Airbus Contract: ಏರ್​ಬಸ್​ನ ಎ220 ವಿಮಾನಗಳಿಗೆ ಬಾಗಿಲು ತಯಾರಿಕೆಯ ಗುತ್ತಿಗೆ ಪಡೆದ ಬೆಂಗಳೂರಿನ ಕಂಪನಿ

|

Updated on: Feb 09, 2024 | 12:52 PM

Bengaluru's Dynamatic Gets Airbus Contract To Manufacture Doors: ಏರ್​ಬಸ್ ತನ್ನ ಎ220 ವಿಮಾನಗಳಿಗೆ ಬಾಗಿಲು ತಯಾರಿಸುವ ಗುತ್ತಿಗೆಯನ್ನು ಡೈನಮ್ಯಾಟಿಕ್ ಟೆಕ್ನಾಲಜೀಸ್​ಗೆ ಕೊಟ್ಟಿದೆ. ಬೋಯಿಂಗ್ ಮತ್ತು ಏರ್​ಬಸ್ ವಿಶ್ವದ ಅತಿದೊಡ್ಡ ಏರ್​ಕ್ರಾಫ್ಟ್ ತಯಾರಕ ಸಂಸ್ಥೆಗಳೆನಿಸಿವೆ. ಡೈನಮ್ಯಾಟಿಕ್ ಟೆಕ್ನಾಲಜೀಸ್ ಬೆಂಗಳೂರು ಮೂಲದ್ದಾಗಿದ್ದು, ಏರ್​ಬಸ್ ಮತ್ತು ಬೋಯಿಂಗ್​ನಿಂದ ಈ ಹಿಂದೆಯೂ ಗುತ್ತಿಗೆಗಳನ್ನು ಪಡೆದಿದೆ.

Airbus Contract: ಏರ್​ಬಸ್​ನ ಎ220 ವಿಮಾನಗಳಿಗೆ ಬಾಗಿಲು ತಯಾರಿಕೆಯ ಗುತ್ತಿಗೆ ಪಡೆದ ಬೆಂಗಳೂರಿನ ಕಂಪನಿ
ಏರ್​ಬಸ್
Follow us on

ನವದೆಹಲಿ, ಫೆಬ್ರುವರಿ 9: ವಿಶ್ವದ ಅತಿದೊಡ್ಡ ವಿಮಾನ ತಯಾರಕ ಸಂಸ್ಥೆ ಏರ್​ಬಸ್ ತನ್ನ ಸಣ್ಣ ಗಾತ್ರದ ಎ220 ವಿಮಾನಗಳಿಗೆ ಬಾಗಿಲುಗಳನ್ನು (Airbus A220 Plane Doors Manufacturing) ತಯಾರಿಸುವ ಗುತ್ತಿಗೆಯನ್ನು ಬೆಂಗಳೂರು ಮೂಲದ ಡೈನಾಮ್ಯಾಟಿಕ್ ಟೆಕ್ನಾಲಜೀಸ್​ಗೆ (Dynamatic Technologies) ನೀಡಿದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಈ ಮಾಹಿತಿ ನೀಡಿದ್ದು, ಭಾರತದ ಏರೋಸ್ಪೇಸ್ ಉತ್ಪಾದನಾ ಕಂಪನಿಯೊಂದು ಪಡೆದ ಅತಿದೊಡ್ಡ ರಫ್ತು ಗುತ್ತಿಗೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಆದರೆ ಎಷ್ಟು ಮೊತ್ತಕ್ಕೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದು ಗೊತ್ತಾಗಿಲ್ಲ. ಏರ್​ಬಸ್​ನ ಎ220 ವಿಮಾನಗಳ ಎಲ್ಲಾ ಬಾಗಿಲುಗಳನ್ನೂ ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಸಂಸ್ಥೆಯೇ ತಯಾರಿಸಿಕೊಡಲಿದೆ.

ಯೂರೋಪ್​ನ ಏರ್​ಬಸ್ ಸಂಸ್ಥೆ ಮೇಕ್ ಇನ್ ಇಂಡಿಯಾ ನೀತಿಗೆ ಬದ್ಧವಾಗಲು ಆಸಕ್ತಿ ತೋರಿದೆ. ಭಾರತದಿಂದ ಅಮದು ಮಾಡಿಕೊಳ್ಳಲಾಗುವ ತನ್ನ ಬಿಡಿಭಾಗಗಳು ಮತ್ತು ಸೇವೆಗಳ ಮೊತ್ತವನ್ನು ಮುಂದಿನ ಕೆಲ ವರ್ಷಗಳಲ್ಲಿ 1.5 ಬಿಲಿಯನ್ ಡಾಲರ್​ಗೆ ಹೆಚ್ಚಿಸಲು ಯೋಜಿಸಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಡೈನಾಮ್ಯಾಟಿಕ್ ಟೆಕ್ನಾಲಜೀಸ್​ಗೆ ವಿಮಾನ ಬಾಗಿಲುಗಳ ತಯಾರಿಕೆಯ ಗುತ್ತಿಗೆ ನೀಡಿರುವುದೂ ಒಂದು ಪ್ರಮುಖ ಹೆಜ್ಜೆಯಾಗಿದೆ.

ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಸಂಸ್ಥೆ ಎ220 ವಿಮಾನಗಳಿಗೆ ಮೊದಲ ಬಾಗಿಲನ್ನು ಇನ್ನೊಂದು ವರ್ಷದಲ್ಲಿ, ಅಂದರೆ 2025ರ ಆರಂಭದಲ್ಲಿ ಸರಬರಾಜು ಮಾಡುವ ನಿರೀಕ್ಷೆ ಇದೆ. ಈ ಒಂದು ಸಣ್ಣ ಎ220 ವಿಮಾನದಲ್ಲಿ 100-150 ಸೀಟುಗಳಿರುತ್ತವೆ. ಸುಮಾರು ಎಂಟು ಡೋರ್​ಗಳಿರುತ್ತವೆ.

