Dabba Trading: ‘ಡಬ್ಬಾ’ ಟ್ರೇಡರ್ ಗಾಳಕ್ಕೆ ಸಿಕ್ಕಿಬಿದ್ದೀರಿ ಜೋಕೆ ಎಂದ ಎನ್​ಎಸ್​ಇ; ಹಣ ಗಳಿಸುವುದಿರಲಿ, ಇದ್ದ ಹಣವೂ ಹೋದೀತು; ಯಾರಿದು ಡಬ್ಬಾ ಟ್ರೇಡರ್?

|

Updated on: Apr 11, 2023 | 3:19 PM

Illegal Stock Trading Network: ಷೇರು ವಹಿವಾಟು ಮೂಲಕ ತಮ್ಮ ಹಣಕ್ಕೆ ಭಾರೀ ಲಾಭ ಕೊಡಿಸುವುದಾಗಿ ಪ್ರಲೋಬನೆಯೊಡ್ಡಿ ಜನರನ್ನು ಈ ಡಬ್ಬಾ ಟ್ರೇಡಿಂಗ್​ಗೆ ಆಕರ್ಷಿಸಲಾಗುತ್ತದೆ. ಆದರೆ, ಇವು ಅಕ್ರಮ ವ್ಯವಹಾರಗಳಾಗಿದ್ದು, ಜನರು ದುಡ್ಡು ಕಳೆದುಕೊಳ್ಳುವ ಸಾಧ್ಯತೆಯೆ ಹೆಚ್ಚು.

Dabba Trading: ‘ಡಬ್ಬಾ’ ಟ್ರೇಡರ್ ಗಾಳಕ್ಕೆ ಸಿಕ್ಕಿಬಿದ್ದೀರಿ ಜೋಕೆ ಎಂದ ಎನ್​ಎಸ್​ಇ; ಹಣ ಗಳಿಸುವುದಿರಲಿ, ಇದ್ದ ಹಣವೂ ಹೋದೀತು; ಯಾರಿದು ಡಬ್ಬಾ ಟ್ರೇಡರ್?
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕ್ಷಿಪ್ರ ಗತಿಯಲ್ಲಿ ಹಣ ಮಾಡಬಯಸುವವರು ಷೇರು ಮಾರುಕಟ್ಟೆಗಳಲ್ಲಿ (Stock Markets) ಹೂಡಿಕೆ ಮಾಡುವುದುಂಟು. ಈ ಮಧ್ಯೆ ಷೇರುಗಳ ಮೇಲೆ ಹೂಡಿಕೆ ಮಾಡಲು ಅಸಕ್ತಿ ಹೊಂದಿರುವ ವ್ಯಕ್ತಿಗಳನ್ನು ಗಾಳಕ್ಕೆ ಬೀಳಿಸಿಕೊಳ್ಳಲು ಡಬ್ಬಾ ಟ್ರೇಡರ್​ಗಳು (Dabba Traders) ಹೊಂಚುಹಾಕುತ್ತಿರುತ್ತಾರೆ. ಷೇರು ವಹಿವಾಟು ಮೂಲಕ ತಮ್ಮ ಹಣಕ್ಕೆ ಭಾರೀ ಲಾಭ ಕೊಡಿಸುವುದಾಗಿ ಪ್ರಲೋಬನೆಯೊಡ್ಡಿ ಜನರನ್ನು ಈ ಡಬ್ಬಾ ಟ್ರೇಡಿಂಗ್​ಗೆ ಆಕರ್ಷಿಸಲಾಗುತ್ತದೆ. ಆದರೆ, ಇವು ಅಕ್ರಮ ವ್ಯವಹಾರಗಳಾಗಿದ್ದು, ಜನರು ದುಡ್ಡು ಕಳೆದುಕೊಳ್ಳುವ ಸಾಧ್ಯತೆಯೆ ಹೆಚ್ಚು. ಸೆಬಿಯಿಂದ ನೊಂದಾಯಿತವಾಗಿಲ್ಲದ ಈ ಡಬ್ಬಾ ಟ್ರೇಡರ್​ಗಳು ಅಧಿಕೃತ ಷೇರು ಮಾರುಕಟ್ಟೆಗಳಿಂದ ಹೊರಗೆ ಷೇರು ವಹಿವಾಟು ನಡೆಸುತ್ತಾರೆ. ಅದಕ್ಕೆಂದೆ ಅನಧಿಕತ ಡಬ್ಬಾ ಟ್ರೇಡಿಂಗ್ (Dabba trading platforms) ಪ್ಲಾಟ್​ಫಾರ್ಮ್​ಗಳಿವೆ. ಇಂತ ಡಬ್ಬಾ ಟ್ರೇಡರ್​ಗಳ ಗಾಳಕ್ಕೆ ಬೀಳದಿರಿ ಎಂದು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಸಂಸ್ಥೆ (NSE- National Stock Exchange) ಜನರನ್ನು ಎಚ್ಚರಿಸಿದೆ.

