ಭಾರತ್​ಪೇ, ಅಶ್ನೀರ್ ಗ್ರೋವರ್ ತಿಕ್ಕಾಟಕ್ಕೆ ಸಿಕ್ತು ಪೂರ್ಣವಿರಾಮ; ಎಲ್ಲಾ ಷೇರುಗಳನ್ನೂ ಬಿಟ್ಟುಕೊಡಲಿದ್ದಾರೆ ಸಹ-ಸಂಸ್ಥಾಪಕರು

|

Updated on: Sep 30, 2024 | 12:16 PM

BharatPe and Ashneer Grover agree for settlement: ಫಿನ್​ಟೆಕ್ ಕಂಪನಿ ಭಾರತ್​ಪೇ ಹಾಗೂ ಅದರ ಒಬ್ಬ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ನಡುವಿನ ಎರಡು ವರ್ಷಗಳ ತಿಕ್ಕಾಟದ ಅಧ್ಯಾಯ ಸಮಾಪ್ತಿಯಾಗಲಿದೆ. ಭಾರತ್​ಪೇನಲ್ಲಿ ಅಶ್ನೀರ್ ಹೊಂದಿರುವ ತಮ್ಮ ಪಾಲಿನ ಷೇರುಗಳನ್ನು ಮರಳಿಸಲಿದ್ದಾರೆ. ಶೇ. 1.4ರಷ್ಟು ಷೇರುಗಳು ಭಾರತ್​ಪೇ ಬೋರ್ಡ್​ಗೆ ವರ್ಗಾವಣೆ ಆಗಲಿದೆ. ಇನ್ನುಳಿದ ಷೇರುಗಳು ಫ್ಯಾಮಿಲಿ ಟ್ರಸ್ಟ್​ಗೆ ಹೋಗಲಿದೆ.

ಭಾರತ್​ಪೇ, ಅಶ್ನೀರ್ ಗ್ರೋವರ್ ತಿಕ್ಕಾಟಕ್ಕೆ ಸಿಕ್ತು ಪೂರ್ಣವಿರಾಮ; ಎಲ್ಲಾ ಷೇರುಗಳನ್ನೂ ಬಿಟ್ಟುಕೊಡಲಿದ್ದಾರೆ ಸಹ-ಸಂಸ್ಥಾಪಕರು
ಅಶ್ನೀರ್ ಗ್ರೋವರ್
Follow us on

ನವದೆಹಲಿ, ಸೆಪ್ಟೆಂಬರ್ 30: ಭಾರತದ ಪ್ರಮುಖ ಯುಪಿಐ ಪ್ಲಾಟ್​ಫಾರ್ಮ್​ಗಳಲ್ಲಿ ಒಂದಾದ ಭಾರತ್​ಪೆ ಸಂಸ್ಥೆ ಹಾಗೂ ಅದರ ಒಬ್ಬ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಮಧ್ಯೆ ವರ್ಷಗಳಿಂದ ಇದ್ದ ವ್ಯಾಜ್ಯ ಕೊನೆಗೂ ಶಮನವಾಗಿದೆ. ಇಬ್ಬರ ಮಧ್ಯೆ ಒಂದು ಇತ್ಯರ್ಥಕ್ಕೆ (ಸೆಟಲ್ಮೆಂಟ್) ಬರಲಾಗಿದೆ. ಈ ಸೆಟಲ್ಮೆಂಟ್ ಪ್ರಕಾರ, ಭಾರತ್​ಪೆನಲ್ಲಿರುವ ಅಶ್ನೀರ್ ಗ್ರೋವರ್ ಅವರ ಕೆಲ ಷೇರುಗಳನ್ನು ರೆಸಿಲಿಯೆಂಟ್ ಗ್ರೋತ್ ಟ್ರಸ್ಟ್​ಗೆ ವರ್ಗಾಯಿಸಬೇಕು. ಇನ್ನುಳಿದ ಷೇರುಗಳನ್ನು ಅವರ ಫ್ಯಾಮಿಲಿ ಟ್ರಸ್ಟ್​ನಿಂದ ನಿರ್ವಹಣೆ ಆಗಬೇಕು ಎಂದಿದೆ. ಭಾರತ್ ಪೆ ಸಂಸ್ಥೆಯಾಗಲೀ ಅಶ್ನೀರ್ ಗ್ರೋವರ್ ಆಗಲೀ ಪರಸ್ಪರರ ಮೇಲೆ ಈಗಿರುವ ಕಾನೂನು ಹೋರಾಟಗಳನ್ನು ಮುಂದುವರಿಸಬಾರದು ಎನ್ನುವ ನಿರ್ಧಾರಕ್ಕೆ ಬರಲಾಗಿದೆ.