ಇದನ್ನೂ ಓದಿ: ಸೂರ್ಯೋದಯ್ ಸ್ಕೀಮ್: ಮನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ತರಲು ಎಷ್ಟು ವೆಚ್ಚವಾಗುತ್ತೆ? ಇಲ್ಲಿದೆ ಡೀಟೇಲ್ಸ್

ನೆದರ್​ಲ್ಯಾಂಡ್ಸ್​ನಲ್ಲಿ ಪ್ರಧಾನ ಕಚೇರಿ ಇರುವ, ಹಾಗೂ ಫ್ರಾನ್ಸ್​ನಲ್ಲಿ ಪ್ರಮುಖ ಕಾರ್ಯಾಚರಣೆ ಕಚೇರಿ ಹೊಂದಿರುವ ಏರ್​ಬಸ್ ವಿಶ್ವದ ಅತಿದೊಡ್ಡ ವಿಮಾನ ತಯಾರಕ ಸಂಸ್ಥೆ. ಅಮೆರಿಕದ ಬೋಯಿಂಗ್ ಕೂಡ ಏರ್​ಬಸ್​ನಷ್ಟೇ ಬೃಹತ್ತಾದುದು. ವಿಶ್ವದ ಏರೋಸ್ಪೇಸ್ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಇರುವ ಪ್ರಮುಖ ಕಂಪನಿಗಳು ಇವೆರಡೆಯೇ.

ಡೈನಮ್ಯಾಟಿಕ್ ಹೊಸ ಸಂಸ್ಥೆಯಲ್ಲ…

ಬೆಂಗಳೂರಿನ ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಈ ಕ್ಷೇತ್ರಕ್ಕೆ ಹೊಸಬನೇನಲ್ಲ. ಸಾಕಷ್ಟು ವರ್ಷಗಳಿಂದ ಏರೋಸ್ಪೇಸ್ ಕ್ಷೇತ್ರದ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ತೊಡಗಿಸಿಕೊಂಡಿದೆ. ಏರ್​ಬಸ್ ಜೊತೆಗಿನ ನಂಟೂ ಅದಕ್ಕೆ ಹೊಸದಲ್ಲ. ಇವೇ ಏರ್​ಬಸ್ ಎ220 ವಿಮಾನಗಳಿಗೆ ಕಾಕ್​ಪಿಟ್ ಎಸ್ಕೇಪ್ ಹ್ಯಾಚ್ ಡೋರ್ ಅನ್ನೂ ಈ ಕಂಪನಿ ತಯಾರಿಸುತ್ತದೆ. ಅಷ್ಟೇ ಅಲ್ಲ, ಏರ್​ಬಸ್ ಎ330 ಮತ್ತು ಎ320 ವಿಮಾನಗಳಿಗೆ ಫ್ಲ್ಯಾಪ್ ಟ್ರ್ಯಾಕ್ ಬೀಮ್ ತಯಾರಿಸಿಕೊಡುತ್ತದೆ.

ಇದನ್ನೂ ಓದಿ: ಟಿವಿ ಚಾನಲ್​ನಲ್ಲಿ ಬರೋ ಬಿಸಿನೆಸ್ ತಜ್ಞರಿಗೆ ದಂಡ ಕಕ್ಕಿಸಿದ ಸೆಬಿ; ಒಳಗೊಳಗೆ ನಡೆದಿರುತ್ತೆ ಡೀಲಿಂಗ್, ಹುಷಾರ್

ಏರ್​ಬಸ್ ಜೊತೆಗೆ ಮಾತ್ರವಲ್ಲ ಬೋಯಿಂಗ್ ಕಂಪನಿ ಜೊತೆಗೂ ಡೈನಮ್ಯಾಟಿಕ್ ಟೆಕ್ನಾಲಜೀಸ್ ಗುತ್ತಿಗೆ ಹೊಂದಿದೆ. ಬೋಯಿಂಗ್​ನ ಕೆಲ ವಿಮಾನಗಳು ಹಾಗೂ ಹೆಲಿಕಾಪ್ಟರುಗಳಿಗೆ ಕೆಲ ಬಿಡಿಭಾಗಗಳನ್ನು ಬೆಂಗಳೂರಿನ ಈ ಸಂಸ್ಥೆ ತಯಾರಿಸಿಕೊಡುತ್ತದೆ.

ಹೈಡ್ರಾಲಿಕ್ ಪಂಪ್​ನಿಂದ ಏರೋಸ್ಪೇಸ್​ವರೆಗೆ…

ಉದಯಂತ್ ಮಲ್ಹೋತ್ರಾ ಸಿಇಒ ಆಗಿರುವ ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಸ್ಥಾಪನೆಯಾಗಿದ್ದು 1973ರಲ್ಲಿ. ಹೈಡ್ರಾಲಿಕ್ ಪಂಪ್​ಗಳನ್ನು ಆರಂಭದಲ್ಲಿ ತಯಾರಿಸುತ್ತಿದ್ದ ಇದು ತೊಂಬತ್ತರ ದಶಕದಲ್ಲಿ ಏರೋಸ್ಪೇಸ್ ಶ್ರೇಣಿಯ ಭಾಗಗಳನ್ನು ತಯಾರಿಸಲು ಆರಂಭಿಸಿತು. ಎಚ್​ಎಎಲ್ ಜೊತೆಗೂ ಅದು ಸಹಭಾಗಿತ್ವದಲ್ಲಿ ಜೆಟ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