ಶ್ರೀ ಪಾರಸನಾಥ್ ಕಮಾಡಿಟಿ ಪ್ರೈ ಲಿ, ಶ್ರೀ ಪಾರಸನಾಥ್ ಬುಲಿಯನ್ ಪ್ರೈ ಲಿ, ಫಾರಿ ಟೇಲ್ ಟ್ರೇಡಿಂಗ್ ಪ್ರೈ ಲಿ ಮತ್ತು ಭರತ್ ಕುಮಾರ್ (ಟ್ರೇಡ್ ವಿತ್ ಟ್ರಸ್ಟ್) ಎಂಬುವವರು ಅಕ್ರಮ ಡಬ್ಬಾ ಟ್ರೇಡಿಂಗ್ ಪ್ಲಾಟ್​ಫಾರ್ಮ್ ಸೇವೆಯನ್ನು ಒದಗಿಸುತ್ತಿರುವುದು ಎನ್​ಎಸ್​ಇ ಗಮನಕ್ಕೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ಈ ಸಂಬಂದ ಪ್ರಕರಣ ಕೂಡ ದಾಖಲಾಗಿ ತನಿಖೆ ಆಗುತ್ತಿದೆ. ಸೆಬಿ ಕೂಡ ಡಬ್ಬಾ ಟ್ರೇಡಿಂಗ್ ಜಾಲಗಳ ಶೋಧ ನಡೆಸುತ್ತಿದ್ದು, ಅಪರಾಧಿಗಳು ಸಿಕ್ಕಿಬಿದ್ದರೆ ಜೈಲುವಾಸ ಮತ್ತು ಭಾರೀ ಮೊತ್ತದ ದಂಡದ ಶಿಕ್ಷೆ ಕಾದಿರುತ್ತದೆ.

ಇದನ್ನೂ ಓದಿ: Sugar Price: ಪೆಟ್ರೋಲ್, ಮಳೆ ಎಫೆಕ್ಟ್; ಗಗನಕ್ಕೇರುತ್ತಿದೆ ಸಕ್ಕರೆ ಬೆಲೆ; ಹಣದುಬ್ಬರ, ಬಡ್ಡಿ ದರ ಎಲ್ಲಕ್ಕೂ ಸಕ್ಕರೆ ಕಾರಣ ಹೇಗೆ?

‘ಇಂತಹ ಅಕ್ರಮ ಟ್ರೇಡಿಂಗ್ ಪ್ಲಾಟ್​ಫಾರ್ಮ್​ಗಳಲ್ಲಿ ಹೂಡಿಕೆದಾರರು ವಹಿವಾಟು ನಡೆಸಬಾರದು ಎಂದು ಸಲಹೆ ನೀಡಲಾಗಿದೆ. ಇಂಥ ವೇದಿಕೆಗಳಲ್ಲಿ ಭಾಗಿಯಾಗುವುದು ಹೂಡಿಕೆದಾರರಿಗೆ ಅಪಾಯ ತರಬಹುದು. ಇಂಥ ಅಕ್ರಮ ಟ್ರೇಡಿಂಗ್ ಪ್ಲಾಟ್​ಫಾರ್ಮ್​ಗಳಿಗೆ ಸ್ಟಾಕ್ ಎಕ್ಸ್​ಚೇಂಜ್​ನಿಂದ ಯಾವುದೇ ರೀತಿಯ ಮಾನ್ಯತೆ ಇರುವುದಿಲ್ಲ’ ಎಂದು ಎನ್​ಎಸ್​​ಇ ಹೇಳಿದೆ.

ಡಬ್ಬಾ ಟ್ರೇಡಿಂಗ್ ಹೇಗೆ ನಡೆಯುತ್ತದೆ?

ಅನಧಿಕೃತ ಟ್ರೇಡಿಂಗ್ ಪ್ಲಾಟ್​ಫಾರ್ಮ್​ಗೆ ಡಬ್ಬಾ ಎಂದು ಅನೌಪಚಾರಿಕವಾಗಿ ಹೆಸರಿಸಲಾಗಿದೆ. ಒಂದು ಸಿನಿಮಾ ಚೆನ್ನಾಗಿಲ್ಲದಿದ್ದರೆ ಅದನ್ನು ಡಬ್ಬಾ ಸಿನಿಮಾ ಎಂದು ಆಡುಮಾತಿನಲ್ಲಿ ಬಣ್ಣಿಸಲಾಗುವಂತೆ ಈ ಅನಧಿಕೃತ ಟ್ರೇಡಿಂಗ್ ಪ್ಲಾಟ್​ಫಾರ್ಮ್​ಗೂ ಡಬ್ಬಾ ಟ್ರೇಡಿಂಗ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: RBI: ಐಟಿ ಸರ್ವಿಸ್ ಹೊರಗುತ್ತಿಗೆ: ಗ್ರಾಹಕರ ಜವಾಬ್ದಾರಿಯಿಂದ ಬ್ಯಾಂಕುಗಳು ತಪ್ಪಿಸಿಕೊಳ್ಳುವಂತಿಲ್ಲ: ಆರ್​ಬಿಐ ಹೊಸ ನಿಯಮ

ಷೇರು ಮಾರುಕಟ್ಟೆಯಲ್ಲಿರುವ ಬ್ರೋಕರ್​ಗಳಂತೆಯೇ ಇಲ್ಲಿಯೂ ಬ್ರೋಕರ್​ಗಳ ಒಂದು ಜಾಲವೇ ಇರುತ್ತದೆ. ಇವರೆಲ್ಲಾ ಸೆಬಿ ಅಥವಾ ಷೇರು ವಿನಿಮಯ ಕೇಂದ್ರಗಳಿಂದ ಮಾನ್ಯತೆ ಪಡೆದವರಲ್ಲ. ಈ ಅನಧಿಕೃತ ಬ್ರೋಕರ್​ಗಳು ತಮ್ಮ ಕಚೇರಿ ಅಥವಾ ಮನೆಗಳಿಂದಲೆ ಮೊಬೈಲ್​ಗಳನ್ನು ಬಳಸಿ ಟ್ರೇಡಿಂಗ್ ನಡೆಸುತ್ತಾರೆ. ಸ್ಟಾಕ್ ಎಕ್ಸ್​ಚೇಂಜ್ ಪ್ಲಾಟ್​ಫಾರ್ಮ್​ಗಳಿಂದ ಹೊರಗೆ ಅನಧಿಕೃತ ಪ್ಲಾಟ್​ಫಾರ್ಮ್​ಗಳಲ್ಲಿ ಕಂಪನಿಯ ಷೇರುಗಳ ವಹಿವಾಟು ಮಾಡಲಾಗುತ್ತದೆ. ಇಂತ ವ್ಯವಹಾರಗಳಿಗೆ ಸೆಬಿ ಮಾನ್ಯತೆ ಇರುವುದಿಲ್ಲ.

ಹೇಳೋರಿಲ್ಲ, ಕೇಳೋರಿಲ್ಲದ ಡಬ್ಬಾ ಟ್ರೇಡಿಂಗ್

ಡಬ್ಬಾ ಟ್ರೇಡಿಂಗ್ ಪ್ಲಾಟ್​ಫಾರ್ಮ್​ಗಳು ಯಾವ ಪ್ರಾಧಿಕಾರದ ನಿಯಮಗಳಿಗೆ ಒಳಪಡುವಂತಹವಲ್ಲ. ಇಂಥ ಡಬ್ಬಾ ಪ್ಲಾಟ್​ಫಾರ್ಮ್​​ಗಳಲ್ಲಿ ವಂಚನೆಯಾಗುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ. ಇದಕ್ಕೆ ಸ್ಪಷ್ಟ ನಿಯಮಾವಳಿಗಳು ಇರುವುದಿಲ್ಲ. ಬೆಲೆ ತಿರುಚುವುದು ಇತ್ಯಾದಿ ಎಗ್ಗಿಲ್ಲದೇ ಆಗಬಹುದು. ಬೇಕೆಂದಾಗ ಷೇರು ಬೆಲೆ ಎರಿಸುವುದು, ಬೇಡವಾದಾಗ ಬೆಲೆ ಇಳಿಸುವುದು ಇವೆಲ್ಲವೂ ನಡೆಯುವ ಸಾಧ್ಯತೆ ಇರುತ್ತದೆ. ಇದರಿಂದ ಹೂಡಿಕೆದಾರರಿಗೆ ಬಹಳ ದೊಡ್ಡ ನಷ್ಟ ಉಂಟಾಗಬಹುದು. ತಮಗೆ ವಂಚನೆ ಅಗಿರುವುದು ಗೊತ್ತಾದರೂ ಹೂಡಿಕೆದಾರರು ಹೆಚ್ಚೇನೂ ಮಾಡಲಾಗದು. ಅಧಿಕೃತ ಷೇರು ವಿನಿಮಯ ಕೇಂದ್ರಗಳಲ್ಲಿರುವಂತಹ ವ್ಯಾಜ್ಯ ಪರಿಹಾರ ವ್ಯವಸ್ಥೆ, ಹೂಡಿಕೆದಾರರ ರಕ್ಷಣೆ ಇತ್ಯಾದಿ ವ್ಯವಸ್ಥೆ ಈ ಡಬ್ಬಾ ಟ್ರೇಡಿಂಗ್​ಗಳಲ್ಲಿ ಇರುವುದಿಲ್ಲ. ಹೆಚ್ಚೆಂದರೆ, ನಿಮಗೆ ಸೂಕ್ತ ದಾಖಲೆಗಳಿದ್ದರೆ ಪೊಲೀಸ್​ಗೆ ದೂರು ಸಲ್ಲಿಸಬಹುದು ಅಷ್ಟೇ.

ಇನ್ನಷ್ಟು ಷೇರುಪೇಟೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:11 pm, Tue, 11 April 23