ಮನಿಕಂಟ್ರೋಲ್ ವರದಿ ಪ್ರಕಾರ ಅಶ್ನೀರ್ ಗ್ರೋವರ್ ಅವರು ತಮ್ಮ ಹೆಸರಿನ ಶೆ. 1.5ರಷ್ಟು ಷೇರುಗಳನ್ನು ಭಾರತ್​ಪೆ ಬೋರ್ಡ್​ಗೆ ವರ್ಗಾವಣೆ ಮಾಡಲಿದ್ದಾರೆ. ಇನ್ನುಳಿದ ಶೇ. 3.5ರಿಂದ 3.7ರಷ್ಟು ಷೇರುಗಳನ್ನು ಫ್ಯಾಮಿಲಿ ಟ್ರಸ್ಟ್​ಗೆ ಬಿಟ್ಟುಕೊಡಲಿದ್ದಾರೆ. ಇದರೊಂದಿಗೆ ಭಾರತ್ ಪೇ ಸಂಸ್ಥೆಯಲ್ಲಿ ಅಶ್ನೀರ್ ಗ್ರೋವರ್ ಹೊಂದಿರುವ ಅಲ್ಪ ಷೇರುದಾರಿಕೆಯೂ ಕೈಬಿಟ್ಟು ಹೋಗಲಿದೆ. ತಾವೇ ಹುಟ್ಟುಹಾಕಿದ್ದ ಕಂಪನಿಯಿಂದ ಅವರು ಪೂರ್ಣ ತೊರೆದಂತಾಗಲಿದೆ.

ಇದನ್ನೂ ಓದಿ: ಪಿಪಿಎಫ್, ಸುಕನ್ಯ ಸಮೃದ್ದಿ, ಎನ್​ಎಸ್​ಎಸ್ ಯೋಜನೆಗಳಲ್ಲಿ ಅ. 1ರಿಂದ ಹೊಸ ನಿಯಮಗಳು; ತಪ್ಪದೇ ತಿಳಿದಿರಿ

ಇದೇ ವೇಳೆ, ಭಾರತ್​ಪೇ ಸಂಸ್ಥೆಯ ಮತ್ತೊಬ್ಬ ಸಹ-ಸಂಸ್ಥಾಪಕ ಭಾವಿಕ್ ಕೊಲಾದಿಯ ಅವರಿಗೂ ಗ್ರೋವರ್ ತಮ್ಮ ಷೇರುಗಳನ್ನು ಮರಳಿಸಲಿದ್ದಾರೆ. ಇವರಿಬ್ಬರ ಮಧ್ಯೆ ಈ ವಿಚಾರವಾಗಿ ವ್ಯಾಜ್ಯ ಇದೆ. ಅಶ್ನೀರ್ ಗ್ರೋವರ್ ಅವರಿಗೆ ತಾನು ವರ್ಗಾಯಿಸಿದ್ದ 88 ಲಕ್ಷ ರೂ ಮೌಲ್ಯದ 1,611 ಷೇರುಗಳಿಗೆ ಗ್ರೋವರ್ ಹಣಪಾವತಿಸಿಲ್ಲ ಎಂದು 2023ರ ಜನವರಿಯಲ್ಲಿ ಭಾವಿಕ್ ಕೊಲಾಡಿಯಾ ಆರೋಪಿಸಿ ಕೋರ್ಟ್ ಕಟಕಟೆ ಏರಿದ್ದರು. ಆ ಷೇರುಗಳ ಸಂಖ್ಯೆ ಈಗ 16,110 ಆಗಿದೆ. ಈ ಷೇರುಗಳನ್ನು ಮಾರದಂತೆ ಕೋರ್ಟ್ ನಿರ್ಬಂಧ ವಿಧಿಸಿತ್ತು. ಈಗ ಗ್ರೋವರ್ ಅವರು ಆ ಷೇರುಗಳೆಲ್ಲವನ್ನೂ ಭಾವಿಕ್ ಅವರಿಗೆ ಟ್ರಾನ್ಸ್​ಫರ್ ಮಾಡಲಿದ್ದಾರೆ.

ಅಶ್ನೀರ್ ಗ್ರೋವರ್ ಮತ್ತು ಭಾರತ್ ಪೇ ಗುದ್ದಾಟ ಏನು?

