗಗೊಂಡಿದೆ. 350 ಕಿಮೀ ದೂರ ಇರುವ ಬೆಂಗಳೂರು ಚೆನ್ನೈ ರೈಲು ಮಾರ್ಗದಲ್ಲಿ (Bengaluru to Chennai Train) ನಾಲ್ಕೂವರೆಯಿಂದ ಆರೂವರೆ ಗಂಟೆಯಲ್ಲಿ ಪ್ರಯಾಣ ಈಗ ಸಾಧ್ಯವಾಗಿದೆ. ಈಗ ಬೆಂಗಳೂರು ಚೆನ್ನೈ ಮಧ್ಯೆ ಸೆಮಿ ಹೈಸ್ಪೀಡ್ ಬ್ರಾಡ್ಗೇಜ್ ಲೈನ್ ನಿರ್ಮಿಸುವ ಯೋಜನೆಯನ್ನು ಸದರ್ನ್ ರೈಲ್ವೆ ಹಮ್ಮಿಕೊಂಡಿದೆ. ಈ ಯೋಜನೆಗೆ ಸ್ಥಳ ಸರ್ವೇಕ್ಷಣೆ (FLS- Final Location Survey) ಮಾಡಲು ಟೆಂಡರ್ ಕರೆಯಲಾಗಿದೆ. ಜಮೀನು ಸ್ವಾಧೀನ ಇತ್ಯಾದಿ ಎಲ್ಲವೂ ಯಶಸ್ವಿಯಾಗಿ ನಡೆದಲ್ಲಿ ಎರಡೂ ನಗರಗಳ ನಡುವೆ ಪ್ರಯಾಣ ಸಮಯ ಬಹಳಷ್ಟು ಕಡಿಮೆ ಆಗಲಿದೆ. ಈಗಿರುವ ವಂದೇ ಭಾರತ್ ರೈಲು ಈ ಸೆಮಿ ಹೈಸ್ಪೀಡ್ ಬ್ರಾಡ್ಗೇಜ್ ಟ್ರ್ಯಾಕ್ನಲ್ಲಿ ಸಂಚರಿಸಿದರೆ ಕೇವಲ 2 ಗಂಟೆಯಲ್ಲಿ ತಲುಪಬಹುದು.
ಬೆಂಗಳೂರಿನ ಬಯ್ಯಪ್ಪನಹಳ್ಳಿಯಿಂದ ಹಿಡಿದು ಚೆನ್ನೈ ಸೆಂಟ್ರಲ್ವರೆಗೆ ಡ್ರೋನ್ ಮೂಲಕ ಜಮೀನು ಸರ್ವೇಕ್ಷಣೆ ನಡೆಸಬೇಕು. ಟ್ರಾಫಿಕ್ ಸ್ಟಡಿ, ಪ್ರಾಜೆಕ್ಟ್ ಪ್ಲಾನ್, ಎಸ್ಟಿಮೇಟ್ ಎಲ್ಲವನ್ನೂ ಮಾಡಿ ಡಿಪಿಆರ್ ಸಲ್ಲಿಸಬೇಕು. ಈ ಕಾರ್ಯಕ್ಕಾಗಿ ರೈಲ್ವೆ ಇಲಾಖೆ 8.3 ಕೋಟಿ ಮೀಸಲಿಟ್ಟಿದೆ. ಟೆಂಡರ್ ಪಡೆದವರು 3 ತಿಂಗಳಲ್ಲಿ ಸರ್ವೇಕ್ಷಣೆ ಸೇರಿ ಡಿಪಿಆರ್ ಸಲ್ಲಿಸಬೇಕು.