ಭಾರತ್​ಪೆ 2018ರಲ್ಲಿ ಆರಂಭವಾದ ಫಿನ್​ಟೆಕ್ ಕಂಪನಿ. ಅಶ್ನೀರ್ ಗ್ರೋವರ್, ಶಾಶ್ವತ್ ನಕ್ರಾನಿ ಮತ್ತು ಭಾವಿಕ್ ಕೊಲಾದಿಯಾ ಅವರು ಸೇರಿ ಈ ಕಂಪನಿ ಸ್ಥಾಪಿಸಿದ್ದರು. 2022ರಿಂದ ಭಾರತ್ ಪೇ ಕಂಪನಿಯ ಮಂಡಳಿಗೂ ಅಶ್ನೀರ್ ಗ್ರೋವರ್​ಗೂ ಭಿನ್ನಾಭಿಪ್ರಾಯ ಮತ್ತು ತಿಕ್ಕಾಟ ಶುರುವಾಗಿದ್ದು.

ಇದನ್ನೂ ಓದಿ: ಅಂಬುಜಾ ಸಿಮೆಂಟ್ಸ್; ಔದ್ಯಮಿಕ ಕಾರ್ಬನ್ ನಿರ್ಮೂಲನ ಮೈತ್ರಿಕೂಟ ಸೇರಿದ ವಿಶ್ವದ ಮೊದಲ ಸಿಮೆಂಟ್ ಕಂಪನಿ ಅದಾನಿ ಗ್ರೂಪ್​ನದ್ದು

ನಕಲಿ ಕನ್ಸಲ್ಟೆಂಟ್ಸ್​ಗಳಿಗೆ ಅಕ್ರಮವಾಗಿ ಹಣ ಪಾವತಿಸಲಾಗಿದೆ; ಅಶ್ನೀರ್ ಗ್ರೋವರ್ ಮತ್ತವರ ಕುಟುಂಬಕ್ಕೆ ಸಂಬಂಧಿಸಿದ ವೆಂಡರ್​ಗಳಿಗೆ ಹೆಚ್ಚು ಹಣ ಪಾವತಿಸಲಾಗಿದೆ; ಇನ್​ಪುಟ್ ಟ್ಯಾಕ್ಸ್ ಕ್ರೆಡಿಟ್​ನಲ್ಲಿ ನಕಲಿ ವಹಿವಾಟು ನಡೆದಿದೆ; ಟ್ರಾವೆಲ್ ಏಜೆನ್ಸಿಗಳಿಗೆ ಅಕ್ರವಾಗಿ ಪಾವತಿಸಲಾಗಿದೆ; ಹೀಗೆ ಹಲವು ಅಕ್ರಮ ವ್ಯವಹಾರಗಳ ಆರೋಪಗಳನ್ನು ಅಶ್ನೀರ್ ಗ್ರೋವರ್ ಮತ್ತವರ ಕುಟುಂಬ ಸದಸ್ಯರ ಮೇಲೆ ಮಾಡಲಾಗಿತ್ತು. ಅಶ್ನೀರ್ ಗ್ರೋವರ್, ಅವರ ಪತ್ನಿ ಮಾಧುರಿ ಗ್ರೋವರ್, ಮಧುರಿಯವರ ಸಹೋದರ ಶ್ವೇತಾಂಕ್ ಜೈನ್, ಮಾಧುರಿ ಅವರ ತಂದೆ ಸುರೇಶ್ ಜೈನ್, ಮಾಧುರಿ ಅವರ ಸೋದರಿಯ ಪತಿ ದೀಪಕ್ ಗುಪ್ತಾ ವಿರುದ್ಧ 2022ರಲ್ಲಿ ಭಾರತ್​ಪೇ ಕ್ರಿಮಿನಲ್ ದೂರು ದಾಖಲಿಸಿತ್ತು.

ಶಾರ್ಕ್​ಟ್ಯಾಂಕ್ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿರುವ ಅಶ್ನೀರ್ ಗ್ರೋವರ್ ಅವರು ತಮ್ಮನ್ನು ಉದ್ದೇಶಪೂರ್ವಕವಾಗಿ ದಮನ ಮಾಡುವ ಪ್ರಯತ್ನಗಳಾಗಿವೆ ಎಂದು ಸಾಕಷ್ಟು ಬಾರಿ ಹೇಳಿಕೊಂಡಿದ್ದಿದೆ. ಭಾರತದಲ್ಲಿ ಬಿಸಿನೆಸ್ ಮಾಡುವ ಒಳ್ಳೆಯ ವಾತಾವರಣ ಇಲ್ಲ ಎಂದೂ ಹೇಳಿಕೊಂಡಿದ್ದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