ಈಗ ಬೆಂಗಳೂರು ಮತ್ತು ಚೆನ್ನೈ ನಡುವೆ ಇರುವ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲುಗಳೂ ಸಂಚರಿಸುತ್ತಿವೆ. ಇವು 180 ಕಿಮೀ ವೇಗದಲ್ಲಿ ಸಾಗಬಲ್ಲವಾದರೂ ರೈಲ್ ಟ್ರ್ಯಾಕ್ ಹಳೆಯದ್ದೇ ಆದ್ದರಿಂದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು 81 ಕಿಮೀ ವೇಗಕ್ಕೆ ಸೀಮಿತಗೊಂಡಿದೆ. ಇದರಿಂದ 350 ಕಿಮೀ ದೂರ 4 ಗಂಟೆ 25 ನಿಮಿಷ ಆಗುತ್ತದೆ. ಬೇರೆ ಎಕ್ಸ್ಪ್ರೆಸ್ ಟ್ರೈನುಗಳು 6ರಿಂದ 7 ಗಂಟೆ ತೆಗೆದುಕೊಳ್ಳುತ್ತವೆ.
ಈಗಿರುವ ಟ್ರ್ಯಾಕ್ಗಳನ್ನು ಅಪ್ಗ್ರೇಡ್ ಮಾಡುವ ಪ್ರಸ್ತಾವಗಳೂ ಇವೆ. ಚೀನಾ, ಜರ್ಮನಿಯ ಕಂಪನಿಗಳು ಪ್ರೊಪೋಸಲ್ ನೀಡಿವೆಯಾದರೂ ರೈಲ್ವೆ ಇಲಾಖೆಯಿಂದ ಇನ್ನೂ ನಿರ್ಧಾರವಾಗಿಲ್ಲ. ಈ ಟ್ರ್ಯಾಕ್ ಅಪ್ಗ್ರೇಡ್ ಆದಲ್ಲಿ 160 ಕಿಮೀ ವೇಗದಲ್ಲಿ ರೈಲುಗಳು ಸಾಗಲು ಸಾಧ್ಯವಾಗಬಹುದು.
ಹೊಸ ಸೆಮಿ ಹೈಸ್ಪೀಡ್ ಬ್ರಾಡ್ಗೇಜ್ ರೈಲು ಮಾರ್ಗವು ಈಗಿರುವ ಟ್ರ್ಯಾಕ್ನ ಪಕ್ಕದಲ್ಲೇ ನಿರ್ಮಾಣ ಆಗುತ್ತದಾ ಎಂಬುದು ಗೊತ್ತಿಲ್ಲ. ಇದು ಗಂಟೆಗೆ 220 ಕಿಮೀ ವೇಗದಲ್ಲಿ ಸಾಗಲು ಅನುವು ಮಾಡಿಕೊಡುತ್ತದೆ. 200 ಕಿಮೀ ಆಪರೇಟಿಂಗ್ ಸ್ಪೀಡ್ಗೆ ಇದು ನೆರವು ನೀಡುತ್ತದೆ. ಅಂದರೆ ಒಂದು ರೈಲು ಈ ಟ್ರ್ಯಾಕ್ನಲ್ಲಿ 200 ಕಿಮೀ ಸ್ಪೀಡ್ನಲ್ಲಿ ಸಾಗಬಹುದು. ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಗಂಟೆಗೆ 180 ಕಿಮೀ ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿರುವುದರಿಂದ ಬೆಂಗಳೂರು ಮತ್ತು ಚೆನ್ನೈ ನಡುವಿನ ರೈಲು ಪ್ರಯಾಣ ಕೇವಲ 2 ಗಂಟೆಗೆ ಮುಗಿದುಹೋಗುತ್ತದೆ. ಅಂದರೆ ಮೆಜೆಸ್ಟಿಕ್ನಿಂದ ಹೊಸೂರಿಗೆ ಬಸ್ಸಿನಲ್ಲಿ ಹೋಗಲು ತಗಲುವ ಸಮಯಕ್ಕಿಂತ ಬೇಗನೇ ಚೆನ್ನೈಗೆ ಆ ರೈಲಿನಲ್ಲಿ ಹೋಗಬಹುದು ಬಿಡಿ…!
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